Categories: ಲೇಖನ

ಅತ್ಯಾಚಾರ ಗಂಡಿನ ಅಂತಿಮ ಯಾತ್ರೆಯಾಗಲಿ……..

ಅತ್ಯಾಚಾರ ಗಂಡಿನ ಅಂತಿಮ ಯಾತ್ರೆಯಾಗಲಿ……..

{ ಕಾಠಿಣ್ಯ ಎನಿಸಿದರೆ ಕ್ಷಮೆ ಇರಲಿ )

ಅತ್ಯಾಚಾರವಂತೆ ಅತ್ಯಾಚಾರ ಎಲ್ಲೆಲ್ಲೂ, ಅದೂ ಸಾಮೂಹಿಕ ಅತ್ಯಾಚಾರ………

ಛೆ, ಇನ್ನೆಷ್ಟು ದಿನ ಈ ಕರ್ಣ ಕಠೋರ ಸುದ್ದಿ ಕೇಳುತ್ತಾ ಬದುಕುವುದು……………

ಇದಕ್ಕೊಂದು ಅಂತ್ಯವಿಲ್ಲವೇ ?……….

ಘೋಷಿಸಿ ಬಿಡಿ,
ಹೆಣ್ಣು ಭೋಗದ ವಸ್ತುವೆಂದು…..

ಘೋಷಿಸಿ ಬಿಡಿ,
ಹೆಣ್ಣು ಇರುವುದೇ ಗಂಡಿಗಾಗಿ ಎಂದು…..

ಘೋಷಿಸಿ ಬಿಡಿ,
ಹೆಣ್ಣು ಸುಖ ನೀಡುವ ಯಂತ್ರವೆಂದು……

ತಾಖತ್ತಿದ್ದವರು ಬೆಲೆ ಕೊಟ್ಟು ಕೊಂಡುಕೊಳ್ಳಲಿ,
ಶಕ್ತಿ ಇದ್ದವರು ಹೊಡೆದಾಡಿ ಪಡೆದುಕೊಳ್ಳಲಿ,……….

ಗಂಡಸ್ತನವಿದ್ದವರು ಭರವಸೆ ನೀಡಿ ಉಪಯೋಗಿಸಿಕೊಳ್ಳಲಿ,
ಧೈರ್ಯವಿದ್ದವರು ಪ್ರೀತಿಯ ನಾಟಕವಾಡಿ ಬಳಸಿಕೊಳ್ಳಲಿ,……….

ಸಂಪ್ರದಾಯವಾದಿಗಳು ಮದುವೆಯಾಗಿ ಅನುಭವಿಸಲಿ,
ಖದೀಮರು ಅತ್ಯಾಚಾರ ಮಾಡಿ ಸುಖಿಸಲಿ,………….

ಬೆಲೆ ನಿಗದಿ ಮಾಡಿ,
ಆಕೆಯ ಸೌಂದರ್ಯ ಆಧರಿಸಿ,
ಆಕೆಯ ಬಣ್ಣ ನೋಡಿ,…….

ಆಕೆಯ ಅಲಂಕಾರ ಗಮನಿಸಿ,
ಆಕೆಯ ನಗುವ ರೀತಿ ನೋಡಿ,
ಆಕೆಯ ಉಡುಪಿನ ಭಿನ್ನತೆ ಗಮನಿಸಿ…..

ಆಗ ಅಕ್ಕ ತಂಗಿ ತಾಯಿ ಹೆಂಡತಿಯೂ ಸೇರಿ ನಮಗೆ ನಿಯಂತ್ರಣವಿರುವ ಎಲ್ಲರನ್ನೂ ಮಾರಿ ಲಾಭ ಗಳಿಸಬಹುದು……

ಆಗಲಾರದರೂ ಕನಿಷ್ಠ ಈ ಅತ್ಯಾಚಾರವೆಂಬ ಸುದ್ದಿಗಳಿಂದ ದೂರವಿರಬಹುದು….

