ಹೆದ್ದಾರಿ ಸರ್ವೀಸ್ ರಸ್ತೆಗಳಲ್ಲಿ ಭಾರೀ ವಾಹನಗಳ ಅನಧಿಕೃತ ನಿಲುಗಡೆ: ಸಾರ್ವಜನಿಕರ ಜೀವದೊಂದಿಗೆ ಚೆಲ್ಲಾಟ

 

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂಲಕ ಹಾದುಹೋಗುವ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳ ಸರ್ವೀಸ್ ರಸ್ತೆಗಳು ದಿನದಿಂದ ದಿನಕ್ಕೆ ಭಾರಿ ಸರಕು ಸಾಗಣೆ ವಾಹನಗಳ ಅನಧಿಕೃತ ಪಾರ್ಕಿಂಗ್ ತಾಣಗಳಾಗಿ ಮಾರ್ಪಡುತ್ತಿದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗುವುದರ ಜತೆಗೆ ಅಪಘಾತಗಳಿಗೂ ಆಹ್ವಾನ ನೀಡುತ್ತಿವೆ.

ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಸೇರಿದಂತೆ ಪ್ರಮುಖ ಹೆದ್ದಾರಿಗಳಲ್ಲಿ ಲಾರಿ, ಕಂಟೇನರ್, ಟ್ಯಾಂಕರ್‌ಗಳು ಸಾಲುಗಟ್ಟಿ ನಿಲ್ಲುತ್ತಿರುವುದರಿಂದ ಸ್ಥಳೀಯರು, ಶಾಲಾ–ಕಾಲೇಜು ವಿದ್ಯಾರ್ಥಿಗಳು, ದ್ವಿಚಕ್ರ ವಾಹನ ಸವಾರರು ಹಾಗೂ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ತೆರಳುವ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.

ಸಂಚಾರ ಸುಗಮಗೊಳಿಸುವುದು ಹಾಗೂ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮಗಳ ಜನರು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು ಸುರಕ್ಷಿತವಾಗಿ ಸಂಚರಿಸಲು ನಿರ್ಮಿಸಲಾಗಿರುವ ಸರ್ವೀಸ್ ರಸ್ತೆಗಳು ಇದೀಗ ಭಾರಿ ವಾಹನಗಳ ನಿಲುಗಡೆ ತಾಣಗಳಾಗಿವೆ. ಕೆಲವೆಡೆ ಲಾರಿಗಳನ್ನು ರಾತ್ರಿ ಮಾತ್ರವಲ್ಲದೆ ಎರಡು–ಮೂರು ದಿನಗಳವರೆಗೆ ನಿಲ್ಲಿಸಿ ಚಾಲಕರು ತೆರಳುತ್ತಿರುವುದು ಕಂಡುಬರುತ್ತಿದೆ. ಇದರಿಂದ ಸರ್ವೀಸ್ ರಸ್ತೆಗಳ ಮೂಲ ಉದ್ದೇಶವೇ ಹಾಳಾಗುತ್ತಿದೆ.

ತಿರುವು, ಜಂಕ್ಷನ್‌ಗಳಲ್ಲೂ ಲಾರಿ ನಿಲುಗಡೆ

ಸರ್ವೀಸ್ ರಸ್ತೆಯ ಬದಿಗಳಲ್ಲಿ ಸಾಲಾಗಿ ಭಾರಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ಲಭ್ಯವಿರುವ ರಸ್ತೆ ಮತ್ತಷ್ಟು ಕಿರಿದಾಗುತ್ತಿದೆ. ಎದುರು–ಬದುರು ವಾಹನಗಳು ಸಂಚರಿಸಲು ತೊಂದರೆಯಾಗುತ್ತಿದ್ದು, ತಿರುವು ಹಾಗೂ ಜಂಕ್ಷನ್‌ಗಳ ಬಳಿ ನಿಲ್ಲಿಸುವ ಲಾರಿಗಳಿಂದ ಎದುರಿನಿಂದ ಬರುವ ವಾಹನಗಳು ಗೋಚರಿಸದೆ ಅಪಘಾತದ ಅಪಾಯ ಹೆಚ್ಚುತ್ತಿದೆ.ರಾತ್ರಿ ವೇಳೆ ನಿಲ್ಲಿಸಿರುವ ವಾಹನಗಳ ಪ್ರತಿಫಲಕ ದೀಪಗಳು ಕಾರ್ಯನಿರ್ವಹಿಸದಿರುವುದು, ಹಲವು ಕಡೆ ರಸ್ತೆ ದೀಪಗಳ ಕೊರತೆ ಹಾಗೂ ಮಳೆ ಸಂದರ್ಭದಲ್ಲಿ ಕಡಿಮೆಯಾಗುವ ದೃಶ್ಯ ಗೋಚರತೆಯಿಂದ ಪರಿಸ್ಥಿತಿ ಮತ್ತಷ್ಟು ಅಪಾಯಕಾರಿಯಾಗುತ್ತಿದೆ. ನಿಲ್ಲಿಸಿರುವ ಲಾರಿಗಳನ್ನು ತಪ್ಪಿಸಲು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ಅನಿವಾರ್ಯವಾಗಿ ಮುಖ್ಯ ರಸ್ತೆಗೆ ಇಳಿಯಬೇಕಾಗುತ್ತಿದ್ದು, ವೇಗವಾಗಿ ಸಂಚರಿಸುವ ವಾಹನಗಳಿಗೆ ಸಿಲುಕುವ ಭೀತಿ ಎದುರಾಗಿದೆ.

