
ದೊಡ್ಡಬಳ್ಳಾಪುರ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ (ಟಿಬಿ ವೃತ್ತ) ಸಮೀಪದ ಪ್ರವಾಸಿ ಮಂದಿರದ ಬಳಿ ಬೃಹತ್ ಮರವೊಂದು ಬುಡಸಮೇತ ಧರೆಗುರುಳಿದ ಘಟನೆ ನಡೆದಿದೆ.

ಮರದ ಕೆಳಗೆ ಪಾರ್ಕ್ ಮಾಡಲಾಗಿದ್ದ ಬೈಕ್, ಆಟೋ ಸೇರಿದಂತೆ ಇತರೆ ವಾಹನಗಳು ಮರ ಬಿದ್ದ ರಭಸಕ್ಕೆ ಜಖಂಗೊಂಡಿವೆ. ಅದೃಷ್ಟವಶಾತ್ ಮರ ಉರುಳಿದ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ನಗರದ ಜನನಿಬಿಡ ಪ್ರದೇಶದಲ್ಲಿ ಬೃಹತ್ ಮರ ಉರುಳಿಬಿದ್ದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳು ಇಂತಹ ಅಪಾಯಕಾರಿ ಮರಗಳನ್ನು ಗುರುತಿಸಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.