
ದೊಡ್ಡಬಳ್ಳಾಪುರ: ಕರ್ನಾಟಕ ರತ್ನ, ದಿವಂಗತ ಡಾ. ಪುನೀತ್ ರಾಜಕುಮಾರ್ ಅವರ ಐದನೇ ವರ್ಷದ ಪುಣ್ಯಸ್ಮರಣೆಯನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಎಳ್ಳುಪುರ ಗ್ರಾಮದಲ್ಲಿ ಅಭಿಮಾನಿಗಳು ಅನ್ನಸಂತರ್ಪಣೆ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ತಮ್ಮ ನೆಚ್ಚಿನ ನಟ ಪುನೀತ್ ರಾಜಕುಮಾರ್ ಅವರಿಗೆ ಇಷ್ಟವಾದ ಬಿರಿಯಾನಿಯನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಅಭಿಮಾನಿಗಳು ಅಪ್ಪು ಅವರನ್ನು ಸ್ಮರಿಸಿದರು. ಈ ವೇಳೆ ನೆಚ್ಚಿನ ನಾಯಕನನ್ನು ನೆನೆದು ಅಭಿಮಾನಿಗಳು ಭಾವುಕರಾದರು.
ಅಭಿಮಾನಿ ಪುನೀತ್ ಅಪ್ಪು ಮಾತನಾಡಿ, “ಕರ್ನಾಟಕದ ಹೆಮ್ಮೆಯ ಪುನೀತ್ ರಾಜಕುಮಾರ್ ನಮ್ಮನ್ನು ಅಗಲಿ ಐದು ವರ್ಷಗಳು ಕಳೆದಿವೆ. ಕಳೆದ ಐದು ವರ್ಷಗಳಿಂದ ಪ್ರತಿವರ್ಷ ಅವರ ಪುಣ್ಯಸ್ಮರಣೆಯಂದು ಅನ್ನಸಂತರ್ಪಣೆ ನಡೆಸಿಕೊಂಡು ಬರುತ್ತಿದ್ದೇವೆ. ಪುನೀತ್ ರಾಜಕುಮಾರ್ ಕೇವಲ ನಟರಾಗಿರಲಿಲ್ಲ, ಸಮಾಜಕ್ಕೆ ಮಾದರಿಯಾದ ವ್ಯಕ್ತಿಯಾಗಿದ್ದರು. ಅವರ ಸಮಾಜಸೇವಾ ಕಾರ್ಯಗಳು ನಮಗೆಲ್ಲ ಸ್ಫೂರ್ತಿಯಾಗಿವೆ. ನಾವು ಮಾಡುವ ಸೇವಾ ಕಾರ್ಯಗಳ ಮೂಲಕ ಅವರು ಸದಾ ನಮ್ಮೊಂದಿಗೆ ಜೀವಂತವಾಗಿದ್ದಾರೆ ಎಂಬುದನ್ನು ಸಾರುತ್ತಿದ್ದೇವೆ” ಎಂದರು.
“ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಮತ್ತು ಪುಣ್ಯಸ್ಮರಣೆಗೆ ಮಾತ್ರ ಸೀಮಿತವಾಗದೆ, ನಿರಂತರವಾಗಿ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಆದರ್ಶಗಳನ್ನು ಪಾಲಿಸಬೇಕು. ಅವರ ಹೆಸರಿನಲ್ಲಿ ನಡೆಯುವ ಪ್ರತಿಯೊಂದು ಸೇವಾ ಕಾರ್ಯದಲ್ಲೂ ಅವರ ಆಶೀರ್ವಾದ ಸದಾ ಇರುತ್ತದೆ. ಅವರು ನಮ್ಮ ಹೃದಯದಲ್ಲಿ ಎಂದೆಂದಿಗೂ ಜೀವಂತವಾಗಿದ್ದಾರೆ” ಎಂದು ತಿಳಿಸಿದರು.
ಅಭಿಮಾನಿ ಚಂದ್ರು ಮಾತನಾಡಿ, “ಡಾ. ಪುನೀತ್ ರಾಜಕುಮಾರ್ ನಮ್ಮೆಲ್ಲರ ಆದರ್ಶ. ಅವರ ಜೀವನವೇ ನಮಗೆ ಸ್ಫೂರ್ತಿ. ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು, ನೊಂದವರ ಧ್ವನಿಯಾಗಿ ನಿಲ್ಲುವುದು ಹಾಗೂ ಜನರ ನೆರವಿಗೆ ಧಾವಿಸುವುದನ್ನು ಅವರಿಂದ ಕಲಿತಿದ್ದೇವೆ. ಮುಂದೆಯೂ ಅವರ ಹೆಸರಿನಲ್ಲಿ ಸಮಾಜಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸಲಾಗುವುದು” ಎಂದರು.
ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಮಂಜುನಾಥ್ ಮಾತನಾಡಿ, “ಎಳ್ಳುಪುರ ಗ್ರಾಮದ ಪುನೀತ್ ಅಪ್ಪು ಹಾಗೂ ಅವರ ತಂಡ ಹಲವು ಅಡೆತಡೆಗಳ ನಡುವೆಯೂ ಪ್ರತಿವರ್ಷ ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ, ಪುಣ್ಯಸ್ಮರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ತಮ್ಮ ಸೇವಾ ಕಾರ್ಯಗಳ ಮೂಲಕ ಪುನೀತ್ ರಾಜಕುಮಾರ್ ಅವರ ಹೆಸರಿನ ಶಕ್ತಿಯನ್ನು ತೋರಿಸುತ್ತಿದ್ದಾರೆ. ಪುನೀತ್ ಅಪ್ಪು ಹಾಗೂ ತಂಡದ ಸಮಾಜಮುಖಿ ಕಾರ್ಯಗಳು ಹೀಗೆಯೇ ಮುಂದುವರಿಯಲಿ” ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಅಭಿಮಾನಿಗಳಾದ ಪುನೀತ್ ಅಪ್ಪು, ನರೇಂದ್ರ (ಎಳ್ಳುಪುರ ಕ್ರಾಸ್), ಪಟ್ಟಣ ಪಂಚಾಯಿತಿ ಸದಸ್ಯ ಮಧು, ಚಂದ್ರಶೇಖರ್ ಬೀರಸಂದ್ರ, ಶರತ್ ಜೋಗಹಳ್ಳಿ, ಕನಕರಾಜು, ಜಿಂಕೆಬಚ್ಚಳ್ಳಿ, ದಯಾನಂದ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆಯ ಮಂಜುನಾಥ್ ಹಾಗೂ ವೇದಿಕೆಯ ಸದಸ್ಯರು ಮತ್ತು ಅಪ್ಪು ಅಭಿಮಾನಿಗಳು ಉಪಸ್ಥಿತರಿದ್ದರು.