ರೈತ ಮಹಿಳೆಯರ ಸ್ವಾವಲಂಬನೆಗೆ ಕ್ಷೀರ ಸಂಜೀವಿನಿ ಆಸರೆ- ಬಿ.ಸಿ. ಆನಂದ್ ಕುಮಾರ್

ದೊಡ್ಡಬಳ್ಳಾಪುರ: ರೈತ ಮಹಿಳೆಯರು ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು ಎಂದು ಬಮೂಲ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ತಿಳಿಸಿದರು.

ನಗರದ ಬಮೂಲ್ ಕಚೇರಿಯಲ್ಲಿ ನಡೆದ ಕ್ಷೀರ ಸಂಜೀವಿನಿ ಯೋಜನೆಯ 6ನೇ ಹಂತದ ಫಲಾನುಭವಿ ಮಹಿಳೆಯರಿಗೆ ಸಾಲದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೆಣ್ಣುಮಕ್ಕಳಲ್ಲಿ ಸಾಧನೆ ಮಾಡಬೇಕೆಂಬ ಛಲ ಹಾಗೂ ಗುರಿ ಮುಟ್ಟುವ ಆತ್ಮವಿಶ್ವಾಸ ಹೆಚ್ಚಾಗಿದೆ. ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ಕಲ್ಪಿಸಿದರೆ ಕುಟುಂಬದ ಆರ್ಥಿಕ ನಿರ್ವಹಣೆ ಸುಧಾರಿಸುವುದರ ಜತೆಗೆ ಕುಟುಂಬದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಹಿಂದೆ ರೈತರು ಹಸುಗಳನ್ನು ಖರೀದಿಸಲು ಹೆಚ್ಚಿನ ಬಡ್ಡಿದರದಲ್ಲಿ ಸಾಲ ಪಡೆಯುವ ಅನಿವಾರ್ಯತೆ ಇತ್ತು. ಆದರೆ ಕ್ಷೀರ ಸಂಜೀವಿನಿ ಯೋಜನೆಯಡಿ ರೈತ ಮಹಿಳೆಯರಿಗೆ ತಲಾ 50 ಸಾವಿರ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ. ಒಟ್ಟು 40 ರೈತ ಮಹಿಳೆಯರಿಗೆ ಸಾಲ ಸೌಲಭ್ಯ ಕಲ್ಪಿಸುವ ಗುರಿ ಹೊಂದಲಾಗಿದ್ದು, ಪ್ರಸ್ತುತ 14 ಫಲಾನುಭವಿಗಳಿಗೆ ಒಟ್ಟು 7 ಲಕ್ಷ ಸಾಲದ ಚೆಕ್ ವಿತರಿಸಲಾಗುತ್ತಿದೆ. ರೈತರು ಈ ಸೌಲಭ್ಯವನ್ನು ಬಳಸಿಕೊಂಡು ಹೈನುಗಾರಿಕೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಾಲಿನ ದರ ಹೆಚ್ಚಳಕ್ಕೆ ರೈತರ ಒಗ್ಗಟ್ಟಿನ ಹೋರಾಟ ಕಾರಣ

ಜಾಗತಿಕ ಮಾರುಕಟ್ಟೆಯಲ್ಲಿಯೂ ಹೈನುಗಾರಿಕೆ ಕ್ಷೇತ್ರ ಪೈಪೋಟಿ ಎದುರಿಸುತ್ತಿದೆ. ಹೀಗಾಗಿ ಹಾಲು ಉತ್ಪಾದಕರಿಗೆ ನ್ಯಾಯಯುತ ಬೆಲೆ ಹಾಗೂ ಅಗತ್ಯ ಪ್ರೋತ್ಸಾಹ ದೊರೆಯುವುದು ಅತ್ಯಂತ ಮುಖ್ಯವಾಗಿದೆ. ಹಾಲಿನ ದರ ಹೆಚ್ಚಳಕ್ಕಾಗಿ ಹಲವು ವರ್ಷಗಳಿಂದ ನಿರಂತರ ಹೋರಾಟ ನಡೆಸಿಕೊಂಡು ಬರಲಾಗಿದೆ. ಪಕ್ಷಾತೀತವಾಗಿ ರೈತ ಮುಖಂಡರು ಹಾಗೂ ಹೋರಾಟಗಾರರು ಒಗ್ಗಟ್ಟಿನಿಂದ ಧ್ವನಿ ಎತ್ತಿದ ಪರಿಣಾಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ರೈತರಿಗೆ ₹7 ಹೆಚ್ಚಳ ಮಾಡಿದೆ ಎಂದು ತಿಳಿಸಿದರು.

