
ದೊಡ್ಡಬಳ್ಳಾಪುರ: ಬ್ಯಾಟರಿಯಲ್ಲಿ ಸ್ಪಾರ್ಕ್ ಕಾಣಿಸಿಕೊಂಡ ಪರಿಣಾಮ ಟಾಟಾ ಸುಮೋ ವಾಹನಕ್ಕೆ ಬೆಂಕಿ ಹೊತ್ತಿಕೊಂಡು ಸಂಪೂರ್ಣವಾಗಿ ಸುಟ್ಟುಹೋದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗೊಲ್ಲಹಳ್ಳಿ ಸಮೀಪದ ಯಲಹಂಕ–ಹಿಂದೂಪುರ ಹೆದ್ದಾರಿಯಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಮಧುಗಿರಿಯಿಂದ ಬೆಂಗಳೂರಿನ ಸಹಕಾರನಗರದ ಕಡೆಗೆ ಟಾಟಾ ಸುಮೋದಲ್ಲಿ ಪ್ರಯಾಣಿಕರು ತೆರಳುತ್ತಿದ್ದ ವೇಳೆ, ವಾಹನದ ಬ್ಯಾಟರಿಯಲ್ಲಿ ಏಕಾಏಕಿ ಸ್ಪಾರ್ಕ್ ಕಾಣಿಸಿಕೊಂಡಿದೆ. ಪರಿಸ್ಥಿತಿಯನ್ನು ಗಮನಿಸಿದ ಚಾಲಕ ತಕ್ಷಣವೇ ವಾಹನವನ್ನು ರಸ್ತೆ ಬದಿಗೆ ನಿಲ್ಲಿಸಿ, ಎಲ್ಲ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿದ್ದಾನೆ.

ಸ್ವಲ್ಪವೇ ಸಮಯದಲ್ಲಿ ಬೆಂಕಿ ವಾಹನವನ್ನು ಆವರಿಸಿಕೊಂಡು ಧಗಧಗನೆ ಉರಿಯತೊಡಗಿದೆ. ಮಾಹಿತಿ ತಿಳಿದ ಕೂಡಲೇ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಆದರೆ ಅಷ್ಟರಲ್ಲಾಗಲೇ ವಾಹನ ಬಹುತೇಕ ಸುಟ್ಟುಹೋಗಿತ್ತು.
ಚಾಲಕನ ಸಮಯಪ್ರಜ್ಞೆಯಿಂದ ಎಲ್ಲ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಈ ಘಟನೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರಂಭಿಕ ಮಾಹಿತಿಯ ಪ್ರಕಾರ, ಬ್ಯಾಟರಿಯಲ್ಲಿ ಉಂಟಾದ ಸ್ಪಾರ್ಕ್‌ನಿಂದಲೇ ಬೆಂಕಿ ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ..