ಅಂತರ್ಜಲ ಪ್ರಮಾಣ ವರ್ಷದಿಂದ ವರ್ಷಕ್ಕೆ ಕುಸಿತ: ಒಂದು ತಿಂಗಳಲ್ಲಿ 1.15 ಮೀ. ನೀರಿನ ಮಟ್ಟ ಕುಸಿತ: ಬೋರ್‌ವೆಲ್‌ಗಳಲ್ಲಿ ಬರಿದಾದ ನೀರು: ರೈತ ಕಂಗಾಲು

ದೊಡ್ಡಬಳ್ಳಾಪುರದಲ್ಲಿ ಬೇಸಿಗೆಯ ತಾಪಮಾನ ದಿನೇ ದಿನೆ ಹೆಚ್ಚುತ್ತಿದೆ‌. ಈ ಹಿನ್ನೆಲೆ ತೀವ್ರ ಜಲಕ್ಷಾಮದ ಕಾರ್ಮೋಡ ಆವರಿಸಿದಂತಿದೆ‌. ವರ್ಷದಿಂದ ವರ್ಷಕ್ಕೆ ಏರುತ್ತಿರುವ ಬೇಸಿಗೆಯ ತಾಪಮಾನ ಅಂತರ್ಜಲದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತಿದೆ.

ಕೆಲ ರೈತರು ನೀರಾವರಿಯನ್ನೇ ನಂಬಿ ಲಕ್ಷಾಂತರ ರೂ. ಖರ್ಚು ಮಾಡಿ ಬೆಳೆ ಬೆಳೆದಿರುತ್ತಾರೆ. ಆದರೆ, ಬೇಸಿಗೆ ಅಂತರ್ಜಲ ಮಟ್ಟ ಕುಸಿತದಿಂದ ಬೋರ್‌ವೆಲ್‌ಗಳೆಲ್ಲಾ ಬರಿದಾಗುತ್ತಿದ್ದು, ನೀರಿಗಾಗಿ ಹಾಹಾಕಾರ ಸೃಷ್ಟಿಯಾಗುತ್ತಿದೆ.

ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯ ಕೊಟ್ಟಿಗೆಮಾಚೇನಹಳ್ಳಿ ಗ್ರಾಮದಲ್ಲಿ ರೈತರು ತಮ್ಮ ತೋಟಗಳಲ್ಲಿ ಕೊರೆಸಿರುವ ಸುಮಾರು 5-6 ಬೋರ್‌ವೆಲ್‌ಗಳು ಬರಿದಾಗಿವೆ. ಬೆಳೆಗಳಿಗೆ ನೀರು ಇಲ್ಲದೇ ಬೆಳೆಗಳು ಒಣಗುತ್ತಿವೆ. ಈ ಹಿನ್ನೆಲೆ ಬೆಳೆಗಳಿಗೆ ನೀರು ಹಾಯಿಸಲಾಗದೆ ಬೆಳೆ ಸಹಿತ ತೋಟಗಳನ್ನೇ ಉಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕೃಷಿಯನ್ನೇ ನಂಬಿರುವ ರೈತರು ಸಾಕಷ್ಟು ಸಂಕಷ್ಟಕ್ಕೊಳಗಾಗುತ್ತಿದ್ದಾರೆ.

ರೈತರು ಹೊಸ ಬೋರ್‌ವೆಲ್‌ಗಳನ್ನು ಕೊರೆಸಲು ಮುಂದಾಗುತ್ತಿದ್ದಾರೆ. ಇನ್ನೂ ಕೆಲವರು ಬೇಸಿಗೆಯಲ್ಲಿ ಬೆಳೆಗಳ ಸಹವಾಸವೇ ಬೇಡ ಎಂದು ಇಟ್ಟಿದ್ದ ಬೆಳೆಗಳನ್ನು ನೀರಿಲ್ಲದೇ ಫಸಲು ಬರುವ ಮೊದಲೇ ನಾಶ ಮಾಡುತ್ತಿದ್ದಾರೆ. ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

