
ದೊಡ್ಡಬಳ್ಳಾಪುರದ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯ ವಿವಿಧ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಕೋಟ್ಯಂತರ ರೂಪಾಯಿ ಅಕ್ರಮಗಳ ಕುರಿತು ಲೋಕಾಯುಕ್ತ ಪೊಲೀಸರು ಕಳೆದ ಒಂದು ವಾರದಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದರೂ, ಈವರೆಗೆ ಕ್ಷೇತ್ರದ ಶಾಸಕ ಧೀರಜ್ ಮುನಿರಾಜ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದರಿಂದಾಗಿ ಹಗರಣದಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಸ್ಥಳೀಯ ಮುಖಂಡ ಹಾಗೂ ಟಿಎಪಿಎಂಸಿಎಸ್ ನಿರ್ದೇಶಕ ಅಂಬರೀಶ್ ಆಗ್ರಹಿಸಿದರು.
ಗುರುವಾರ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಹಲವು ರಸ್ತೆ ಹಾಗೂ ಚರಂಡಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನಡೆದಿದ್ದರೂ, ಅನೇಕ ಕಾಮಗಾರಿಗಳು ನೆಲಮಟ್ಟದಲ್ಲಿ ನಡೆದಿಲ್ಲ. ಆದರೆ ನಕಲಿ ಬಿಲ್ಗಳನ್ನು ಸೃಷ್ಟಿಸಿ ಗುತ್ತಿಗೆದಾರರಿಗೆ ಕೋಟ್ಯಂತರ ರೂಪಾಯಿ ಪಾವತಿಸಲಾಗಿದೆ ಎಂದು ಆರೋಪಿಸಿದರು.
ಮೂರು ವರ್ಷಗಳಿಂದ ಪಟ್ಟಣ ಪಂಚಾಯಿತಿಗೆ ಚುನಾಯಿತ ಆಡಳಿತ ಮಂಡಳಿ ಇಲ್ಲದೆ ತಹಶೀಲ್ದಾರ್ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಅವಧಿಯಲ್ಲಿ ಅಧಿಕಾರಿಗಳೇ ಸಂಪೂರ್ಣ ಆಡಳಿತ ನಡೆಸಿದ್ದು, ಶಾಸಕರ ಸೂಚನೆಯಂತೆ ಆಡಳಿತ ನಡೆದಿರುವ ಕಾರಣ ಹಗರಣದಲ್ಲಿ ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಮಾಹಿತಿ ಹಕ್ಕು ಕಾಯ್ದೆಯಡಿ ಸಂಗ್ರಹಿಸಿದ ದಾಖಲೆಗಳನ್ನು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಲಾಗಿದೆ. ದಾಖಲೆಗಳಲ್ಲಿ ಕಾಮಗಾರಿಗಳು ನಡೆದಿರುವಂತೆ ಬಿಲ್ ಮಾಡಲಾಗಿದ್ದರೂ, ವಾಸ್ತವದಲ್ಲಿ ಅನೇಕ ಕಾಮಗಾರಿಗಳು ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಹೇಳಿದರು.
ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಹಣ ಸಿಗುತ್ತಿಲ್ಲ ಎಂದು ಶಾಸಕರು ಹೇಳುತ್ತಿರುತ್ತಾರೆ. ಆದರೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ವಾರ್ಷಿಕ ₹5 ಕೋಟಿಗೂ ಅಧಿಕ ತೆರಿಗೆ ಸಂಗ್ರಹವಾಗುತ್ತಿದ್ದು, ಅದೇ ಹಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬಹುದಿತ್ತು. ಆದರೆ ಆ ಹಣ ದುರ್ಬಳಕೆಯಾಗಿದೆ ಎಂದು ಆರೋಪಿಸಿದರು.
ಮೂರು ವರ್ಷಗಳಿಂದ ಮುಖ್ಯಾಧಿಕಾರಿಯಾಗಿದ್ದ ನರಸಿಂಹಮೂರ್ತಿ ಹಗರಣದ ವಿಚಾರ ಬಹಿರಂಗವಾಗುತ್ತಿದ್ದಂತೆ ದಿಢೀರ್ ವರ್ಗಾವಣೆ ಮಾಡಿಸಿಕೊಂಡು ತೆರಳಿದ್ದಾರೆ. ಅವರ ಅವಧಿಯಲ್ಲಿ ನಡೆದ ಬಹುತೇಕ ಕಾಮಗಾರಿಗಳ ಬಿಲ್ಗಳು ನಕಲಿಯಾಗಿವೆ ಎಂದು ಆರೋಪಿಸಿ, ಅವರ ವಿರುದ್ಧ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತರಿಗೆ ದೂರು ನೀಡಲಾಗಿದೆ ಎಂದರು.
ಲೋಕಾಯುಕ್ತ ಅಧಿಕಾರಿಗಳು ಕಳೆದ ಹತ್ತು ದಿನಗಳಿಂದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದು, ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ನಕಲಿ ಬಿಲ್ಗಳ ಪ್ರಮಾಣ ಕಂಡು ಅಧಿಕಾರಿಗಳೇ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ಮುಖಂಡರಾದ ನಾರಾಯಣಸ್ವಾಮಿ, ರವಿಕುಮಾರ್, ವಿಶ್ವನಾಥ್, ಸೋನು, ಸಿದ್ದರಾಜ್, ಮಹೇಶ್, ಪವನ್ ಕುಮಾರ್, ನಾಗೇಶ್ ಹಾಗೂ ಮಿಥುನ್ ಉಪಸ್ಥಿತರಿದ್ದರು.