ಆಗ ಅತ್ಯಾಚಾರವೂ ನೇರ, ದಿಟ್ಟ, ನಿರಂತರ ಮತ್ತು ಅಧೀಕೃತ……….

ಆಹಾರಕ್ಕಾಗಿ ಪ್ರಾಣಿ ವಧೆ ಮಾಡುವುದಿಲ್ಲವೇ, ಹಾಗೆ ಪುರುಷ ಸುಖಕ್ಕಾಗಿ ಹೆಣ್ಣಿನ ಮೇಲೆ ಅತ್ಯಾಚಾರ…………

ಆಗ, ಈ ಸುದ್ದಿಯೂ ಸಹಜ ಸ್ವಾಭಾವಿಕವಾಗುತ್ತದೆ. ಯಾವುದೇ ಮಾನಸಿಕ ಹಿಂಸೆ ಇರುವುದಿಲ್ಲ,
ಹೆಣ್ಣೆಂಬ ಮಮಕಾರವೂ ಉಳಿಯುವುದಿಲ್ಲ……..

ಛೆ..‌…ಛೆ…….ಛೆ……,,,,,,

ಅಯ್ಯಾ ,
ದೇವರುಗಳ ಆರಾಧಕರೇ,
ಧರ್ಮಗಳ ಅನುಯಾಯಿಗಳೇ,
ಧಾರ್ಮಿಕ ಚಿಂತಕರೇ,
ಕಾನೂನು ಪಾಲಕರೇ,
ಆಧ್ಯಾತ್ಮಿಕ ಮನಸ್ಸುಗಳೇ,…….

ಬಿಡಿ ಈ ಕಪಟ ನಾಟಕ,

ಹೆಣ್ಣು ದೈವ ಸ್ವರೂಪಿ,
ಹೆಣ್ಣು ಪ್ರಕೃತಿ,
ಹೆಣ್ಣು ಪೂಜನೀಯಳು,
ಹೆಣ್ಣು ಶಕ್ತಿ ಮಾತೆ,……..

ಇದೆಲ್ಲಾ ಸುಮ್ಮನೆ ನಾಟಕವೇಕೆ,

ಪ್ರತಿನಿತ್ಯ ,
ಮಗುವಿನಿಂದ ಮುದುಕಿಯವರೆಗೆ,
ಭಿಕ್ಷುಕಿಯಿಂದ ಸನ್ಯಾಸಿನಿಯವರೆಗೆ,
ವಿದ್ಯಾರ್ಥಿನಿಯಿಂದ ಮಾನಸಿಕ ಅಸ್ವಸ್ಥತೆಯವರೆಗೆ,
ಹೆಣ್ಣು ಎಂಬ ಒಂದೇ ಕಾರಣದಿಂದ ಈ ಅತ್ಯಾಚಾರದ ಸುದ್ದಿ ಕೇಳಿ ಕೇಳಿ ಸಾಕಾಗಿದೆ………..

ಸುದ್ದಿಯಾಗದ ಲೈಂಗಿಕ ಶೋಷಣೆಯ ಸಭ್ಯ ಮುಖವಾಡಗಳೆಷ್ಟೋ.
ಪಕ್ಷ ಪಂಥಗಳ ಆಧಾರದ ಮೇಲೆ ಅತ್ಯಾಚಾರ ಸಮರ್ಥಿಸುವವರೆಷ್ಟೋ,………

ಇಂತಹವರನ್ನು ಯಾವುದಕ್ಕೆ ಹೋಲಿಸಿದರೂ ಅದಕ್ಕೆ ಅವಮಾನವಾಗುತ್ತದೆ.
ನನಗೆ ಪದಗಳೇ ಸಿಗುತ್ತಿಲ್ಲ………

ಈ ರಕ್ಕಸತನಕ್ಕೆ ಕೊನೆ ಎಂದು,………..
ಅತ್ಯಾಚಾರದ ಸುದ್ದಿಗಳಿಲ್ಲದ ದಿನಗಳು ಬರುವುದು ಎಂದು,…….
ನಾಗರಿಕ ಸಮಾಜ ನಿರ್ಮಾಣ ಆಗುವುದು ಎಂದು,……………

