ಡಿಕೆ 100 ದಿನ, ನೆನಪಾದ ಮೋದಿ…

ಕರ್ನಾಟಕದ ಮಾನ್ಯ ಮುಖ್ಯಮಂತ್ರಿ
ಶ್ರೀ ಡಿಕೆ ಶಿವಕುಮಾರ್ ಅವರ 100ನೇ ದಿನದ ಸಾಧನಾ ಸಂಭ್ರಮದ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲಿನಲ್ಲಿ ಜರುಗಿತು. ಆ ಕಾರ್ಯಕ್ರಮದ ಆಯೋಜನೆ ಮತ್ತು ಹೊಸ ಯೋಜನೆಗಳ ಘೋಷಣೆ ನೋಡಿದಾಗ ಬಹುತೇಕ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ಅಪರಾವತಾರದಂತೆ ಕಾಣಿಸಿತು.

ಮೊದಲನೆಯದಾಗಿ,
ಬಹುತೇಕ ಕನ್ನಡದ ಎಲ್ಲಾ ಟೆಲಿವಿಷನ್ ಸುದ್ದಿ ಮಾಧ್ಯಮಗಳು ಅದರ ನೇರ ಪ್ರಸಾರವನ್ನು ಮಾಡಿದವು. ಸುಮಾರು ನಾಲ್ಕು ಗಂಟೆ ಸತತವಾಗಿ ನೇರ ಪ್ರಸಾರವಿತ್ತು. ನರೇಂದ್ರ ಮೋದಿಯವರ ಕಾರ್ಪೊರೇಟ್ ಶೈಲಿಯ ಕಾರ್ಯಕ್ರಮಗಳ ಆಯೋಜನೆಯಲ್ಲಿ ಇದು ಸಾಮಾನ್ಯವಾಗಿದೆ. ಆದರೆ ಕಾಂಗ್ರೆಸ್ ಸರ್ಕಾರದ ಒಬ್ಬ ಮುಖ್ಯಮಂತ್ರಿಯ ಕಾರ್ಯಕ್ರಮವನ್ನು ಇಷ್ಟೊಂದು ದೀರ್ಘವಾಗಿ ನೂರನೇ ದಿನದ ಕಾರ್ಯಕ್ರಮವನ್ನು ಎಲ್ಲಾ ಚಾನೆಲ್ ಗಳು ಪ್ರಸಾರ ಮಾಡಿದ್ದು ವಿಶೇಷ ಎನಿಸಿತು, ಆಶ್ಚರ್ಯ ಪಡಬೇಡಿ, ವಿಶೇಷವೇನಿಲ್ಲ. ಏಕೆಂದರೆ ಎಲ್ಲಾ ಚಾನೆಲ್ಗಳಿಗೂ 100ನೇ ದಿನದ ಸರ್ಕಾರದ ಜಾಹೀರಾತಿನ ಮೂಲಕ ಸಾಕಷ್ಟು ಪ್ರಮಾಣದ ಹಣವನ್ನು ಆ ಚಾನಲ್ಗಳಿಗೆ ನೀಡಲಾಗಿತ್ತು. ಅದರ ಪ್ರಭಾವದಿಂದ ಅನಧಿಕೃತವಾಗಿ ಷರತ್ತು ವಿಧಿಸಿ ಈ ರೀತಿಯ ಪ್ರಚಾರದ ಆಯೋಜನೆಯಾಗಿತ್ತು. ನರೇಂದ್ರ ಮೋದಿಯವರ ವಿಷಯದಲ್ಲಿಯೂ ಇದೇ ರೀತಿಯ ತಂತ್ರಗಾರಿಕೆಯನ್ನು ಬಳಸಲಾಗುತ್ತದೆ. ಮೀಡಿಯಾ ಮ್ಯಾನೇಜ್ಮೆಂಟ್ ಗಾಗಿ ವಿಶೇಷ ಮುತ್ತುವರ್ಜಿ ಮತ್ತು ಹಣಕಾಸು ಆಮಿಷ, ಪ್ರಲೋಭನೆ, ಭಯ, ಅಂದರೆ ಸಾಮಾ ದಾನ ಭೇದ ದಂಡದ ಉಪಯೋಗ ಮಾಧ್ಯಮಗಳ ಮೇಲೆಯೂ ಆಗುತ್ತದೆ. ತಾವೇನೋ ಪ್ರಖಾಂಡ ಪಂಡಿತರು ಎಂಬಂತೆ ಸರ್ಕಾರವನ್ನು ಹಿಗ್ಗಾಮಗ್ಗ ಜಾಡಿಸುವ ಚಾನಲ್ಗಳ ಆತ್ಮವಂಚಕ ಸಂಪಾದಕರುಗಳು ಆತ್ಮವಿಮರ್ಶೆ ಮಾಡಿಕೊಳ್ಳಬೇಕಾದ ವಿಷಯವೂ ಇಲ್ಲಿ ಅಡಗಿದೆ.

