
ಜಿಲ್ಲೆಯಲ್ಲಿ ಮಳೆ ಕೊರತೆ ಕೃಷಿ ಕ್ಷೇತ್ರದ ಜತೆಗೆ ಒಳನಾಡು ಮೀನುಗಾರಿಕೆಗೂ ತೀವ್ರ ಹೊಡೆತ ನೀಡಿದೆ. ಜಿಲ್ಲೆಯ ಬಹುತೇಕ ಕೆರೆಗಳು ನೀರಿಲ್ಲದೆ ಬರಿದಾಗಿರುವ ಪರಿಣಾಮ ಮೀನುಮರಿ ಬಿತ್ತನೆ ಕುಂಠಿತಗೊಂಡಿದ್ದು, ಮೀನು ಉತ್ಪಾದನೆಯಲ್ಲೂ ಭಾರಿ ಹಿನ್ನಡೆ ಕಂಡುಬಂದಿದೆ. ಪರಿಣಾಮ ಮುಂದಿನ ದಿನಗಳಲ್ಲಿ ಮೀನುಗಳ ಪೂರೈಕೆ ಕೊರತೆಯಾಗಿ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
ಜಿಲ್ಲೆಯಲ್ಲಿ ಒಟ್ಟು 1,032 ಕೆರೆಗಳಿದ್ದು, 103 ಕೆರೆಗಳನ್ನು ಮೀನುಗಾರಿಕೆಗೆ ಗುರುತಿಸಲಾಗಿದೆ. ಈ ಕೆರೆಗಳನ್ನು ಟೆಂಡರ್ ಮೂಲಕ ಮೀನುಗಾರಿಕೆಗೆ ಹಸ್ತಾಂತರಿಸಲಾಗುತ್ತದೆ. ಆದರೆ ಪ್ರಸಕ್ತ ಸಾಲಿನಲ್ಲಿ 103 ಕೆರೆಗಳ ಪೈಕಿ 32 ಕೆರೆಗಳನ್ನು ಮಾತ್ರ ಮೀನುಗಾರಿಕೆಗೆ ವಿಲೇವಾರಿ ಮಾಡಲಾಗಿದೆ. ಇದರಿಂದ ಶೇ.31ರಷ್ಟು ಮಾತ್ರ ಸಾಧನೆಯಾಗಿದೆ. ಕೆರೆಗಳ ಹರಾಜು ಪ್ರಕ್ರಿಯೆಯನ್ನು ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ನೀಡಲಾಗುತ್ತಿದ್ದು, ಈಗಾಗಲೇ ಹರಾಜು ಮಾಡಿರುವ ಕೆರೆಗಳ ನವೀಕರಣ ಕಾರ್ಯವನ್ನು ಮೀನುಗಾರಿಕೆ ಇಲಾಖೆ ಕೈಗೊಳ್ಳುತ್ತಿದೆ.
ಮೀನುಮರಿ ಬಿತ್ತನೆಗೆ ಮಳೆ ಅಡ್ಡಿ: ಸಾಮಾನ್ಯವಾಗಿ ಮುಂಗಾರು ಆರಂಭವಾದ ಬಳಿಕ ಕೆರೆಗಳಿಗೆ ಹೊಸ ನೀರು ಹರಿದುಬಂದಾಗ ಮೀನುಮರಿ ಬಿತ್ತನೆ ಮಾಡಲಾಗುತ್ತದೆ. ಆದರೆ ಈ ಬಾರಿ ಮುಂಗಾರು ಆರಂಭದಲ್ಲೇ ಮಳೆ ಕೊರತೆ ಎದುರಾದ ಕಾರಣ ಕೆರೆಗಳಲ್ಲಿ ಅಗತ್ಯ ಪ್ರಮಾಣದ ನೀರು ಸಂಗ್ರಹವಾಗಿಲ್ಲ. ಹೀಗಾಗಿ ಮೀನುಮರಿ ಬಿತ್ತನೆ ಗುರಿ ಸಾಧನೆಯಲ್ಲೂ ಭಾರಿ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ 69.56 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ನಿಗದಿಪಡಿಸಲಾಗಿತ್ತು. ಆದರೆ ಸೆಪ್ಟೆಂಬರ್ ಆರಂಭದ ವೇಳೆಗೆ 37.80 ಲಕ್ಷ ಮೀನುಮರಿಗಳನ್ನು ಮಾತ್ರ ಬಿತ್ತನೆ ಮಾಡಲಾಗಿದೆ. ಇದರಿಂದ ಶೇ.54ರಷ್ಟು ಗುರಿ ಸಾಧನೆಯಾಗಿದ್ದು, ಶೇ.46ರಷ್ಟು ಗುರಿ ಬಾಕಿ ಉಳಿದಿದೆ.
