ನಗರಸಭೆ ವ್ಯಾಪ್ತಿಯ ವಾರ್ಡ್‌ಗಳಲ್ಲಿ ಸೌಕರ್ಯ ಕೊರತೆ: ಜನ ಹೈರಾಣ

ರೇಷ್ಮೆ ನಗರಿ, ಕೈಗಾರಿಕಾ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೊಡ್ಡಬಳ್ಳಾಪುರ ನಗರ ಇಂದು ಅಭಿವೃದ್ಧಿಯ ಅವಕಾಶಗಳ ಜೊತೆಗೆ ಮೂಲ ಸಮಸ್ಯೆಗಳ ಸವಾಲನ್ನೂ ಎದುರಿಸುತ್ತಿದೆ. ಬೆಂಗಳೂರಿನ ಸಮೀಪವಿರುವ ಕಾರಣ ವೇಗವಾಗಿ ವಿಸ್ತರಿಸುತ್ತಿರುವ ನಗರದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದರೂ, ಅದಕ್ಕೆ ಅನುಗುಣವಾಗಿ ಮೂಲಸೌಕರ್ಯ ಅಭಿವೃದ್ಧಿ ಆಗುತ್ತಿಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ.

ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ವಿಲೇವಾರಿ, ಬೀದಿ ದೀಪ, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ನಗರ ನಿವಾಸಿಗಳನ್ನು ಕಾಡುತ್ತಿವೆ. ನಗರಸಭೆಯ ಸಾಮಾನ್ಯ ಸಭೆಗಳಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದರೂ, ಅನೇಕ ನಿರ್ಣಯಗಳು ಕಡತಗಳಲ್ಲೇ ಉಳಿಯುತ್ತಿವೆ ಎಂಬ ಟೀಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.

ಶತಮಾನ ದಾಟಿದ ನಗರಾಡಳಿತ:

ದೊಡ್ಡಬಳ್ಳಾಪುರದಲ್ಲಿ ಸ್ಥಳೀಯ ಆಡಳಿತ ವ್ಯವಸ್ಥೆಗೆ ಶತಮಾನಕ್ಕೂ ಅಧಿಕ ಇತಿಹಾಸವಿದೆ. 1917ರ ಜುಲೈ 30ರಂದು 9 ಗಣ್ಯ ನಾಗರಿಕರು ಮುನಿಸಿಪಲ್ ಬೋರ್ಡ್ ರಚಿಸುವ ಮೂಲಕ ಪಟ್ಟಣದ ಆಡಳಿತಕ್ಕೆ ಅಡಿಪಾಯ ಹಾಕಿದರು. ಬಳಿಕ ಪುರಸಭೆಯಾಗಿ ಕಾರ್ಯನಿರ್ವಹಿಸಿದ್ದ ಸಂಸ್ಥೆ, ನಗರೀಕರಣ ಮತ್ತು ಜನಸಂಖ್ಯೆ ವೃದ್ಧಿಯ ಹಿನ್ನೆಲೆಯಲ್ಲಿ ನಗರಸಭೆಯಾಗಿ ಮೇಲ್ದರ್ಜೆಗೆ ಏರಿತು. ನಗರಸಭೆ ರಚನೆಯ ನಂತರ 2011ರ ಜನಗಣತಿ ಪ್ರಕಾರ ನಗರಸಭೆ ವ್ಯಾಪ್ತಿಯ ಜನಸಂಖ್ಯೆ 93,105. ಇದರಲ್ಲಿ 47,628 ಪುರುಷರು ಹಾಗೂ 45,477 ಮಹಿಳೆಯರು ಇದ್ದರು. ಪ್ರಸ್ತುತ ಕೈಗಾರಿಕೆಗಳು, ಹೊಸ ಬಡಾವಣೆಗಳು ಹಾಗೂ ಉದ್ಯೋಗಾವಕಾಶಗಳ ಹೆಚ್ಚಳದಿಂದ ಜನಸಂಖ್ಯೆ 1 ಲಕ್ಷದಿಂದ 1.10 ಲಕ್ಷದ ನಡುವೆ ತಲುಪಿರುವ ಅಂದಾಜುಗಳಿವೆ.

