ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ

ಬೆಂಗಳೂರು ಗ್ರಾಮಾಂತರ: ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದಲ್ಲಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1.15 ಲಕ್ಷ ದಂಡ ವಿಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (FTSC-I) ಮಹತ್ವದ ತೀರ್ಪು ನೀಡಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಹೋಬಳಿಯ ಕೆಂಕರೆಯ ನಿವಾಸಿ ನರಸಿಂಹಮೂರ್ತಿ ಕೆ.ಜಿ. (30) ಶಿಕ್ಷೆಗೆ ಒಳಗಾದ ಅಪರಾಧಿ. ಈತನ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಹಿಳಾ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.135/2023ರಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸರಸ್ವತಿ ಕೆ.ಎನ್. ಅವರು ತೀರ್ಪು ಪ್ರಕಟಿಸಿ ಶಿಕ್ಷೆ ವಿಧಿಸಿದ್ದಾರೆ.

ಪೋಕ್ಸೋ ಕಾಯ್ದೆಯ ಸೆಕ್ಷನ್ 6ರಡಿ 20 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಹೆಚ್ಚುವರಿಯಾಗಿ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಅನುಭವಿಸಬೇಕು.
ಅದೇ ರೀತಿ ಐಪಿಸಿ ಸೆಕ್ಷನ್ 363ರಡಿ ಅಪಹರಣಕ್ಕೆ ಮೂರು ವರ್ಷಗಳ ಸಾಧಾರಣ ಜೈಲು ಶಿಕ್ಷೆ ಹಾಗೂ 10 ಸಾವಿರ ದಂಡ, ಸೆಕ್ಷನ್ 506ರಡಿ ಬೆದರಿಕೆ ಆರೋಪಕ್ಕೆ ಒಂದು ವರ್ಷ ಸಾಧಾರಣ ಜೈಲು ಶಿಕ್ಷೆ ಹಾಗೂ 5 ಸಾವಿರ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಕ್ರಮವಾಗಿ ಒಂದು ವರ್ಷ ಹಾಗೂ ಮೂರು ತಿಂಗಳ ಹೆಚ್ಚುವರಿ ಶಿಕ್ಷೆ ವಿಧಿಸಲಾಗಿದೆ.

ಎಲ್ಲ ಶಿಕ್ಷೆಗಳನ್ನೂ ಏಕಕಾಲದಲ್ಲಿ ಜಾರಿಗೊಳಿಸುವಂತೆ ನ್ಯಾಯಾಲಯ ಆದೇಶಿಸಿದೆ.

ಸಂತ್ರಸ್ತೆಗೆ 7.50 ಲಕ್ಷ ಪರಿಹಾರ
ಸಂತ್ರಸ್ತೆಗೆ ಪರಿಹಾರ ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ದಂಡದ ಮೊತ್ತದಲ್ಲಿ 75 ಸಾವಿರವನ್ನು ಸಂತ್ರಸ್ತೆಗೆ ನೀಡುವಂತೆ ಸೂಚಿಸಲಾಗಿದೆ.

ಪ್ರಕರಣದಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರಾಗಿ ಪುಷ್ಪಾ ಕೆ ಅವರು ವಾದ ಮಂಡಿಸಿದ್ದರು. ಮಹಿಳಾ ಪೊಲೀಸ್ ಠಾಣೆಯ ತನಿಖಾಧಿಕಾರಿಗಳಾದ ಶುಭ ಎನ್. (ಪಿಎಸ್‌ಐ), ಮಧುಸೂದನ್ ಆರ್. (ಪಿಐ) ಹಾಗೂ ವಿಜಯಲಕ್ಷ್ಮಿ ಎಸ್. (ಪಿಐ) ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ತನಿಖಾ ತಂಡದ ಸಮಗ್ರ ತನಿಖೆ ಹಾಗೂ ಅಭಿಯೋಗದ ಪರಿಣಾಮಕಾರಿ ವಾದದಿಂದ ಆರೋಪ ಸಾಬೀತಾಗಿದ್ದು, ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ.

Leave a Reply

Your email address will not be published. Required fields are marked *

error: Content is protected !!