ದೊಡ್ಡಬಳ್ಳಾಪುರದಲ್ಲಿ ನಡೆಯುವ ರೈತಪರ ಹೋರಾಟಗಳಿಗೆ ಸದಾ ಫಲ ದೊರೆಯುತ್ತದೆ ಎಂಬುದಕ್ಕೆ ಹಾಲಿನ ದರ ಹೆಚ್ಚಳವೇ ಸಾಕ್ಷಿ. ಇಲ್ಲಿ ರೈತ ಮುಖಂಡರು ಪಕ್ಷಭೇದ ಮರೆತು ರೈತರ ಹಿತಕ್ಕಾಗಿ ಒಗ್ಗಟ್ಟಿನಿಂದ ಹೋರಾಟಕ್ಕೆ ಬೆಂಬಲ ನೀಡುತ್ತಿರುವುದು ಶ್ಲಾಘನೀಯ. ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಇಂತಹ ಒಗ್ಗಟ್ಟಿನ ಹೋರಾಟಗಳು ಮುಂದುವರಿಯಬೇಕು ಎಂದರು.

17 ಕಂತುಗಳಲ್ಲಿ ಸಾಲ ಮರುಪಾವತಿ

ಕ್ಷೀರ ಸಂಜೀವಿನಿ ಯೋಜನೆಯ ಕುರಿತು ಮಾಹಿತಿ ನೀಡಿದ ನೋಡಲ್ ಅಧಿಕಾರಿ ರಾಧಿಕಾ, ಹೈನುಗಾರಿಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಹಸು ಖರೀದಿಸಲು ಫಲಾನುಭವಿಗಳಿಗೆ ₹50 ಸಾವಿರ ಬಡ್ಡಿರಹಿತ ಸಾಲ ನೀಡಲಾಗುತ್ತದೆ. ಈಗಾಗಲೇ ಮನೆಯಲ್ಲಿರುವ ಹಸುಗಳಿಗೆ ಈ ಸಾಲ ಪಡೆಯಲು ಅವಕಾಶವಿಲ್ಲ. ಹೊರರಾಜ್ಯ ಅಥವಾ ಹೊರಜಿಲ್ಲೆಗಳಿಂದ ಹೊಸ ಹಸುಗಳನ್ನು ಖರೀದಿಸಿ ತರಬೇಕು. ಖರೀದಿಸುವ ಹಸುಗಳಿಗೆ ವಿಮೆ ಕಡ್ಡಾಯವಾಗಿದ್ದು, ಪ್ರತಿ ರಾಸುವಿಗೆ ₹2 ಸಾವಿರ ವಿಮೆ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿ ತಿಂಗಳು 3 ಸಾವಿರದಂತೆ ಒಟ್ಟು 17 ಕಂತುಗಳಲ್ಲಿ ಸಾಲ ಮರುಪಾವತಿಸಬೇಕು. ಹಸು ಹಾಲು ನೀಡದ ಅವಧಿಯಲ್ಲಿ ಸಾಲ ಪಾವತಿಗೆ ಮೂರು ತಿಂಗಳ ವಿರಾಮ ನೀಡಲಾಗುತ್ತದೆ. ಬಳಿಕ ಮತ್ತೆ ಕಂತು ಪಾವತಿ ಆರಂಭಿಸಬೇಕು. ಹಾಲಿನ ಉತ್ಪಾದನೆ ಹೆಚ್ಚಿಸುವುದು ಹಾಗೂ ಹೈನುಗಾರಿಕೆಯಲ್ಲಿ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಉದ್ದೇಶದಿಂದ ಐದು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಶಿಬಿರದ ಉಪವ್ಯವಸ್ಥಾಪಕ ಜೀಯಾಉಲ್ಲಖಾನ್, ರೈತ ಮುಖಂಡರಾದ ಸತೀಶ್, ದೇವರಾಜು, ಮಂಜುನಾಥ, ಕೃಷ್ಣ, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!