ನಿರೀಕ್ಷೆ ,
ಕನಸಾಗುವುದೇ….
ಅಥವಾ,
ನನಸಾಗುವುದೇ…….
ಅಥವಾ
ಈ ಸುದ್ದಿಗಳೊಂದಿಗೇ ನಮ್ಮ ಬದುಕು ಕೊನೆಯಾಗುವುದೇ ??????

ನಾನು ಹೆಣ್ಣು
ನಾನು ವೇಶ್ಯೆ,….

ಇದೋ ನನ್ನ ದೇಹ ನಿಮಗಾಗಿ,
ನಾನು ಹುಟ್ಟಿರುವುದೇ ನಿಮಗಾಗಿ,
ನನ್ನನ್ನು ಸೃಷ್ಟಿಸಿರುವುದೇ ನಿಮಗಾಗಿ,
ನಾನು ನಾನಲ್ಲ,

ನಿರ್ಭಯ, ಪ್ರಿಯಾಂಕಾ ರೆಡ್ಡಿ,
ಸುಮಾ ರಮಾ ಕ್ಷಮಾ ಲಕ್ಷ್ಮೀ ಸರಸ್ವತಿ ಪಾರ್ವತಿ ಈಶ್ವರಿ ಪಂಕಜ ಗಿರಿಜಾ ಕನಕ ರಾಗಿಣಿ ಭಾಮಿನಿ ರಮಣಿ ಕಲ್ಯಾಣಿ ರಮ್ಯ ಭವ್ಯ ಕಾವ್ಯ
ರಾಧಿಕಾ ನಿಹಾರಿಕ ಸೌಗಂಧಿಕಾ
ಮೇಘಶ್ರೀ ಅನುಶ್ರೀ ರಾಗಶ್ರೀ
ಮೆಹಬೂಬ ಪರ್ವೀನ್ ಸಲ್ಮಾ ವಿಲ್ಮಾ
ಮೇರಿ ಸೋನಿ ಟಾಮಿ,

ಮತ್ತು ಎಲ್ಲಾ ವಯಸ್ಸಿನ, ಎಲ್ಲಾ ಜಾತಿಯ, ಎಲ್ಲಾ ಧರ್ಮದ, ಎಲ್ಲಾ ಭಾಷೆಯ ಹೆಣ್ಣುಗಳು ನಾವು……

ಬನ್ನಿ ಅನುಭವಿಸಿ ಗಂಡುಗಳೇ,
ನಿಮ್ಮ ತೃಪ್ತಿಯೇ ನಮ್ಮ ಬದುಕಿನ ಸಾರ್ಥಕತೆ,
ನಮ್ಮ ನರಳಾಟವೇ ನಿಮ್ಮ ಸಂತೋಷ,
ನಮ್ಮ ಗೋಳಾಟವೇ ನಿಮ್ಮ ಆನಂದ,
ನಮ್ಮ ನೋವೇ ನಿಮ್ಮ ನಲಿವು,

ನಾವು ಸೋತಿದ್ದೇವೆ,
ನಾವು ಶರಣಾಗಿದ್ದೇವೆ,
ನಮ್ಮನ್ನು ಸಂಪೂರ್ಣ ನಿಮಗೆ ಅರ್ಪಿಸಿಕೊಳ್ಳುತ್ತೇವೆ,
ಯಾವುದೇ ಪ್ರತಿಭಟನೆ ತೋರುವುದಿಲ್ಲ….

ನಮಗೆ ನಮ್ಮ ಜೀವ ಮುಖ್ಯ, ಪ್ರಾಣ ಮುಖ್ಯ….