10 ಎಕರೆಯಲ್ಲಿ 6 ಎಕರೆ ಅಡಿಕೆ, 2 ಎಕರೆ ರೇಷ್ಮೆ, 2 ಎಕರೆ ಸುಗಂಧರಾಜ, ಮಿಕ್ಕುಳಿದ ಭೂಮಿಯಲ್ಲಿ ರಾಗಿ ಬೆಳೆದಿದ್ದೇವು. ಇದೀಗ ಬೋರ್‌ವೆಲ್‌ನಲ್ಲಿ ಬರುತ್ತಿದ್ದ ನೀರು ನಿಂತು ಹೋಗಿದೆ. ಫಸಲಿಗೆ ಬಂದಿದ್ದ ಬೆಳೆ ಬಾಡುತ್ತಿದೆ. ಇದರಿಂದ ನಮಗೆ ಲಕ್ಷಾಂತರ ರೂ. ನಷ್ಟವಾಗಿದೆ. ಇದನ್ನು ಸರ್ಕಾರ ಮನಗಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಕೊಟ್ಟಿಗೆಮಾಚೇನಹಳ್ಳಿ ರೈತ ಲಕ್ಷ್ಮಿ ನಾರಾಯಣಪ್ಪ ಮನವಿ ಮಾಡಿದರು.

ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳ ವೇಳೆಗೆ ಅಂತರ್ಜಲ ಮತ್ತಷ್ಟು ಕುಸಿತ ಕಂಡಿದ್ದು, ಬೇಸಿಗೆ ಬಿಸಿಲ ತಾಪ ಏರಿಕೆಯಾದರೆ ಮತ್ತಷ್ಟು ಇಳಕೆಯಾಗುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಕುಸಿತ

ರಾಜ್ಯದಲ್ಲಿಯೇ ಬೇಸಿಗೆ ತಾಪ ಏರಿಕೆಯಾಗುತ್ತಿದೆ. ಅದರಂತೆ ಗ್ರಾಮಾಂತರ ಜಿಲ್ಲೆಯಲ್ಲೂ ಇದರ ಎಫೆಕ್ಟ್ ಗೆ ಅಂತರ್ಜಲದ ಮಟ್ಟದಲ್ಲಿ ಇಳಿಕೆ ಕಂಡುಬಂದಿದೆ. ಕಳೆದ ವರ್ಷ ಮಾರ್ಚ್ ತಿಂಗಳಿಗೆ ಹೋಲಿಸಿದರೆ ಈ ಬಾರಿ ದೇವನಹಳ್ಳಿಯಲ್ಲಿ 0.46ಮೀ, ದೊಡ್ಡಬಳ್ಳಾಪುರದಲ್ಲಿ 0.55ಮೀ, ಹೊಸಕೋಟೆಯಲ್ಲಿ 1.81ಮೀ, ನೆಲಮಂಗಲದಲ್ಲಿ 0.31ಮೀ. ಕುಸಿತ ಕಂಡಿದ್ದು, ಒಟ್ಟು ಜಿಲ್ಲೆಯಲ್ಲಿ 0.78ಮೀ ಅಂತರ್ಜಲ ಮಟ್ಟ ಕುಸಿತ ಕಂಡುಬಂದಿದೆ. ಸದ್ಯದ ಪರಿಸ್ಥಿತಿಯಲ್ಲಿ ಅಂತರ್ಜಲ ಮಟ್ಟ ಕಾಪಾಡಿಕೊಳ್ಳಲು ಅಟಲ್ ಭೂಜಲ ಯೋಜನೆಯ ಮೂಲಕ ಗ್ರಾಪಂ ಮಟ್ಟದಲ್ಲಿ ಜಾಗೃತಿ ಮೂಡಿಸಲಾಗಿದೆ.

