
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪಿನ ಕುರಿತು ಸಚಿವ ಸಂಪುಟದಲ್ಲಿ ಸಮಗ್ರವಾಗಿ ಚರ್ಚಿಸಿ, ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದು ಸೇರಿದಂತೆ ಮುಂದಿನ ಕಾನೂನಾತ್ಮಕ ಕ್ರಮಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.
ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸರ್ಕಾರವು ಮೀಸಲಾತಿಯ ಶೇ.50ರ ಮಿತಿಯನ್ನು ಮೀರಿ, ಒಟ್ಟು ಮೀಸಲಾತಿಯನ್ನು ಶೇ.56ಕ್ಕೆ ಹೆಚ್ಚಿಸುವ ತೀರ್ಮಾನ ಕೈಗೊಂಡಿತ್ತು. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ.15ರಿಂದ ಶೇ.17ಕ್ಕೆ ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಲಾಗಿತ್ತು. ಹಿಂದಿನ ಸರ್ಕಾರವು ಈ ಸಂಬಂಧ ಆದೇಶ ಹೊರಡಿಸಿ ಕ್ರಮಗಳನ್ನು ಕೈಗೊಂಡಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರವೂ ಅನೇಕ ನೇಮಕಾತಿ ಪ್ರಕ್ರಿಯೆಗಳಲ್ಲಿ ಈ ಮೀಸಲಾತಿ ಪ್ರಮಾಣವನ್ನು ಅನುಸರಿಸಿದೆ. ಮೀಸಲಾತಿ ಹೆಚ್ಚಳವನ್ನು ಪ್ರಶ್ನಿಸಿ ವಿವಿಧ ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋದ ಸಂದರ್ಭದಲ್ಲಿ ರಾಜ್ಯ ಸರ್ಕಾರವೂ ತನ್ನ ನಿಲುವನ್ನು ಮಂಡಿಸಿ, ಮೀಸಲಾತಿ ಹೆಚ್ಚಳವನ್ನು ಎತ್ತಿಹಿಡಿಯುವಂತೆ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿತ್ತು ಎಂದು ಹೇಳಿದ್ದಾರೆ.
ಮೀಸಲಾತಿಯನ್ನು ಯಾವ ಉದ್ದೇಶಕ್ಕಾಗಿ ಜಾರಿಗೆ ತರಲಾಗಿದೆ ಎಂಬುದನ್ನು ಮೂಲಭೂತವಾಗಿ ಅರ್ಥಮಾಡಿಕೊಳ್ಳಬೇಕಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಮೀಸಲಾತಿಯನ್ನು ಕೇವಲ ಆಡಳಿತಾತ್ಮಕ ಆದೇಶಗಳ ಮೂಲಕ ಜಾರಿಗೊಳಿಸದೆ, ಸಂವಿಧಾನದಲ್ಲಿಯೇ ಅವಕಾಶ ಕಲ್ಪಿಸಿರುವುದರ ಹಿಂದೆ ಮಹತ್ವದ ಸಾಮಾಜಿಕ ಉದ್ದೇಶವಿದೆ. ಸಾವಿರಾರು ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರಗಳಲ್ಲಿ ಅವಕಾಶಗಳಿಂದ ವಂಚಿತರಾದ ಸಮುದಾಯಗಳಿಗೆ ನ್ಯಾಯ ಒದಗಿಸುವುದು ಮೀಸಲಾತಿಯ ಮೂಲ ಉದ್ದೇಶವಾಗಿದೆ. ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶಗಳು ದೊರೆಯಬೇಕು. ಹಿಂದುಳಿದ ಹಾಗೂ ಅವಕಾಶವಂಚಿತ ಸಮುದಾಯಗಳೂ ಸಮಾಜದ ಮುಖ್ಯವಾಹಿನಿಗೆ ಬಂದು ಅಭಿವೃದ್ಧಿ ಹೊಂದಬೇಕು ಎಂಬ ಉದ್ದೇಶದಿಂದ ಸಂವಿಧಾನದಲ್ಲಿ ಮೀಸಲಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಮಾಜದಲ್ಲಿ ಸಮಾನತೆಯನ್ನು ಸ್ಥಾಪಿಸುವುದೇ ಸಂವಿಧಾನದ ಆಶಯವಾಗಿದೆ. ಮೀಸಲಾತಿಗೆ ಸಂಬಂಧಿಸಿದ ಯಾವುದೇ ತೀರ್ಮಾನ ಕೈಗೊಳ್ಳುವಾಗ ಅದರ ಹಿಂದಿರುವ ಸಾಮಾಜಿಕ ನ್ಯಾಯದ ಉದ್ದೇಶ ಹಾಗೂ ಸಮುದಾಯಗಳ ಪರಿಸ್ಥಿತಿಯನ್ನು ಪರಿಗಣಿಸುವುದು ಮುಖ್ಯ. ತಮಿಳುನಾಡಿನಲ್ಲಿ ಶೇ.69ರಷ್ಟು ಮೀಸಲಾತಿಗೆ ಸಂವಿಧಾನ ತಿದ್ದುಪಡಿಯ ಮೂಲಕ ಅವಕಾಶ ಕಲ್ಪಿಸಲಾಗಿದೆ. ಆ ರಾಜ್ಯಕ್ಕೆ ಅಂತಹ ಅವಕಾಶ ದೊರೆತಿರುವಾಗ, ಕರ್ನಾಟಕದಲ್ಲಿ ಶೇ.50ರ ಮಿತಿಗಿಂತ ಹೆಚ್ಚುವರಿಯಾಗಿ ಶೇ.6ರಷ್ಟು ಮೀಸಲಾತಿ ಕಲ್ಪಿಸಿರುವುದನ್ನೂ ಅದರ ಸಾಮಾಜಿಕ ಹಿನ್ನೆಲೆಯ ಆಧಾರದಲ್ಲಿ ವಿಶೇಷ ಪ್ರಕರಣವಾಗಿ ಪರಿಗಣಿಸಬಹುದಿತ್ತು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಮೀಸಲಾತಿ ಹೆಚ್ಚಳದ ಹಿಂದಿರುವ ಸಾಮಾಜಿಕ ಉದ್ದೇಶ ಹಾಗೂ ಅವಕಾಶವಂಚಿತ ಸಮುದಾಯಗಳ ಹಿತಾಸಕ್ತಿಯನ್ನು ಪರಿಗಣಿಸಿ ನ್ಯಾಯಾಲಯವು ಅಸಾಧಾರಣ ಸಂದರ್ಭದ ಆಧಾರದಲ್ಲಿ ತೀರ್ಮಾನ ಕೈಗೊಳ್ಳಬಹುದಿತ್ತು. ಈ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಳವನ್ನು ತಿರಸ್ಕರಿಸಿರುವುದು ಸಮಂಜಸವಲ್ಲ ಎಂದಿದ್ದಾರೆ.
ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿರುವ ಕುರಿತು ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ. ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಸಂವಿಧಾನದ ಚೌಕಟ್ಟಿನಲ್ಲಿ ಬೇರೆ ಯಾವ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಸಚಿವ ಸಂಪುಟದಲ್ಲಿ ಚರ್ಚಿಸಲಾಗುವುದು. ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟವು ಎಲ್ಲ ಸಾಧಕ-ಬಾಧಕಗಳನ್ನು ಪರಿಗಣಿಸಿ ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎಂದರು.
ನ್ಯಾಯಾಧೀಶರು ಕಾನೂನಿನ ಪ್ರಕಾರ ತಮ್ಮ ತೀರ್ಮಾನಗಳನ್ನು ಕೈಗೊಳ್ಳುತ್ತಾರೆ. ಸರ್ಕಾರವು ನ್ಯಾಯಾಧೀಶರ ಮೇಲೆ ಪ್ರಭಾವ ಬೀರಿ ನಿರ್ದಿಷ್ಟ ತೀರ್ಪು ನೀಡುವಂತೆ ಹೇಳಲು ಸಾಧ್ಯವಿಲ್ಲ. ನ್ಯಾಯಾಲಯದ ತೀರ್ಪನ್ನು ಕಾನೂನಿನ ಚೌಕಟ್ಟಿನಲ್ಲಿ ಮೇಲ್ಮಟ್ಟದ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವಿದೆ. ಆ ಅವಕಾಶವನ್ನು ಬಳಸಿಕೊಳ್ಳುವ ಕುರಿತು ಸಚಿವ ಸಂಪುಟ ತೀರ್ಮಾನಿಸಲಿದೆ. ಶೇ.56ರಷ್ಟು ಮೀಸಲಾತಿಯ ಆಧಾರದಲ್ಲಿ ಈಗಾಗಲೇ ನಡೆದಿರುವ ಶೈಕ್ಷಣಿಕ ಪ್ರವೇಶಾತಿ ಹಾಗೂ ಸರ್ಕಾರಿ ನೇಮಕಾತಿಗಳ ಮೇಲೆ ಹೈಕೋರ್ಟ್ ತೀರ್ಪು ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ.