ಮಾನ ಮುಖ್ಯ ಎಂದು ಭಾವಿಸಿದ್ದೆವು. ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸಿದೆವು. ಸಾಧ್ಯವಾಗುತ್ತಿಲ್ಲ….

ಬೇಲಿಯೇ ಎದ್ದು ಹೊಲ ಕಬಳಿಸಿದರೆ ರಕ್ಷಣೆ ಎಲ್ಲಿಂದ. ಕನಿಷ್ಠ ಪ್ರಾಣವಾದರೂ ಉಳಿಯಲಿ….

ಗಲ್ಲು ಶಿಕ್ಷೆಗೂ ಹೆದರಲಿಲ್ಲವೆಂದರೆ ನಿಮ್ಮನ್ನು ಇನ್ನು ತಡೆಯಲು ಸಾಧ್ಯವಿಲ್ಲ.

ನಮ್ಮನ್ನು ನೋಡಿದ ತಕ್ಷಣ ನಿಮ್ಮ ತೆವಲು ಕೆರಳಿದರೆ ನಾವೇನು ಮಾಡಲು ಸಾಧ್ಯ.
ಅದು ಒಮ್ಮೆ ಮಾತ್ರವಲ್ಲ ನಿಮ್ಮ ಜೀವನ ಪರ್ಯಂತ,
ಒಬ್ಬರು ಮಾತ್ರವಲ್ಲ ಹಲವರು…..

ಹಣವಿಲ್ಲದವರು ಬಲವಂತದಿಂದ ದೌರ್ಜನ್ಯದಿಂದ,
ಹಣ ಅಧಿಕಾರ ಇರುವವರು ಆಸೆ ಆಮಿಷಗಳಿಂದ ನಮ್ಮನ್ನು ಭೋಗಿಸುತ್ತಾರೆ.
ಎರಡೂ ಒಂದೇ, ವ್ಯತ್ಯಾಸವೇನಿಲ್ಲ.

ದೇಹದಲ್ಲಿ ಏನಿದೆ ಪಾವಿತ್ರ್ಯತೆ, ಮನಸ್ಸಿನಲ್ಲಿ ಇಲ್ಲದ ಮೇಲೆ ಅಲ್ಲವೇ…

ಯಾವ ದೇವರೂ, ಯಾವ ಧರ್ಮವೂ, ಯಾವ ಕಾನೂನು ನಮ್ಮನ್ನು ಕಾಪಾಡಲಿಲ್ಲ. ಇನ್ನು ಇದನ್ನು ತಡೆಯುವುದು ನಮ್ಮಿಂದ ಸಾಧ್ಯವಿಲ್ಲ.

ಇಡೀ ಜೀವನಪರ್ಯಂತ ಈ ಸಮಾಜದಲ್ಲಿ ನಾವು ಭಯದಿಂದಲೇ ಸಾಯಬೇಕೆ. ರಸ್ತೆಗಳಲ್ಲಿ ಓಡಾಡುವಂತಿಲ್ಲ, ಬಸ್ಸು ರೈಲು ಕಾರುಗಳಲ್ಲಿ ನೆಮ್ಮದಿಯಿಂದ ಪ್ರಯಾಣಿಸುವಂತಿಲ್ಲ, ಶಾಲಾ ಕಾಲೇಜುಗಳಲ್ಲಿ ಒಂಟಿಯಾಗಿ ಇರುವಂತಿಲ್ಲ, ಉದ್ಯೋಗ ಸ್ಥಳದಲ್ಲಿ ನೆಮ್ಮದಿ ಇಲ್ಲ. ಯಾರಿಗೆ ಬೇಕು ಈ ಜೀವನಾ……

ಈ ಸಮಾಜ ಇರುವುದು ಪುರುಷರಿಗಾಗಿ, ಅವರ ಸುಖಕ್ಕಾಗಿ, ಅವರ ತೆವಲಿಗಾಗಿ. ನಾವೇನಿದ್ದರೂ ಅವರ ಗುಲಾಮರು ಅಡಿಯಾಳುಗಳು.