ಕುಡಿಯುವ ನೀರಿನ ಸಮಸ್ಯೆ ತೀವ್ರ: 

ನಗರಸಭೆ ವ್ಯಾಪ್ತಿಯಲ್ಲಿ ಸುಮಾರು 90 ಕೊಳವೆಬಾವಿಗಳಿದ್ದು, ಅವುಗಳಲ್ಲಿ 20 ಬೋರ್‌ವೆಲ್‌ಗಳಲ್ಲಿ ಬೇಸಿಗೆ ಸಂದರ್ಭದಲ್ಲಿ ನೀರಿನ ಮಟ್ಟ ಕುಸಿದಿದೆ. ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ಶೇ.32ರಷ್ಟು ನೀರಿನ ಹಂಚಿಕೆ ಮಾಡಲಾಗುತ್ತದೆ. ಇದು ಸಾಕಾಗುತ್ತಿಲ್ಲ. ಇದರಿಂದ ಹಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ.

ನೀರಿನ ಗುಣಮಟ್ಟದ ಪ್ರಮಾಣಪತ್ರ ಪ್ರದರ್ಶಿಸಿ:

ನಗರದಲ್ಲಿ 40 ಕುಡಿಯುವ ನೀರಿನ ಘಟಕ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇವುಗಳಲ್ಲಿ ನೀರಿನ ಗುಣಮಟ್ಟ ತಪಾಸಣೆ ಸಮಪರ್ಕವಾಗಿ ಮಾಡುತ್ತಿಲ್ಲ. ಲ್ಯಾಬ್‌ಗಳಲ್ಲಿ  ಗುಣಮಟ್ಟದ ತಪಾಸಣೆ ನಡೆಸಿದರೆ ಅದರ ಬಗ್ಗೆ ಪ್ರಮಾಣ ಪತ್ರವನ್ನು ಪ್ರದರ್ಶನ ಮಾಡುತ್ತಿಲ್ಲ. ಆರ್‌ಒ ಪ್ಲಾಂಟ್‌ಗಳನ್ನು ಗುತ್ತಿಗೆ ಪಡೆದವರು ಕೇವಲ ಅಲ್ಲಿನ ಹಣ ಪಡೆಯುತ್ತಿದ್ದಾರೆ. ಸ್ವಚ್ಚತೆಗೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಅಲ್ಲಿನ ಉಪಕರಣ ನಿರ್ವಹಣೆ ನಡೆಯುತ್ತಿಲ್ಲ. ಇದರಿಂದ ಜನರಿಗೆ ಸಮಸ್ಯೆಯಾಗುತ್ತಿದೆ. ಆದಷ್ಟು ಬೇಗ ನಗರದಲ್ಲಿನ ಎಲ್ಲಾ ಆರ್‌ಒ ಪ್ಲಾಂಟ್‌ಗಳ ನೀರಿನ ಗುಣಮಟ್ಟವನ್ನು ಕಾಲಕಾಲಕ್ಕೆ ಪರೀಕ್ಷೆ ನಡೆಸಿ ಅದರ ಪ್ರಮಾಣ ಪತ್ರವನ್ನು ಪ್ರದರ್ಶಿಸಬೇಕು ನಗರಸಭೆ ಸದಸ್ಯರು ಆಗ್ರಹಿಸಿದ್ದಾರೆ.

ಇನ್ನೂ ದಿನಬಳಕೆಯ ನೀರು ಕೂಡ ಸಮರ್ಪಕವಾಗಿ ಪೂರೈಕೆಯಾಗುತ್ತಿಲ್ಲ. ನೀರಿನ ಸಮಸ್ಯೆಯಾಗುತ್ತಿರುವ ಹಿನ್ನಲೆ ಟ್ಯಾಂಕರ್ ನೀರು ಮೊರೆ ಹೋಗಬೇಕಾಗಿದೆ. ಕೆಲವೆಡೆ ಕಲುಷಿತ ನೀರು ಸಮಸ್ಯೆ ಕೂಡ ಕಂಡುಬರುತ್ತಿವೆ.

ಕಸ ವಿಲೇವಾರಿ ವ್ಯವಸ್ಥೆ ಪ್ರಶ್ನಾರ್ಹ:

ನಗರದ ಕಸ ಸಂಗ್ರಹ ಮತ್ತು ವಿಲೇವಾರಿ ವ್ಯವಸ್ಥೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. ಕೆಲ ಪ್ರದೇಶಗಳಲ್ಲಿ ನಿಯಮಿತ ಕಸ ಸಂಗ್ರಹವಾಗದ ಕಾರಣ ಸಾರ್ವಜನಿಕ ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನಗರ ವಿಸ್ತರಣೆಗೆ ಅನುಗುಣವಾಗಿ ಕಸ ನಿರ್ವಹಣಾ ವ್ಯವಸ್ಥೆಯನ್ನು ಬಲಪಡಿಸುವ ಅಗತ್ಯವಿದೆ ಎಂದು ನಾಗರಿಕರು ಒತ್ತಾಯಿಸುತ್ತಿದ್ದಾರೆ.