ಈಗಾಗಲೇ ನಡೆದಿರುವ ನೇಮಕಾತಿಗಳ ಪರಿಸ್ಥಿತಿ ಏನಾಗುತ್ತದೆ? ನ್ಯಾಯಾಲಯದ ಆದೇಶವು ಹಿಂದಿನ ದಿನಾಂಕದಿಂದ ಅನ್ವಯವಾಗುತ್ತದೆಯೇ ಅಥವಾ ಮುಂದಿನ ಪ್ರಕ್ರಿಯೆಗಳಿಗೆ ಮಾತ್ರ ಅನ್ವಯವಾಗುತ್ತದೆಯೇ? ಇಂತಹ ಎಲ್ಲ ಕಾನೂನಾತ್ಮಕ ಪ್ರಶ್ನೆಗಳು ಹಾಗೂ ಅವುಗಳಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸಮಗ್ರವಾಗಿ ಚರ್ಚಿಸಬೇಕಿದೆ. ಈ ಕುರಿತು ಅಡ್ವೊಕೇಟ್ ಜನರಲ್ ಹಾಗೂ ಕಾನೂನು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಕಾನೂನಿನ ಪ್ರಕಾರ ಯಾವ ಕ್ರಮಗಳು ಸಾಧ್ಯ ಎಂಬುದನ್ನು ಪರಿಶೀಲಿಸಿದ ನಂತರವೇ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗ ಒಟ್ಟು ಮೀಸಲಾತಿ ಪ್ರಮಾಣವನ್ನು ಕಡಿತಗೊಳಿಸಬೇಕಾದ ಪರಿಸ್ಥಿತಿ ಎದುರಾದರೆ ಒಳಮೀಸಲಾತಿ ಪ್ರಮಾಣಗಳನ್ನೂ ಅನುಪಾತದ ಆಧಾರದಲ್ಲಿ ಪರಿಷ್ಕರಿಸುವ ಸಾಧ್ಯತೆ ಇದೆ. ಗಣಿತದ ದೃಷ್ಟಿಯಿಂದ ಅಂತಹ ಪರಿಷ್ಕರಣೆ ಮಾಡುವುದು ಕಷ್ಟದ ವಿಚಾರವಲ್ಲ. ಆದರೆ ಇದರಿಂದ ವಿವಿಧ ಸಮುದಾಯಗಳಿಗೆ ದೊರೆಯಬೇಕಾದ ಅವಕಾಶಗಳು ಕಡಿಮೆಯಾಗುವ ಸಾಧ್ಯತೆಯೇ ಹೆಚ್ಚು ಆತಂಕಕಾರಿ ವಿಷಯವಾಗಿದೆ. ಹೈಕೋರ್ಟ್ ತೀರ್ಪಿನಿಂದ ಉದ್ಯೋಗಾಕಾಂಕ್ಷಿಗಳು ಹಾಗೂ ಮುಂದಿನ ನೇಮಕಾತಿ ಪ್ರಕ್ರಿಯೆಗಳ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನೂ ಪರಿಶೀಲಿಸಬೇಕಿದೆ. ಸಂವಿಧಾನದ ಚೌಕಟ್ಟಿನೊಳಗೆ ಕಾನೂನಾತ್ಮಕವಾಗಿ ಸಾಧ್ಯವಿರುವ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಚರ್ಚಿಸಲಿದೆ ಎಂದು ಹೇಳಿದ್ದಾರೆ.
