
ಬೆಂಗಳೂರು: ರಾಜ್ಯದ ಸಾರ್ವಜನಿಕರಿಗೆ ಅಗತ್ಯ ಪ್ರಮಾಣಪತ್ರಗಳು ಮತ್ತು ಕಂದಾಯ ಇಲಾಖೆಯ ವಿವಿಧ ಸೇವೆಗಳನ್ನು ಒದಗಿಸುವ ನಾಡಕಚೇರಿ ಸೇವೆ ಕಳೆದ ಕೆಲವು ದಿನಗಳಿಂದ ಪದೇ ಪದೇ ಸರ್ವರ್ ಸಮಸ್ಯೆಯಿಂದ ಸ್ಥಗಿತಗೊಳ್ಳುತ್ತಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.
ಆದಾಯ, ಜಾತಿ, ನಿವಾಸ, ವಂಶವೃಕ್ಷ, ಪ್ರವೇಶಾತಿ, ವಿದ್ಯಾರ್ಥಿವೇತನ, ಉದ್ಯೋಗ ಅರ್ಜಿ, ಬ್ಯಾಂಕ್ ಸಾಲ, ಪಿಂಚಣಿ, ಬೆಳೆ ಪರಿಹಾರ ಸೇರಿದಂತೆ ಹಲವು ಪ್ರಮಾಣಪತ್ರಗಳಿಗಾಗಿ ನಾಡಕಚೇರಿಗೆ ಆಗಮಿಸುವ ನಾಗರಿಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ವಿವಿಧ ಜಿಲ್ಲೆಗಳ ನಾಡಕಚೇರಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಸರತಿ ಸಾಲಿನಲ್ಲಿ ನಿಂತರೂ, “ಸರ್ವರ್ ಡೌನ್” ಎಂಬ ಒಂದೇ ಉತ್ತರ ಸಿಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳು ಸಮಯ ಮತ್ತು ಹಣ ಎರಡನ್ನೂ ಕಳೆದುಕೊಳ್ಳುವಂತಾಗಿದೆ.
ಕೆಲಸ ಕಾರ್ಯ ಬಿಟ್ಟು ದೂರದ ಗ್ರಾಮಗಳಿಂದ ಬರುವವರು ಪ್ರಯಾಣ ವೆಚ್ಚ ಮಾಡಿ ಬಂದರೂ ಕೆಲಸ ಆಗದೆ ನಿರಾಸೆಯಿಂದ ಹಿಂದಿರುಗುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
ನಾಡಕಚೇರಿ ಸಿಬ್ಬಂದಿಯೂ ಸರ್ವರ್ ಸಮಸ್ಯೆಯಿಂದ ಅಸಹಾಯಕರಾಗಿದ್ದಾರೆ. ಸಾರ್ವಜನಿಕರ ಆಕ್ರೋಶವನ್ನು ಎದುರಿಸಬೇಕಾಗುತ್ತಿದ್ದು, ಸಮಸ್ಯೆ ತಮ್ಮ ಕೈಯಲ್ಲಿಲ್ಲ ಎಂದು ವಿವರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ತಾಂತ್ರಿಕ ದೋಷದಿಂದ ದಿನನಿತ್ಯದ ಆಡಳಿತ ಕಾರ್ಯಗಳಿಗೂ ಹಿನ್ನಡೆಯಾಗುತ್ತಿದೆ.

ಹೆಚ್ಚುತ್ತಿರುವ ಬಳಕೆದಾರರ ಸಂಖ್ಯೆಗೆ ತಕ್ಕಂತೆ ಸರ್ವರ್ ಸಾಮರ್ಥ್ಯ ಹೆಚ್ಚಿಸದಿರುವುದು, ತಾಂತ್ರಿಕ ನಿರ್ವಹಣೆಯಲ್ಲಿ ವಿಳಂಬ ಹಾಗೂ ಬ್ಯಾಕಪ್ ವ್ಯವಸ್ಥೆಯ ಕೊರತೆಯೇ ಈ ಸಮಸ್ಯೆಗೆ ಪ್ರಮುಖ ಕಾರಣಗಳಾಗಿವೆ ಎಂದು ತಾಂತ್ರಿಕ ತಜ್ಞರು ಹೇಳಲಾಗುತ್ತಿದೆ.
