ತೂಬಗೆರೆಯಲ್ಲಿ ತಾಲ್ಲೂಕು ಮಟ್ಟದ ಪ್ರಜಾಸೇವೆ ಆಂದೋಲನಾ ಸಭೆ: ಮನೆ, ನಿವೇಶನ, ರಸ್ತೆ, ಕುಡಿಯುವ ನೀರಿಗೆ ಆದ್ಯತೆ- ಸಚಿವ ಮುನಿಯಪ್ಪ

ಸಾರ್ವಜನಿಕರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಸರ್ಕಾರವೇ ಜನರ ಬಳಿ ಬಂದು ಅಹವಾಲು ಸ್ವೀಕರಿಸಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ಶನಿವಾರ ಪ್ರಜಾಸೇವಾ ಆಂದೋಲನ ಸಭೆಗಳು ಆಯೋಜಿಸುತ್ತಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮಯನಿಯಪ್ಪ ಹೇಳಿದರು.

ಇಂದು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಟದ ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರಜಾ ಸೇವಾ ಆಂದೋಲನ ಸಭೆಯ ಅಧ್ಯಕ್ಷತೆ ವಹಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ರೈತರು ಹಾಗೂ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಲ್ಪಿಸಿಕೊಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ತಾಲ್ಲೂಕಿನಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಜಿಲ್ಲೆಯ ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಅಧಿಕಾರಿಗಳೊಂದಿಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಜನರು ತಮ್ಮ ಸಮಸ್ಯೆಗಳನ್ನು ಹೊತ್ತು ಸರ್ಕಾರಿ ಕಚೇರಿಗಳಿಗೆ ಹೋಗಬಾರದು, ಖುದ್ದು ಅಧಿಕಾರಿಗಳಿಗೆ ಸಾರ್ವಜನಿಕರ ಬಳಿ ತೆರಳಿ ಅವರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳನ್ನು ಬಗೆಹರಿಸಲು ಸಚಿವರು, ಶಾಸಕರು, ಅಧಿಕಾರಿಗಳು ತಾಲ್ಲೂಕು ಹಾಗೂ ಹೋಬಳಿ ಮಟ್ಟಕ್ಕೆ ಹೋಗಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಅದರಂತೆ ಈ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಸಾರ್ವಜನಿಕರು ಸಮಸ್ಯೆಗಳ ಬಗ್ಗೆ ಅರ್ಜಿ ನೀಡಿ ಅದರ ಸ್ವೀಕೃತಿ ಪಡೆದುಕೊಳ್ಳಬೇಕು. ಸಾರ್ವಜನಿಕರ ಅರ್ಜಿಗಳನ್ನು ಆನ್ಲೈನ್ನಲ್ಲಿ ಎಂಟ್ರಿ ಮಾಡಲಾಗುವುದು, ಕಾನೂನು ವ್ಯಾಪ್ತಿ ಅರ್ಜಿ ಬಿಟ್ಟು ಉಳಿದ ಅರ್ಜಿಗಳನ್ನು 30 ದಿನದಲ್ಲಿ ವಿಲೇವಾರಿ ಮಾಡಲಾಗುವುದು ಎಂದರು.

ನನ್ನನ್ನು ನೀವು ಚುನಾವಣೆಯಲ್ಲಿ ಆರಿಸಿದ್ದೀರಿ. ಪ್ರಜೆಗಳ ಸೇವೆಯೆ ಆದ್ಯ ಕರ್ತವ್ಯ. ಮನೆ,ನಿವೇಶನ, ರಸ್ತೆ, ಶಾಲೆ, ಕುಡಿಯುವ ನೀರು,ಪೋಡಿ, ಸ್ಮಶಾನ, ಹಂತ ಹಂತವಾಗಿ ಸೌಲಭ್ಯ ನೀಡಲಾಗುವುದು ಎಂದು ಸಚಿವರು ಹೇಳಿದರು.

ತೂಬಗೆರೆಯಲ್ಲಿ ಕೆ.ಪಿ.ಎಸ್ ಶಾಲೆ ನಿರ್ಮಾಣ ಈ ಭಾಗದ ಹಲವರ ಒತ್ತಾಯ ಶೀಘ್ರದಲ್ಲೇ ಎರಡು ಕೋಟಿ ರೂ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ ನೀಡಲಾಗುವುದು. ಪ್ರತಿ ಹಳ್ಳಿಯಲ್ಲೂ ಕೂಡ ರಸ್ತೆ, ಚರಂಡಿ ಅಭಿವೃದ್ಧಿ , ನಿವೇಶನ, ಮನೆ ವ್ಯವಸ್ಥೆ ಕಲ್ಪಿಸಲಾಗುವುದು.