ಆದರೆ ಜಿಲ್ಲೆಯಲ್ಲಿ ಮಳೆ ಕೊಯ್ಲು ಪದ್ದತಿಗೆ ಹೆಚ್ಚಿನ ಆದ್ಯತೆ ಸಿಗುತ್ತಿಲ್ಲ. ಇದರಿಂದ ಮಳೆಕೊಯ್ಲು ಪದ್ದತಿ ಅಳವಡಿಕೆಯ ಮೂಲಕ ನೀರಿನ ಸಂರಕ್ಷಣೆಗೆ ಒತ್ತು ನೀಡುವ ಕೆಲಸವಾಗಬೇಕಿದೆ. ಇನ್ನೂ ಕೆರೆಗಳು ಕೂಡ ಬಹುತೇಕ ಖಾಲಿಯಾಗಿದ್ದು, ಅಂತರ್ಜಲದ ಮೇಲೆ ಪರಿಣಾಮ ಬೀರಿದೆ.

ಅಂತರ್ಜಲದಲ್ಲಿ ವ್ಯತ್ಯಯ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿಗೆ ಹೋಲಿಸಿದರೆ ಮಾರ್ಚ್ ತಿಂಗಳ ವೇಳೆಗೆ ಅಂತರ್ಜಲ ಮಟ್ಟ ಮತ್ತಷ್ಟು ಕುಸಿತ ಕಂಡಿದೆ. ನೀರಿನ ಬಳಕೆಯೂ ಹೆಚ್ಚಾದ ಹಿನ್ನಲೆ ಬೋರ್‌ವೆಲ್‌ಗಳ ಮೇಲೆ ಅವಲಂಬನೆ ಹೆಚ್ಚಾಗಿದೆ. ಇದರಿಂದ ಅಂತರ್ಜಲ ಮಟ್ಟದ ಇಳಿಕೆ ಕಂಡುಬಂದಿದೆ. ಅದರಲ್ಲೂ ದೊಡ್ಡಬಳ್ಳಾಪುರ ಮತ್ತು ಹೊಸಕೋಟೆಯಲ್ಲಿ ಕ್ರಮವಾಗಿ 1.89ಮೀ ಮತ್ತು 1.98 ಮೀ. ಅಂತರ್ಜಲ ಮಟ್ಟ ಇಳಿಕೆಯಾಗಿದೆ. ಇನ್ನೂ ದೇವನಹಳ್ಳಿಯಲ್ಲಿ 0.73 ಮೀ ನಷ್ಟು ಕಡಿಮೆಯಾಗಿದ್ದರೆ, ನೆಲಮಂಗಲದಲ್ಲಿ 0.02ಮೀ. ನಷ್ಟು ಮಾತ್ರ ಕಡಿಮೆಯಾಗಿದ್ದು, ಒಟ್ಟು 1.15ಮೀ. ನಷ್ಟು ಅಂತರ್ಜಲ ಕುಸಿತವಾಗಿದೆ. ಇನ್ನೂ ಎರಡು ತಿಂಗಳ ಕಾಲ ಮಳೆಯಾಗದಿದ್ದರೆ ಮತ್ತಷ್ಟು ನೀರಿನ ಪ್ರಮಾಣದಲ್ಲಿ ಕುಸಿತವಾಗಿದೆ.

ಅಂತರ್ಜಲದ ವಿವರ (ನೆಲಮಟ್ಟದಿಂದ ಮೀಟರ್‌ನಲ್ಲಿ)

