
ದೆಹಲಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರನ್ನು ಇಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶ್ರೀ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ. ಸೋಮಣ್ಣ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿಪಕ್ಷ ಉಪ ನಾಯಕರಾದ ಅರವಿಂದ ಬೆಲ್ಲದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಇತರ ಎನ್‌ಡಿಎ ಮುಖಂಡರೊಂದಿಗೆ ಭೇಟಿಯಾಗಿ, ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದ ಗಂಭೀರ ಅಕ್ರಮಗಳ ಕುರಿತು ವಿಡಿಯೋ ಮತ್ತು ಇತರ ಸಾಕ್ಷ್ಯಾಧಾರಗಳೊಂದಿಗೆ ಅಧಿಕೃತ ದೂರು ಸಲ್ಲಿಸಲಾಯಿತು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹೇಳಿದ್ದಾರೆ.
ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಬೇಕಿದ್ದ ಬೂತ್ ಮಟ್ಟದ ಅಧಿಕಾರಿಗಳು (BLOಗಳು) ಕೆಲವು ಧಾರ್ಮಿಕ ಸ್ಥಳಗಳಲ್ಲಿ ಮತದಾರರ ಎನ್ಯುಮರೇಷನ್ ಫಾರ್ಮ್‌ಗಳನ್ನು ವಿತರಿಸುತ್ತಿರುವ ದೃಶ್ಯಗಳು ಬೆಳಕಿಗೆ ಬಂದಿವೆ. ಈ ಕುರಿತು ಸಾರ್ವಜನಿಕರು ಪ್ರಶ್ನಿಸಿದಾಗ ಕೆಲ ಅಧಿಕಾರಿಗಳಿಂದ ಅಸಮಂಜಸ ವರ್ತನೆ ಹಾಗೂ ಬೆದರಿಕೆ ಆರೋಪಗಳೂ ಕೇಳಿಬಂದಿವೆ ಎಂದರು.

ಅದರ ಜೊತೆಗೆ, ಮರಣ ಹೊಂದಿರುವವರು, ವಲಸೆ ಹೋಗಿರುವವರು ಹಾಗೂ ಅಸ್ತಿತ್ವದಲ್ಲಿಲ್ಲದವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕದಂತೆ ಮೌಖಿಕ ಸೂಚನೆಗಳನ್ನು ನೀಡಲಾಗಿದೆ ಎಂಬ ಆರೋಪಗಳೂ ವ್ಯಕ್ತವಾಗಿವೆ. ಇಂತಹ ಬೆಳವಣಿಗೆಗಳು ಮತದಾರರ ಪಟ್ಟಿಯ ವಿಶ್ವಾಸಾರ್ಹತೆ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎಬ್ಬಿಸುತ್ತವೆ ಎಂದು ಹೇಳಿದರು.
ಈ ಹಿನ್ನೆಲೆಯಲ್ಲಿ, ಅಕ್ರಮದಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಅನುಮಾನಾಸ್ಪದವಾಗಿ ಭರ್ತಿ ಮಾಡಲಾದ ಎಲ್ಲ ಅರ್ಜಿಗಳನ್ನು ಸ್ವತಂತ್ರ ಸಂಸ್ಥೆಯಿಂದ ಸಮಗ್ರವಾಗಿ ಮರುಪರಿಶೀಲಿಸಬೇಕು ಎಂದು ಭಾರತೀಯ ಚುನಾವಣಾ ಆಯೋಗವನ್ನು ನಾವು ಒತ್ತಾಯಿಸಿದ್ದೇವೆ ಎಂದರು.

ಪ್ರಜಾಪ್ರಭುತ್ವದ ಅಡಿಪಾಯವಾದ ಚುನಾವಣಾ ವ್ಯವಸ್ಥೆಯ ಪಾವಿತ್ರ್ಯವನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿ. ಕರ್ನಾಟಕದ ಪ್ರತಿಯೊಬ್ಬ ಮತದಾರನಿಗೂ ಪಾರದರ್ಶಕ, ನಿಖರ ಹಾಗೂ ವಂಚನೆರಹಿತ ಮತದಾರರ ಪಟ್ಟಿಯನ್ನು ಖಚಿತಪಡಿಸಬೇಕು ಎಂಬುದು ನಮ್ಮ ಸ್ಪಷ್ಟ ಆಗ್ರಹ ಎಂದು ತಿಳಿಸಿದ್ದಾರೆ.