
ದೊಡ್ಡಬಳ್ಳಾಪುರ: ರಾತ್ರಿ ವೇಳೆ ಗ್ಯಾಸ್ ಸ್ಟೌವ್ ಆನ್ ಸ್ಥಿತಿಯಲ್ಲಿಯೇ ಕೆಲಸಕ್ಕೆ ತೆರಳಿದ್ದ ಪರಿಣಾಮ ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಇಬ್ಬರು ಯುವಕರಿಗೆ ಸುಟ್ಟ ಗಾಯಗಳಾಗಿರುವ ಘಟನೆ ತಾಲೂಕಿನ ಎಳ್ಳುಪುರ ಗ್ರಾಮದಲ್ಲಿ ನಡೆದಿದೆ.
ಗಾಯಗೊಂಡವರು ಹೊರ ರಾಜ್ಯದ ಯುವಕರಾಗಿದ್ದು, ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಕಾರ್ಖಾನೆಯೊಂದರಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರು. ಎಳ್ಳುಪುರದಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದರು ಎನ್ನಲಾಗಿದೆ.
ಮಾಹಿತಿಯ ಪ್ರಕಾರ, ರಾತ್ರಿ ಕೆಲಸಕ್ಕೆ ತೆರಳುವ ಮುನ್ನ ಗ್ಯಾಸ್ ಸ್ಟೌವ್ ಆನ್ ಸ್ಥಿತಿಯಲ್ಲಿಯೇ ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ. ಬೆಳಗ್ಗೆ ಕೆಲಸ ಮುಗಿಸಿ ಮನೆಗೆ ಬಂದ ಯುವಕರು ಕಾಫಿ ತಯಾರಿಸಲು ಮುಂದಾದ ವೇಳೆ ಗ್ಯಾಸ್ ಸೋರಿಕೆಯಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ ಇಬ್ಬರು ಯುವಕರಿಗೆ ಸುಟ್ಟ ಗಾಯಗಳಾಗಿವೆ.
ಸ್ಥಳೀಯರು ತಕ್ಷಣವೇ ಗಾಯಾಳುಗಳನ್ನು ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಕುರಿತು ಸಂಬಂಧಪಟ್ಟ ಪೊಲೀಸರು ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.