ಜಿಲ್ಲಾಧಿಕಾರಿ ಕೆ. ಎನ್. ಅನುರಾಧ ಮಾತನಾಡಿ, ಹಲವು ಸಭೆಗಳಲ್ಲಿ ಸಾರ್ವಜನಿಕರು ನೀಡುವ ಅರ್ಜಿಗಳಲ್ಲಿ ಸಹಿ, ಮೊಬೈಲ್ ಸಂಖ್ಯೆ, ಅಗತ್ಯ ಪೂರ್ಣ ಮಾಹಿತಿಗಳು ಇರುವುದಿಲ್ಲ. ಇದರಿಂದ ಸಮಸ್ಯೆಯ ಶೀಘ್ರ ಪರಿಹಾರಕ್ಕೆ ತೊಡರಾಗುತ್ತದೆ. ಹೀಗಾಗಿ ಸಾರ್ವಜನಿಕರು ತಮ್ಮ ಅರ್ಜಿಗಳಲ್ಲಿ ಸಂಪೂರ್ಣ ಮಾಹಿತಿ ಮತ್ತು ಸಹಿಯನ್ನು ಕಡ್ಡಾಯವಾಗಿ ನಮೂದಿಸಿ ನೀಡಬೇಕು ಎಂದು ಮನವಿ‌ ಮಾಡಿದರು.

ಸೆಪ್ಟೆಂಬರ್ 1 ರಿಂದ ಪ್ರಜಾಸೇವಾ ಆಂದೋಲನಕ್ಕೆ ಚಾಲನೆ ನೀಡಲಾಗಿದ್ದು ಇಂದು ತೂಬಗೆರೆ ಹೋಬಳಿಯಲ್ಲಿ 17ನೇ ಪ್ರಜಾಸೇವಾ ಆಂದೋಲನ.

ಪ್ರಜಾ ಆಂದೋಲನ ಸಭೆಯಲ್ಲಿ ಪೋಡಿ. ನಿವೇಶನ, ಮನೆ, ಸ್ಮಶಾನ ಹದ್ದುಬಸ್ತು, ಜಮೀನು, ರಸ್ತೆ ಕುರಿತಾಗಿ ಅಹವಾಲುಗಳನ್ನು ಸ್ವೀಕರಿಸಲಾಗಿದೆ ಎಂದರು.

ನಂತರ ದೊಡ್ಡ ತಿಮ್ಮನಹಳ್ಳಿ ಬಳಿ ತೂಬಗೆರೆ ಕ್ರಾಸ್ ನಿಂದ ಮುಕ್ಕಡಿಘಟ್ಟ ಸೇರುವ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಮುಖಂಡರೊಂದಿಗೆ ಸಚಿವರು ಚಾಲನೆ ನೀಡಿದರು.

ಇದಕ್ಕೂ ಮುನ್ನ ಘಾಟಿ ಸುಬ್ರಮಣ್ಯ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಮಗಾರಿ ಪರಿಶೀಲನೆ ನಡೆಸಿ, ರಸ್ತೆ ಅಗಲೀಕರಣ, ದಾಸೋಹ ಭವನ ಮಲ್ಟಿ ಲೆವೆಲ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ರೂಪುರೇಷೆ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಕಾರ್ಯಕ್ರಮದಲ್ಲಿ ಸಿಇಒ ಡಾ ವಾಸಂತಿ ಅಮರ್, ಎಡಿಸಿ ರಂಗನಾಥ್, ಎಸಿ ಮಂಜುನಾಥ್, ಉಪಕಾರ್ಯದರ್ಶಿ ಶಿವಕುಮಾರ್, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರಾಜಣ್ಣ, ಘಾಟಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರಂಗಪ್ಪ, ಕೆಪಿಸಿಸಿ ಸದಸ್ಯ ಎಸ್ ಆರ್ ಮುನಿರಾಜ್, ಆರ್.ವಿ ಮಹೇಶ್, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರ ಸದಸ್ಯ ಎಸ್ ಡಿ ಮುನಿರಾಜ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!