ವೇಗವಾಗಿ ಬೆಳೆಯುತ್ತಿರುವ ದೊಡ್ಡಬಳ್ಳಾಪುರಕ್ಕೆ ಅಭಿವೃದ್ಧಿಯ ಅಪಾರ ಅವಕಾಶಗಳಿವೆ. ಆದರೆ ನಗರಸಭೆ ರಾಜಕೀಯ ಆರೋಪ-ಪ್ರತ್ಯಾರೋಪಗಳ ವೇದಿಕೆಯಾಗದೇ, ಜನಸಮಸ್ಯೆಗಳ ಪರಿಹಾರದ ಕೇಂದ್ರವಾಗಬೇಕು ಎಂಬುದು ನಾಗರಿಕರ ಆಶಯ. ಕಾಗದದ ಮೇಲಿನ ಯೋಜನೆಗಳಿಗಿಂತ ನೆಲಮಟ್ಟದ ಕಾಮಗಾರಿಗಳಿಗೆ ಆದ್ಯತೆ ನೀಡಿ, ಕುಡಿಯುವ ನೀರು, ರಸ್ತೆ, ಒಳಚರಂಡಿ, ಕಸ ವಿಲೇವಾರಿ ಮತ್ತು ಸಂಚಾರ ವ್ಯವಸ್ಥೆ ಸುಧಾರಣೆಗೆ ಪರಿಣಾಮಕಾರಿ ಕ್ರಮ ಕೈಗೊಂಡರೆ ಮಾತ್ರ ದೊಡ್ಡಬಳ್ಳಾಪುರ ನಿಜವಾದ ಅರ್ಥದಲ್ಲಿ ಮಾದರಿ ನಗರವಾಗಿ ರೂಪುಗೊಳ್ಳಲಿದೆ.

ಮೂಗು ಮುಚ್ಚಿಕೊಂಡು ಸಂಚಾರ

ನಗರದ ಪ್ರಮುಖ ರಸ್ತೆಗಳಲ್ಲಿ ಒಳಚರಂಡಿ ನೀರು ಹರಿಯುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಂಗಪ್ಪ ಸರ್ಕಲ್‌ನಿಂದ ಡಿ ಕ್ರಾಸ್‌ವರೆಗೆ, ತಾಲ್ಲೂಕು ಕಚೇರಿ ಸರ್ಕಲ್‌ನಿಂದ ಡಿ ಕ್ರಾಸ್ ರಸ್ತೆಯವರೆಗೆ ಹಾಗೂ ನಗರದ ಹಲವು ಒಳಭಾಗಗಳಲ್ಲಿ ಚರಂಡಿ ನೀರು ರಸ್ತೆಯಲ್ಲೇ ಹರಿಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಮಳೆಗಾಲದಲ್ಲಿ ನೀರು ನಿಲ್ಲುವ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ನಗರದಲ್ಲಿ ಜನರು ಸುಗಮವಾಗಿ ಓಡಾಡಬಹುದಾದ ಒಂದು ಉತ್ತಮ ರಸ್ತೆ ಕೂಡ ಇಲ್ಲ ಎಂಬ ಆರೋಪಗಳು ಕೇಳಿಬರುತ್ತಿವೆ. ರಸ್ತೆ ಕಾಮಗಾರಿಗಳ ವಿಳಂಬ ಹಾಗೂ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಪ್ರಶ್ನೆ ಎತ್ತುತ್ತಿದ್ದಾರೆ.

ಸಂಚಾರ ದಟ್ಟಣೆ, ಪಾರ್ಕಿಂಗ್ ಅವ್ಯವಸ್ಥೆ

ಡಿ ಕ್ರಾಸ್ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ರಸ್ತೆ ಎರಡೂ ಬದಿಗಳಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಪರಿಣಾಮವಾಗಿ ಅಪಘಾತಗಳ ಸಂಖ್ಯೆಯೂ ಹೆಚ್ಚುತ್ತಿದೆ ಎಂದು ಸ್ಥಳೀಯರು ಹೇಳುತ್ತಾರೆ. ಸಂಚಾರ ನಿರ್ವಹಣೆಗೆ ದೀರ್ಘಾವಧಿಯ ಯೋಜನೆ ರೂಪಿಸುವ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ತೆರಿಗೆ ಹೆಚ್ಚಳ, ಸೇವೆಗಳಲ್ಲಿ ಕೊರತೆ