ಗ್ರಾಪಂ ಕೆರೆಗಳಲ್ಲೂ ನೀರಿಲ್ಲ
ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆರೆಗಳಲ್ಲೂ ಮತ್ಸ್ಯಪಾಲನೆ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಜಿಲ್ಲೆಯ 115 ಗ್ರಾಪಂ ಕೆರೆಗಳಲ್ಲಿ ಮತ್ಸ್ಯಪಾಲನೆ ಗುರಿ ಹೊಂದಲಾಗಿದ್ದು, ಕೇವಲ 20 ಕೆರೆಗಳಲ್ಲಿ ಮಾತ್ರ ಮತ್ಸ್ಯಪಾಲನೆ ಅಳವಡಿಸಲಾಗಿದೆ. ಗ್ರಾಪಂ ಕೆರೆಗಳಿಗೆ 25.20 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ನಿಗದಿಪಡಿಸಿದ್ದರೂ, ಇದುವರೆಗೆ ಕೇವಲ 4.35 ಲಕ್ಷ ಮೀನುಮರಿಗಳನ್ನು ಬಿತ್ತನೆ ಮಾಡಲಾಗಿದೆ. ಇದರಿಂದ ಈ ವಿಭಾಗದಲ್ಲೂ ಗುರಿ ಸಾಧನೆ ತೀವ್ರವಾಗಿ ಕುಸಿದಿದೆ. ಖಾಸಗಿ ಕೊಳಗಳಿಗೂ ಬರದ ಬಿಸಿ: ಖಾಸಗಿ ಕೊಳಗಳ ಮತ್ಸ್ಯಪಾಲನೆ ಮೇಲೂ ಬರದ ಪರಿಣಾಮ ಬೀರಿದೆ. 11.56 ಹೆಕ್ಟೇರ್ ಖಾಸಗಿ ಕೊಳಗಳಲ್ಲಿ ಮತ್ಸ್ಯಪಾಲನೆ ಮಾಡುವ ಗುರಿ ಹೊಂದಿದ್ದರೂ, ಕೇವಲ 4.32 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಮತ್ಸ್ಯಪಾಲನೆ ನಡೆಯುತ್ತಿದೆ. ಖಾಸಗಿ ಕೊಳಗಳಲ್ಲಿ 1.26 ಲಕ್ಷ ಮೀನುಮರಿಗಳ ಬಿತ್ತನೆ ಗುರಿ ಹೊಂದಿದ್ದು, 92 ಸಾವಿರ ಮೀನುಮರಿಗಳ ಬಿತ್ತನೆ ಮಾಡಲಾಗಿದೆ.
8,500 ಟನ್ ಗುರಿಗೆ 800 ಟನ್!
ಮೀನುಮರಿ ಬಿತ್ತನೆ ಕುಂಠಿತಗೊಂಡಿರುವ ಪರಿಣಾಮ ಮೀನು ಉತ್ಪಾದನೆಯ ಮೇಲೂ ನೇರ ಪರಿಣಾಮ ಬಿದ್ದಿದೆ. ಜಿಲ್ಲೆಯಲ್ಲಿ ವಾರ್ಷಿಕ 8,500 ಟನ್ ಮೀನು ಉತ್ಪಾದನೆ ಗುರಿ ಹೊಂದಲಾಗಿದೆ. ಆದರೆ ಸೆಪ್ಟೆಂಬರ್ ಆರಂಭದವರೆಗೆ ಕೇವಲ 800 ಟನ್ ಮೀನು ಉತ್ಪಾದನೆಯಾಗಿದೆ. ಅಂದರೆ ವಾರ್ಷಿಕ ಗುರಿಯ ಶೇ.10ರಷ್ಟೂ ಉತ್ಪಾದನೆ ಆಗಿಲ್ಲ. ಸದ್ಯ ಜಿಲ್ಲೆಯ ಶೇ.70ಕ್ಕೂ ಹೆಚ್ಚು ಕೆರೆಗಳು ಬರಿದಾಗಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಮೀನು ಉತ್ಪಾದನೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.
ಬೆಲೆ ಏರಿಕೆ ಸಾಧ್ಯತೆ
ಕೆರೆಗಳಲ್ಲಿ ನೀರಿನ ಕೊರತೆಯಿಂದ ಮೀನು ಸಾಕಾಣಿಕೆ ಕುಂಠಿತಗೊಂಡರೆ ಸ್ಥಳೀಯ ಮಾರುಕಟ್ಟೆಗೆ ಮೀನುಗಳ ಪೂರೈಕೆ ಕಡಿಮೆಯಾಗುವ ಸಾಧ್ಯತೆ ಇದೆ. ಇದರಿಂದ ಸಮುದ್ರ ಮೀನುಗಳ ಜತೆಗೆ ಒಳನಾಡು ಮೀನುಗಳ ದರವೂ ಏರಿಕೆಯಾಗುವ ಸಾಧ್ಯತೆ ಇದೆ. ಉತ್ತಮ ಗಾತ್ರದ ಮೀನುಗಳ ಲಭ್ಯತೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ. ಮೀನುಗಾರಿಕೆಗೆ ಕೆರೆಗಳ ವಿಲೇವಾರಿ ಮೂಲಕ ಜಿಲ್ಲೆಯಲ್ಲಿ 40,90,101 ಆದಾಯ ಸಂಗ್ರಹವಾಗಿದೆ. ಆದರೆ ಕೆರೆಗಳಲ್ಲಿ ನೀರಿನ ಕೊರತೆ ಮುಂದುವರಿದಿರುವುದರಿಂದ ಮೀನುಗಾರಿಕೆ ಹಕ್ಕು ಪಡೆದಿರುವ ಗುತ್ತಿಗೆದಾರರು ಹಾಗೂ ಮೀನುಗಾರರ ಮೇಲೂ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ.
ಮಳೆ ಕೊರತೆಯಿಂದ ಜಿಲ್ಲೆಯ ಕೆರೆಗಳು ಬರಿದಾಗಿದ್ದು, ಮೀನುಮರಿ ಬಿತ್ತನೆಗೂ ಸಮಸ್ಯೆಯಾಗಿದೆ. ನೀರಿನ ಲಭ್ಯತೆ ಕಡಿಮೆಯಾಗಿರುವುದು ಮತ್ಸ್ಯಪಾಲನೆ ಮತ್ತು ಮೀನು ಉತ್ಪಾದನೆಯ ಮೇಲೂ ಪರಿಣಾಮ ಬೀರಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಶಿವಶಂಕರ್ ಹೇಳಿದ್ದಾರೆ.