
ಬೆಲೆ ಏರಿಕೆಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯಕ್ಕೆ ರಾಜ್ಯ ಬಿಜೆಪಿ ಉತ್ತರಿಸಲಿ. ಕರ್ನಾಟಕದ ಜನರನ್ನು ದಿಕ್ಕುತಪ್ಪಿಸುವ ರಾಜಕೀಯವನ್ನು ನಿಲ್ಲಿಸಲಿ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ಬೆಲೆ ಏರಿಕೆ, ಬರ ಪರಿಹಾರ ಹಾಗೂ ಆಡಳಿತದ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟಿಸುವ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ದೇಶದ ಕೋಟ್ಯಂತರ ಜನರ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೊದಲು ಉತ್ತರಿಸಬೇಕಾಗಿದೆ ಎಂದು ಹೇಳಿದ್ದಾರೆ.
ಅಗತ್ಯ ಆಹಾರ ಪದಾರ್ಥಗಳು, ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಸೇರಿದಂತೆ ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಕುಟುಂಬಗಳು, ರೈತರು ಹಾಗೂ ಸಣ್ಣ ಉದ್ಯಮಿಗಳು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2026ರ ಅಕ್ಟೋಬರ್ನಲ್ಲಿ ಚಿಲ್ಲರೆ ಹಣದುಬ್ಬರ ಶೇ. 6.09ಕ್ಕೆ, ಆಹಾರ ಪದಾರ್ಥಗಳ ಹಣದುಬ್ಬರ ಶೇ. 8.94ಕ್ಕೆ ಹಾಗೂ ಸಗಟು ಹಣದುಬ್ಬರ ಶೇ. 12.29ಕ್ಕೆ ಏರಿಕೆಯಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆಹಾರ ಹಣದುಬ್ಬರ ಶೇ. 9.09ರಷ್ಟಿದೆ. ಇವು ಕೇಂದ್ರ ಸರ್ಕಾರವೇ ಬಿಡುಗಡೆ ಮಾಡಿರುವ ಅಂಕಿ-ಅಂಶಗಳು. ದೇಶಾದ್ಯಂತ ಬೆಲೆ ಏರಿಕೆಯ ಸಮಸ್ಯೆ ತೀವ್ರವಾಗಿರುವಾಗ ಅದರ ಸಂಪೂರ್ಣ ಹೊಣೆಯನ್ನು ಕರ್ನಾಟಕ ಸರ್ಕಾರದ ಮೇಲೆ ಹೊರಿಸುವುದು ಯಾವ ನ್ಯಾಯ? ಎಂದು ಪ್ರಶ್ನೆ ಮಾಡಿದ್ದಾರೆ.
ರೂಪಾಯಿ ಮೌಲ್ಯದ ಕುಸಿತ ಹಾಗೂ ಕಚ್ಚಾ ತೈಲದ ಆಮದು ವೆಚ್ಚದಲ್ಲಿನ ಹೆಚ್ಚಳವೂ ಜನಸಾಮಾನ್ಯರ ಆರ್ಥಿಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. 2014ರಲ್ಲಿ ಒಂದು ಡಾಲರ್ಗೆ ಸುಮಾರು ₹58.59ರಷ್ಟಿದ್ದ ರೂಪಾಯಿ ಮೌಲ್ಯವು 2026ರ ಮೇ ತಿಂಗಳಲ್ಲಿ ₹96.96ಕ್ಕೆ ಕುಸಿದಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತಗಳ ನಡುವೆಯೂ ದೇಶದ ಆರ್ಥಿಕತೆ ಮತ್ತು ಇಂಧನ ಭದ್ರತೆಯನ್ನು ಕಾಪಾಡಲು ಕೇಂದ್ರ ಸರ್ಕಾರ ಯಾವ ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿದೆ? ಎಂದು ಪ್ರಶ್ನಿಸಿದ್ದಾರೆ.