ಡಾಕ್ಟರ್ ಮನಮೋಹನ್ ಸಿಂಗ್ ಮತ್ತು ಶ್ರೀ ಸಿದ್ದರಾಮಯ್ಯನವರ ಆಡಳಿತದ ವೈಖರಿ ಒಂದು ರೀತಿಯಾಗಿ ಕಾಣಿಸಿದರೆ, ನರೇಂದ್ರ ಮೋದಿ ಮತ್ತು ಡಿಕೆ ಶಿವಕುಮಾರ್ ಅವರ ಚಿಂತನಾ ಲಹರಿ, ಅಭಿವೃದ್ಧಿಯ ದೃಷ್ಟಿಯಿಂದ ಬಹುತೇಕ ಒಂದೇ ದೃಷ್ಟಿಕೋನ ಹೊಂದಿದೆ. ರೂಪ ಮಾತ್ರ ಬೇರೆ ಇರಬಹುದು.

ನರೇಂದ್ರ ಮೋದಿಯವರು ಮಾತಿಗೊಮ್ಮೆ ಫೈವ್ ಟ್ರಿಲಿಯನ್ ಡಾಲರ್ ಎಕಾನಮಿ ಎಂದರೆ ಡಿಕೆ ಶಿವಕುಮಾರ್ ಅವರು ನಿನ್ನೆಯ ಕಾರ್ಯಕ್ರಮದಲ್ಲಿ 2037 ರ ಹೊತ್ತಿಗೆ ಕರ್ನಾಟಕದ ಆರ್ಥಿಕತೆಯ ಗಾತ್ರ ಒನ್ ಟ್ರಿಲಿಯನ್ ಡಾಲರ್ ಎಕಾನಮಿ ಗುರಿಯ ಬಗ್ಗೆ ಮಾತನಾಡಿದರು.

ನರೇಂದ್ರ ಮೋದಿಯವರು ತಮ್ಮ ಯೋಜನೆಗಳಿಗೆ ವಿಶೇಷ ಹೆಸರನ್ನು ನೀಡುವಂತೆ ಡಿಕೆ ಶಿವಕುಮಾರ್ ಅವರೂ ಕೆಲವು ವಿಶೇಷ, ಆಕರ್ಷಕ ಶೀರ್ಷಿಕೆಗಳನ್ನು ನೀಡುತ್ತಿದ್ದಾರೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ದೊಡ್ಡ ದೊಡ್ಡ ಕನಸುಗಳನ್ನು ಹೆಣೆಯುತ್ತಿದ್ದಾರೆ, ಭರವಸೆ ನೀಡುತ್ತಿದ್ದಾರೆ…..

ನರೇಂದ್ರ ಮೋದಿ ಅವರಂತೆ ಡಿಕೆ ಶಿವಕುಮಾರ್ ಅವರು ಸಹ ತಾವೇ ಮುಂದೆ ನಿಂತು ಎಲ್ಲಾ ಕಾರ್ಯಕ್ರಮಗಳಲ್ಲಿ ಧಣಿವರಿಯದೆ ಭಾಗವಹಿಸುತ್ತಿದ್ದಾರೆ. ಜೊತೆಗೆ ನರೇಂದ್ರ ಮೋದಿಯವರ ಶಿಷ್ಟಾಚಾರ ಮತ್ತು ಆಂತರ್ಯದ ಅಹಂ ಒಂದು ರೀತಿ ಸೂಕ್ಷ್ಮತೆಯನ್ನು ಪಡೆದಿದ್ದರೆ ಡಿಕೆ ಶಿವಕುಮಾರ್ ಅವರಲ್ಲಿ ಅದು ಬಹಿರಂಗವಾಗಿ ವ್ಯಕ್ತವಾಗುತ್ತದೆ. ಆದರೆ ಇಬ್ಬರಲ್ಲೂ ಅಹಂ ಪ್ರಮಾಣ ಹೆಚ್ಚಾಗಿಯೇ ಇದೆ…

