
ದೊಡ್ಡಬಳ್ಳಾಪುರ: ಸಮರ್ಪಕ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಎದುರಿಸುತ್ತಿರುವ ದೊಡ್ಡಬಳ್ಳಾಪುರ ಕ್ಷೇತ್ರದ ರೈತರಿಗೆ ನೆರವಾಗುವ ಉದ್ದೇಶದಿಂದ, ಕ್ಷೇತ್ರದ ಪ್ರಮುಖ ಬೆಳೆಯಾದ ರಾಗಿ ಬೆಳೆಗಾರರ ಪರವಾಗಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರೀಮಿಯಂ ಮೊತ್ತವನ್ನು ತಮ್ಮ ಸ್ವಂತ ವೆಚ್ಚದಲ್ಲಿ ಭರಿಸುವುದಾಗಿ ಶಾಸಕ ಧೀರಜ್ ಮುನಿರಾಜ್ ಘೋಷಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಆಗಸ್ಟ್ 7ರಿಂದ 14ರವರೆಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ನೋಂದಣಿಗೆ ಅವಕಾಶವಿದ್ದು, ರಾಗಿ ಬೆಳೆಯುವ ರೈತರು ಅಗತ್ಯ ದಾಖಲೆಗಳೊಂದಿಗೆ ಶಾಸಕರ ನಿವಾಸಕ್ಕೆ ಆಗಮಿಸಿ ನೋಂದಣಿ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಒಂದು ಎಕರೆ ಜಮೀನಿಗೆ 400 ರೂ. ಪ್ರೀಮಿಯಂ ಪಾವತಿಸಬೇಕಿದ್ದು, ಈ ಮೊತ್ತವನ್ನು ತಮ್ಮ ವತಿಯಿಂದಲೇ ಭರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಬೆಳೆ ನಾಶವಾದಲ್ಲಿ ರೈತರಿಗೆ ಸುಮಾರು 19,950 ರೂ. ವಿಮಾ ಪರಿಹಾರ ದೊರೆಯಲಿದ್ದು, ಈ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ಅರ್ಹ ರೈತರೂ ಪಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ರೈತರು ತಮ್ಮ ಜಮೀನಿನ ಪಹಣಿ, ಫ್ರೂಟ್ ಐಡಿ, ಬಿಪಿಎಲ್ ಕಾರ್ಡ್ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳುವಂತೆ ಶಾಸಕ ಧೀರಜ್ ಮುನಿರಾಜ್ ಮನವಿ ಮಾಡಿದ್ದಾರೆ. ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರಾಗಿ ಬೆಳೆಗಾರರಿಗೆ ಈ ಯೋಜನೆ ಆರ್ಥಿಕ ಭದ್ರತೆಯನ್ನು ಒದಗಿಸಲಿದೆ ಎಂದು ಅವರು ತಿಳಿಸಿದ್ದಾರೆ.