ಈರುಳ್ಳಿ, ಬೆಳ್ಳುಳ್ಳಿ, ಬೇಳೆಕಾಳುಗಳು ಮತ್ತು ಅಡುಗೆ ಎಣ್ಣೆಯ ಬೆಲೆ ಏರಿಕೆ ನಿಯಂತ್ರಣದಲ್ಲಿಯೂ ಕೇಂದ್ರ ಸರ್ಕಾರದ ಕ್ರಮಗಳು ನಿರೀಕ್ಷಿತ ಫಲ ನೀಡಿಲ್ಲ. ಬೆಲೆ ಸ್ಥಿರೀಕರಣಕ್ಕಾಗಿ ಮೀಸಲು ದಾಸ್ತಾನು ಮತ್ತು ಮಾರುಕಟ್ಟೆ ಮಧ್ಯಪ್ರವೇಶದ ಅಧಿಕಾರಗಳಿದ್ದರೂ ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಿಸಲು ಸಾಧ್ಯವಾಗದಿರುವುದೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಗೃಹಬಳಕೆಯ ಅಡುಗೆ ಅನಿಲ ಸಿಲಿಂಡರ್ ಬೆಲೆ ಸುಮಾರು ₹944.50 ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ₹2,909ಕ್ಕೆ ತಲುಪಿದೆ. ಇದರ ನಡುವೆ ಉಜ್ವಲ ಯೋಜನೆಯಡಿ ವಾರ್ಷಿಕ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ಒಂಬತ್ತರಿಂದ ನಾಲ್ಕಕ್ಕೆ ಇಳಿಸಿರುವುದು ಬಡ ಕುಟುಂಬಗಳ ಮೇಲಿನ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಇದಕ್ಕೆ ವ್ಯತಿರಿಕ್ತವಾಗಿ, ನಮ್ಮ ಕರ್ನಾಟಕ ಸರ್ಕಾರವು ಜನಸಾಮಾನ್ಯರು ಮತ್ತು ಉತ್ಪಾದಕರ ಹಿತರಕ್ಷಣೆಗೆ ಆದ್ಯತೆ ನೀಡುತ್ತಿದೆ ಎಂದಿದ್ದಾರೆ.
ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8ರಷ್ಟು ಪರಿಷ್ಕರಿಸಿದ್ದು, ಅದರಲ್ಲಿ ₹7 ನೇರವಾಗಿ ಹೈನುಗಾರರಿಗೆ ತಲುಪಲಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚದಿಂದ ಸಂಕಷ್ಟದಲ್ಲಿರುವ ಹೈನುಗಾರರ ಜೀವನೋಪಾಯವನ್ನು ರಕ್ಷಿಸುವುದು ಈ ನಿರ್ಧಾರದ ಉದ್ದೇಶವಾಗಿದೆ ಎಂದು ತಿಳಿಸಿದ್ದಾರೆ.
ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಹಾಗೂ ಅನ್ನಭಾಗ್ಯ ಯೋಜನೆಗಳ ಮೂಲಕ ಸಾಮಾನ್ಯ ಕುಟುಂಬಗಳ ಆರ್ಥಿಕ ಹೊರೆಯನ್ನು ಕಡಿಮೆ ಮಾಡಲು ನಮ್ಮ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಬರ ಪರಿಹಾರದ ವಿಚಾರದಲ್ಲಿಯೂ ಕರ್ನಾಟಕ ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿದಿಲ್ಲ ಎಂದರು.
ಪ್ರತಿ ಅರ್ಹ ರೈತರಿಗೆ ಗರಿಷ್ಠ ₹5,000 ನೆರವು ನೀಡಲು ನಿರ್ಧರಿಸಿದ್ದು, ಮೊದಲ ಕಂತಿನ ₹2,500 ಪರಿಹಾರವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಕೇಂದ್ರದ ನೆರವಿಗಾಗಿ ಕಾಯದೆ ರೈತರ ಸಂಕಷ್ಟಕ್ಕೆ ನಮ್ಮ ಸರ್ಕಾರ ಸ್ಪಂದಿಸಿದೆ ಎಂದು ತಿಳಿಸಿದ್ದಾರೆ.
ಇದರ ಜೊತೆಗೆ ಕರ್ನಾಟಕದ ಬರ ಪರಿಸ್ಥಿತಿ ನಿರ್ವಹಣೆಗಾಗಿ ₹22,400.58 ಕೋಟಿ ನೆರವು ಕೋರಿ ಕೇಂದ್ರ ಸರ್ಕಾರಕ್ಕೆ ಪರಿಷ್ಕೃತ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯದ ರೈತರ ಬಗ್ಗೆ ನಿಜವಾದ ಕಾಳಜಿಯಿದ್ದರೆ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವುದರ ಜೊತೆಗೆ ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ನ್ಯಾಯಯುತವಾಗಿ ದೊರೆಯಬೇಕಾದ ಪರಿಹಾರವನ್ನು ಬಿಡುಗಡೆ ಮಾಡಿಸುವ ಜವಾಬ್ದಾರಿಯನ್ನೂ ನಿರ್ವಹಿಸಬೇಕು ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ನಾಯಕರಿಗೆ ಡಿಸಿಎಂ ಅವರ ಆರು ಪ್ರಶ್ನೆಗಳು:
1. ಹಣದುಬ್ಬರ ಮತ್ತು ಆಹಾರ ಪದಾರ್ಥಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರದ ತಕ್ಷಣದ ಕ್ರಮಗಳೇನು?
2. ರೂಪಾಯಿ ಮೌಲ್ಯದ ಕುಸಿತ ಮತ್ತು ಅಂತಾರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಏರಿಕೆಯಿಂದ ದೇಶದ ಆರ್ಥಿಕತೆಯನ್ನು ರಕ್ಷಿಸಲು ಕೈಗೊಂಡಿರುವ ಕ್ರಮಗಳೇನು?