ಅದಕ್ಕಾಗಿ ನಮಗೆ ಉಳಿದಿರುವುದು ಒಂದೇ ಮಾರ್ಗ. ಅದೇ ವೇಶ್ಯೆಯರಾಗುವುದು. ದೇವದಾಸಿಯರಾಗುವುದು.
ಆಗ ನಮಗೆ ಸಾವಿನ ಭಯ ಇರುವುದಿಲ್ಲ. ಯಾರಾದರೂ ಅನುಭವಿಸಿಕೊಳ್ಳಿ. ಅದನ್ನು ಅಧೀಕೃತ ಗೊಳಿಸಿದರೆ ಕನಿಷ್ಠ ನಮ್ಮ ಪ್ರಾಣಗಳಾದರೂ ಉಳಿಯುತ್ತದೆ.

ಒಬ್ಬರೋ ಇಬ್ಬರೋ ವೇಶ್ಯೆಯರಾಗುವುದು, ಅವರನ್ನು ಅತ್ಯಂತ ಕೀಳಾಗಿ ನೋಡುವುದು, ಆ ಹೆಣ್ಣು ನರಳುವುದು ಬೇಡವೇ ಬೇಡ. ಸಾಮೂಹಿಕವಾಗಿ ನಾವೆಲ್ಲರೂ ವೇಶ್ಯೆಯರಾಗುತ್ತೇವೆ. ಹೆಣ್ಣಿನ ನೋವನ್ನು ಹಂಚಿಕೊಳ್ಳುತ್ತೇವೆ. ತೀರಿಸಿಕೊಳ್ಳಿ ನಿಮ್ಮ ಗಂಡಸುತನವನ್ನು ದಾಹ ತೀರುವವರೆಗೂ…..

ಪುರುಷ ಬಾಂಧವರೇ….
ಒಂದು ಸಣ್ಣ ವಿಷಯ ನೆನಪಿಸುತ್ತೇನೆ….
ಹೆಣ್ಣು ಎಂದಾಗ ನಿಮ್ಮ ತಾಯಿ ತಂಗಿ ಅಕ್ಕ ಮಗಳು ಸೊಸೆ, ಅಜ್ಜಿ, ಚಿಕ್ಕಮ್ಮ ಅತ್ತಿಗೆ ಎಲ್ಲರೂ ಸೇರುತ್ತಾರೆ. ಅವರನ್ನೂ ಬಿಡಬೇಡಿ. ಪುರುಷರ ತಾಖತ್ತು ಎಲ್ಲಾ ಕಡೆಯೂ ನಡೆಯಲಿ. ಧರ್ಮ ನೈತಿಕತೆ ಸಂಪ್ರದಾಯ ಎಲ್ಲರಿಗೂ ಸಮನಾಗಿ ಅನ್ವಯಿಸಲಿ.
ತಾಯಿಯಾದರೇನು – ತಂಗಿಯಾದರೇನು….
ಪ್ರಾಣಿಗಳಂತೆ…..

ಆ,
ತುಂಬಾ ಬೇಸರವಾಯಿತೆ, ಅಶ್ಲೀಲವಾಯಿತೆ,
ಅತಿರೇಕವಾಯಿತೆ,
ಅಸಭ್ಯವಾಯಿತೆ,
ಕೋಪ ಬಂದಿದೆಯೇ…..

ಆಗಿರಬೇಕು, ಅತ್ಯಂತ ಸಭ್ಯ ಗೌರವಾನ್ವಿತ ಅಧ್ಯಾತ್ಮಿಕ ಸಮಾಜದವರಲ್ಲವೇ ನಾವು. ಯಾರೋ ಕೆಲವು ಪಾಪಿಗಳು ಮಾಡಿದ ಕೃತ್ಯಕ್ಕೆ ಇಡೀ ಸಮಾಜವನ್ನು ದೂಷಿಸುವ ವಿಕೃತ ಮನಸ್ಸು ನಿನ್ನದು ಎಂದು ದೂಷಿಸುವಿರಲ್ಲವೇ ?

