
ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿಯೂ ಹಣದ ಹೊಳೆ ಹರಿಯುತ್ತಿದೆ. ಇದು ಹೊಸದೇನು ಅಲ್ಲ. ಯಾವಾಗಲೂ ಇದು ಸಾಮಾನ್ಯ. ಅದರಿಂದಲೇ ಈ ದೇಶದ ಪ್ರಜಾಪ್ರಭುತ್ವದ ಚುನಾವಣಾ ಪದ್ಧತಿಯ ಬಗ್ಗೆ ಅನುಮಾನ ಮೂಡುತ್ತಿದೆ.
ನನಗೆ ದೊರೆತಿರುವ ಮಾಹಿತಿಯ ಪ್ರಕಾರ ಪ್ರತಿ ಶಿಕ್ಷಕರಿಗೂ ಒಂದಷ್ಟು ಹಣ, ಮೊಬೈಲ್ ಗಳು, ದುಬಾರಿ ಬೆಲೆಯ ವಾಚ್ ಗಳು ಮತ್ತು ಪೆನ್ನುಗಳು, ಜೊತೆಗೆ ಎಂದಿನಂತೆ ಗುಂಡು, ತುಂಡು ಈ ಎಲ್ಲವೂ ಬಹುತೇಕ ದೊಡ್ಡ ಮಟ್ಟದಲ್ಲಿಯೇ ವ್ಯಾಪಕವಾಗಿ ಸರಬರಾಜಾಗುತ್ತಿದೆ. ಅಭ್ಯರ್ಥಿಗಳು ಮತ್ತು ಅವರ ಏಜೆಂಟರು ಇದನ್ನು ವ್ಯವಸ್ಥಿತವಾಗಿಯೇ ಹಂಚುತ್ತಿದ್ದಾರೆ.
ಆದರೂ ಇದು ಶೇಕಡಾ ನೂರರಷ್ಟು ಎಂದು ಹೇಳುವುದು ತಪ್ಪಾಗುತ್ತದೆ. ಈಗಲೂ ಮೌಲ್ಯಗಳನ್ನು ಪ್ರತಿಪಾದಿಸುತ್ತಿರುವ, ಈ ರೀತಿಯ ಕೆಟ್ಟ ಹಣಕ್ಕೆ ಕೈ ಚಾಚದಿರುವ ಶೇಕಡಾ 20ರಷ್ಟು ಶಿಕ್ಷಕ ಶಿಕ್ಷಕಿಯರು, ಉಪನ್ಯಾಸಕ, ಉಪನ್ಯಾಸಕಿಯರು ಈಗಲೂ ಇದ್ದಾರೆ. ಹಣ ಆಮಿಷಗಳನ್ನು ತಿರಸ್ಕರಿಸಿ ಆತ್ಮ ಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸುವವರು ಇರುವುದು ಒಂದು ಸಮಾಧಾನಕರ ವಿಷಯ. ಆದರೆ ಅವರ ಸಂಖ್ಯೆ ತೀವ್ರವಾಗಿ ಕುಸಿಯುತ್ತಿದೆ.
ಹಣ ಪಡೆಯದಿದ್ದರೂ ಒಳ್ಳೆಯ ಅಭ್ಯರ್ಥಿಗೆ ಮತ ಹಾಕದೆ ಇದೇ ಸಂಪ್ರದಾಯವಾದಿ ಭ್ರಷ್ಟ ದುಷ್ಟ ಪಕ್ಷಗಳ ಅಭ್ಯರ್ಥಿಗಳಿಗೆ ಮತ ಹಾಕುವ ಮುಖಾಂತರ ಅವರ ಪ್ರಾಮಾಣಿಕತೆಯು, ಅವರ ಬುದ್ಧಿವಂತಿಕೆಯು, ಅವರ ವಿವೇಚನೆಯೂ ಪ್ರಶ್ನಾರ್ಹವಾಗಿರುವುದು ದುರಂತವೇ ಸರಿ.
