
ದೇವನಹಳ್ಳಿ: ನಕಲಿ ಔಷಧಿಗಳ ಮಾರಾಟ ಜಾಲಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ, ಪ್ರಕರಣದ ಕಿಂಗ್ಪಿನ್ ಎಂದು ಪೊಲೀಸರು ಗುರುತಿಸಿರುವ ಪ್ರಶಾಂತ್ ರಜನ್ ಬಾಬು ಅವರನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದಾರೆ.
ವಿದೇಶದಲ್ಲಿದ್ದ ಪ್ರಶಾಂತ್ ರಜನ್ ಬಾಬು ಅವರು ಶಾರ್ಜಾದಿಂದ ಸೋಮವಾರ ಮುಂಜಾನೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಅವರ ವಿರುದ್ಧ ಲುಕ್ಔಟ್ ನೋಟಿಸ್ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಅರೈವಲ್ ಗೇಟ್ನಲ್ಲೇ ಅವರನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಿನ ಸುಮಾರು 5.40ರ ವೇಳೆಗೆ ವಿಮಾನ ನಿಲ್ದಾಣದ ಅರೈವಲ್ ವಿಭಾಗಕ್ಕೆ ಬಂದಿದ್ದ ಪ್ರಶಾಂತ್ ರಜನ್ ಬಾಬು ಅವರನ್ನು ಲುಕ್ಔಟ್ ನೋಟಿಸ್ ಆಧಾರದ ಮೇಲೆ ಗುರುತಿಸಿದ ಅಧಿಕಾರಿಗಳು ವಶಕ್ಕೆ ಪಡೆದು, ಬಳಿಕ ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಅಂಜನ್ ಕುಮಾರ್ ನೇತೃತ್ವದ ತಂಡಕ್ಕೆ ಹಸ್ತಾಂತರಿಸಿದ್ದಾರೆ.
ನಕಲಿ ಔಷಧಿಗಳ ಮಾರಾಟ ಹಾಗೂ ವಿತರಣೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು, ಜಾಲದ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರಮುಖ ವ್ಯಕ್ತಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಪ್ರಶಾಂತ್ ರಜನ್ ಬಾಬು ಅವರ ವಿರುದ್ಧ ಲುಕ್ಔಟ್ ನೋಟಿಸ್ ಹೊರಡಿಸಲಾಗಿತ್ತು.
ವಿದೇಶದಿಂದ ಭಾರತಕ್ಕೆ ಮರಳಿದ ಕೂಡಲೇ ವಿಮಾನ ನಿಲ್ದಾಣದಲ್ಲೇ ಬಂಧನಕ್ಕೊಳಗಾಗಿರುವುದು ಪ್ರಕರಣದ ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ.
ಆರೋಪಿಯ ವಿಚಾರಣೆಯ ಬಳಿಕ ನಕಲಿ ಔಷಧಿಗಳ ಜಾಲದ ಕಾರ್ಯವೈಖರಿ, ಔಷಧಿಗಳ ಮೂಲ, ವಿತರಣೆ ಹಾಗೂ ಪ್ರಕರಣದಲ್ಲಿ ಇತರರ ಪಾತ್ರದ ಕುರಿತು ಹೆಚ್ಚಿನ ಮಾಹಿತಿ ಹೊರಬರುವ ಸಾಧ್ಯತೆ ಇದೆ.