ಹೌದು,
ನನ್ನದು ವಿಕೃತ ಮನಸ್ಸು…..

ಅಲ್ಲಿ ದೆಹಲಿಯಲ್ಲಿ ನಿರ್ಭಯಾಳ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ತೂರಿಸಿದಾಗ ಆದ ನೋವು ಅಶ್ಲೀಲವಲ್ಲ, ಇಲ್ಲಿ ಹೈದರಾಬಾದಿನ ಪ್ರಿಯಾಂಕ ರೆಡ್ಡಿಯನ್ನು ಸಾಮೂಹಿಕ ಅತ್ಯಾಚಾರದ ನಂತರ ಪೆಟ್ರೋಲ್ ಸುರಿದು ಸುಟ್ಟಾಗ ಅದು ಅತಿರೇಕವಲ್ಲ. ಉನ್ನಾವೋ ಹತ್ಯೆ ಅತಿರೇಕವಲ್ಲ, ಈಗಿನ 13 ವರ್ಷದ ಹೆಣ್ಣಿನ ಮೇಲಿನ ಸಾಮೂಹಿಕ ಅತ್ಯಾಚಾರ ಅತಿರೇಕವಲ್ಲ, ಬಲವಂತದಿಂದ ಗಂಡಸು ಹೆಣ್ಣನ್ನು ಭೋಗಿಸಿದಾಗ ಆಗುವುದು ಅವಮಾನವಲ್ಲ, ಯಾತನೆಯಲ್ಲ, ಅದು ಗಂಡಸಿನ ಸುಖಮಯ ಕ್ಷಣಗಳು ಅಲ್ಲವೇ..ಏಕೆಂದರೆ ಅವರು ನಮ್ಮ ತಾಯಿ ತಂಗಿ ಅಕ್ಕ ಮಗಳಲ್ಲ ……

ಭಾರತದಲ್ಲಿ ಅತ್ಯಾಚಾರ ಅಪರೂಪವಲ್ಲ, ಪ್ರತಿ 20 ನಿಮಿಷಕ್ಕೆ ಒಂದು ಅತ್ಯಾಚಾರವಾಗುತ್ತದೆ. ಕೆಲವು ಘಟನೆಗಳು ಮಾತ್ರ ವರದಿಯಾಗುತ್ತವೆ. ದಾಖಲೆಗೆ ಸಿಗದ ಪ್ರಕರಣಗಳು ಇನ್ನೆಷ್ಟೋ, ಪರೋಕ್ಷ ದೌರ್ಜನ್ಯಗಳು ಮತ್ತೆಷ್ಟೋ,…..

ಒಬ್ಬ ಬಾಲಕಿಯನ್ನು ಬೀದಿ ಬದಿಯ ಕಾಮುಕರು ಎತ್ತೊಯ್ದು ಅತ್ಯಾಚಾರ ಮಾಡಿ ಸುಟ್ಟು ಹಾಕುತ್ತಾರೆಂದರೆ ನಾವು ಯಾವ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ…..

ಗೆಳತಿಯರೇ ನನ್ನದೊಂದ ಕಳಕಳಿಯ ಮನವಿ. ಈ ಸಲಹೆ ಉತ್ತಮ ಎನಿಸಿದರೆ ಇದನ್ನು ಯಾವುದಾದರೂ ಮಹಿಳಾ ಸಂಘಟನೆಗಳು ಒಂದು ಅಭಿಯಾನವಾಗಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿ.

