ಎರಡು ಠಾಣಾ ವ್ಯಾಪ್ತಿಯಲ್ಲಿ ಒಂದು ವರ್ಷದಲ್ಲಿ 125 ಕ್ಕೂ ಹೆಚ್ಚು ಮಂದಿ ಅಪಘಾತದಲ್ಲಿ ಸಾವು: 350 ಕ್ಕೂ ಹೆಚ್ಚು ಜನರಿಗೆ ಗಾಯ: ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆಗಾಗಿ ಸಾರ್ವಜನಿಕರ ಆಗ್ರಹ

ರಾಜ್ಯ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ದೊಡ್ಡಬಳ್ಳಾಪುರದಿಂದ ಹಿಂದೂಪುರ-ಯಲಹಂಕ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ-9, ದಾಬಸ್ ಪೇಟೆ-ಹೊಸಕೋಟೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ-248 ಹಾದು ಹೋಗುತ್ತವೆ. ಇದಲ್ಲದೇ ದೇವನಹಳ್ಳಿ, ನೆಲಮಂಗಲ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು, ಗೌರಿಬಿದನೂರು ಹೀಗೆ ನಾನಾ ಜಿಲ್ಲೆ, ತಾಲೂಕು, ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಸಾವಿರಾರು ವಾಹನಗಳು ಇಲ್ಲಿದಂಲೇ ಹಾದು ಹೋಗುತ್ತವೆ.

ಅದೇರೀತಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಕೈಗಾರಿಕಾ ಪ್ರದೇಶವಿದ್ದು, ಕಾರ್ಖಾನೆಗಳಲ್ಲಿ ಕೆಲಸ‌ ಮಾಡಲು ಲಕ್ಷಾಂತರ‌ ಜನ ಕಾರ್ಮಿಕರು ಬಂದು ಹೋಗುತ್ತಾರೆ.

ಈ ಹಿನ್ನೆಲೆ ನಗರದಲ್ಲಿ ಜನದಟ್ಟಣೆ, ವಾಹನ ದಟ್ಟಣೆ ಜೊತೆಗೆ ಅಪಘಾತಗಳ ಸಂಖ್ಯೆಯ ಪ್ರಮಾಣವು ಹೆಚ್ಚಾಗುತ್ತಿವೆ. ಕಳೆದ ವರ್ಷ 2024ರಿಂದ ಇಲ್ಲಿಯವರೆಗೆ ಅಪಘಾತಗಳಿಂದ ಸಾವು-ನೋವಿನ ಅಂಕಿಅಂಶಗಳನ್ನು ನೋಡಿದರೆ ಬೆಚ್ಚಿಬೀಳುವುದಂತು ಖಚಿತ. ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಬಂವಿಸಿದ ಅಪಘಾತದಲ್ಲಿ ಕೇವಲ ಒಂದು ವರ್ಷದಲ್ಲಿ 125ಕ್ಕೂ ಹೆಚ್ಚು ಜನ ಸಾವನಪ್ಪಿದ್ದು, 350ಕ್ಕೂ ಹೆಚ್ಚು ಜನ ಕೈ ಕಾಲು ಮುರಿದುಕೊಂಡು ಗಾಯಗೊಂಡಿದ್ದಾರೆ.

ಕೇವಲ ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾತ್ರ ಇಷ್ಟು ಜನ ಸಾವನಪ್ಪಿದ್ದಾರೆ. ಇದಕ್ಕೆ ಮೂಲ ಕಾರಣ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲನೆ ಮಾಡದೆ ಇರುವುದರ‌ ಜೊತೆಗೆ ಅವೈಜ್ಞಾನಿಕ ರಸ್ತೆ ಕಾಮಗಾರಿ ಸೇರಿದಂತೆ ಇನ್ನಿತರೆ ಕಾರಣಗಳು.