ತಾಲೂಕು      ಫೆ.2026     ಮಾ.2026

ದೇವನಹಳ್ಳಿ      20.18       20.91

ದೊಡ್ಡಬಳ್ಳಾಪುರ   22.00       23.89

ಹೊಸಕೋಟೆ     16.29        18.27

ನೆಲಮಂಗಲ     36.98     37.00

ಸರಾಸರಿ        23.87        24.77

ಮಳೆನೀರಿನ ಕೊಯ್ಲಿಗಿಲ್ಲ ಆದ್ಯತೆ

ಜಿಲ್ಲೆಯಲ್ಲಿ ಸದ್ಯ 700 ರಿಂದ 1200 ಅಡಿಗಳಷ್ಟರಲ್ಲಿ ಬೋರ್‌ವೆಲ್‌ಗಳಲ್ಲಿ ನೀರು ಸಿಗುತ್ತಿದೆ. ಬೇಸಿಗೆಯಲ್ಲಿ ಸಾಮಾನ್ಯವಾಗಿ ನೀರಿನ ಅಭಾವ ಕೂಡ ಕಾಡುತ್ತದೆ. ಆದರೆ ಜಿಲ್ಲೆಯಲ್ಲಿ ಮಳೆನೀರಿ ಕೊಯ್ಲು ಬಗ್ಗೆ ಹೆಚ್ಚಾಗಿ ಜಾಗೃತಿ ಮೂಡಬೇಕಿದೆ. ಕೈಗಾರಿಕೆಗಳಿಗೆ ಎನ್‌ಒಸಿ ಪಡೆಯಲು ಕಡ್ಡಾಯವಾಗಿ ಮಳೆನೀರು ಕೊಯ್ಲು ಪದ್ದತಿ ಅಳವಡಿಸಿಕೊಳ್ಳುತ್ತಿದ್ದಾರೆ. ಆದರೆ ಉಳಿದಂತೆ ಸರಕಾರಿ ಕಚೇರಿಗಳಲ್ಲಿ, ಅರ್ಪಾಟ್ಮೆಂಟ್‌ಗಳು, ಮನೆಗಳಲಿ, ರೈತರ ಜಮೀನುಗಳಲ್ಲಿ ಮಳೆ ನೀರಿನ ಸಂಗ್ರಹಣೆ ಸಾಧ್ಯವಾಗುತ್ತಿಲ್ಲ. ಬೋರ್‌ವೆಲ್‌ಗಳನ್ನು ಕೊರೆಸಿ ಲಾಭಕ್ಕಾಗಿ ಮಾತ್ರ ಕೆಲಸವಾಗುತ್ತಿದ್ದು, ನೀರಿನ ಸಂರಕ್ಷಣೆಯ ಬಗ್ಗೆ ಮಾತ್ರ ಯಾರು ಕೂಡ ತಲೆಕೆಡಿಸಿಕೊಳ್ಳುತ್ತಿಲ್ಲ. ಇದರಿಂದ ಅಂತರ್ಜಲದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುವಂತೆ ಮಾಡಿದ್ದು, ಈ ಬಗ್ಗೆ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ.

ಪುನರ್ ಬಳಕೆಗಿಲ್ಲ ಆದ್ಯತೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆ ಬರಬಹುದಾದ ಗ್ರಾಮಗಳನ್ನು ಗುರುತಿಸಲಾಗಿದೆ. ಆದರೆ ಅನೇಕ ಕಡೆಗಳಲ್ಲಿ ಅವಕಾಶವಿದ್ದರೂ ಕೂಡ ನೀರಿನ ಪುನರ್‌ಬಳಕೆಯಾಗುತ್ತಿಲ್ಲ. ಕೈಗಾರಿಕೆಗಳಲ್ಲಿ ಮಾತ್ರ ಇದಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಉಳಿದಂತೆ ಈ ಕೆಲಸವಾಗಿಲ್ಲ.ಈಗಾಗಲೇ ಜಿಲ್ಲೆಯ ಕೆರೆಗಳು ಖಾಲಿಯಾಗಿದ್ದು, ಮುಂಗಾರಿಗೆ ನೀರು ತುಂಬಿಕೊಳ್ಳಲು ಕೂಡ ಕೆರೆಗಳ ಅಭಿವೃದ್ದಿ ಮಾಡಲು ಯಾರು ಮುಂದಾಗದೇ ಇರುವುದು ವಿಪರ್ಯಾಸ.