 

ವಿದ್ಯಾರ್ಥಿಗಳು, ಮಹಿಳೆಯರಿಗೆ ನಿತ್ಯ ಸಂಕಷ್ಟ

ಸರ್ವಿಸ್ ರಸ್ತೆಯಲ್ಲಿ ನಿಲ್ಲಿಸಿರುವ ಭಾರಿ ವಾಹನಗಳ ನಡುವೆ ನಡೆದುಹೋಗಬೇಕಾದ ಪರಿಸ್ಥಿತಿ ಶಾಲಾ–ಕಾಲೇಜು ವಿದ್ಯಾರ್ಥಿಗಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರಿಗೆ ಎದುರಾಗಿದೆ. ಲಾರಿಗಳ ನಡುವೆ ಮಕ್ಕಳು ರಸ್ತೆ ದಾಟುವಾಗ ಇತರ ವಾಹನಗಳು ಗೋಚರಿಸದೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಹೆಚ್ಚಿದೆ.

ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್, ಅಗ್ನಿಶಾಮಕ ಹಾಗೂ ಪೊಲೀಸ್ ವಾಹನಗಳಿಗೂ ಸರ್ವೀಸ್ ರಸ್ತೆಯಲ್ಲಿ ವೇಗವಾಗಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಕೆಲವು ಕಡೆ ವಾಹನಗಳ ಅನಧಿಕೃತ ನಿಲುಗಡೆಯಿಂದ ಸಂಚಾರವೇ ಸ್ಥಗಿತಗೊಂಡಿರುವ ಉದಾಹರಣೆಗಳೂ ಇವೆ.

ಪಾರ್ಕಿಂಗ್ ಜತೆಗೆ ಕಸದ ರಾಶಿ

ದಿನಗಟ್ಟಲೆ ವಾಹನ ನಿಲ್ಲಿಸುವ ಕೆಲ ಚಾಲಕರು ಸರ್ವೀಸ್ ರಸ್ತೆ ಬದಿಗಳಲ್ಲೇ ಪ್ಲಾಸ್ಟಿಕ್, ಆಹಾರದ ತ್ಯಾಜ್ಯ ಸೇರಿದಂತೆ ಕಸ ಎಸೆಯುತ್ತಿರುವುದರಿಂದ ರಸ್ತೆ ಬದಿಗಳು ಕಸದ ತಾಣಗಳಾಗಿ ಪರಿವರ್ತನೆಯಾಗುತ್ತಿವೆ. ಇದರಿಂದ ಪರಿಸರ ಮಾಲಿನ್ಯ ಹಾಗೂ ದುರ್ವಾಸನೆಯ ಸಮಸ್ಯೆಯೂ ಎದುರಾಗಿದೆ.ಟ್ರಕ್ ಪಾರ್ಕಿಂಗ್ ಸ್ಥಳಗಳ ಕೊರತೆ, ಹೆದ್ದಾರಿ ಬದಿಯ ಹೋಟೆಲ್‌ಗಳು ಹಾಗೂ ಗೋದಾಮುಗಳ ಬಳಿ ವಾಹನ ನಿಲ್ಲಿಸುವ ಪ್ರವೃತ್ತಿ, ನಿಯಮಿತ ತಪಾಸಣೆಯ ಕೊರತೆ ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮದ ಅಭಾವದಿಂದ ಸಮಸ್ಯೆ ಮುಂದುವರಿದಿದೆ. ದೀರ್ಘದೂರದ ಚಾಲಕರು ವಿಶ್ರಾಂತಿ ಪಡೆಯಲು ಸರ್ವೀಸ್ ರಸ್ತೆಗಳನ್ನೇ ಆಶ್ರಯಿಸುತ್ತಿರುವುದು ಮತ್ತೊಂದು ಪ್ರಮುಖ ಕಾರಣವಾಗಿದೆ.