ತಮ್ಮ ಮನೆಯ ನಂತರ ಈ ಆಧುನಿಕ ಕಾಲದಲ್ಲಿ ಮಕ್ಕಳ ಪ್ರಜ್ಞೆ ಮೂಡುವುದೇ ಶಾಲೆಗಳಲ್ಲಿ. ಆ ಪ್ರಜ್ಞೆಯ ಮೂಲವೇ ಶಿಕ್ಷಕರು. ಅವರನ್ನು ಗುರುಗಳು ಎಂದು ಸಹ ಗೌರವಯುತವಾಗಿ ಕರೆಯುಲಾಗುತ್ತದೆ. ಈ ಆಧುನಿಕ ಗುರುಗಳಿಗೆ ಈಗಿನ ಆಧುನಿಕ ಕಾಲದಲ್ಲಿ ಖಾಯಂ ಶಿಕ್ಷಕರಿಗೆ ಸಾಕಷ್ಟು ಉತ್ತಮ ಸಂಬಳವೇ ದೊರೆಯುತ್ತದೆ. ಅತಿಥಿ ಶಿಕ್ಷಕರಿಗೆ ಮತ್ತು ಒಪ್ಪಂದದ ಮೇಲಿನ ಶಿಕ್ಷಕರಿಗೆ ಮಾತ್ರ ಸಂಬಳ ಕಡಿಮೆ. ಇದೆ ಏನೇ ಆದರೂ ಅವರು ಶಿಕ್ಷಕರೇ. ಅವರೇ ಈ ರೀತಿಯ ಆಸೆ ಅಮಿಶಗಳಿಗೆ ಒಳಗಾಗುವುದು ಅಥವಾ ಒಳಗಾಗುವ ಒತ್ತಡಕ್ಕೆ ಸಿಲುಕುವುದು ಈ ದೇಶದ ದುರಂತ. ತಾಯ ಎದೆಹಾಲೆ ವಿಷವಾದೊಡೆ ಮಾಡುವುದೇನು. ಹಾಗೆ ಶಿಕ್ಷಕರೇ ಹಣಕ್ಕಾಗಿ ಮಾರಾಟವಾದರೆ ನಾವು ಹೇಳುವುದೆಂತು.
ಕಡು ಬಡವರು, ಕೊಳಗೇರಿಯಲ್ಲಿ ವಾಸಿಸುವರು, ಗೃಹಿಣಿಯರು ಮುಂತಾದವರು ಚುನಾವಣಾ ಸಮಯದಲ್ಲಿ ಹಣ ಪಡೆಯುವುದನ್ನು ನಾವು ಖಂಡಿಸುತ್ತೇವೆ. ಆಗಾಗ ಟೀಕಿಸುತ್ತಲೇ ಇರುತ್ತೇವೆ. ಆದರೆ ಅವರ ಹಣದ ಆಸೆ ಒಂದು ರೀತಿಯ ಅನಿವಾರ್ಯಕ್ಕೆ, ಅವಶ್ಯಕತೆಗೆ ಮತ್ತು ಮುಗ್ಧತೆಗೆ ಉದಾಹರಣೆಯಾದರೆ, ವಿದ್ಯಾವಂತರು, ಸಾಕಷ್ಟು ದೊಡ್ಡ ಮೊತ್ತ ಪಡೆಯುವ ಸಂಬಳ ಪಡೆಯುವ ಶಿಕ್ಷಕರ ಈ ಮತಮಾರಾಟ ಕ್ಷಮೆಗೆ ಅನರ್ಹವಾದುದು.
ಈ ವಿಷಯದಲ್ಲಿ ಹೆಚ್ಚಿಗೆ ಏನೂ ಹೇಳಲು ಉಳಿದಿಲ್ಲ. ಏಕೆಂದರೆ ಶಿಕ್ಷಕರಿಗೆ ಜಾಗೃತಿ ಮೂಡಿಸಲು ಈ ಪದಗಳು ಸಾಕಾಗುವುದಿಲ್ಲ. ಒಂದೇ ಒಂದು ದಾರಿ ಎಂದರೆ ವ್ಯಕ್ತಿಗತವಾಗಿ ಅವರವರ ಆತ್ಮವಲೋಕನಕ್ಕೆ, ಆತ್ಮವಿಮರ್ಶೆಗೆ ಕರೆ ಕೊಡಬೇಕು. ಕನಿಷ್ಠ ಕೆಟ್ಟ ಹಣವನ್ನು ಬಹಿರಂಗವಾಗಿಯೇ ತಿರಸ್ಕರಿಸುವ ಮುಖಾಂತರ ಪಕ್ಷಾತೀತವಾಗಿ ಒಳ್ಳೆಯ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅಥವಾ ಅವರಿಗೆ ಮತ ಹಾಕುವ ಮೂಲಕ ಕನಿಷ್ಠ ತಾವಾದರೂ ಮೌಲ್ಯಯುತ ಬದುಕಿನ ಸಂದೇಶವನ್ನು ಇತರ ಶಿಕ್ಷಕರಿಗೆ ನೀಡಿದರೆ ಅದೇ ಒಂದು ದೊಡ್ಡ ಸಾಧನೆಯಾಗುತ್ತದೆ. ಕನಿಷ್ಠ ಮುಂದೆ ಈ ರೀತಿಯ ಶಿಕ್ಷಕರ ಸಂಖ್ಯೆ ಶೇಕಡಾ 50 ಕ್ಕಿಂತ ಹೆಚ್ಚಾದರೆ ನಿಜಕ್ಕೂ ಒಳ್ಳೆಯ ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶದ ಬಾಗಿಲು ತೆರೆಯುತ್ತದೆ.