*ಚುನಾವಣಾ ಆಯೋಗದ ನಿಷ್ಪಕ್ಷಪಾತ ಕಾರ್ಯನಿರ್ವಹಣೆ ಅಗತ್ಯ:*
ದೇಶದ ವಿವಿಧ ಭಾಗಗಳಿಂದ ಜನರು ದೆಹಲಿಗೆ ತೆರಳಿ ಪ್ರತಿಭಟನೆ ನಡೆಸುತ್ತಿರುವುದು ಯಾವುದೇ ಕಾರಣವಿಲ್ಲದೆ ಅಲ್ಲ. ಸಂವಿಧಾನಾತ್ಮಕವಾಗಿ ನಡೆಯಬೇಕಾದ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆತಂಕದಿಂದ ಪ್ರತಿಭಟನೆ ಮಾಡಲಾಗುತ್ತಿದೆ. ಚುನಾವಣಾ ಆಯೋಗವು ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಂಸ್ಥೆಯಾಗಿ ಕಾರ್ಯನಿರ್ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಪಕ್ಷದ ಪ್ರಭಾವಕ್ಕೆ ಒಳಗಾಗಿ ತೀರ್ಮಾನ ಕೈಗೊಳ್ಳಬಾರದು. ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆ ಮತ್ತು ಮತದಾರರ ಹಕ್ಕುಗಳ ರಕ್ಷಣೆ ಅತ್ಯಂತ ಮುಖ್ಯವಾಗಿದೆ. ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ಹೆಸರುಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಇರಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯ ಸಂದರ್ಭದಲ್ಲಿ ಸುಮಾರು 1.08 ಕೋಟಿ ಜನರ ಹೆಸರುಗಳನ್ನು ವಿವಿಧ ಕಾರಣಗಳ ಅಡಿಯಲ್ಲಿ ಗುರುತಿಸಲಾಗಿದೆ. ಇದಕ್ಕೆ ಚುನಾವಣಾ ಆಯೋಗ ಸ್ಪಷ್ಟನೆ ನೀಡಬೇಕಿದೆ. ಸುಮಾರು 65 ಲಕ್ಷ ಜನರನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಲಾಗಿದೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನರು ಸ್ಥಳಾಂತರಗೊಂಡಿದ್ದಾರೆ ಎಂದಾದರೆ ಅವರು ಬೇರೆಡೆ ನೆಲೆಸಿರಬೇಕು. ಆದರೆ, ಒಂದು ಕಡೆ ಸ್ಥಳಾಂತರಗೊಂಡಿದ್ದಾರೆ ಎಂದು ಹೇಳಿ, ಇನ್ನೊಂದು ಕಡೆ ಅವರ ಹೆಸರುಗಳೇ ಇಲ್ಲದಿದ್ದರೆ ಅವರ ಮತದಾನದ ಹಕ್ಕು ಏನಾಗುತ್ತದೆ? ಎಂದು ಪ್ರಶ್ನೆ ಮಾಡಿದ್ದಾರೆ.
ಸುಮಾರು ಶೇ.11ರಷ್ಟು ಜನಸಂಖ್ಯೆಯನ್ನು ಸ್ಥಳಾಂತರಗೊಂಡವರು ಎಂದು ಗುರುತಿಸಿರುವುದರ ಬಗ್ಗೆ ಸಮರ್ಪಕ ವಿವರಣೆ ನೀಡಬೇಕಿದೆ. ಮತದಾರರ ಹೆಸರುಗಳು ಮತ್ತು ಮತದಾನದ ಹಕ್ಕುಗಳ ವಿಚಾರದಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನೋಡಿಕೊಳ್ಳುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ ಎಂದು ತಿಳಿಸಿದ್ದಾರೆ.
*ಫಾರಂ–7 ಅರ್ಜಿಗಳ ದುರ್ಬಳಕೆ ಕುರಿತು ಪ್ರತಿಕ್ರಿಯೆ:
ಮತದಾರರ ಮಾಹಿತಿಯ ಬಳಕೆ, ಫಾರಂ–7 ಅರ್ಜಿಗಳ ಸಲ್ಲಿಕೆ ಹಾಗೂ ಆಕ್ಷೇಪಣೆಗಳ ಪರಿಶೀಲನಾ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗ ಸೂಕ್ತ ಸ್ಪಷ್ಟನೆ ನೀಡಬೇಕು. ಒಬ್ಬ ವ್ಯಕ್ತಿಯಿಂದ 30 ರಿಂದ 50 ಹೆಸರುಗಳವರೆಗೆ ಆಕ್ಷೇಪಣೆ ಸಲ್ಲಿಸುವ ಅವಕಾಶವಿರುವ ಸಂದರ್ಭದಲ್ಲಿ, 300 ರಿಂದ 400 ಹೆಸರುಗಳನ್ನು ಒಳಗೊಂಡ ಅರ್ಜಿಗಳು ಸಲ್ಲಿಕೆಯಾಗಿದೆ. ಅದರಲ್ಲಿಯೂ ಒಂದೇ ಸಮುದಾಯದ ಹೆಸರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿ ಅರ್ಜಿ ಸಲ್ಲಿಸಲಾಗುತ್ತಿದೆ ಎಂಬ ವಿಚಾರ ಆತಂಕಕಾರಿ ಎಂದು ಹೇಳಿದ್ದಾರೆ.