ಜನರ ಪ್ರಶ್ನೆಗಳು:
ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?
ಸಾರ್ವಜನಿಕರ ಸಮಯ ಮತ್ತು ಹಣದ ನಷ್ಟಕ್ಕೆ ಹೊಣೆ ಯಾರು?
ಡಿಜಿಟಲ್ ಸೇವೆಗಳ ವಿಶ್ವಾಸಾರ್ಹತೆ ಹೆಚ್ಚಿಸಲು ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ?
ನಾಡಕಚೇರಿ / ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಲಭ್ಯವಿರುವ ಪ್ರಮುಖ ಸೇವೆಗಳ ಪಟ್ಟಿ:
ಜಾತಿ ಪ್ರಮಾಣ ಪತ್ರ
ಆದಾಯ ಪ್ರಮಾಣ ಪತ್ರ
ನಿವಾಸ ಪ್ರಮಾಣ ಪತ್ರ
ಆದಾಯ ಮತ್ತು ಆಸ್ತಿ ಪ್ರಮಾಣ ಪತ್ರ
ಅಲ್ಪಸಂಖ್ಯಾತರ ಪ್ರಮಾಣ ಪತ್ರ
ಕೃಷಿಕ ಪ್ರಮಾಣ ಪತ್ರ
ಭೂ ಹಿಡುವಳಿ ಪ್ರಮಾಣ ಪತ್ರ
ಜೀವಂತಿಕೆ ಪ್ರಮಾಣ ಪತ್ರ
ನಿರುದ್ಯೋಗ ಪ್ರಮಾಣ ಪತ್ರ
ಏಕ ಪೋಷಕ ಪ್ರಮಾಣ ಪತ್ರ
ಕುಟುಂಬ ವೃಕ್ಷ
ವಿಧವೆ ಪ್ರಮಾಣ ಪತ್ರ
ವಯೋಮಿತಿ ಪ್ರಮಾಣ ಪತ್ರ
ಬಿಪಿಎಲ್/ಎಪಿಎಲ್ ಸಂಬಂಧಿತ ಪ್ರಮಾಣೀಕರಣ ಸೇವೆಗಳು
ಭೂ ದಾಖಲೆಗಳಿಗೆ ಸಂಬಂಧಿಸಿದ ಕೆಲವು ಸೇವೆಗಳು
ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯವಿರುವ ಪ್ರಮಾಣ ಪತ್ರಗಳ ವಿತರಣೆ
ಸಾಮಾಜಿಕ ಭದ್ರತಾ ಪಿಂಚಣಿ ಅರ್ಜಿ ಸ್ವೀಕಾರ
ಪಹಣಿ ಮತ್ತು ಮ್ಯೂಟೇಶನ್ಗೆ ಸಂಬಂಧಿಸಿದ ಕೆಲವು ಸೇವೆಗಳು
ಬೆಳೆ ಪ್ರಮಾಣ ಪತ್ರ
ಇತರೆ ಕಂದಾಯ ಇಲಾಖೆಯ ನಾಗರಿಕ ಸೇವೆಗಳು.

ಇದರ ಜೊತೆಗೆ, ಅಟಲ್ ಜೀ ಜನಸ್ನೇಹಿ ಕೇಂದ್ರಗಳಲ್ಲಿ ಹಲವು ಇಲಾಖೆಗಳ ಸುಮಾರು 90ಕ್ಕೂ ಹೆಚ್ಚು ನಾಗರಿಕ ಸೇವೆಗಳು ಲಭ್ಯವಿದ್ದು, ಸರ್ಕಾರದ ಹೊಸ ಆದೇಶಗಳ ಪ್ರಕಾರ ಸೇವೆಗಳ ಸಂಖ್ಯೆ ಕಾಲಕಾಲಕ್ಕೆ ಹೆಚ್ಚಾಗಬಹುದು.
