
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ–ಜೆಡಿಎಸ್ ಮೈತ್ರಿ ಬೆಂಬಲಿತ ಅಭ್ಯರ್ಥಿಗಳು 12 ಸ್ಥಾನಗಳ ಪೈಕಿ 9 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು 3 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ.
ತೇರಿನಬೀದಿಯ ಸಮುದಾಯ ಭವನದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಮತದಾನ ನಡೆಯಿತು. ಆರಂಭದಿಂದಲೇ ಮತದಾರರು ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರು. ಮಹಿಳೆಯರು, ಹಿರಿಯ ನಾಗರಿಕರು ಹಾಗೂ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಚುನಾವಣೆ ಶಾಂತಿಯುತ ಹಾಗೂ ವ್ಯವಸ್ಥಿತವಾಗಿ ನಡೆಯಿತು.
ಮತದಾನ ಮುಕ್ತಾಯವಾದ ತಕ್ಷಣ ಚುನಾವಣಾಧಿಕಾರಿಗಳು ಮತ ಎಣಿಕೆ ಕಾರ್ಯ ಆರಂಭಿಸಿದರು. ಎಣಿಕೆ ಪೂರ್ಣಗೊಂಡ ಬಳಿಕ ಅಧಿಕೃತ ಫಲಿತಾಂಶ ಪ್ರಕಟಿಸಲಾಯಿತು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಬಿಜೆಪಿ–ಜೆಡಿಎಸ್ ಮೈತ್ರಿಯ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಪರಸ್ಪರ ಅಭಿನಂದನೆ ಸಲ್ಲಿಸುವ ಮೂಲಕ ವಿಜಯೋತ್ಸವ ಆಚರಿಸಿದರು.
ಬಿಜೆಪಿ ಮುಖಂಡ ಪ್ರತಾಪ್ ಮಾತನಾಡಿ, “ಎನ್‌ಡಿಎ ಮೈತ್ರಿಕೂಟದ ಸಂಘಟಿತ ಕಾರ್ಯವೈಖರಿ, ಕಾರ್ಯಕರ್ತರ ಪರಿಶ್ರಮ ಹಾಗೂ ರೈತರು ಮತ್ತು ಷೇರುದಾರರು ವ್ಯಕ್ತಪಡಿಸಿದ ವಿಶ್ವಾಸಕ್ಕೆ ಸಂದ ಜಯ ಇದಾಗಿದೆ. ಸಂಘದ ಅಭಿವೃದ್ಧಿ, ಪಾರದರ್ಶಕ ಆಡಳಿತ ಹಾಗೂ ರೈತರ ಹಿತಾಸಕ್ತಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನೂತನ ಆಡಳಿತ ಮಂಡಳಿ ಕಾರ್ಯನಿರ್ವಹಿಸಲಿದೆ,” ಎಂದು ಹೇಳಿದರು.
ಜೆಡಿಎಸ್ ಮುಖಂಡ ನಾಗರಾಜು ಮಾತನಾಡಿ, “ಸಹಕಾರ ಕ್ಷೇತ್ರದ ಅಭಿವೃದ್ಧಿ ಹಾಗೂ ರೈತರ ಕಲ್ಯಾಣಕ್ಕೆ ಮತದಾರರು ಬೆಂಬಲ ವ್ಯಕ್ತಪಡಿಸಿದ್ದಾರೆ. ಷೇರುದಾರರ ನಿರೀಕ್ಷೆಗೆ ತಕ್ಕಂತೆ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಲಾಗುವುದು,” ಎಂದರು.
ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಯಲು ಸಹಕರಿಸಿದ ಮತದಾರರು, ಚುನಾವಣಾ ಸಿಬ್ಬಂದಿ ಮತ್ತು ಪೊಲೀಸ್ ಇಲಾಖೆಗೆ ಸಂಘದ ವತಿಯಿಂದ ಕೃತಜ್ಞತೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಸದಸ್ಯ ಪುರೋಷೋತ್ತಮ್, ಬಿಜೆಪಿ ಹೋಬಳಿ ಅಧ್ಯಕ್ಷ ಕೃಷ್ಣಪ್ಪ, ಬಿಜೆಪಿ ಮುಖಂಡರಾದ ಧನುಂಜಯ ಮತ್ತು ವಾಸು, ಜೆಡಿಎಸ್ ಮುಖಂಡರಾದ ಕನಕದಾಸ, ಉದಯ ಆರಾಧ್ಯ, ಕೃಷ್ಣಚಾರಿ ಸೇರಿದಂತೆ ಮೈತ್ರಿಕೂಟದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದು, ನೂತನವಾಗಿ ಆಯ್ಕೆಯಾದ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘ (ಎಂ.ಪಿ.ಆರ್.ಎ.ಸಿ.ಎಸ್.)ದ 2026–2031ನೇ ಅವಧಿಯ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ನನ್ನ ತಂದೆಯವರಾದ ಶ್ರೀ ಅಶ್ವತ್ಥನಾರಾಯಣ ಗೌಡ ಅವರು ಅಭೂತಪೂರ್ವ ಜಯ ಸಾಧಿಸಿರುವುದು ನಮಗೆ ಅತ್ಯಂತ ಸಂತಸದ ಕ್ಷಣವಾಗಿದೆ.
ಈ ಗೆಲುವಿಗೆ ಆಶೀರ್ವದಿಸಿ, ಬೆಂಬಲ ನೀಡಿ, ಸಹಕರಿಸಿದ ನನ್ನ ನೆಚ್ಚಿನ ಶಾಸಕರಾದ ಧೀರಜ್ ಮುನಿರಾಜ್ ಅಣ್ಣ ಅವರಿಗೆ, ರೈತ ಬಾಂಧವರಿಗೆ, ಬಿಜೆಪಿ ಮತ್ತು ಜೆಡಿಎಸ್ ನಾಯಕರು ಹಾಗೂ ಮುಖಂಡರಿಗೆ, ಪಕ್ಷದ ಕಾರ್ಯಕರ್ತರಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆ ಮತ್ತು ನೇರ-ಪರೋಕ್ಷವಾಗಿ ಸಹಕರಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಹಾಗೂ ಅನಂತ ಧನ್ಯವಾದಗಳು.
ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಮತ್ತು ಬೆಂಬಲಕ್ಕೆ ಸದಾ ಚಿರಋಣಿಯಾಗಿರುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜ್ ಅವರ ಆಪ್ತ ಸಹಾಯಕ ಶಿವು ಹೇಳಿದರು…
ಆಯ್ಕೆಯಾದ ನಿರ್ದೇಶಕರು:
ಸಾಮಾನ್ಯ ಕ್ಷೇತ್ರದಿಂದ: ಅಶ್ವತ್ಥನಾರಾಯಣ್ ಎನ್., ರಾಜಕುಮಾರ್, ಅರವಿಂದ್ ಎನ್., ಸತ್ಯನಾರಾಯಣಸ್ವಾಮಿ ಹಾಗೂ ಸತೀಶ್ ಎಂ.
ಪರಿಶಿಷ್ಟ ಜಾತಿ (ಎಸ್‌ಸಿ) ಮೀಸಲು ಕ್ಷೇತ್ರದಿಂದ: ಗಂಗರಾಜು ಎನ್.ಸಿ.
ಪರಿಶಿಷ್ಟ ಪಂಗಡ (ಎಸ್‌ಟಿ) ಮೀಸಲು ಕ್ಷೇತ್ರದಿಂದ: ನಾರಾಯಣಪ್ಪ.
ಹಿಂದುಳಿದ ವರ್ಗ (ಪ್ರವರ್ಗ–ಅ) ಕ್ಷೇತ್ರದಿಂದ: ಟಿ.ಜಿ. ವಾಸುದೇವ.
ಹಿಂದುಳಿದ ವರ್ಗ (ಪ್ರವರ್ಗ–ಬ) ಕ್ಷೇತ್ರದಿಂದ: ಸುಬ್ರಮಣಿ.
ಮಹಿಳಾ ಮೀಸಲು ಕ್ಷೇತ್ರದಿಂದ: ವಿನೋದಮ್ಮ ಹಾಗೂ ಆನಂದಮ್ಮ.
ಸಾಲಗಾರರಲ್ಲದ ಕ್ಷೇತ್ರದಿಂದ: ಟಿ.ಆರ್. ವೆಂಕಟಲಕ್ಷ್ಮಿ.