ಟ್ರಕ್ ಲೇ–ಬೇ (ರಸ್ತೆ ಬದಿ ನಿಲುಗಡೆ ಪ್ರದೇಶ) ನಿರ್ಮಾಣಕ್ಕೆ ಆಗ್ರಹ

ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿಯಾಗುವ ರೀತಿಯಲ್ಲಿ ವಾಹನ ನಿಲ್ಲಿಸುವುದು ನಿಯಮಬಾಹಿರವಾಗಿದ್ದು, ಅಧಿಕೃತ ಟ್ರಕ್ ಲೇ–ಬೇ ಅಥವಾ ಪಾರ್ಕಿಂಗ್ ಪ್ರದೇಶಗಳನ್ನು ಬಳಸಬೇಕಿದೆ. ಸರ್ವೀಸ್ ರಸ್ತೆಗಳಲ್ಲಿನ ಅನಧಿಕೃತ ನಿಲುಗಡೆ ತೆರವುಗೊಳಿಸಿ ನಿರಂತರ ವಿಶೇಷ ಕಾರ್ಯಾಚರಣೆ ನಡೆಸಬೇಕು. ನಿಯಮ ಉಲ್ಲಂಘಿಸುವವರಿಗೆ ಭಾರಿ ದಂಡ ವಿಧಿಸುವ ಜತೆಗೆ ಪ್ರಮುಖ ಹೆದ್ದಾರಿಗಳ ಬಳಿ ಅಧಿಕೃತ ಟ್ರಕ್ ಪಾರ್ಕಿಂಗ್ ಕೇಂದ್ರಗಳನ್ನು ನಿರ್ಮಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೆದ್ದಾರಿಗಳ ಪ್ರಮುಖ ಸ್ಥಳಗಳಲ್ಲಿ ಸಿಸಿಟಿವಿ ಹಾಗೂ ನಿಗಾ ವ್ಯವಸ್ಥೆ ಬಲಪಡಿಸಿ, ಸ್ಥಳೀಯರಿಂದ ಬರುವ ದೂರುಗಳಿಗೆ ತ್ವರಿತವಾಗಿ ಸ್ಪಂದಿಸುವ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಲಾಗಿದೆ.

ಸರ್ವೀಸ್ ರಸ್ತೆಯಲ್ಲಿ ಅನಧಿಕೃತವಾಗಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಈಗಾಗಲೇ ದಂಡ ವಿಧಿಸಲಾಗುತ್ತಿದೆ. ಟೀ, ಕಾಫಿ, ಊಟ ಅಥವಾ ತಿಂಡಿಗಾಗಿ ಅಂತರರಾಜ್ಯಗಳಿಂದ ಬರುವ ಸರಕು ಸಾಗಣೆ ವಾಹನಗಳು ಸರ್ವೀಸ್ ರಸ್ತೆಯಲ್ಲಿ ನಿಲ್ಲುತ್ತಿರುವುದು ಕಂಡುಬಂದಿದ್ದು, ಅಂತಹ ವಾಹನಗಳ ವಿರುದ್ಧವೂ ಕಾನೂನು ಕ್ರಮ ಕೈಗೊಂಡು ದಂಡ ವಿಧಿಸಲಾಗುವುದು. ರಾಂಗ್ ರೂಟ್‌ನಲ್ಲಿ ಸಂಚರಿಸುವ ವಾಹನಗಳ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸಂಚಾರ ಸುರಕ್ಷತೆಗಾಗಿ ಇಲಾಖೆ ನಿರಂತರ ಕಾರ್ಯಾಚರಣೆ ನಡೆಸುತ್ತಿದೆ ಡಿವೈಎಸ್ಪಿ ಪಾಂಡುರಂಗ ಹೇಳಿದ್ದಾರೆ.

ಮಾರಸಂದ್ರ ಟೋಲ್‌ನಿಂದ ಕಂಟನಕುಂಟೆಯವರೆಗೆ ಹೆದ್ದಾರಿಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ದೀಪಗಳನ್ನು ಬೆಳಗಿಸದೆ ವಾಹನಗಳನ್ನು ನಿಲ್ಲಿಸುತ್ತಿರುವುದು ಅಪಘಾತಗಳಿಗೆ ಆಹ್ವಾನ ನೀಡುತ್ತಿದೆ. ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಗಲೀಕರಣ ಮಾಡಿರುವುದು ವಾಹನಗಳ ಪಾರ್ಕಿಂಗ್‌ಗಾಗಿ ಅಲ್ಲ; ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕಾಗಿ. ಇಂತಹ ನಿರ್ಲಕ್ಷ್ಯದಿಂದ ಅಪಘಾತ ಸಂಭವಿಸಿ ಸಾವು–ನೋವು ಉಂಟಾದರೆ ಹೊಣೆ ಯಾರು? ಎಂದು ಸ್ಥಳೀಯ ವಿ. ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ

Leave a Reply

Your email address will not be published. Required fields are marked *

error: Content is protected !!