ಸರ್ವರ್ ಸಾಮರ್ಥ್ಯವನ್ನು ತಕ್ಷಣವೇ ಹೆಚ್ಚಿಸಬೇಕು, ಅತ್ಯಾಧುನಿಕ ಡೇಟಾ ಸೆಂಟರ್ ಹಾಗೂ ಬ್ಯಾಕಪ್ ವ್ಯವಸ್ಥೆ ಕಲ್ಪಿಸಬೇಕು, ತಾಂತ್ರಿಕ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಸಮಸ್ಯೆ ಪರಿಹಾರವಾಗುವವರೆಗೆ ಪರ್ಯಾಯ ವ್ಯವಸ್ಥೆ ಜಾರಿಗೆ ತರಬೇಕು ಎಂದು ತೂಬಗೆರೆ ನಿವಾಸಿ ಮುನಿಯಪ್ಪ ಹೇಳಿದರು.
ಡಿಜಿಟಲ್ ಆಡಳಿತದ ಯುಗದಲ್ಲಿ ನಾಡಕಚೇರಿ ಸೇವೆಗಳು ಪದೇ ಪದೇ ಸ್ಥಗಿತಗೊಳ್ಳುವುದು ಸರ್ಕಾರದ ಸೇವಾ ವ್ಯವಸ್ಥೆಯ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಧಕ್ಕೆಯುಂಟು ಮಾಡುತ್ತಿದೆ. ಲಕ್ಷಾಂತರ ನಾಗರಿಕರಿಗೆ ಸಂಬಂಧಿಸಿದ ಈ ಗಂಭೀರ ಸಮಸ್ಯೆಯನ್ನು ರಾಜ್ಯ ಸರ್ಕಾರ ತುರ್ತು ಆದ್ಯತೆಯಾಗಿ ಪರಿಗಣಿಸಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ದೊಡ್ಡಬೆಳವಂಗಲ ನಿವಾಸಿ ಸತೀಶ್ ತಿಳಿಸಿದರು.
ನಾಡ ಕಚೇರಿಯಲ್ಲಿ ಕಳೆದ ಹಲವು ದಿನಗಳಿಂದ ಸರ್ವರ್ ಸಮಸ್ಯೆ ಮುಂದುವರಿದಿರುವುದರಿಂದ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ವಯೋವೃದ್ಧರು, ಮಹಿಳೆಯರು, ಮಕ್ಕಳೊಂದಿಗೆ ಬರುವ ಪೋಷಕರು ಗಂಟೆಗಟ್ಟಲೆ ಸಾಲಿನಲ್ಲಿ ನಿಂತರೂ ಕೆಲಸವಾಗುತ್ತಿಲ್ಲ. ಓಲ್ಡ್ ಪೆನ್ಷನ್, ಗೃಹಲಕ್ಷ್ಮಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ಸೇವೆಗಳು ವಿಳಂಬವಾಗುತ್ತಿವೆ. ರೈತರು ಬಿತ್ತನೆ ಕೆಲಸ ಬಿಟ್ಟು, ಕಾರ್ಮಿಕರು ದಿನಗೂಲಿ ಕೆಲಸ ಬಿಟ್ಟು, ಯುವಕರು ಉದ್ಯೋಗ ಅರ್ಜಿಗಳಿಗಾಗಿ ದಿನಗಟ್ಟಲೆ ಕಾದರೂ ಪ್ರಮಾಣ ಪತ್ರಗಳು ಸಿಗುತ್ತಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸರ್ವರ್ ಸಮಸ್ಯೆ ಪರಿಹರಿಸಿ ಸಾರ್ವಜನಿಕರ ಪರದಾಟಕ್ಕೆ ತೆರೆ ಎಳೆಯಬೇಕು ಎಂದು ದುರ್ಗೇನಹಳ್ಳಿ ನಿವಾಸಿ ಉಮಾದೇವಿ ಹೇಳಿದರು.