ಒಂದು ಒಳ್ಳೆಯ ಸಿನಿಮಾ, ಒಂದು ಒಳ್ಳೆಯ ಮೊಬೈಲ್, ಒಂದು ಒಳ್ಳೆಯ ಬಟ್ಟೆ ಮಾರುಕಟ್ಟೆಗೆ ಬಂದಾಗ ನಾವೆಲ್ಲರೂ ಅದರ ಬಗ್ಗೆ ಬಾಯಿ ಮಾತಿನಲ್ಲಿ ಮಾತನಾಡಿಕೊಳ್ಳುತ್ತಾ ಪ್ರಚಾರ ನೀಡಿ, ಅದು ದೊಡ್ಡ ಮಟ್ಟದಲ್ಲಿ ಜನಪ್ರಿಯವಾಗಲು ಕಾರಣವಾಗುತ್ತೆವೆಯೋ, ಹಾಗೆಯೇ ಶಿಕ್ಷಕರ ಕ್ಷೇತ್ರದ ಅಥವಾ ಪದವೀಧರ ಕ್ಷೇತ್ರದ ಮತದಾರರು ಈ ರೀತಿ ಬಾಯಿ ಮಾತಿನ ಪ್ರಚಾರದ ಮೂಲಕವೇ ಆ ಅಭ್ಯರ್ಥಿಯನ್ನು ಬೆಂಬಲಿಸಿ, ಇತರರಿಗೂ ಮಾಹಿತಿ ನೀಡಿ ಒಂದಷ್ಟು ಒಳ್ಳೆಯ ಬದಲಾವಣೆಗೆ ಸಹಾಯ ಮಾಡುವುದಾದರೆ ನಿಜಕ್ಕೂ ಭಾರತದ ಸ್ವಾತಂತ್ರ್ಯಕ್ಕೆ ಒಂದು ಅರ್ಥ ಬರುತ್ತದೆ. ಇಲ್ಲದಿದ್ದರೆ ಎಲ್ಲರೂ ನಿರಾಶವಾದದಿಂದ ಟೀಕೆಗಳನ್ನೇ ಮಾಡಿಕೊಳ್ಳುತ್ತಾ, ಪ್ರಜಾಪ್ರಭುತ್ವದ ಅವಸಾನವನ್ನು ನೋಡುತ್ತಾ, ನಾವೂ ನಾಶವಾಗುತ್ತಾ, ಕಣ್ಣಮುಂದೆಯೇ ಅಸಹಾಯಕ ಪರಿಸ್ಥಿತಿಗೆ ಬೀಳುವುದು ಅಷ್ಟು ಒಳ್ಳೆಯ ಲಕ್ಷಣವಲ್ಲ.
ಶಿಕ್ಷಕರು ಈ ಬಗ್ಗೆ ಗಂಭೀರವಾಗಿ ಯೋಚಿಸಿ ಒಂದು ಮೊಬೈಲ್, ಒಂದಷ್ಟು ಹಣಕ್ಕಿಂತ ಸ್ವಾಭಿಮಾನದ ಮೌಲ್ಯವೇ ಹೆಚ್ಚು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು.
” ಶಿಕ್ಷಣ ಎಂದರೆ ಮಾನವೀಯತೆಯ ವಿಕಾಸದ ಮಾರ್ಗ ” ಎಂದು ಹೇಳಿದ ಗ್ರೀಕ್ ತತ್ವಜ್ಞಾನಿಯ ಮಾತನ್ನು ನೆನಪಿಸಿಕೊಳ್ಳುತ್ತಾ……….
