
ದೇಗುಲದ ಪ್ರಸಾದದಿಂದ ಹೊಟ್ಟೆ ತುಂಬಿಸಿಕೊಳ್ಳುವುದು, ದೇವಸ್ಥಾನದ ಬೀದಿಯಲ್ಲಿ ಭಿಕ್ಷಾಟನೆ ಮಾಡುವುದು, ರಾತ್ರಿ ವೇಳೆ ಬಂಡೆಗಳ ಪೊಟರೆ ಹಾಗೂ ಪೊದೆಗಳ ನಡುವೆ ಮಲಗುವುದು. ತಿಂಗಳುಗಟ್ಟಲೆ ಸ್ನಾನ ಮಾಡದೆ, ಬಟ್ಟೆಯನ್ನೂ ಬದಲಿಸದೆ ಇಂತಹ ಸಂಕಷ್ಟದ ಬದುಕು ನಡೆಸುತ್ತಿದ್ದ ಮೂವರು ಪುಟ್ಟ ಮಕ್ಕಳನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ರಕ್ಷಿಸಿ, ಸುರಕ್ಷಿತ ಆಶ್ರಯಕ್ಕೆ ಕರೆದೊಯ್ದಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿಯ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಕಳೆದ ಮೂರು ತಿಂಗಳಿಂದ ನೆಲೆಸಿದ್ದ ಸುಮಾರು ಆರರಿಂದ ಏಳು ವರ್ಷದೊಳಗಿನ ಓರ್ವ ಬಾಲಕಿ ಹಾಗೂ ಇಬ್ಬರು ಬಾಲಕರನ್ನು ರಕ್ಷಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನಿತಾಲಕ್ಷ್ಮಿ ಅವರ ಮಾರ್ಗದರ್ಶನದಲ್ಲಿ ಮಕ್ಕಳ ಸಹಾಯವಾಣಿ ಸಂಯೋಜಕ ಶ್ರೀನಿವಾಸ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ಮಕ್ಕಳನ್ನು ದೇವನಹಳ್ಳಿಯ ಬಾಲಮಂದಿರಕ್ಕೆ ದಾಖಲಿಸಿದ್ದಾರೆ.
ಮುಜರಾಯಿ ಇಲಾಖೆ ಮಾಹಿತಿ ಆಧರಿಸಿ ಕಾರ್ಯಾಚರಣೆ
ದೇವಸ್ಥಾನದ ಆವರಣದಲ್ಲಿ ಮೂವರು ಮಕ್ಕಳು ಭಿಕ್ಷಾಟನೆ ಮಾಡುತ್ತಿದ್ದು, ಅಲ್ಲಿನ ಪ್ರಸಾದವನ್ನೇ ಊಟವಾಗಿ ಸೇವಿಸುತ್ತಿದ್ದಾರೆ ಎಂಬ ಮಾಹಿತಿ ಮುಜರಾಯಿ ಇಲಾಖೆ ಸಿಬ್ಬಂದಿಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಲಭಿಸಿತ್ತು. ಇದರ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಸಿಬ್ಬಂದಿ ಮಕ್ಕಳನ್ನು ರಕ್ಷಿಸಲು ಮುಂದಾಗಿದ್ದರು. ಮಕ್ಕಳ ರಕ್ಷಣಾ ತಂಡವನ್ನು ಕಂಡ ಕೂಡಲೇ ಮಕ್ಕಳು ಸ್ಥಳದಿಂದ ಓಡಿಹೋಗಿದ್ದಾರೆ. ಬಳಿಕ ಸ್ಥಳೀಯರ ನೆರವಿನೊಂದಿಗೆ ಸುಮಾರು ಮೂರರಿಂದ ನಾಲ್ಕು ಗಂಟೆಗಳ ಕಾಲ ಹುಡುಕಾಟ ನಡೆಸಿದ ಸಿಬ್ಬಂದಿ, ಕೊನೆಗೂ ಮೂವರನ್ನೂ ಪತ್ತೆಹಚ್ಚಿ ತಮ್ಮ ವಶಕ್ಕೆ ಪಡೆದಿದ್ದಾರೆ.