ನರೇಂದ್ರ ಮೋದಿ ಅವರು 12 ವರ್ಷಗಳಲ್ಲಿ ಘೋಷಿಸಿದ ಯೋಜನೆಗಳು, ವಿರೋಧ ಪಕ್ಷಗಳನ್ನು ಅವರು ನಡೆಸಿಕೊಂಡ ರೀತಿ, ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಾತು ಮತ್ತು ಕೃತಿಯ ನಡುವೆ ಅಂತರ ಉಂಟಾಗುವಂತೆ ಮಾಡಿದ್ದು, ಈ ಎಲ್ಲವೂ ಪರೋಕ್ಷವಾಗಿ ಡಿಕೆ ಶಿವಕುಮಾರ್ ಅವರಲ್ಲೂ ಸಹ ಕಂಡುಬರುತ್ತದೆ. ತಮ್ಮ ಅಂತರಂಗದ ಬುದ್ದಿಜೀವಿಗಳ ಬರಹಗಳನ್ನು, ಮಾತುಗಳನ್ನು, ಚಿಂತನೆಗಳನ್ನು ಮೋದಿಯವರಂತೆ ಡಿಕೆ ಶಿವಕುಮಾರ್ ಅವರು ಉಪಯೋಗಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಛಲಗಾರರು, ಹಠಮಾರಿಗಳು ಹೌದು, ಶ್ರಮಜೀವಿಗಳು ಹೌದು, ಚಟುವಟಿಕೆಯಿಂದ ಇರುವವರು ಹೌದು. ಆದರೆ ಅಧಿಕಾರದ ಅಹಂ, ತಾನೇ ಬುದ್ಧಿವಂತರೆಂಬ ನಂಬಿಕೆ ಇಬ್ಬರಲ್ಲೂ ಇದೆ. ಇಬ್ಬರಿಗೂ ಆರ್ಥಿಕ ಅಭಿವೃದ್ಧಿ ಮುಖ್ಯವೇ ಹೊರತು ಸಾಮಾಜಿಕ ನ್ಯಾಯದ ಬಗ್ಗೆ ಲವಲೇಶದ ಕಾಳಜಿಯೂ ಇಲ್ಲ. ಹಾಗೆಯೇ ಇಬ್ಬರಲ್ಲಿ ಇರುವ ಬಹುದೊಡ್ಡ ಮುಖವಾಡ ಎಂದರೆ ನಿನ್ನೆ ಕಾರ್ಯಕ್ರಮದ ಕೊನೆಯಲ್ಲಿ ಶಿವಕುಮಾರ್ ಅವರು ಹೇಳಿದ್ದು ನಾನು ಮುಖ್ಯಮಂತ್ರಿಯಲ್ಲ ನಿಮ್ಮ ಸೇವಕ ಎಂದು. 12 ವರ್ಷದಿಂದ ಹಿಂದೆ ಮಾನ್ಯ ನರೇಂದ್ರ ಮೋದಿಯವರು ಇದೇ ಮಾತನ್ನು ಜೊತೆಗೆ ಕಾವಲುಗಾರ ಎಂದೂ ಹೇಳಿದ್ದರು.