ನಗರಸಭೆಯ ಪ್ರಮುಖ ಆದಾಯ ಮೂಲಗಳಲ್ಲಿ ಆಸ್ತಿ ತೆರಿಗೆ ಒಂದಾಗಿದೆ. ಆದರೆ ತೆರಿಗೆ ಪಾವತಿಸುವ ನಾಗರಿಕರಿಗೆ ತಕ್ಕಮಟ್ಟದ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲ ಎಂಬ ಅಸಮಾಧಾನ ಸಾರ್ವಜನಿಕರಲ್ಲಿ ಇದೆ. ತೆರಿಗೆ ಸಂಗ್ರಹ ಹೆಚ್ಚಾದಂತೆ ನಾಗರಿಕ ಸೇವೆಗಳ ಗುಣಮಟ್ಟವೂ ಸುಧಾರಿಸಬೇಕು ಎಂಬುದು ಜನರ ಆಗ್ರಹವಾಗಿದೆ.

ಜನರಿಗೆ ಮುಖ್ಯವಾಗಿ ಬೇಕಾಗಿರುವುದು ನೀರು, ವಿದ್ಯುತ್, ಒಳಚರಂಡಿ ಮತ್ತು ಉತ್ತಮ ರಸ್ತೆಗಳು. ಆದರೆ ನಗರದಲ್ಲಿ ಮೂಲ ಸಮಸ್ಯೆಗಳು ವರ್ಷಗಳಿಂದ ಮುಂದುವರಿದಿವೆ. ಅಧಿಕಾರಿಗಳಿಗೆ ಕೆಲಸದ ಒತ್ತಡವಿದೆ ಎಂದು ಹೇಳುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ. ಅಧಿಕಾರ ನಡೆಸುವವರು ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕ್ರಮ ಕೈಗೊಳ್ಳಬೇಕು. ಶಾಸಕರು ಎರಡು ತಿಂಗಳಿಗೊಮ್ಮೆ ವಿಶೇಷ ಸಭೆ ನಡೆಸಿ ನಗರದಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಿದರೆ ಸಾಕಷ್ಟು ಸುಧಾರಣೆ ಸಾಧ್ಯ ಎಂದು ನಗರಸಭೆಯ 24ನೇ ವಾರ್ಡ್ ಸದಸ್ಯ ಎಲೆಪೇಟೆ, ಡಿ.ಎಂ.ಆನಂದ್ ಹೇಳಿದ್ದಾರೆ.

ನಗರದಲ್ಲಿನ ಕುಡಿಯುವ ನೀರಿನ ಘಟಕಗಳ ಪರಿಶೀಲನೆಗೆ ವಿಶೇಷ ಅಭಿಯಾನ ಹಮ್ಮಿಕೊಂಡು ಅವುಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ನಗರದಲ್ಲಿ 90 ಬೋರ್‌ವೆಲ್ ಗಳು ಮಾತ್ರ ಇದ್ದು, 20-25ರಲ್ಲಿ ಬೇಸಿಗೆ ಅವಧಿಯಲ್ಲಿ ನೀರಿನ ಸಮಸ್ಯೆ ಆಯಿತು. ವಿದ್ಯುತ್ ಸಮಸ್ಯೆಯೂ ಆಗಾಗ ಆಗುತ್ತಿದೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ. ಆದರೆ ಜಿಲ್ಲೆಯ ವಿವಿಧ ಕಡೆಗಳಿಗೆ ಹೋಲಿಸಿದರೆ ದೊಡ್ಡಬಳ್ಳಾಪುರದಲ್ಲಿ ಸಮಸ್ಯೆ ಕಡಿಮೆ ಆದರೂ ನೀರಿನ ಸಮಸ್ಯೆ ಬಗೆಹರಿಸಲು ಹೆಚ್ಚುವರಿ ಬೋರ್‌ವೆಲ್ ಕೊರೆಸಲು ಕ್ರಮವಹಿಸಲಾಗಿದೆ. ಯುಜಿಡಿ ನಿರ್ವಹಣೆ ಕೂಡ ಮಾಡಲಾಗುತ್ತಿದೆ ಎಂದು ನಗರಸಭೆ ಪೌರಾಯುಕ್ತ ಕಾರ್ತಿಕೇಶ್ವರ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!