ಸಚಿವ ಜಾರ್ಜ್ ಜತೆ ಶಾರದೆಯ ದರ್ಶನ ಪಡೆದ ರಾಜ್ಯಪಾಲರಾದ ಡಾ. ಸುಧಾ ಯಾದವ್

ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ‌ ದಿನವೇ ಡಾ. ಸುಧಾ ಯಾದವ್ ಅವರು ಇಂಧನ ಮತ್ತು ಪ್ರವಾಸೋದ್ಯಮ ಸಚಿವರಾದ ಕೆ.ಜೆ. ಜಾರ್ಜ್ ಅವರೊಂದಿಗೆ ನಗರದ ಶ್ರೀ ಸುರಭಾರತಿ ಸಂಸ್ಕೃತ ಹಾಗೂ ಸಾಂಸ್ಕೃತಿಕ ಪ್ರತಿಷ್ಠಾನದ ಶ್ರೀ ಶಾರದಾ ದೇವಾಲಯಕ್ಕೆ ಸಂಜೆ ಭೇಟಿ ನೀಡಿದರು.

ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರದ ಶ್ರೀ ಸುರಭಾರತಿ ಕ್ಷೇತ್ರಕ್ಕೆ ರಾಜ್ಯಪಾಲರನ್ನು ಆತ್ಮೀಯವಾಗಿ ಬರಮಾಡಿಕೊಂಡ ಸಚಿವ ಜಾರ್ಜ್, ಪ್ರತಿಷ್ಠಾನದಲ್ಲಿ ಪೂಜಾ ವಿಧಿವಿಧಾನಗಳು ಸಂಪನ್ನಗೊಳ್ಳುವವರೆಗೂ ಅವರ ಜತೆ ಇದ್ದರು.

ಶರನ್ನವರಾತ್ರಿ ಮಹೋತ್ಸವದ ಆರನೇ ದಿನದ ವಿಶೇಷ ಸಂದರ್ಭದಲ್ಲಿ ವೀಣಾಪಾಣಿಯಾದ ಶ್ರೀಶಾರದೆಯನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ವೇದ ಮಂತ್ರ ಘೋಷಗಳ ನಡುವೆ ಲಕ್ಷ ಕುಂಕುಮಾರ್ಚನೆಯೂ ನಡೆಯಿತು. ಈ ಧಾರ್ಮಿಕ ಕೈಂಕರ್ಯದಲ್ಲಿ ರಾಜ್ಯಪಾಲರು ಮತ್ತು ಸಚಿವರು ಪಾಲ್ಗೊಂಡರು.

ಡಾ. ಸುಧಾ ಯಾದವ್ ಅವರು ಪ್ರಮಾಣ ವಚ‌ನ ಸ್ವೀಕರಿಸಿ ಲೋಕಭವನ ಅಧಿಕಾರ ವಹಿಸಿಕೊಂಡ ಬಳಿಕ ಗಣ್ಯರ ಶುಭ ಹಾರೈಕೆ ಸ್ವೀಕರಿಸಿ ಶ್ರೀಶಾರದಾಂಬೆಯ ದರ್ಶನಾಶಿರ್ವಾದ ಪಡೆದುಕೊಂಡರು. ಬಳಿಕ ವಿಶೇಷ ಗೊಂಬೆಗಳ‌ ಪ್ರದರ್ಶನವನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ರಾಜ್ಯಪಾಲರೊಂದಿಗೆ ಅವರ ಕುಟುಂಬಸ್ಥರೂ ಇದ್ದರು.
ಶ್ರೀ ಸುರಭಾರತೀ ಪ್ರತಿಷ್ಠಾನದ ಟ್ರಸ್ಟಿ ನಾಗರಾಜ್, ನಿವೃತ್ತ ಐಪಿಎಸ್ ಅಧಿಕಾರಿ ರಾಮಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!