ಇದು ಸರ್ವಾಧಿಕಾರಿ ಮನೋಭಾವದ ಎಲ್ಲರೂ ಸಾರ್ವಜನಿಕರನ್ನು ನಂಬಿಸಲು ಹೇಳುವ ಮಾತು. ಯಾವ ದೃಷ್ಟಿಯಿಂದಲೂ ಅವರು ಸೇವಕರಲ್ಲ. ಅವರು ಹಿಂದಿನ ಕಾಲದ ರಾಜರಂತೆಯೇ ಈಗಿನ ಕಾಲದ ಮುಖ್ಯಮಂತ್ರಿ, ಪ್ರಧಾನಮಂತ್ರಿಗಳು. ಆ ಹುದ್ದೆಯಲ್ಲಿ ಕುಳಿತು ದೇಶ, ರಾಜ್ಯ ಮತ್ತು ಜನರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಅವರು ಸೇವಕರಲ್ಲ. ಪ್ರಧಾನ ಮಂತ್ರಿ, ಮುಖ್ಯಮಂತ್ರಿಗಳಾಗಿ ಪ್ರಾಮಾಣಿಕವಾಗಿ, ದಕ್ಷವಾಗಿ ಕಾರ್ಯ ನಿರ್ವಹಿಸಿದರೆ ಸಾಕು. ರಾಜನಾದವನಿಗೆ ಇರುವ ಎಲ್ಲಾ ಅಧಿಕಾರ ಸುಖಭೋಗಗಳನ್ನು ಅನುಭವಿಸುತ್ತಾ ಅದೇ ಉತ್ಸಾಹದಿಂದ ತಮ್ಮ ಕರ್ತವ್ಯ ನಿರ್ವಹಿಸಲಿ. ಸೇವಕರಾದರೆ ನಿಜಕ್ಕೂ ಜೀವನೋತ್ಸವ ಇಲ್ಲವಾಗುತ್ತದೆ. ಶಿವಕುಮಾರ್ ಮತ್ತು ಮೋದಿಯವರು ಬದುಕುತ್ತಿರುವುದು ಕೂಡ ರಾಜರಂತೆಯೇ. ಹೇಳುವುದು ಮಾತ್ರ ಸೇವಕ ಎಂದು.

ರೈತರು, ಸೈನಿಕರು, ಕಾರ್ಮಿಕರು, ಚಾಲಕರು, ವೈದ್ಯರು, ಪೊಲೀಸರು, ಪತ್ರಕರ್ತರು ಮುಂತಾದ ಎಲ್ಲಾ ರೀತಿಯವರು ನಿಜವಾದ ಸೇವಕರು ಹಣಕ್ಕಾಗಿ ಮಾಡಿದರೂ ಸಹ ಸೇವೆ ಮಾಡುವ ಮುಖಾಂತರ ಹಣ ಪಡೆಯುತ್ತಾರೆ. ಆದರೆ ಒಮ್ಮೆ ಜನರಿಂದ ಆಯ್ಕೆಯಾಗಿ ಅಧಿಕಾರ ಹಿಡಿದ ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿ ಅತ್ಯಂತ ಭದ್ರತೆಯ, ಎಲ್ಲಾ ಲಕ್ಸುರಿ ಸೌಕರ್ಯಗಳೊಂದಿಗೆ ಮನೆ, ಕಛೇರಿ ಎಲ್ಲಾ ಕಡೆ ಕೆಲಸ ನಿರ್ವಹಿಸುತ್ತಾರೆ. ಅವರಿಗೆ ಇರುವ ಆಳುಕಾಳುಗಳು, ಅವರ ಓಡಾಟಕ್ಕೆ ಇರುವ ವಾಹನಗಳು, ಅವರಿಗೆ ಸಹಾಯಕರಾಗಿ ಇರುವ ವಿವಿಧ ರೀತಿಯ ಸಿಬ್ಬಂದಿಗಳು, ಅವರು ವಾಸಿಸುವ ಬಂಗಲೆ, ಅವರಿಗೆ ಇರುವ ಹಣಕಾಸಿನ ಸೌಕರ್ಯ, ರಕ್ಷಣಾ ವ್ಯವಸ್ಥೆ ಎಲ್ಲವನ್ನು ಗಮನಿಸಿದರೆ ಅವರು ಸೇವಕರು ಎಂದು ಯಾವ ಬಾಯಿಂದಲೂ ಹೇಳಲು ಸಾಧ್ಯವಿಲ್ಲ ಅವರು ರಾಜರೇ. ಹೆಸರು ಮಾತ್ರ ಸೇವಕರು. ಅವರು ಸೇವಕರಲ್ಲ ಸೇವಕರಾಗಲೂಬಾರದು. ಅವರು ಅಲ್ಲಿರುವುದು ಸೇವೆ ಮಾಡಲು ಅಲ್ಲ ತಮ್ಮ ಕರ್ತವ್ಯ ನಿಭಾಯಿಸಲು. ಅಷ್ಟು ಮಾಡಿದರೆ ಸಾಕು.

