
ದೊಡ್ಡಬಳ್ಳಾಪುರ: ಬೆಲೆ ಏರಿಕೆ ಹಾಗೂ ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಸೋಮವಾರ ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ತಾಲೂಕು ಕಚೇರಿ ಸರ್ಕಲ್ ಬಳಿ ನಡೆದ ಪ್ರತಿಭಟನೆಗೆ ಕ್ಷೇತ್ರದ ಮಾಜಿ ಶಾಸಕ ವೆಂಕಟರಮಣಯ್ಯ ನೇತೃತ್ವ ವಹಿಸಿದ್ದರು. ಪ್ರತಿಭಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಗಳಿಂದ ದೇಶದಾದ್ಯಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಬೆಲೆ ಏರಿಕೆಯಿಂದ ಸಾಮಾನ್ಯ ಜನರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದು, ಕೇಂದ್ರ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ದೂರಿದರು.
ಪ್ರತಿಭಟನೆಯ ವೇಳೆ ಕೆಲಕಾಲ ರಸ್ತೆ ತಡೆ ನಡೆಸಿದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆಯಲ್ಲಿ ನೂರಾರು ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡು ಪರಿಸ್ಥಿತಿಯನ್ನು ನಿಯಂತ್ರಿಸಿದರು.