ವಾಸ್ತವಾಂಶ ಏನೇ ಇರಲಿ, ಕಾರಣಗಳು ಏನೇ ಇರಲಿ ಇಂದು ಈ ಆಧುನಿಕ ಕಾಲದಲ್ಲಿ ಕುಸಿಯುತ್ತಿರುವ ಮತ್ತು ವ್ಯಾಪಾರೀಕರಣವಾಗುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಮಾತನಾಡುವಾಗ ಬಹುತೇಕ ಸಾಮಾನ್ಯ ಜನ ಬೆರಳು ತೋರಿಸುವುದು ಶಿಕ್ಷಣದ ಕಡೆಗೆ ಮತ್ತು ಇದನ್ನು ಉಳಿಸುವ ಮತ್ತು ಬೆಳೆಸುವ ಬಗ್ಗೆ ಚರ್ಚೆ ಮಾಡುವಾಗಲು ಸಾಮಾನ್ಯವಾಗಿ ಶಿಕ್ಷಣ ವ್ಯವಸ್ಥೆಯ ಅವ್ಯವಸ್ಥೆಯ ಬಗ್ಗೆಯೇ ಮಾತನಾಡುತ್ತಾರೆ…,…
ಬೇರೆ ಎಲ್ಲಾ ಕ್ಷೇತ್ರಗಳ ಕಲುಷಿತತೆಗೆ ಮೂಲ ಕಾರಣ ಶಿಕ್ಷಣ ಎಂಬುದು ಅವರ ಅಭಿಪ್ರಾಯ. ಆದ್ದರಿಂದ ಮಾನವೀಯ ಮೌಲ್ಯಗಳನ್ನು ಉಳಿಸುವ ಮತ್ತು ಬೆಳೆಸುವ ಜೊತೆಗೆ ಸಮಾಜದ ಸ್ವಾಸ್ಥ್ಯ ಮತ್ತು ಜನರ ಜೀವನ ಮಟ್ಟ ಸುಧಾರಿಸುವ ಜವಾಬ್ದಾರಿಯನ್ನು ನೆನಪು ಮಾಡುತ್ತಾ…..,…,….
ಮಾನವ ಬದುಕೆಂಬುದು ಕಾಲದೊಂದಿಗೆ ಸಮಯದ ಜೊತೆ ಒಂದು ಪಯಣ. ಸುಮಾರು 70/80 ವರ್ಷಗಳ ಅವಧಿಯ ದೀರ್ಘ ಮತ್ತು ನಿರಂತರ ಪಯಣದಲ್ಲಿ ನಾಗರಿಕ ಸಮಾಜದಲ್ಲಿ ಮನುಷ್ಯ ಎಂಬ ಪ್ರಾಣಿ ಕೆಲವು ಕರ್ತವ್ಯಗಳನ್ನು ನಿರ್ವಹಿಸಬೇಕು ಎಂದು ಬಯಸುತ್ತದೆ. ಅದಕ್ಕಾಗಿಯೇ ಅನೇಕ ದೇವರು, ಧರ್ಮ, ವೈಚಾರಿಕತೆ, ಆಡಳಿತಾತ್ಮಕ ಪದ್ಧತಿ, ಸಿದ್ದಾಂತ ಮುಂತಾದ ವ್ಯವಸ್ಥೆಗಳನ್ನು ಹುಟ್ಟುಹಾಕಲಾಗಿದೆ. ಅದರಲ್ಲಿ ಬಹುಮುಖ್ಯವಾದುದು ಶಿಕ್ಷಣ ವ್ಯವಸ್ಥೆ ಮತ್ತು ಅದರ ಬಹುಮುಖ್ಯ ಭಾಗ ಶಿಕ್ಷಕರು……..
ಪದ್ಧತಿ, ಕ್ರಮ ಯಾವುದೇ ಇರಲಿ ಮನುಷ್ಯ ಜನಾಂಗದ ಮಾನಸಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ ಮತ್ತು ಅನಿವಾರ್ಯ. ಅದನ್ನು ಮುಂದಿನ ಜನಾಂಗಕ್ಕೆ ಅರ್ಥ ಮಾಡಿಸುವ ಹೊಣೆಗಾರಿಕೆ ಶಿಕ್ಷಕರದು…..