ಬಿಡದಿ ಟೌನ್ ಶಿಪ್ ಯೋಜನೆ, ಸುರಂಗ ಮಾರ್ಗ ಯೋಜನೆ, ಐದು ಲಾಲ್ಬಾಗ್ಗಳ ನಿರ್ಮಾಣ, ಆರು ನವನಗರಗಳ ನಿರ್ಮಾಣ ಯೋಜನೆ, ಕೆಲವು ಸಾಫ್ಟ್ವೇರ್ ಮೂಲಕ ಜನ ಸೇವೆಗಾಗಿ ರೂಪಿಸಿರುವ ಯೋಜನೆ ಎಲ್ಲವೂ ನರೇಂದ್ರ ಮೋದಿಯವರ ಚಿಂತನೆಯ ಮುಂದುವರಿದ ಭಾಗದಂತೆ ಕಾಣುತ್ತದೆ. ಕರ್ನಾಟಕದ ವಿರೋಧ ಪಕ್ಷಗಳಿಗೆ ಸ್ವಲ್ಪ ಇರಿಸು ಮುರಿಸು ಆಗಿರುವುದಂತೂ ನಿಜ.
ಅಲ್ಲಿ ನರೇಂದ್ರ ಮೋದಿಯವರು ಲೇಹ್ ಲಡಾಕ್ ನಿಂದ ಹಿಡಿದು ಅತ್ಯಂತ ಸುಂದರ ಪ್ರಾಕೃತಿಕ ಸೌಂದರ್ಯಗಳಿಗೆ ಬುಲ್ಡೋಜರ್ ಹಾಕಿ ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ನಾಶ ಮಾಡುತ್ತಿರುವಾಗ, ಅದನ್ನು ಅಭಿವೃದ್ಧಿ ಎನ್ನುವವರು, ಇಲ್ಲಿ ಡಿಕೆ ಶಿವಕುಮಾರ್ ಅವರ ಅದೇ ಯೋಜನೆಗಳಿಗೆ ಪರಿಸರ ಪರವಾಗಿ ಹೋರಾಡಬೇಕಾಗಿದೆ.

ಈ ದೇಶದ ದುರಂತವೇ ಅದು. ವಿರೋಧ ಪಕ್ಷಗಳಿದ್ದಾಗ ಒಂದು ತಂತ್ರ, ಅಧಿಕಾರಕ್ಕೆರಿದಾಗ ಇನ್ನೊಂದು ತಂತ್ರ. ನಾಳೆ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಹುಶಃ ಇದೇ ತಂತ್ರಗಾರಿಕೆಯನ್ನೇ ಮುಂದುವರಿಸಬಹುದು.
ಆದರೆ ಜನಸಾಮಾನ್ಯರಾದ ನಾವು ಮಾತ್ರ ಸರ್ಕಾರ ಕೇಂದ್ರವೇ ಆಗಿರಲಿ, ರಾಜ್ಯವೇ ಆಗಿರಲಿ, ಬಿಜೆಪಿಯಾದೇ ಆಗಿರಲಿ, ಕಾಂಗ್ರೆಸ್ ನದೇ ಆಗಿರಲಿ ನಮ್ಮ ನಿಲುವು ಮಾತ್ರ ಪರಿಸರದ ಪರವಾಗಿ, ಮಾನವೀಯ ಮೌಲ್ಯಗಳ ಪರವಾಗಿ, ಜೊತೆಗೆ ಒಂದಷ್ಟು ನೈಜ, ಸುಸ್ಥಿರ ಅಭಿವೃದ್ಧಿಯ ಪರವಾಗಿ ಸದಾ ಇರಬೇಕು . ಈ ಪಕ್ಷಗಳ ಕಪಟ ನಾಟಕಗಳಿಂದ ದೂರವಿರೋಣ. ಹೇಗಿದ್ದರೂ ನಾವು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದವರಲ್ಲ. ನಾವು ಸೇರಿರುವುದು ಕರ್ನಾಟಕಕ್ಕೆ, ಭಾರತಕ್ಕೆ ಮಾತ್ರ…

