ಡಿಮೆನ್ಸಿಯಾ ಆರೈಕೆಗೆ ನೈಟಿಂಗೇಲ್ಸ್ ಸ್ಮೃತಿ ಗ್ರಾಮ ಲೋಕಾರ್ಪಣೆ

ದೊಡ್ಡಬಳ್ಳಾಪುರ: ಡಿಮೆನ್ಸಿಯಾದಿಂದ ಬಳಲುತ್ತಿರುವ ಅಸಹಾಯಕ ಹಿರಿಯ ನಾಗರಿಕರಿಗೆ ಗೌರವಯುತ, ಸುರಕ್ಷಿತ ಹಾಗೂ ಗುಣಮಟ್ಟದ ಆರೈಕೆ ಒದಗಿಸುವ ಉದ್ದೇಶದಿಂದ ತಾಲೂಕಿನ ತಿರುಮಗೊಂಡನಹಳ್ಳಿ ಸಮೀಪ ಸ್ಥಾಪಿಸಿರುವ ‘ನೈಟಿಂಗೇಲ್ಸ್ ಸ್ಮೃತಿ ಗ್ರಾಮ’ ಶುಕ್ರವಾರ ಉದ್ಘಾಟನೆಗೊಂಡಿತು.

ಈ ಸಂದರ್ಭದಲ್ಲಿ ಮಾತನಾಡಿದ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ವ್ಯವಸ್ಥಾಪಕ ಟ್ರಸ್ಟಿ ಡಾ. ರಾಧಾ ಎಸ್. ಮೂರ್ತಿ, ಸ್ಮೃತಿ ಗ್ರಾಮವು ಡಿಮೆನ್ಸಿಯಾ ಆರೈಕೆಯ ಕ್ಷೇತ್ರದಲ್ಲಿ ಮಹತ್ವದ ಮಾದರಿಯಾಗಿ ರೂಪುಗೊಳ್ಳಲಿದೆ. ಇಲ್ಲಿ ವಿಶೇಷ ವಸತಿ ಆರೈಕೆಯ ಜೊತೆಗೆ ಆರೈಕೆದಾರರಿಗೆ ತರಬೇತಿ, ಸಂಶೋಧನೆ ಮತ್ತು ನಾವೀನ್ಯತೆಗಳನ್ನು ಒಂದೇ ಸಮಗ್ರ ಆವರಣದಲ್ಲಿ ಒಗ್ಗೂಡಿಸಲಾಗಿದೆ. ಮೊದಲ ಹಂತದಲ್ಲಿ ಆರ್ಥಿಕವಾಗಿ ಹಿಂದುಳಿದ 100 ಹಿರಿಯ ನಾಗರಿಕರಿಗೆ ಉಚಿತ ಹಾಗೂ ವಿಶೇಷ ವಸತಿ ಆರೈಕೆ ಒದಗಿಸಲಾಗುವುದು ಎಂದು ತಿಳಿಸಿದರು.

ವಿಶೇಷವಾಗಿ ಅಸಹಾಯಕ ಸ್ಥಿತಿಯಲ್ಲಿರುವವರು, ನಿರ್ಲಕ್ಷ್ಯಕ್ಕೆ ಒಳಗಾದವರು, ಒಂಟಿಯಾಗಿ ವಾಸಿಸುವವರು ಹಾಗೂ ಕುಟುಂಬದ ಸಮರ್ಪಕ ಬೆಂಬಲವಿಲ್ಲದ ಹಿರಿಯರಿಗೆ ಆದ್ಯತೆ ನೀಡಲಾಗುತ್ತದೆ. 55 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ, ಡಿಮೆನ್ಸಿಯಾ ಇರುವುದು ವೈದ್ಯಕೀಯವಾಗಿ ದೃಢಪಟ್ಟಿರುವ ಹಿರಿಯ ನಾಗರಿಕರನ್ನು ದಾಖಲಾತಿಗೆ ಪರಿಗಣಿಸಲಾಗುತ್ತದೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ, ದಿನದ 24 ಗಂಟೆಗಳ ಆರೈಕೆಯ ಅಗತ್ಯವಿರುವ ಹಾಗೂ ಕುಟುಂಬದ ಸದಸ್ಯರಿಂದ ಆರೈಕೆ ಪಡೆಯಲು ಸಾಧ್ಯವಾಗದ ಹಿರಿಯರಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದರು.

ಆರ್ಥಿಕ ಸಂಕಷ್ಟವು ಕರುಣಾಮಯಿ ಮತ್ತು ಗುಣಮಟ್ಟದ ಡಿಮೆನ್ಸಿಯಾ ಆರೈಕೆಗೆ ಎಂದಿಗೂ ಅಡ್ಡಿಯಾಗಬಾರದು. ಡಿಮೆನ್ಸಿಯಾದಿಂದ ಬಳಲುತ್ತಿರುವ ಅನೇಕ ಅಸಹಾಯಕ ಹಿರಿಯರಿಗೆ ಕುಟುಂಬದವರು ಅಗತ್ಯ ಆರೈಕೆ ಒದಗಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ. ಇಂತಹವರಿಗೆ ಬೇರೆ ಯಾವುದೇ ಆಸರೆಯೂ ಇರುವುದಿಲ್ಲ. ಸ್ಮೃತಿ ಗ್ರಾಮದ ಮೂಲಕ ಅಂತಹ ಹಿರಿಯರನ್ನು ತಲುಪಿ, ಗೌರವ, ಭದ್ರತೆ ಮತ್ತು ಸೂಕ್ತ ಆರೈಕೆಯೊಂದಿಗೆ ಬದುಕುವ ಅವಕಾಶ ಕಲ್ಪಿಸುವುದು ಸಂಸ್ಥೆಯ ಆಶಯವಾಗಿದೆ.

ಇಂತಹ ಹಿರಿಯ ನಾಗರಿಕರನ್ನು ಗುರುತಿಸಿ ಸಂಸ್ಥೆಯ ಗಮನಕ್ಕೆ ತರಲು ವಿವಿಧ ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ನೈಟಿಂಗೇಲ್ಸ್ ಮೆಡಿಕಲ್ ಟ್ರಸ್ಟ್‌ನ ಪ್ರಮುಖರಾದ ಎಸ್. ಪ್ರೇಮ್ ಕುಮಾರ್ ರಾಜ್, ಅಮರ್ನಾಥ್ ಕಾಮತ್, ಸುಧಾಕರ್ ರಾವ್, ಮನೋಜ್ ಶಾ, ಇಂದ್ರಾ ಮೆನನ್, ಪಂಕಜ್ ಲಾಖ್ನಿ, ಬಸತ್ ಪೋಡ್ಡರ್ ಸೇರಿದಂತೆ ಸ್ಥಳೀಯ ಪ್ರಮುಖರು ಹಾಗೂ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!