50 ಹೆಸರುಗಳಿಗೆ ಅವಕಾಶವಿರುವಾಗ 300ರಿಂದ 400 ಹೆಸರುಗಳನ್ನು ಸೇರಿಸಿ ಅರ್ಜಿಗಳನ್ನು ಸಲ್ಲಿಸುವುದರ ಹಿಂದಿನ ಉದ್ದೇಶವೇನು? ಒಂದೇ ಸಮುದಾಯದ ಹೆಸರುಗಳನ್ನು ಗುರುತಿಸಿ ಸಲ್ಲಿಸಲಾಗುತ್ತಿದೆ ಎಂಬ ಆರೋಪಗಳಿವೆ. ಈ ಅರ್ಜಿಗಳು ಬೇರೆಡೆ ಮುದ್ರಣಗೊಂಡು ಬರುತ್ತಿರುವುದು ಹೇಗೆ? ಮತದಾರರ ಮಾಹಿತಿಯನ್ನು ಯಾರು ಪಡೆದುಕೊಂಡಿದ್ದಾರೆ? ಯಾರು ಮುದ್ರಿಸಿ ಕಳುಹಿಸುತ್ತಿದ್ದಾರೆ ಎಂಬುದಕ್ಕೆ ಉತ್ತರ ಸಿಗಬೇಕು. ಮತದಾರರ ಮಾಹಿತಿ ಸಾರ್ವಜನಿಕವಾಗಿ ವೆಬ್ಸೈಟ್ನಲ್ಲಿ ಲಭ್ಯವಿದೆ ಎಂಬ ಬಿಜೆಪಿ ನಾಯಕರ ವಾದ. ಆದರೆ, ಮಾಹಿತಿ ಲಭ್ಯವಿದೆ ಎಂಬ ಕಾರಣಕ್ಕೆ ಒಂದೇ ಸಮುದಾಯದ ನೂರಾರು ಹೆಸರುಗಳನ್ನು ಒಟ್ಟುಗೂಡಿಸಿ ಆಕ್ಷೇಪಣೆ ಸಲ್ಲಿಸುವುದನ್ನು ಸಮರ್ಥಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಚುನಾವಣಾ ಆಯೋಗದ ಕ್ರಮಗಳು ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ಮತದಾರರ ಹಕ್ಕುಗಳಿಗೆ ಅನುಗುಣವಾಗಿರಬೇಕು ಎಂಬುದೇ ನಮ್ಮ ನಿಲುವಾಗಿದೆ ಎಂದಿದ್ದಾರೆ.
*ವಿಪತ್ತು ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆಗೆ ಆದ್ಯತೆ:*
ವಿಪತ್ತು ಸಂಭವಿಸುವುದಕ್ಕೂ ಮೊದಲೇ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವ ಅಗತ್ಯದ ಬಗ್ಗೆ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣ ಆಯೋಜಿಸಲಾಗಿದೆ. ಸಾಮಾನ್ಯವಾಗಿ ವಿಪತ್ತು ಸಂಭವಿಸಿದ ನಂತರ ಪರಿಹಾರ ಕಾರ್ಯಗಳು, ಅಗತ್ಯ ನೆರವು ಹಾಗೂ ಪುನರ್ವಸತಿ ಕ್ರಮಗಳನ್ನು ಕೈಗೊಳ್ಳುತ್ತೇವೆ. ಆದರೆ ವಿಪತ್ತು ಸಂಭವಿಸುವುದಕ್ಕೂ ಮೊದಲೇ ಏಕೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬಾರದು? ಸಾರ್ವಜನಿಕರಿಗೆ ಅಗತ್ಯ ಮಾಹಿತಿ ನೀಡಿ, ಸಂಭವನೀಯ ಅಪಾಯಗಳನ್ನು ಎದುರಿಸಲು ಮೊದಲೇ ಸಿದ್ಧತೆ ಮಾಡಿಕೊಳ್ಳಬಾರದೆ ಎಂಬುದರ ಬಗ್ಗೆ ಚರ್ಚಿಸಬೇಕಿದೆ ಎಂದು ತಿಳಿಸಿದ್ದಾರೆ.
ವಿಪತ್ತು ನಿರ್ವಹಣೆಯಲ್ಲಿ ಮುನ್ನೆಚ್ಚರಿಕೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ಅಗತ್ಯ ಸಿದ್ಧತೆಗಳನ್ನು ಮೊದಲೇ ಕೈಗೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಈ ಸಂಬಂಧ ರಾಷ್ಟ್ರೀಯ ಮಟ್ಟದ ವಿಚಾರಸಂಕಿರಣದಲ್ಲಿ ವಿವಿಧ ಅಂಶಗಳ ಕುರಿತು ಚರ್ಚಿಸಲಾಗುವುದು ಎಂದರು.