ಹಾಗಾದರೆ ಮೋದಿ ಮತ್ತು ಡಿಕೆ ಶಿವಕುಮಾರ್ ಅವರ ಅಭಿವೃದ್ಧಿಯ ಚಿಂತನೆ ಸಂಪೂರ್ಣ ತಪ್ಪೇ ಅಥವಾ ಸರಿಯಾದ ದಿಕ್ಕಿನಲ್ಲಿದೆಯೇ ಎಂದು ಯೋಚಿಸಿದಾಗ ಉತ್ತರ ಅಷ್ಟು ಸುಲಭವಾಗಿಲ್ಲ. ಕೆಲವು ವಿಷಯದಲ್ಲಿ ಉತ್ತಮ ಎನಿಸುತ್ತದೆ, ಕೆಲವು ವಿಷಯಗಳಲ್ಲಿ ಕೆಟ್ಟದ್ದು ಎನಿಸುತ್ತದೆ, ಮತ್ತಷ್ಟು ವಿಷಯದಲ್ಲಿ ಅಪಾಯಕಾರಿಯೂ ಎನಿಸುತ್ತದೆ. ಆದರೆ ಈ ಯೋಜನೆಗಳ ಅನುಷ್ಠಾನ ಮಾತ್ರ ಸಂಪೂರ್ಣ ವಿಫಲವಾಗುವುದರಲ್ಲಿ ಅನುಮಾನವೇ ಇಲ್ಲ.

ಉದಾಹರಣೆಗೆ ಪ್ರಧಾನಮಂತ್ರಿಗಳು ಸುಮಾರು 80 ಕೋಟಿ ಜನರಿಗೆ ಅನುಕೂಲವಾಗಲಿ ಎಂದು ಆಯುಷ್ಮಾನ್ ಭಾರತ್ ಎಂಬ ಒಂದು ಅತ್ಯುತ್ತಮ ಯೋಜನೆಯನ್ನು ಘೋಷಿಸಿದರು. ಆದರೆ ನನ್ನ ಪ್ರಕಾರ ಈ ಯೋಜನೆ ಸಂಪೂರ್ಣ ವಿಫಲವಾಗಿ ಕೇವಲ ಯೋಜನೆಯಾಗಿ ಮಾತ್ರ ಉಳಿದಿದೆ. ಇದನ್ನು ನಾನು ನನ್ನ ಸುತ್ತಮುತ್ತಲ ಮತ್ತು ಸಂಪರ್ಕದ ಬಹಳಷ್ಟು ಜನರ ಅನುಭವಗಳ ಆಧಾರದ ಮೇಲೆ ಬರೆಯುತ್ತಿದ್ದೇನೆ. ಹಾಗೆಯೇ ಸ್ವಚ್ಛ ಭಾರತ್ ಮತ್ತು ಫಿಟ್ ಇಂಡಿಯಾ ಯೋಜನೆಗಳು ಸಹ ನಿರೀಕ್ಷಿತ ಮಟ್ಟದಲ್ಲಿ ಇಲ್ಲ. ಹಾಗೆ ಡಿಕೆ ಶಿವಕುಮಾರ್ ಅವರು ರೌಡಿ ನಿಗ್ರಹ ಮಾಡುತ್ತೇನೆ, ಒಂದು ರೂಪಾಯಿ ಲಂಚವನ್ನು ತೆಗೆದುಕೊಳ್ಳಲು ಬಿಡುವುದಿಲ್ಲ, ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಇದೀಗ ನೇಗಿಲ ಯೋಗಿ ಎನ್ನುವ ಹೊಸ ಯೋಜನೆ ಘೋಷಿಸುವುದು ಇವೆಲ್ಲವೂ ಕೇಳಲು ತುಂಬಾ ಚೆನ್ನಾಗಿರುತ್ತೆ. ಆದರೆ ಈ ಭ್ರಷ್ಟ, ಜಾತಿ ವ್ಯವಸ್ಥೆಯಲ್ಲಿ ಆ ಯೋಜನೆಗಳು ಅನುಷ್ಠಾನಗೊಳ್ಳುವುದು ತುಂಬಾ ಕಷ್ಟ. ಆ ಯೋಜನೆಗೆ ಬಿಡುಗಡೆಯಾದ ಹಣ ಮಾತ್ರ ಖರ್ಚಾಗುತ್ತದೆ. ಆದರೆ ಯೋಜನೆಯ ಲಾಭ ಮಾತ್ರ ಶೇಕಡ 20ರಷ್ಟು ಸಹ ಆಗಿರುವುದಿಲ್ಲ. ಯಾರೋ ಮಧ್ಯವರ್ತಿಗಳು ಸ್ವಲ್ಪ ಕೆಲಸ ಮಾಡಿ ಪೂರ್ತಿ ಹಣ ತಿನ್ನುತ್ತಾರೆ. ಇನ್ನೂ ಕೆಲವರು ಸುಳ್ಳು ಬಿಲ್ಲು ಕೊಟ್ಟು ಹಣ ಪಡೆಯುತ್ತಾರೆ. ಇದೆಲ್ಲವೂ ಈ ವ್ಯವಸ್ಥೆಯ ದುರಂತ.