ಇನ್ನೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟು ನಾಲ್ಕು ತಾಲೂಕುಗಳಿವೆ. ದೊಡ್ಡಬಳ್ಳಾಪುರ ಹೊರತುಪಡಿಸಿ ಉಳಿದ ಮೂರು ತಾಲೂಕಿನಲ್ಲಿಯೂ ಸಂಚಾರಿ ಪೊಲೀಸ್ ಠಾಣೆಗಳಿವೆ. ಸದ್ಯಕ್ಕೆ ದೊಡ್ಡಬಳ್ಳಾಪುರಕ್ಕೆ ಸಂಚಾರಿ ಪೊಲೀಸ್ ಠಾಣೆ ಬೇಕೆಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ. ದೊಡ್ಡಬಳ್ಳಾಪುರ ನಗರದಲ್ಲಿ ಟ್ರಾಫಿಕ್ ಸಿಗ್ನಲ್ ಇರುವುದು ಟಿಬಿ ಸರ್ಕಲ್ ಬಳಿ ಮಾತ್ರ. ಹಾಗಾಗಿ ಜನರು ಬೇಕಾಬಿಟ್ಟಿ ಸಂಚಾರ ಮಾಡುತ್ತಿದ್ದಾರೆ. ಅವರು ಸಾಯುವುದು ಅಲ್ಲದೆ,‌ ಬೇರೆಯವರ ಜೀವಕ್ಕೂ ಕುತ್ತು ತರುತ್ತಿದ್ದಾರೆ. ಹಾಗಾಗಿ ಪ್ರಮುಖ ವೃತ್ತಗಳಲ್ಲಿ ಟ್ರಾಫಿಕ್ ಸಿಗ್ನಲ್ ಗಳನ್ನ ಅಳವಡಿಸಬೇಕು ಎಂದು ಜನ ಒತ್ತಾಯಿಸಿದ್ದಾರೆ.

ಅಪಘಾತಗಳಲ್ಲಿ ಮೃತಪಡುವವರ ಪ್ರಮಾಣ ಭಾರಿ ಪ್ರಮಾಣದ ಏರಿಕೆ ಕಂಡಿದೆ. ಬಹುತೇಕ ರಸ್ತೆ ಅಪಘಾತಗಳಿಗೆ ಚಾಲಕನ ಲೋಪವೇ ಪ್ರಮುಖ ಕಾರಣ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಹೇಳಿದೆ.

ನಗರ ಪ್ರದೇಶದ ರಸ್ತೆಗಳು, ಗ್ರಾಮೀಣ ರಸ್ತೆಗಳು, ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ ಹೆದ್ದಾರಿಗಳಲ್ಲಿ ವೇಗಮಿತಿ ಇದೆ. ವೇಗಮಿತಿ ಜಾರಿಯಲ್ಲಿದ್ದೂ ಅದನ್ನು ಮೀರಿದ ವೇಗದಲ್ಲಿ ವಾಹನ ಚಲಾಯಿಸಿದ್ದರಿಂದ ಈ ಅಪಘಾತಗಳು ಸಂಭವಿಸಿವೆ. ಇಂತಹ ಅಪಘಾತಗಳನ್ನು ಚಾಲಕನ ಲೋಪದಿಂದ ಸಂಭವಿಸಿದ್ದು ಎಂದೇ ಪರಿಗಣಿಸಲಾಗುತ್ತಿದೆ.

ಅತಿವೇಗದ ಚಾಲನೆಯ ಹೊರತಾಗಿ ರಸ್ತೆ ಅಪಘಾತಗಳಿಗೆ ಕಾರಣವಾದ ಎರಡನೇ ಅಂಶವೆಂದರೆ ಪಥ ಶಿಸ್ತು ಇಲ್ಲದಿರುವುದು ಹಾಗೂ ವಿರುದ್ಧ ದಿಕ್ಕಿನಲ್ಲಿ ಚಾಲನೆ ಮಾಡುವುದು.

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಅಪಘಾತಕ್ಕೆ ಆಹ್ವಾನ ನೀಡಿದಂತೆ. ಅತಿವೇಗ, ಪಥ ಶಿಸ್ತು ಇಲ್ಲದಿರುವುದು, ವಿರುದ್ಧ ದಿಕ್ಕಿನಲ್ಲಿ ಚಾಲನೆ, ಮದ್ಯಪಾನ ಮಾಡಿ ಚಾಲನೆ ಮಾಡುವುದು ಮತ್ತು ಚಾಲನೆ ವೇಳೆ ಮೊಬೈಲ್‌ ಬಳಸುವುದು… ಇವೆಲ್ಲವನ್ನೂ ಸಂಚಾರ ನಿಯಮಗಳ ಪ್ರಕಾರ ದಂಡಾರ್ಹ ಅಪರಾಧ ಎಂದು ಪರಿಗಣಿಸಲಾಗಿದೆ.