ಅಟಲ್ ಜೀ ಜನಸೇವಾ ಕೇಂದ್ರಗಳ ಮೂಲಕ ಸೇವಾಸಿಂಧು ಪೋರ್ಟಲ್ನಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರ, ವೃದ್ಧಾಪ್ಯ ವೇತನ, ವಂಶವೃಕ್ಷ ಸೇರಿದಂತೆ ವಿವಿಧ ಸೇವೆಗಳನ್ನು ನೀಡಲಾಗುತ್ತಿದೆ. ಜೂನ್–ಜುಲೈ ತಿಂಗಳಲ್ಲಿ ಶಾಲಾ-ಕಾಲೇಜುಗಳ ಆರಂಭ, ಸಿಇಟಿ ಹಾಗೂ ನೀಟ್ ಪರೀಕ್ಷೆಗಳ ಹಿನ್ನೆಲೆಯಲ್ಲಿ ಅರ್ಜಿದಾರರ ಸಂಖ್ಯೆ ಹೆಚ್ಚಾಗಿರುವುದರಿಂದ ಕಳೆದ 10–15 ದಿನಗಳಿಂದ ರಾಜ್ಯಾದ್ಯಂತ ಸರ್ವರ್ ಸಮಸ್ಯೆ ಉಂಟಾಗಿದೆ. ಆದರೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಮ್ಮ ಸಿಬ್ಬಂದಿ ಕಚೇರಿ ಅವಧಿಗೂ ಮೀರಿ ಕೆಲಸ ಮಾಡುತ್ತಿದ್ದಾರೆ. ಸರ್ವರ್ ಸಮಸ್ಯೆಯನ್ನು ರಾಜ್ಯ ಮಟ್ಟದ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಶೀಘ್ರದಲ್ಲೇ ಪರಿಹಾರವಾಗುವ ನಿರೀಕ್ಷೆಯಿದೆ. ಸಾರ್ವಜನಿಕರು ಕೇವಲ ನಾಡಕಚೇರಿಗಳಿಗೆ ಮಾತ್ರ ಸೀಮಿತವಾಗದೆ ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಇತರೆ ಆನ್ಲೈನ್ ಕೇಂದ್ರಗಳಲ್ಲಿಯೂ ಅರ್ಜಿ ಸಲ್ಲಿಸಬಹುದು. ಪಬ್ಲಿಕ್ ಲಾಗಿನ್ ಮೂಲಕ ತಮ್ಮ ಮೊಬೈಲ್ನಲ್ಲಿಯೇ ಅರ್ಜಿ ಸಲ್ಲಿಸಿ ಪ್ರಮಾಣಪತ್ರಗಳನ್ನು ಪಡೆಯುವ ವ್ಯವಸ್ಥೆಯೂ ಇದೆ. ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ತಹಶಿಲ್ದಾರ್ ಮಲ್ಲಪ್ಪ ಕೆ. ಯಾರಗೋಳ ತಿಳಿಸಿದರು.
ರಾಜ್ಯ ಸರ್ಕಾರದ ಮನೆ-ಮನೆಗೆ ತೆರಳಿ ಜಾತಿ ಹಾಗೂ ಶಾಶ್ವತ ನಿವಾಸ ಪ್ರಮಾಣ ಪತ್ರ ವಿತರಿಸುವ ಯೋಜನೆಗೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಾಲನೆ ನೀಡಿದ ಬಳಿಕ ಸರ್ವರ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಬೆಳಗಿನ ವೇಳೆಯಲ್ಲಿ ಕೆಲಕಾಲ ಮಾತ್ರ ಸರ್ವರ್ ಸುಗಮವಾಗಿ ಕಾರ್ಯನಿರ್ವಹಿಸುತ್ತದೆ. ನಂತರ ಮತ್ತೆ ಸರ್ವರ್ ಸಮಸ್ಯೆ ಎದುರಾಗುವುದರಿಂದ ಸಾರ್ವಜನಿಕರಿಗೆ ಸೇವೆ ನೀಡುವುದು ಕಷ್ಟವಾಗುತ್ತಿದೆ. ಕೆಲಸದ ಒತ್ತಡ ಹೆಚ್ಚಿರುವ ಕಾರಣ ನಾವು ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ನಾಡಕಚೇರಿ ಸಿಬ್ಬಂದಿ ಹೇಳಿದರು.