ಇದಕ್ಕೆ ಇರುವ ಪರಿಹಾರ ಯೋಜನೆಗಳು ಘೋಷಿಸುವುದಲ್ಲ. ಅನುಷ್ಠಾನದಲ್ಲಿ ಇರುವ ಕನಿಷ್ಠ ಒಂದು ನೂರು ಸಮಸ್ಯೆಗಳನ್ನು, ಕಾರಣಗಳನ್ನು ಹುಡುಕಿ ಅದರ ನಿವಾರಣೆಗೆ ಮೋದಿ ಮತ್ತು ಶಿವಕುಮಾರ್ ಅವರು ಪ್ರಯತ್ನಿಸಬೇಕಾಗುತ್ತದೆ. ತಂತ್ರಜ್ಞಾನದ ಮೂಲಕ ಅಧಿಕಾರಿಗಳ ಕೆಲಸದ ಸಮಯವನ್ನು ನಿಯಂತ್ರಿಸಬಹುದು. ಹಣಕಾಸು ವಹಿವಾಟಿನ ಬಗ್ಗೆ ನಿಗಾ ವಹಿಸಬಹುದು. ದಾಖಲೆಗಳನ್ನು ಕ್ರಮಬದ್ಧಗೊಳಿಸಬಹುದು. ಪಾರದರ್ಶಕತೆ ಕಾಪಾಡಬಹುದು. ಆದರೆ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಆ ಯೋಜನೆಗಳು ಮೂಲ ಸ್ವರೂಪದಲ್ಲಿ ತಲುಪಬೇಕಾದರೆ ವ್ಯಕ್ತಿಗಳ, ಮುಖ್ಯವಾಗಿ ರಾಜಕಾರಣಿಗಳು ಮತ್ತು ಅಧಿಕಾರಿಗಳ ವ್ಯಕ್ತಿತ್ವದಲ್ಲಿ ಪರಿವರ್ತನೆಯಾಗಬೇಕು. ಮಾನವೀಯತೆ ಮೂಡಬೇಕು. ಸೇವಾ ಮನೋಭಾವ ಮತ್ತು ಇಚ್ಛಾಶಕ್ತಿ ಬೆಳೆಯಬೇಕು. ಅದಕ್ಕೆ ಸಾರ್ವಜನಿಕ ಸ್ಪಂದನೆಯು ಸಿಗಬೇಕು.