ಹಸಿದ ಮಕ್ಕಳ ಮುಖದಲ್ಲಿ ಮಂದಹಾಸ
ತಿಂಗಳುಗಟ್ಟಲೆ ಸ್ನಾನ ಮಾಡದೆ, ಬಟ್ಟೆ ಬದಲಿಸದೆ ಇದ್ದ ಕಾರಣ ಮಕ್ಕಳು ಅಸ್ವಚ್ಛ ಸ್ಥಿತಿಯಲ್ಲಿದ್ದರು. ರಾತ್ರಿ ವೇಳೆ ದೇವಸ್ಥಾನದ ಸಮೀಪದ ಬಂಡೆಗಳ ಕೆಳಗೆ, ಪೊದೆಗಳ ನಡುವೆ ಹಾಗೂ ವಾಹನಗಳ ಕೆಳಭಾಗದಲ್ಲಿ ಆಶ್ರಯ ಪಡೆದು ಕಾಲ ಕಳೆಯುತ್ತಿದ್ದರು. ಯಾರಾದರೂ ಬಟ್ಟೆ ನೀಡಿದರೆ ಅದನ್ನೇ ಧರಿಸುತ್ತಿದ್ದರು.
ಮಕ್ಕಳ ಸ್ಥಿತಿ ಕಂಡ ಸಿಬ್ಬಂದಿ ಮೊದಲು ಅವರಿಗೆ ಸ್ನಾನ ಮಾಡಲು ವ್ಯವಸ್ಥೆ ಮಾಡಿಸಿ, ಬಳಿಕ ಹೋಟೆಲ್ನಲ್ಲಿ ಊಟ ಕೊಡಿಸಿದ್ದಾರೆ. ನಂತರ ಮಕ್ಕಳ ಪ್ರಾಥಮಿಕ ಆರೋಗ್ಯ ತಪಾಸಣೆ ನಡೆಸಿ, ಸುರಕ್ಷಿತವಾಗಿ ಬಾಲಮಂದಿರಕ್ಕೆ ದಾಖಲಿಸಲಾಯಿತು.
ಪಾಲಕರ ಪತ್ತೆ; ಮಕ್ಕಳ ಕಲ್ಯಾಣ ಸಮಿತಿಗೆ ಹಾಜರಾಗಲು ಸೂಚನೆ
ಪ್ರಾಥಮಿಕ ಮಾಹಿತಿಯ ಪ್ರಕಾರ, ತಮಿಳುನಾಡು ಮೂಲದ ಕುಟುಂಬವೊಂದು ಘಾಟಿ ದೇವಸ್ಥಾನದ ಅರಣ್ಯದಂಚಿನಲ್ಲಿ ಸಣ್ಣ ಶೆಡ್ ನಿರ್ಮಿಸಿಕೊಂಡು ವಾಸಿಸುತ್ತಿದೆ. ಈ ಕುಟುಂಬಕ್ಕೆ ಸಂಬಂಧಿಸಿದವರೇ ಮೂವರು ಮಕ್ಕಳ ಪಾಲಕರು ಎನ್ನಲಾಗಿದೆ. ಪಾಲಕರು ಕಾಡಿನಲ್ಲಿ ಜೇನು ಸಂಗ್ರಹಿಸಿ ಮಾರಾಟ ಮಾಡುವ ವೃತ್ತಿ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಕನ್ನಡ ಮತ್ತು ತಮಿಳು ಮಿಶ್ರಿತ ಭಾಷೆ ಮಾತನಾಡುವ ಮಕ್ಕಳ ಪಾಲಕರಿಗೆ ಮಕ್ಕಳ ಕಲ್ಯಾಣ ಸಮಿತಿ ಎದುರು ಹಾಜರಾಗುವಂತೆ ಸೂಚಿಸಲಾಗಿದೆ.