ದ್ವಿಚಕ್ರ ವಾಹನಗಳ ಚಾಲನೆ ವೇಳೆ ಸವಾರ ಮತ್ತು ಹಿಂಬದಿಯ ಸವಾರ ಹೆಲ್ಮೆಟ್‌ ಧರಿಸುವುದು ಕಡ್ಡಾಯ. ಆದರೆ, ದೇಶದ ಕೆಲವು ನಗರಗಳಲ್ಲಷ್ಟೇ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ. ಬಹುತೇಕ ಕಡೆ ಈ ನಿಯಮ ಜಾರಿಯಲ್ಲಿಯೂ ಇಲ್ಲ. ಆದರೆ, ಪ್ರಸ್ತುತ ಸಂಭವಿಸುತ್ತಿರುವ ಅಪಘಾತಗಳಲ್ಲಿ ಹೆಲ್ಮೆಟ್‌ ಧರಿಸಿದೇ ಇದ್ದ ಕಾರಣಕ್ಕೇ ಹೆಚ್ಚು ಜನರು ಮೃತರಾಗುತ್ತಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ವೇಳೆ ಅಪಘಾತ ಸಂಭವಿಸಿದರೆ ಹೆಚ್ಚು ಪೆಟ್ಟು ಬೀಳುವುದು ತಲೆಗೆ. ಸುರಕ್ಷಿತವಾದ ಮತ್ತು ಸರಿಯಾದ ಅಳತೆಯ ಹೆಲ್ಮೆಟ್‌ಗಳನ್ನ ಕಡ್ಡಾಯವಾಗಿ ಧರಿಸಿದರೆ ತಲೆಗೆ ಪೆಟ್ಟಾಗುವುದನ್ನು ತಡೆಯಬಹುದು.

ಕಾರುಗಳಲ್ಲಿ ಚಾಲಕ ಮತ್ತು ಎಲ್ಲಾ ಪ್ರಯಾಣಿಕರೂ ಸೀಟ್‌ಬೆಲ್ಟ್‌ ಧರಿಸುವುದು ಕಡ್ಡಾಯ. ಬೆಂಗಳೂರಿನಂತಹ ನಗರದಲ್ಲೂ ಚಾಲಕ ಸೀಟ್‌ಬೆಲ್ಟ್‌ ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದೆಯಷ್ಟೇ ಹೊರತು, ಪ್ರಯಾಣಿಕರು ಸೀಟ್‌ಬೆಲ್ಟ್‌ ಧರಿಸುವುದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿಲ್ಲ. ಅಪಘಾತದ ಸಂದರ್ಭದಲ್ಲಿ ಚಾಲಕನಿಗೆ ಮತ್ತು ಪ್ರಯಾಣಿಕನಿಗೆ ಪೆಟ್ಟಾಗದಂತೆ ನೋಡಿಕೊಳ್ಳುವ ಮತ್ತು ಆ ಮೂಲಕ ಪ್ರಾಣಾಪಾಯವನ್ನು ದೂರಮಾಡುವ ಪ್ರಾಥಮಿಕ ಸಾಧನ ಸೀಟ್‌ಬೆಲ್ಟ್‌. ಹೀಗಾಗಿ ಸೀಟ್‌ಬೆಲ್ಟ್‌ ಅನ್ನು ಧರಿಸಲೇಬೇಕು.

ಕಾರುಗಳಲ್ಲಿ ಎಷ್ಟೇ ಏರ್‌ಬ್ಯಾಗ್‌ಗಳಿದ್ದರೂ, ಸೀಟ್‌ಬೆಲ್ಟ್‌ ಧರಿಸದೇ ಇದ್ದರೆ ಅವು ಪ್ರಾಣಾಪಾಯದಿಂದ ಪಾರು ಮಾಡಲಾರವು.