ಇಡೀ ವ್ಯವಸ್ಥೆ ಬದಲಾವಣೆಯ ದಿಕ್ಕಿನಲ್ಲಿ ಮುನ್ನಡೆದರೆ ಮಾತ್ರ ಯಾವುದೇ ಯೋಜನೆಯೂ ಯಶಸ್ವಿಯಾಗಲು ಸಾಧ್ಯ. ಇಲ್ಲದಿದ್ದರೆ ಮತ್ತದೇ ಸ್ಥಿತಿ. ನಿಜಕ್ಕೂ ಅನುಷ್ಠಾನಕ್ಕೆ ಬೇಕಾದ 100 ಕಾರಣಗಳಲ್ಲಿ ಇಡೀ ಸಮಾಜದ ನೈತಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ, ಕೆಟ್ಟ ಹಣದ ಪ್ರಭಾವವನ್ನು ತಗ್ಗಿಸುವ, ಬದುಕಿನಲ್ಲಿ ಹಣಕ್ಕಿಂತ ಗುಣಕ್ಕೆ ಮಹತ್ವ ನೀಡುವ ಜೀವನದಲ್ಲಿ ಆರೋಗ್ಯ, ಸರಳತೆ, ಸಹಜತೆ, ಆಡಂಬರ ಮತ್ತು ಪ್ರದರ್ಶನಕ್ಕಿಂತ ಬಹಳ ಮುಖ್ಯ ಎನ್ನುವ ಅಂಶಗಳನ್ನು ಭಾರತದ ಕೌಟುಂಬಿಕ ವ್ಯವಸ್ಥೆಗೆ ಮನವರಿಕೆ ಮಾಡಿಕೊಡಲು ಸಹ ಪ್ರಯತ್ನಿಸಬೇಕು. ಕೇವಲ ಅಧಿಕಾರಿಗಳಿಗೆ ಮಾತ್ರ ಹೇಳಿದರೆ ಸಾಕಾಗುವುದಿಲ್ಲ. ಅವರ ಕುಟುಂಬಗಳಿಗೂ ಕೌನ್ಸಿಲಿಂಗ್ ಆಗಬೇಕು. ದುಡ್ಡು ಒಂದು ಸಾಧನ ಮಾತ್ರ. ದುಡ್ಡೇ ನಮ್ಮ ಅರ್ಹತೆಯ ಮಾನದಂಡ ಅಲ್ಲ ಎಂಬುದನ್ನು ಪ್ರತಿ ಭಾರತೀಯ ವ್ಯಕ್ತಿ ಅರ್ಥ ಮಾಡಿಕೊಳ್ಳಬೇಕು. ಆಗ ಭಾರತ ವಿಶ್ವಗುರುವಾಗಲು ಸಾಧ್ಯ. ಶ್ರಮದ ಹಣಕ್ಕೆ ಮಹತ್ವ ಬರಬೇಕು. ಭ್ರಷ್ಟ ಹಣ ಹೇಸಿಗೆಗೆ ಸಮನಾಗಬೇಕು.

ಆ ದಿನಗಳು ಕೆಲವೇ ವರ್ಷಗಳಲ್ಲಿ ಮತ್ತೆ ಮರುಕಳಿಸಬಹುದು ಎಂಬ ಆಶಯದಲ್ಲಿ, ಮಾನ್ಯ ಡಿಕೆ ಶಿವಕುಮಾರ್ ಅವರೇ ನಿಮಗೆ ಒಳ್ಳೆಯದಾಗಲಿ. ಬದುಕು ಎಲ್ಲವನ್ನೂ ಕೊಟ್ಟಿದೆ. ಈಗ ನೀವು ಎಲ್ಲವನ್ನೂ ಸಮಾಜಕ್ಕಾಗಿ ಕೊಡುವ ಸಮಯ ಬಂದಿದೆ. ಚುನಾವಣೆ ಗೆಲ್ಲಬಹುದು, ಸೋಲಬಹುದು. ಆದರೆ ಒಳ್ಳೆಯದನ್ನೇ ಮಾಡಿ. ಮಕ್ಕಳು, ಮರಿ ಮಕ್ಕಳು, ಅವರ ಮಕ್ಕಳಿಗೂ ಸಾಕಾಗುವಷ್ಟು ಹಣ ಮಾಡಿ ಅವರನ್ನು ಸೋಮಾರಿಗಳನ್ನಾಗಿ ಮಾಡಬೇಡಿ. ನಿಮ್ಮ ದುಡಿಮೆ ಸಮಾಜಕ್ಕೆ ಮೀಸಲಿಡಿ. ಅವರು ಅವರೇ ದುಡಿದುಕೊಂಡು ತಿನ್ನಲಿ. ಆಗ ಅವರು ಕೂಡ ಆರೋಗ್ಯವಾಗಿ ಇರುತ್ತಾರೆ.
ಧನ್ಯವಾದಗಳು

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!