
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಹಾಗೂ ಖ್ಯಾತ ನಟ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪವನ್ ಕಲ್ಯಾಣ್ ಕೊನಿಡೆಲಾ ಹಾಗೂ ಅವರ ಮೂರನೇ ಪತ್ನಿ ಅನ್ನಾ ಕೊನಿಡೆಲಾ (ಅನ್ನಾ ಲೆಜ್ನೆವಾ) ಅವರು ಪರಸ್ಪರ ಒಪ್ಪಿಗೆ ಮತ್ತು ಗೌರವದೊಂದಿಗೆ ಪ್ರತ್ಯೇಕವಾಗಲು ನಿರ್ಧರಿಸಿದ್ದಾರೆ. ಈ ಮೂಲಕ 13 ವರ್ಷಗಳ ದಾಂಪತ್ಯ ಜೀವನಕ್ಕೆ ತೆರೆ ಬಿದ್ದಿದೆ.
ಜನಸೇನಾ ಪಕ್ಷದ ಮೂಲಕ ಸೋಮವಾರ ರಾತ್ರಿ ಜಂಟಿ ಹೇಳಿಕೆ ಬಿಡುಗಡೆ ಮಾಡಿರುವ ದಂಪತಿ, ಪರಸ್ಪರ ತಿಳಿವಳಿಕೆ ಹಾಗೂ ಗೌರವದೊಂದಿಗೆ ಬೇರೆಯಾಗುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ದಾಂಪತ್ಯ ಜೀವನ ಅಂತ್ಯಗೊಂಡರೂ ಉತ್ತಮ ಸ್ನೇಹಿತರಾಗಿ ಮುಂದುವರಿಯಲಿದ್ದೇವೆ. ಮಕ್ಕಳ ಸಂತೋಷ, ಪಾಲನೆ, ಪೋಷಣೆ ಹಾಗೂ ಭವಿಷ್ಯವೇ ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಈ ಸಂದರ್ಭದಲ್ಲಿ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಮೂರನೇ ಬಾರಿಯೂ ಮುರಿದುಬಿದ್ದ ದಾಂಪತ್ಯ
ಪವನ್ ಕಲ್ಯಾಣ್ ಅವರ ವೈವಾಹಿಕ ಜೀವನ ಈ ಹಿಂದಿನಿಂದಲೂ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. 1997ರಲ್ಲಿ ನಂದಿನಿ ಅವರನ್ನು ಮೊದಲ ಬಾರಿಗೆ ವಿವಾಹವಾಗಿದ್ದ ಅವರು, 2008ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2009ರಲ್ಲಿ ನಟಿ ರೇಣು ದೇಸಾಯಿ ಅವರನ್ನು ಎರಡನೇ ಬಾರಿಗೆ ವಿವಾಹವಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದು, 2012ರಲ್ಲಿ ವಿಚ್ಛೇದನ ಪಡೆದಿದ್ದರು.
ನಂತರ 2013ರಲ್ಲಿ ರಷ್ಯಾ ಮೂಲದ ಅನ್ನಾ ಲೆಜ್ನೆವಾ ಅವರನ್ನು ಮೂರನೇ ಬಾರಿಗೆ ವಿವಾಹವಾಗಿದ್ದರು. ಈ ದಾಂಪತ್ಯದಲ್ಲೂ ಇಬ್ಬರು ಮಕ್ಕಳಿದ್ದಾರೆ. ಇದೀಗ ಮೂರನೇ ವಿವಾಹವೂ ಅಂತ್ಯಗೊಂಡಿರುವುದಾಗಿ ದಂಪತಿ ಪ್ರತ್ಯೇಕತೆಯ ನಿರ್ಧಾರ ಪ್ರಕಟಿಸಿದ್ದಾರೆ.
ರಾಜಕೀಯವಾಗಿ ಆಂಧ್ರಪ್ರದೇಶದ ಉಪಮುಖ್ಯಮಂತ್ರಿಯಾಗಿ ಜವಾಬ್ದಾರಿ ನಿರ್ವಹಿಸುತ್ತಿರುವ ಪವನ್ ಕಲ್ಯಾಣ್ ಅವರ ವೈಯಕ್ತಿಕ ಬದುಕಿನ ಈ ಬೆಳವಣಿಗೆ ಟಾಲಿವುಡ್ ಸಿನಿಮಾ ರಂಗ ಹಾಗೂ ರಾಜಕೀಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.