ಆದರೆ ಇಂದು ಈ ಕ್ಷಣದಲ್ಲಿ ಮಾನವೀಯ ಮೌಲ್ಯಗಳು ಸಂಪೂರ್ಣ ದಾರಿ ತಪ್ಪಲು ಈ ಶಿಕ್ಷಕ ವರ್ಗದ ಗುಣಮಟ್ಟ ಕುಸಿಯುತ್ತಿರುವುದು ಹೆಚ್ಚು ಕಾರಣವಾಗುತ್ತಿದೆ.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈಗ ಶಿಕ್ಷಣ ಒಂದು ಕಡ್ಡಾಯ ಅನುಸರಿಸಬೇಕಾದ ನಿಯಮವಾಗಿದೆ. ಎಲ್ಲಾ ಮಕ್ಕಳು ಶಾಲೆಗಳ ಮುಖಾಂತರವೇ ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕಾಗಿದೆ. ಆದರೆ ಇಂದು ಆ ಶಿಕ್ಷಣ ವ್ಯವಸ್ಥೆಯೇ ಹಾದಿ ತಪ್ಪಿ ಕಲುಷಿತಗೊಂಡಿದೆ. ಸಂಸ್ಥೆಗಳಿಗೆ ಹಣ ಮಾಡುವ ಗುರಿ ಶಿಕ್ಷಕರಿಗೆ ಹೊಟ್ಟೆ ಪಾಡಿನ ಉದ್ಯೋಗ ಎಂಬಂತಾಗಿದೆ……
ಶಿಕ್ಷಕರೇ ಸಮಾಜದ ಕಣ್ಣು. ಆದರೆ ಇಂದು ಕಣ್ಣು ಮಬ್ಬಾಗುತ್ತಿದೆ. ದೃಶ್ಯಗಳು ಸ್ಪಷ್ಟವಾಗಿ ಕಾಣದಂತಾಗಿದೆ. ಅದಕ್ಕಾಗಿ ಆತ್ಮಾವಲೋಕನ ಎಂಬ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಶ್ಯಕತೆ ಇದೆ…….
ಹೆಚ್ಚು ಹೆಚ್ಚು ವಿದ್ಯಾವಂತರಾಗುವ, ಹೆಚ್ಚು ಹೆಚ್ಚು ಅಂಕಗಳನ್ನು ಪಡೆಯುವ, ಹೆಚ್ಚು ಹೆಚ್ಚು ಮಾಹಿತಿ ಮತ್ತು ಉದ್ಯೋಗ ಪಡೆಯುವ ದೊಡ್ಡ ಅಧಿಕಾರ ಹೊಂದುವ ಜನರೇ ಬಹುತೇಕ ಮಾನವೀಯ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿರುವುದು ಶಿಕ್ಷಣದ ಬಗ್ಗೆಯೇ ಅನುಮಾನ ಮೂಡಿಸುತ್ತಿದೆ. .
ಆದ್ದರಿಂದ ನಮ್ಮ ಶಿಕ್ಷಕ ಬಂಧುಗಳೇ……..
ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಉಳಿಸುವ ಬಹುದೊಡ್ಡ ಜವಾಬ್ದಾರಿ ನಿಮ್ಮ ಮೇಲಿದೆ. ನೈತಿಕತೆಯನ್ನು ಮಕ್ಕಳಲ್ಲಿ ಬೆಳೆಸುವ ಹೊಣೆಗಾರಿಕೆ ನಿಮ್ಮ ಮೇಲಿದೆ. ಸಮಾಜದ ಬಹುತೇಕ ಎಲ್ಲರೂ ನಿಮ್ಮ ಮೂಲಕವೇ ಹಾದು ನೀವು ನೀಡುವ ಶಿಕ್ಷಣ ಮತ್ತು ಸಂಸ್ಕಾರದ ಮೂಲಕವೇ ಮುಂದಿನ ಬದುಕನ್ನು ರೂಪಿಸಿಕೊಳ್ಳುವುದು. ಈ ಜಗತ್ತನ್ನು ಮಕ್ಕಳು ಅರ್ಥಮಾಡಿಕೊಳ್ಳುವುದೇ ನಿಮ್ಮ ಮಾತುಗಳ ಮೂಲಕ. ಮಕ್ಕಳ ಮನಸ್ಸಿನ ಅಡಿಪಾಯವೇ ನೀವು. ಆಧುನಿಕತೆ ಮತ್ತು ವ್ಯಾಪಾರೀಕರಣದ ಹೆಸರಿನಲ್ಲಿ ನೀವು ಸಹ ವ್ಯವಸ್ಥೆಗೆ ಹೊಂದಿಕೊಂಡು ಅಸಹಾಯಕರಾಗಿ ಕೈ ಚೆಲ್ಲಿದರೆ ಭಾರತದ ಮುಂದಿನ ಭವಿಷ್ಯ ಕರಾಳವಾಗುವ ಸಾಧ್ಯತೆ ಇದೆ……
ಈಗಾಗಲೇ ಕುಡಿಯುವ ನೀರು, ಸೇವಿಸುವ ಗಾಳಿ, ತಿನ್ನುವ ಆಹಾರ ಕಲುಷಿತವಾಗಿದೆ. ಹುಟ್ಟು ಸಾವಿನ ಪ್ರಮಾಣ ಪತ್ರ ಪಡೆಯಲು ಸಹ ಲಂಚ ನೀಡಬೇಕಾಗಿದೆ. ನೈತಿಕತೆ ಕುಸಿಯುತ್ತಿರುವುದು ಮಾತ್ರವಲ್ಲದೆ ವಿರುದ್ಧ ಮೌಲ್ಯಗಳು ಮತ್ತು ಅನೈತಿಕತೆ ಈ ಸಮಾಜದಲ್ಲಿ ಮಾನ್ಯತೆ ಪಡೆಯುತ್ತಿದೆ. ಶಿಕ್ಷಣ ಪಡೆದವರೇ ಮೌಢ್ಯ ಅಂಧಕಾರ ಭ್ರಷ್ಟಾಚಾರ ಜಾತಿ ವ್ಯವಸ್ಥೆ ಹೆಚ್ಚಾಗಲು ಕಾರಣರಾಗುತ್ತಿದ್ದಾರೆ….
ಶಿಕ್ಷಕ ಮಿತ್ರರೇ ” ಏಳಿ ಎದ್ದೀಳಿ ಎಚ್ಚರಗೊಳ್ಳಿ. ಮತ್ತೊಂದು ಸ್ವಾತಂತ್ರ್ಯ ಸಮಾನತೆಯ ಹೋರಾಟಕ್ಕೆ ಸಿದ್ದರಾಗಿ. ಶಿಕ್ಷಕ ವೃತ್ತಿ ಎಂಬುದು ಕೇವಲ ಹೊಟ್ಟೆ ಪಾಡಿನ ಉದ್ಯೋಗವಲ್ಲ. ಅದು ಬದುಕಿನ ಪಾಠ. ಅದು ವ್ಯಕ್ತಿಯ ಜೀವನ ವಿಧಾನ. ಅದು ಸಮಾಜದ ಆರೋಗ್ಯ. ಅದು ದೇಶದ ಅಭಿವೃದ್ಧಿಯ ಮೂಲ ಮಂತ್ರ. ಅದು ನಮ್ಮೆಲ್ಲರ ನೆಮ್ಮದಿಯ ಮಾರ್ಗ .
79 ವರ್ಷಗಳ ಹಿಂದೆ ಪಡೆದ ಸ್ವಾತಂತ್ರ್ಯವನ್ನು ಮುಕ್ತವಾಗಿ ಅನುಭವಿಸುವ ವಾತಾವರಣ ನಿರ್ಮಾಣ ಮಾಡಿ. ಅಧ್ಯಯನ ಚಿಂತನೆ ವಿಶಾಲ ಮನೋಭಾವ ರೂಢಿಸಿಕೊಳ್ಳಿ. ಶಿಕ್ಷಕರೆಂದರೆ – ಶಿಕ್ಷಣವೆಂದರೆ ತಿಳಿವಳಿಕೆ ಮಾತ್ರವಲ್ಲ ಅದು ನಡವಳಿಕೆ ಎಂಬುದನ್ನು ಸಮಾಜಕ್ಕೆ ಮನವರಿಕೆ ಮಾಡಿಕೊಡಿ ಎಂದು ಮನವಿ ಮಾಡಿಕೊಳ್ಳುತ್ತಾ………”
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