3. ಅಗತ್ಯ ಆಹಾರ ಪದಾರ್ಥಗಳ ಬೆಲೆ ನಿಯಂತ್ರಣಕ್ಕೆ ಮೀಸಲು ದಾಸ್ತಾನು ಮತ್ತು ಮಾರುಕಟ್ಟೆ ಮಧ್ಯಪ್ರವೇಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದಿರುವುದೇಕೆ?
4. ಉಜ್ವಲ ಯೋಜನೆಯಡಿ ಕಡಿತಗೊಳಿಸಿರುವ ಸಬ್ಸಿಡಿ ಸಿಲಿಂಡರ್ಗಳ ಸಂಖ್ಯೆಯನ್ನು ಮತ್ತೆ ಹೆಚ್ಚಿಸುವಿರಾ?
5. ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ಹೊರೆಯನ್ನು ಕಡಿಮೆ ಮಾಡಲು ಯಾವ ಕ್ರಮಗಳನ್ನು ಕೈಗೊಳ್ಳುವಿರಿ?
6. ಕರ್ನಾಟಕ ಸರ್ಕಾರ ಕೋರಿರುವ ₹22,400.58 ಕೋಟಿ ಬರ ಪರಿಹಾರದ ನೆರವನ್ನು ಯಾವಾಗ ಬಿಡುಗಡೆ ಮಾಡುವಿರಿ?
ಈ ಪ್ರಶ್ನೆಗಳಿಗೆ ರಾಜಕೀಯ ಹೇಳಿಕೆಗಳ ಬದಲಾಗಿ ವಾಸ್ತವಾಂಶಗಳು ಮತ್ತು ನಿರ್ದಿಷ್ಟ ಕ್ರಮಗಳ ಮೂಲಕ ಉತ್ತರ ನೀಡಬೇಕಾಗಿದೆ ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರದ ಕಾರ್ಯನಿರ್ವಹಣೆಯ ಕುರಿತು ನ್ಯಾಯಸಮ್ಮತ ಪ್ರಶ್ನೆಗಳಿಗೆ ಉತ್ತರಿಸಲು ನಾವು ಸಿದ್ಧರಿದ್ದೇವೆ. ಅದೇ ಉತ್ತರದಾಯಿತ್ವ ಕೇಂದ್ರ ಸರ್ಕಾರಕ್ಕೂ ಅನ್ವಯಿಸಬೇಕು ಎಂದು ಹೇಳಿದ್ದಾರೆ.
ರೈತರ ಸಂಕಷ್ಟ ಮತ್ತು ಜನಸಾಮಾನ್ಯರ ಆರ್ಥಿಕ ಹೊರೆಯನ್ನು ರಾಜಕೀಯ ಆರೋಪ-ಪ್ರತ್ಯಾರೋಪಗಳ ಸಾಧನವಾಗಿ ಬಳಸಿಕೊಳ್ಳಬಾರದು ಎಂದರು.
ಕರ್ನಾಟಕದ ಜನರ ಹಿತಾಸಕ್ತಿಗೆ ಪಕ್ಷ ರಾಜಕಾರಣಕ್ಕಿಂತ ಹೆಚ್ಚಿನ ಆದ್ಯತೆ ನೀಡಬೇಕು. ಜನರಿಗೆ ಬೇಕಾಗಿರುವುದು ರಾಜಕೀಯ ಘೋಷಣೆಗಳಲ್ಲ; ಕೈಗೆಟುಕುವ ದರದಲ್ಲಿ ಅಗತ್ಯ ವಸ್ತುಗಳು, ನ್ಯಾಯಯುತ ಬೆಲೆಯಲ್ಲಿ ಇಂಧನ, ಸುಭದ್ರ ಜೀವನೋಪಾಯ ಮತ್ತು ಸಂಕಷ್ಟದ ಸಂದರ್ಭದಲ್ಲಿ ಸಕಾಲದಲ್ಲಿ ದೊರೆಯುವ ಪರಿಹಾರ ಎಂದು ಹೇಳಿದ್ದಾರೆ.
ಜನರ ಹಿತರಕ್ಷಣೆಗಾಗಿ ನಮ್ಮ ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರವೂ ತನ್ನ ಹೊಣೆಗಾರಿಕೆಯನ್ನು ನಿಭಾಯಿಸಲಿ. ಕರ್ನಾಟಕದ ಹಿತಾಸಕ್ತಿಯ ವಿಚಾರದಲ್ಲಿ ರಾಜಕೀಯಕ್ಕಿಂತ ಜನರ ಬದುಕೇ ಮುಖ್ಯ ಎಂದು ತಿಳಿಸಿದ್ದಾರೆ.