
ದೊಡ್ಡಬಳ್ಳಾಪುರ: ತಾಲೂಕಿನ ಮಲ್ಲೋಹಳ್ಳಿ ಗ್ರಾಮದ ಮುಜರಾಯಿ ಇಲಾಖೆಗೆ ಸೇರಿದ ಪ್ರಸಿದ್ಧ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನಕ್ಕೆ ನಿನ್ನೆ ಸಂಜೆ ಬೀಗ ಹಾಕಿರುವ ಘಟನೆ ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ದೇವಸ್ಥಾನಕ್ಕೆ ಬೀಗ ಹಾಕಿರುವುದರ ಹಿಂದೆ ಅರ್ಚಕರ ಬದಲಾವಣೆಯ ವಿಚಾರವೇ ಪ್ರಮುಖ ಕಾರಣ ಎಂಬ ಆರೋಪಗಳು ಕೇಳಿಬಂದಿವೆ.

ಅರ್ಚಕರ ಮೇಲಿನ ದ್ವೇಷದಿಂದ ಹಾಗೂ ಅವರನ್ನು ಬದಲಾವಣೆ ಮಾಡಬೇಕೆಂಬ ಉದ್ದೇಶದಿಂದಲೇ ದೇವಸ್ಥಾನಕ್ಕೆ ಬೀಗ ಹಾಕಲಾಗಿದೆ ಎಂದು ಕೆಲ ಗ್ರಾಮಸ್ಥರು, ಅರ್ಚಕ ಕುಟುಂಬದ ಸದಸ್ಯ ಚರಣ್ ಆರೋಪಿಸಿದ್ದಾರೆ. ಅಧಿಕಾರಿಗಳು ಸ್ಥಳ ಪರಿಶೀಲನೆಯನ್ನೂ ನಡೆಸದೆ, ಕಂದಾಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಕೆಲ ವ್ಯಕ್ತಿಗಳು ದೇವಸ್ಥಾನಕ್ಕೆ ಬೀಗ ಹಾಕಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ಗ್ರಾಮದ ಪ್ರಮುಖ ಧಾರ್ಮಿಕ ಶ್ರದ್ಧಾಕೇಂದ್ರವಾಗಿರುವ ದೇವಸ್ಥಾನಕ್ಕೆ ಬೀಗ ಹಾಕಿರುವುದರಿಂದ ಭಕ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರ್ಚಕರ ವಿಚಾರದಲ್ಲಿ ವಿವಾದವಿದ್ದರೆ ಅದನ್ನು ಕಾನೂನುಬದ್ಧವಾಗಿ ಬಗೆಹರಿಸಿಕೊಳ್ಳಬೇಕು. ಅದಕ್ಕಾಗಿ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ತೊಂದರೆ ನೀಡುವುದು ಸರಿಯಲ್ಲ ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ವ್ಯಕ್ತವಾಗಿದೆ.
ದೇವಸ್ಥಾನಕ್ಕೆ ಬೀಗ ಹಾಕಲು ಅನುಮತಿ ನೀಡಿದವರು ಯಾರು? ಯಾವ ಅಧಿಕಾರದ ಆಧಾರದ ಮೇಲೆ ಬೀಗ ಹಾಕಲಾಗಿದೆ? ಅರ್ಚಕರ ಬದಲಾವಣೆಯ ವಿಚಾರದಲ್ಲಿ ಯಾರ ಹಿತಾಸಕ್ತಿ ಅಡಗಿದೆ? ಎಂಬ ಪ್ರಶ್ನೆಗಳನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.

ಕೂಡಲೇ ದೇವಸ್ಥಾನದ ಬೀಗ ತೆರವುಗೊಳಿಸಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಹಾಗೂ ಘಟನೆಗೆ ಸಂಬಂಧಿಸಿದಂತೆ ಸೂಕ್ತ ಸ್ಪಷ್ಟನೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಇಲ್ಲವಾದಲ್ಲಿ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಈ ಎಲ್ಲ ಆರೋಪಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಅಧಿಕೃತ ಸ್ಪಷ್ಟನೆ ಇನ್ನಷ್ಟೇ ಬರಬೇಕಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…..