Ramesh Babu

Journalist

Recent Posts

ಆಟೋ ಚಾಲಕರಿಗೆ ಸಮವಸ್ತ್ರ ವಿತರಿಸಿದ ಜಿ. ಲಕ್ಷ್ಮೀಪತಿ

ದೊಡ್ಡಬಳ್ಳಾಪುರ: ಹುಟ್ಟುಹಬ್ಬವನ್ನು ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಸಮಾಜಮುಖಿ ಸೇವಾ ಕಾರ್ಯಗಳ ಮೂಲಕ ಆಚರಿಸಿದಾಗ ಅದಕ್ಕೆ ವಿಶೇಷ ಅರ್ಥ ಬರುತ್ತದೆ ಎಂದು…

4 hours ago

ಬೆಂಗಳೂರು ಶಿಕ್ಷಕರ ಕ್ಷೇತ್ರ ಚುನಾವಣೆ-2026: ಅಂತಿಮ ಮತದಾರ ಪಟ್ಟಿಯಲ್ಲಿ 2863 ಶಿಕ್ಷಕ ಮತದಾರರು : ಡಿಸಿ

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ಚುನಾವಣೆ ನಡೆಯುವ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶಿಕ್ಷಕರ ಕ್ಷೇತ್ರದ ಅಂತಿಮ…

5 hours ago

ಸಿಮೆಂಟ್ ಲಾರಿ–ಕಂಟೇನರ್ ನಡುವೆ ಅಪಘಾತ

ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಕನ್ನಮಂಗಲ ಗೇಟ್ ಗೋದಿ ಮಿಲ್ ಸಮೀಪದ ಪೆಟ್ರೋಲ್ ಬಂಕ್ ಬಳಿ ಸೋಮವಾರ ಬೆಳಗ್ಗೆ ಸಿಮೆಂಟ್ ಲಾರಿ…

11 hours ago

ನಾಯಿ ಕಡಿತದ ಸುಳಿಗೆ ಮಕ್ಕಳು: ನಾಲ್ಕು ವರ್ಷದಲ್ಲಿ 4.21 ಲಕ್ಷ ಪ್ರಕರಣ: ರೇಬಿಸ್‌ಗೆ ಮಕ್ಕಳ ಸಾವು

ಬೆಂಗಳೂರು ಗ್ರಾಮಾಂತರ: ಶಾಲೆಗೆ ಹೋಗುವ ದಾರಿ, ಅಂಗನವಾಡಿಯ ಅಂಗಳ, ಆಟವಾಡುವ ಮೈದಾನ... ಹೀಗೆ ಮಕ್ಕಳ ಸುರಕ್ಷಿತ ಬಾಲ್ಯ ಕಳೆಯಬೇಕಾದ ಜಾಗಗಳಲ್ಲೇ…

14 hours ago

ವಿಡಿಯೋ ಕಾಲ್ ಮಾಡಿ ನೇಣಿಗೆ ಶರಣಾದ ವ್ಯಕ್ತಿ

ದೊಡ್ಡಬಳ್ಳಾಪುರ: ಮನೆಯವರಿಗೆ ವಿಡಿಯೋ ಕಾಲ್ ಮಾಡಿದ ಬಳಿಕ ಉತ್ತರ ಪ್ರದೇಶ ಮೂಲದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ…

1 day ago

ಮಣ್ಣಿನಡಿ ಹುದುಗಿಹೋಗುತ್ತಿದ್ದ ವಿಜಯನಗರ ಕಾಲದ 6 ವೀರಗಲ್ಲುಗಳಿಗೆ ಮರುಜೀವ: ರಸ್ತೆ ವಿಸ್ತರಣೆ ವೇಳೆ ಪತ್ತೆ; ಪುರಾತತ್ವ ಇಲಾಖೆ ತ್ವರಿತ ಕಾರ್ಯಾಚರಣೆ

ದೊಡ್ಡಬಳ್ಳಾಪುರ: ರಸ್ತೆ ವಿಸ್ತರಣೆ ಕಾಮಗಾರಿ ವೇಳೆ ಮಣ್ಣಿನಡಿ ಹುದುಗಿಹೋಗುವ ಅಪಾಯದಲ್ಲಿದ್ದ ವಿಜಯನಗರ ಅರಸರ ಕಾಲದ ಆರು ಐತಿಹಾಸಿಕ ವೀರಗಲ್ಲುಗಳನ್ನು ಪುರಾತತ್ವ…

1 day ago