
ದೊಡ್ಡಬಳ್ಳಾಪುರ: ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸುವ ಹಾಗೂ ರೌಡಿ ಶೀಟರ್ಗಳ ಮೇಲೆ ನಿಗಾ ಬಿಗಿಗೊಳಿಸುವ ಉದ್ದೇಶದಿಂದ ದೊಡ್ಡಬಳ್ಳಾಪುರ ಡಿವೈಎಸ್ಪಿ ಉಪವಿಭಾಗ ವ್ಯಾಪ್ತಿಯಲ್ಲಿ ಪೊಲೀಸರು ಭಾನುವಾರ ವಿಶೇಷ ಕಾರ್ಯಾಚರಣೆ ನಡೆಸಿ 45ಕ್ಕೂ ಹೆಚ್ಚು ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿದರು.
ಡಿವೈಎಸ್ಪಿ ಪಾಂಡುರಂಗ ಅವರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೊಡ್ಡಬಳ್ಳಾಪುರ ನಗರ, ಗ್ರಾಮಾಂತರ, ಹೊಸಹಳ್ಳಿ, ದೊಡ್ಡಬೆಳವಂಗಲ, ವಿಶ್ವನಾಥಪುರ, ಚೆನ್ನರಾಯಪಟ್ಟಣ ಹಾಗೂ ವಿಜಯಪುರ ಪೊಲೀಸ್ ಠಾಣೆಗಳ ಇನ್ಸ್ಪೆಕ್ಟರ್ಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಸಕ್ರಿಯ ರೌಡಿ ಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ಆಯುಧಗಳು ಹಾಗೂ ಅಪರಾಧ ಚಟುವಟಿಕೆಗಳಿಗೆ ಬಳಸುವ ವಸ್ತುಗಳಿಗಾಗಿ ಶೋಧ ನಡೆಸಲಾಯಿತು.
ತಪಾಸಣೆ ವೇಳೆ ಯಾವುದೇ ಮನೆಗಳಲ್ಲಿ ಆಯುಧಗಳು ಅಥವಾ ಅಪರಾಧ ಚಟುವಟಿಕೆಗಳಿಗೆ ಸಂಬಂಧಿಸಿದ ವಸ್ತುಗಳು ಪತ್ತೆಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಮಾತನಾಡಿದ ಡಿವೈಎಸ್ಪಿ ಪಾಂಡುರಂಗ, ರೌಡಿ ಚಟುವಟಿಕೆಗಳನ್ನು ಮಟ್ಟ ಹಾಕಲು ಹಾಗೂ ಅಪರಾಧ ಹಿನ್ನೆಲೆಯುಳ್ಳವರ ಮೇಲೆ ಸದಾ ನಿಗಾ ವಹಿಸುವಂತೆ ಹಿರಿಯ ಅಧಿಕಾರಿಗಳಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಈ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಉಪವಿಭಾಗದ ವಿವಿಧ ಠಾಣೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಳಗೊಂಡ ತಂಡ ರಚಿಸಿ ಸುಮಾರು 45 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಲಾಗಿದೆ ಎಂದು ಅವರು ತಿಳಿಸಿದರು.
ರೌಡಿ ಶೀಟರ್ಗಳ ಪ್ರಸ್ತುತ ಉದ್ಯೋಗ, ಆದಾಯದ ಮೂಲ ಸೇರಿದಂತೆ ವಿವಿಧ ಮಾಹಿತಿಗಳನ್ನು ಸಂಗ್ರಹಿಸಲಾಗಿದ್ದು, ಮುಂದಿನ ದಿನಗಳಲ್ಲಿ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಡಿವೈಎಸ್ಪಿ ಹೇಳಿದರು.