” ನಾನು ಹೆಣ್ಣು – ನಾನು ವೇಶ್ಯೆ ”

ವಯಸ್ಸಿನ ಮಿತಿ ಬೇಡ. ಸಾಮೂಹಿಕವಾಗಿ ಪ್ರಾರಂಭಿಸಿದರೆ ಒಂದು ಒಗ್ಗಟ್ಟು ಪ್ರದರ್ಶಿಸಿದರೆ ಮುಜುಗರದಿಂದಲೂ ತಪ್ಪಿಸಿಕೊಳ್ಳಬಹುದು….

ಮುಖ್ಯವಾಗಿ,
ಈ ಪುರುಷ ಸಮಾಜ ಇದರಿಂದ ತಲೆ ತಗ್ಗಿಸಬಹುದು, ಆತ್ಮಾವಲೋಕನ ಮಾಡಿಕೊಳ್ಳಬಹುದು, ಅತ್ಯಾಚಾರದ ನಿಯಂತ್ರಣಕ್ಕೆ ಒಟ್ಟಾಗಿ ಒಂದು ಕ್ರಮ ಕೈಗೊಳ್ಳಬಹುದು.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯರಿಗೆ ಆತ್ಮವಿಶ್ವಾಸ ಮೂಡಬಹುದು. ಹೆಣ್ಣನ್ನು ನೋಡುವ ದೃಷ್ಟಿಯೇ ಬದಲಾಗಿ ಸಮಾನತೆ ಮೂಡಬಹುದು‌.
ಹೆಣ್ಣು ಪಾವಿತ್ರ್ಯ ಎಂಬ ಭ್ರಮೆ ಕಳಚಬಹುದು,
ಲೈಂಗಿಕ ಕ್ರಿಯೆಯ ಬಗ್ಗೆ ಇರುವ ಕುತೂಹಲ ಕಡಿಮೆಯಾಗಬಹುದು.
ಹೆಣ್ಣು ಸುಕೋಮಲೆ ಎಂಬ ಭಾವನೆ ಮಾಯವಾಗಬಹುದು.

ಇದಕ್ಕಾಗಿ
ಶಿಕ್ಷೆಗಳನ್ನು ಮೀರಿದ ಒಂದು ವಾಸ್ತವಿಕ ಯೋಜನೆಯ ಅವಶ್ಯಕತೆ ಇದೆ. ಅದು ಕ್ರಾಂತಿಕಾರಿ ಹೆಜ್ಜೆಯಾಗಿರಬೇಕೆ ಹೊರತು ಸಾಂಪ್ರದಾಯಿಕ ಶೈಲಿಯಿಂದ ಇದನ್ನು ತಡೆಯುವುದು ಅಸಾಧ್ಯ…..

ಕೊನೆಯದಾಗಿ,
ಗಂಡು ಹೆಣ್ಣಿನ ಮಿಲನ ಮಹೋತ್ಸವ, ಪ್ರೀತಿಯ, ಒಪ್ಪಿಗೆಯ, ಸಹಮತದಿಂದ ನಡೆದರೆ ಅದೊಂದು ಮನುಷ್ಯ ಪ್ರಾಣಿಯ ಅತ್ಯುತ್ಕೃಷ್ಟ ಸುಖಮಯ ಕ್ಷಣ.

ಅದು ಬಲವಂತದ ಅತ್ಯಾಚಾರವಾದರೆ ಹೆಣ್ಣಿಗೆ ಅದು ನರಕಯಾತನೆ,

ಗಂಡಿಗೆ ಅದೇ ಆತನ ಅಂತಿಮ ಯಾತ್ರೆಯಾಗಲಿ ಎಂದು ಆಶಿಸುತ್ತಾ………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Ramesh Babu

Journalist

Recent Posts

ಭಾರತಕ್ಕೆ ಕ್ಸಿ ಜಿನ್‌ಪಿಂಗ್ ಭೇಟಿ: ಮೋದಿ–ಕ್ಸಿ ದ್ವಿಪಕ್ಷೀಯ ಮಾತುಕತೆ ಇಂದು

ನವದೆಹಲಿ: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಎರಡು ದಿನಗಳ ಭಾರತ ಭೇಟಿಗಾಗಿ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿ ನವದೆಹಲಿಗೆ…