ವಾಹನ ಚಾಲನೆ ವೇಳೆ ಮೊಬೈಲ್‌ ಬಳಸುವುದರಿಂದ ಏಕಾಗ್ರತೆ ಹೋಗಿ, ಅಪಘಾತ ಸಂಭವಿಸುವ ಅಪಾಯವೂ ಇರುತ್ತದೆ. ಹೀಗಾಗಿಯೇ ಚಾಲನೆ ವೇಳೆ ಮೊಬೈಲ್‌ ಬಳಕೆಯನ್ನು ನಿಷೇಧಿಸಲಾಗಿದೆ. ಇದನ್ನು ಉಲ್ಲಂಘಿಸುತ್ತಿರುವುದರಿಂದಲೇ ಹಲವು ಅಪಘಾತಗಳು ಸಂಭವಿಸುತ್ತಿವೆ.

ಜೊತೆಗೆ ಅತಿವೇಗ, ಅವಸರದ ಚಾಲನೆ, ಚಾಲನಾ ತರಬೇತಿ ಇಲ್ಲದೇ ವಾಹನ ಚಾಲನೆ, ಸ್ವಯಂ ಅಪಘಾತ, ತ್ರಿಬಲ್ ರೈಡಿಂಗ್, ಅಪ್ರಾಪ್ತ ವಯಸ್ಕರು ವಾಹನ ಚಲಾಯಿಸುವುದು, ತಾಂತ್ರಿಕ ದೋಷ, ಹವಾಮಾನ ವೈಪರಿತ್ಯ, ರಸ್ತೆ ಗುಂಡಿ, ಅವೈಜ್ಞಾನಿಕ ತಿರುವು ನಿರ್ಮಾಣ, ಅಡ್ಡಾದಿಡ್ಡಿ‌ ವಾಹನ ಚಲಾಯಿಸುವಿಕೆ, ಒನ್ ವೇನಲ್ಲಿ ಅಡ್ಡ ಬರುವುದು, ವಾಹನ ಪರವಾನಗಿ ಇಲ್ಲದೇ ಬೇರೊಬ್ಬರ ವಾಹನ ಚಲಾಯಿಸುವುದು ಸೇರಿದಂತೆ ಇತರೆ ಕಾರಣಗಳಿಂದಾಗಿ ಅಪಘಾತಗಳು ಸಂಭವಿಸಿ ಸಾಕಷ್ಟು ಸಾವು ನೋವು ಆಗುತ್ತಿವೆ.

Ramesh Babu

Journalist

Recent Posts

ಸ್ಪರ್ಧಾತ್ಮಕ ಜಗತ್ತಿಗೆ ಮಕ್ಕಳನ್ನು ಅಣಿಗೊಳಿಸಿ- ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನೀಲಕಂಠ ಗವಾಂಕರ್ ಸಲಹೆ

ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…

9 hours ago

ಭಾರತೀಯರ ಆಹಾರ ವೈವಿಧ್ಯತೆ…. ರುಚಿ – ತೃಪ್ತಿ – ಸಮಾನತೆ…..

ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…

19 hours ago

ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆ: ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…

1 day ago

ಕೊಡಿಪಾಳ್ಯ ಬಳಿ ಕ್ಯಾಂಟರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…

1 day ago

ಮೊಬೈಲ್ ಕಳೆದುಹೋದರೆ ಗಾಬರಿ ಬೇಡ: ತಕ್ಷಣದ ಕ್ರಮವೇ ರಕ್ಷಣೆ: ಮೊಬೈಲ್‌ ಕಳೆದುಹೋದ 10 ನಿಮಿಷಗಳಲ್ಲಿ ಮಾಡಬೇಕಾದ 7 ಕೆಲಸಗಳು ಇಲ್ಲಿವೆ ನೋಡಿ…

ಬೆಂಗಳೂರು ಗ್ರಾಮಾಂತರ: ಮೊಬೈಲ್‌ ಫೋನ್‌ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್‌ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್‌ ಕೇವಲ ಸಂಪರ್ಕ…

1 day ago

ಎಸ್ಐಆರ್ ಅಕ್ರಮ ಹಾಗೂ ಬರ ಪರಿಹಾರ ವಿಳಂಬ: ಕೇಂದ್ರ ಮತ್ತು ವಿಪಕ್ಷದ ವಿರುದ್ಧ ಸಚಿವ ಚಲುವರಾಯಸ್ವಾಮಿ ಆಕ್ರೋಶ

ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…

1 day ago