ಬಸ್ ಏರಿದ್ರೆ ಗಮ್ಯಸ್ಥಾನ ಸೇರುತ್ತೇವೆ ಅನ್ನೋ ಗ್ಯಾರಂಟಿ ಇಲ್ಲ!: ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗದಲ್ಲಿ ಪದೇ ಪದೇ ಕೆಟ್ಟು ನಿಲ್ಲುವ ಸಾರಿಗೆ ಬಸ್‌ಗಳು

ದೊಡ್ಡಬಳ್ಳಾಪುರ: ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಪದೇ ಪದೇ ಮಾರ್ಗಮಧ್ಯೆಯೇ ಕೆಟ್ಟು ನಿಲ್ಲುತ್ತಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಅರ್ಧ ದಾರಿಯಲ್ಲೇ ಕೈಕೊಡುತ್ತಿರುವ ಪರಿಣಾಮ, ಟಿಕೆಟ್ ಪಡೆದು ಪ್ರಯಾಣ ಆರಂಭಿಸಿದ ಪ್ರಯಾಣಿಕರು ಗಮ್ಯಸ್ಥಾನ ತಲುಪಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಸ್ ಕೆಟ್ಟು ನಿಂತ ಬಳಿಕ ಮುಂದಿನ ಬಸ್‌ಗಾಗಿ ಗಂಟೆಗಟ್ಟಲೆ ಕಾಯಬೇಕಾಗುತ್ತಿದ್ದು, ಕೆಲವರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಇದರಿಂದ ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಬಸ್ ಮಾರ್ಗಮಧ್ಯೆ ಕೆಟ್ಟು ನಿಂತರೆ ಸಮಯಕ್ಕೆ ಸರಿಯಾಗಿ ಶಾಲಾ-ಕಾಲೇಜುಗಳಿಗೆ, ಕಚೇರಿಗಳಿಗೆ ತೆರಳಲು ಸಾಧ್ಯವಾಗುತ್ತಿಲ್ಲ. ಕೋರ್ಟ್, ಸರ್ಕಾರಿ ಕಚೇರಿ, ಆಸ್ಪತ್ರೆ ಸೇರಿದಂತೆ ವಿವಿಧ ಕೆಲಸಗಳಿಗೆ ನಿಗದಿತ ಸಮಯಕ್ಕೆ ತೆರಳಬೇಕಾದ ಸಾರ್ವಜನಿಕರೂ ಪರದಾಡುವಂತಾಗಿದೆ.

‘ಟಿಕೆಟ್ ಪಡೆದ ಸ್ಥಳದಿಂದ ಗಮ್ಯಸ್ಥಾನಕ್ಕೆ ತಲುಪಿಸುವ ಜವಾಬ್ದಾರಿ ಸಾರಿಗೆ ಇಲಾಖೆಯದ್ದು. ಆದರೆ ಬಸ್ ಅರ್ಧ ದಾರಿಯಲ್ಲೇ ಕೆಟ್ಟು ನಿಂತರೆ ಪ್ರಯಾಣಿಕರ ಪರಿಸ್ಥಿತಿ ಏನು?’ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಈ ಸಮಸ್ಯೆ ಹೊಸದಲ್ಲ. ಗುಂಡಮ್ಮಗೆರೆ–ಹೊಸಹಳ್ಳಿ ಮಾರ್ಗಕ್ಕೆ ಉತ್ತಮ ಸ್ಥಿತಿಯಲ್ಲಿರುವ ಬಸ್‌ಗಳನ್ನು ನಿಯೋಜಿಸುವಂತೆ ಸಾರಿಗೆ ಅಧಿಕಾರಿಗಳಿಗೆ ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಮುಂದುವರಿದಿದೆ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಹಳೆಯ ಹಾಗೂ ಪದೇ ಪದೇ ತಾಂತ್ರಿಕ ದೋಷಕ್ಕೆ ಒಳಗಾಗುವ ಬಸ್‌ಗಳ ಬದಲಿಗೆ ಸುಸ್ಥಿತಿಯಲ್ಲಿರುವ ಬಸ್‌ಗಳನ್ನು ಈ ಮಾರ್ಗಕ್ಕೆ ನಿಯೋಜಿಸಬೇಕು. ಬಸ್‌ಗಳ ನಿಯಮಿತ ನಿರ್ವಹಣೆ ಕೈಗೊಳ್ಳಬೇಕು. ಮಾರ್ಗಮಧ್ಯೆ ಬಸ್ ಕೆಟ್ಟು ನಿಂತ ಸಂದರ್ಭದಲ್ಲಿ ಪ್ರಯಾಣಿಕರಿಗೆ ಪರ್ಯಾಯ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಗುಂಡಮ್ಮಗೆರೆ–ಹೊಸಹಳ್ಳಿ ರಸ್ತೆಯನ್ನು ಅವಲಂಬಿಸಿರುವ ಗ್ರಾಮಗಳ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಉದ್ಯೋಗಿಗಳು ಹಾಗೂ ಸಾರ್ವಜನಿಕರ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಕೂಡಲೇ ಕ್ರಮ ಕೈಗೊಂಡು ನಂಬಿಕೆಯಿಂದ ಪ್ರಯಾಣಿಸಬಹುದಾದ ಉತ್ತಮ ಬಸ್ ಸೇವೆ ಒದಗಿಸಬೇಕು ಎಂದು ಯುವಕ ರವಿಕುಮಾರ್ ಅವರ ಆಗ್ರಹವಾಗಿದೆ.

Leave a Reply

Your email address will not be published. Required fields are marked *

error: Content is protected !!