10 minutes ago

ಮಧುರೆ ದೇವಾಲಯದ ಬಳಿ ಮೇಲ್ಸೇತುವೆ ಅವ್ಯವಸ್ಥೆ: ಮೇಲಕ್ಕೆ ಚಾಚಿರುವ ಕಂಬಿಗಳಿಂದ ವಾಹನ ಸವಾರರಿಗೆ ತೊಂದರೆ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಮಧುರೆ ದೇವಾಲಯದ ಸಮೀಪ ಹೊಸದಾಗಿ ನಿರ್ಮಿಸಿರುವ ಮೇಲ್ಸೇತುವೆ ವಾಹನ ಸವಾರರಿಗೆ ತೀವ್ರ ತೊಂದರೆ ಉಂಟುಮಾಡುತ್ತಿದೆ.…

7 hours ago

ನಾಯಿ ಕಡಿತದ ಆತಂಕಕ್ಕೆ ಲಸಿಕೆಯ ಕವಚ: ರೇಬೀಸ್ ನಿಯಂತ್ರಣಕ್ಕೆ 32 ಸಾವಿರ ಲಸಿಕೆ

ಬೆಂಗಳೂರು ಗ್ರಾಮಾಂತರ: ಜಿಲ್ಲೆಯಲ್ಲಿ ನಾಯಿ ಕಡಿತ ಪ್ರಕರಣಗಳು ಹಾಗೂ ರೇಬೀಸ್ ಸೋಂಕಿನ ಆತಂಕಕ್ಕೆ ಕಡಿವಾಣ ಹಾಕಲು ಪಶುಪಾಲನಾ ಇಲಾಖೆ ಬೃಹತ್…

8 hours ago

2028ರ ಚುನಾವಣೆಗೆ ಜಾಲತಾಣವೇ ಅಸ್ತ್ರ- ಸಿಎಂಆರ್ ಶ್ರೀನಾಥ್

ಕೋಲಾರ: 2028ರಲ್ಲಿ ರಾಜ್ಯದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುವುದು ನೂರಕ್ಕೆ ನೂರು ಖಚಿತ. ಸಾಮಾಜಿಕ ಜಾಲತಾಣ ಈಗ ಪರಿಣಾಮಕಾರಿಯಾಗಿದೆ. ಅದನ್ನು…

21 hours ago

ಗಣೇಶ ವಿಸರ್ಜನೆ ವೇಳೆ ಮುಂಜಾಗ್ರತೆ ವಹಿಸಲು ರೈತ ಸಂಘ ಒತ್ತಾಯ: ಕೃಷಿ ಹೊಂಡ, ಕೆರೆ-ಕುಂಟೆಗಳಲ್ಲಿ ವಿಸರ್ಜನೆಗೆ ಕಡಿವಾಣ ಹಾಕಿ: ಜಿಲ್ಲಾಧಿಕಾರಿಗೆ ಮನವಿ

ಕೋಲಾರ : ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಯಾವುದೇ ರೀತಿಯ ಅನಾಹುತ, ಅಹಿತಕರ ಘಟನೆಗಳು ಸಂಭವಿಸದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕರಪತ್ರಗಳ…

21 hours ago

ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ಒಡ್ಡರಹಳ್ಳಿ ಹಾಗೂ ದೊಡ್ಡಬಳ್ಳಾಪುರ ರೈಲು ನಿಲ್ದಾಣಗಳ ನಡುವಿನ ಡಿ ಕ್ರಾಸ್ ರೈಲ್ವೆ ಬ್ರಿಡ್ಜ್ ಸಮೀಪ ಶುಕ್ರವಾರ (ಸೆ.11) ಮಧ್ಯಾಹ್ನ…

21 hours ago