ಕೆ.ಜಿ.ಎಫ್‌ನ 28 ವರ್ಷದ ಯುವತಿ ಮೆದುಳು ನಿಷ್ಕ್ರಿಯ; ಯಕೃತ್ ಹಾಗೂ ಹೃದಯದ ಕವಾಟಗಳ ದಾನ

ಕೋಲಾರ: ಮಗಳ ಅಗಲಿಕೆಯ ದುಃಖದ ನಡುವೆಯೂ ಮಾನವೀಯತೆ ಮೆರೆದ ಕುಟುಂಬವೊಂದು ಅಂಗಾಂಗ ದಾನಕ್ಕೆ ಮುಂದಾಗುವ ಮೂಲಕ ಇಬ್ಬರು ರೋಗಿಗಳ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ.

ಕೋಲಾರ ಜಿಲ್ಲೆಯ ಕೆ.ಜಿ.ಎಫ್ ತಾಲೂಕಿನ ನಿವಾಸಿ, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಶ್ವೇತಾ ತೀವ್ರ ತಲೆನೋವಿನಿಂದ ಬಳಲುತ್ತಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆದುಳು ನಿಷ್ಕ್ರಿಯಗೊಂಡಿರುವುದನ್ನು (ಬ್ರೈನ್ ಡೆತ್) ವೈದ್ಯರು ದೃಢಪಡಿಸಿದ್ದಾರೆ.

ಮಗಳ ಸ್ಥಿತಿ ತಿಳಿದು ಕುಟುಂಬಸ್ಥರು ತೀವ್ರ ದುಃಖದಲ್ಲಿದ್ದರೂ, ಇತರರ ಜೀವ ಉಳಿಸುವ ಮಹತ್ತರ ಉದ್ದೇಶದಿಂದ ಸ್ವಯಂಪ್ರೇರಿತರಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅದರಂತೆ ಶ್ವೇತಾ ಅವರ ಯಕೃತ್ (ಲಿವರ್) ಹಾಗೂ ಹೃದಯದ ಕವಾಟಗಳನ್ನು ದಾನ ಮಾಡಲಾಗಿದ್ದು, ಇಬ್ಬರು ರೋಗಿಗಳಿಗೆ ಹೊಸ ಬದುಕಿನ ಆಶಾಕಿರಣ ಮೂಡಿದೆ.

ವಿಶೇಷವೆಂದರೆ, ಶ್ವೇತಾ ಅವರು ಈ ಹಿಂದೆ ತಮ್ಮ ತಾಯಿಯಿಂದಲೇ ಒಂದು ಕಿಡ್ನಿಯನ್ನು ದಾನವಾಗಿ ಪಡೆದಿದ್ದರು. ಅಂಗಾಂಗ ದಾನದ ಮಹತ್ವವನ್ನು ಅರಿತಿದ್ದ ಕುಟುಂಬಸ್ಥರು, ಶ್ವೇತಾ ಅವರ ನಿಧನದ ಬಳಿಕವೂ ಮತ್ತೊಬ್ಬರ ಜೀವ ಉಳಿಸಲು ಅಂಗಾಂಗ ದಾನಕ್ಕೆ ತಕ್ಷಣವೇ ಒಪ್ಪಿಗೆ ನೀಡಿರುವುದು ಮಾನವೀಯತೆಯ ಉನ್ನತ ಉದಾಹರಣೆಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಮಗಳ ಅಗಲಿಕೆಯ ನೋವಿನ ನಡುವೆಯೂ ಉದಾತ್ತ ನಿರ್ಧಾರ ಕೈಗೊಂಡ ಶ್ವೇತಾ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಹಾಗೂ ಸಾರ್ವಜನಿಕರ ಪರವಾಗಿ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಅಂಗಾಂಗ ದಾನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ವೈದ್ಯರು, ಆಸ್ಪತ್ರೆ ಸಿಬ್ಬಂದಿ ಹಾಗೂ ಜೀವಸಾರ್ಥಕತೆ (SOTTO) ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.

ಮರಣದ ನಂತರವೂ ಇತರರ ಬದುಕಿನಲ್ಲಿ ಜೀವಂತವಾಗಿರಲು ಅಂಗಾಂಗ ದಾನವೇ ಶ್ರೇಷ್ಠ ಮಾರ್ಗವಾಗಿದೆ. ಆರೋಗ್ಯ ಇಲಾಖೆಯ ‘ಜೀವಸಾರ್ಥಕತೆ’ ಪೋರ್ಟಲ್‌ನಲ್ಲಿ ಅಂಗಾಂಗ ದಾನಕ್ಕೆ ನೋಂದಾಯಿಸಿಕೊಳ್ಳುವ ಜೊತೆಗೆ, ತಮ್ಮ ನಿರ್ಧಾರವನ್ನು ಕುಟುಂಬದವರೊಂದಿಗೆ ಹಂಚಿಕೊಳ್ಳುವ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!