ಪರಿಸರ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ

 

ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ ಸಣ್ಣ ಪ್ರಯತ್ನಗಳು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ನೀಡಬಹುದು ಎಂದು ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿಯಾದ ಡಾ. ಎಂ ಚಿಕ್ಕಣ್ಣ ಹೇಳಿದರು.

ಶ್ರೀ ದೇವರಾಜ್ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯ, ಶ್ರೀ ದೇವರಾಜ್ ಅರಸ್ ಪ್ರಥಮ ದರ್ಜೆ ಸಂಜೆ ಕಾಲೇಜಿನ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಪ್ರಕೃತಿಯನ್ನು ಉಳಿಸಿದರೆ ಪ್ರಕೃತಿ ನಮ್ಮನ್ನು ಉಳಿಸುತ್ತದೆ”, ಪ್ರತಿಯೊಬ್ಬರು ಪರಿಸರ ಸಂರಕ್ಷಣೆಗೆ ಕೈಜೋಡಿಸಬೇಕು. ಮರಗಳು ನಮ್ಮ ಜೀವನಾಡಿ, ಅವು ಆಮ್ಲಜನಕವನ್ನು ನೀಡುತ್ತವೆ, ಮಳೆಯಾಗಲು ಸಹಕಾರಿಯಾಗುತ್ತವೆ ಮತ್ತು ಪರಿಸರದ ಸಮತೋಲನವನ್ನು ಕಾಪಾಡುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಆರೈಕೆಯನ್ನು ಮಾಡುವ ಸಂಕಲ್ಪ ಮಾಡಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು, ನೀರನ್ನು ಮಿತವಾಗಿ ಬಳಸುವುದು, ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದು ಹಾಗೂ ಸ್ವಚ್ಛತೆಯನ್ನು ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಡಾ. ಎಂ ಎಸ್ ಗೌರಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯುವಕರು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು. ತಮ್ಮ ಮನೆ, ಕಾಲೇಜು ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛವಾಗಿಡುವುದು, ಗಿಡಗಳನ್ನು ಬೆಳೆಸುವುದು ಮತ್ತು ಇತರರಲ್ಲಿ ಜಾಗೃತಿ ಮೂಡಿಸುವುದು ಯುವಕರ ಹೊಣೆಗಾರಿಕೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಉಪ ಪ್ರಾಂಶುಪಾಲರಾದ ಕೆ ದಕ್ಷಿಣ ಮೂರ್ತಿ , ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರುಗಳಾದ ಮಧುಶ್ರೀ, ನಂದನ ಸ್ನಾತಕ ವಿಭಾಗಗಳ ಮುಖ್ಯಸ್ಥರುಗಳಾದ ಸಿ.ಪಿ ಪ್ರಕಾಶ್, ಪಿ. ಚೈತ್ರ, ಡಾ.ತಾವರೆ ನಾಯಕ್, ಲಕ್ಷ್ಮೀಶ ಪ್ರಾಧ್ಯಾಪಕರಾದ ದಿವ್ಯ ಎನ್ ,ಭಾನುಶ್ರೀ, ನಯನ, ವೆಂಕಟೇಶ್, ಕಿರಣ್ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!