ಜೂ.05 ರಿಂದ ಮೂರು ದಿನಗಳ ಕಾಲ ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಮಾವು ಮತ್ತು ಹಲಸು ಹಣ್ಣಿನ ಋತುಮಾನದ ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಹಾಗೂ ಗ್ರಾಹಕರಿಗೆ ಅನುಕೂಲವಾಗಲೆಂದು ಒಂದೇ ವೇದಿಕೆಯಲ್ಲಿ ವಿವಿಧ ತಳಿಯ “ಮಾವು, ಹಲಸು ಮತ್ತು ಇತರೆ ಹಣ್ಣುಗಳ ಪ್ರದರ್ಶನ ಹಾಗೂ ಮಾರಾಟ ಮೇಳ ” ವನ್ನು ಜೂನ್ 5 ರಿಂದ 7ರವರೆಗೆ ದೇವನಹಳ್ಳಿ, ಟೌನ್ ನ ರಾಣಿ ಕ್ರಾಸ್ (ಹೋಟೆಲ್ ನಂದಿ ಉಪಚಾರ್ ಮುಂಬಾಗ, ನಂದಿ ಬೆಟ್ಟಕ್ಕೆ ಹೋಗುವ ರಸ್ತೆ ) ಬಳಿ ಆಯೋಜಿಸಿದೆ.

ಮಾವು ಮತ್ತು ಹಲಸು ಒಂದು ಋತುಮಾನ ಆಧಾರಿತ ಬೆಳೆಯಾಗಿದ್ದು, ಪ್ರಸ್ತುತ ಹಂಗಾಮಿನಲ್ಲಿ ಮಾವು ಮತ್ತು ಹಲಸು ಬೆಳೆ ಕಟಾವಿಗೆ ಬಂದಿದ್ದು, ಮಾವು ಹಲಸು ಹಾಗೂ ಇತರೆ ಹಣ್ಣುಗಳನ್ನು ಬೆಳೆಯುತ್ತಿರುವ ರೈತರಿಗೆ ಉತ್ತಮ ಬೆಲೆ ಹಾಗೂ ಗ್ರಾಹಕರಿಗೆ ಉತ್ತಮ ಗುಣಮಟ್ಟದ ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳು ಸಿಗುವಂತೆ ಮಾಡಲು ದಿನಾಂಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಬೆಂಗಳೂರು ಗ್ರಾಮಾಂತರ ರವರ ಸಹಯೋಗದೊಂದಿಗೆ ಮೇಳ ಏರ್ಪಡಿಸಲಾಗಿದೆ.

ಈ ಮೇಳದಲ್ಲಿ 50ಕ್ಕೂ ಹೆಚ್ಚು ವಿವಿಧ ತಳಿಗಳ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ ಕಲ್ಪಿಸಲಾಗುವುದು. ಜಿಲ್ಲೆಯ ಸಾರ್ವಜನಿಕರು ಮೂರು ದಿನಗಳ ಈ ಮೇಳದಲ್ಲಿ ಭಾಗವಹಿಸಿ ರೈತರಿಂದ ನೇರವಾಗಿ ತಮಗಿಷ್ಟವಾದ ಹಣ್ಣುಗಳು ಖರೀದಿಸಬಹುದಾಗಿದೆ.

ಮೇಳವನ್ನು ಜೂನ್ 5 ರ ಬೆಳಿಗ್ಗೆ 10.30 ಗಂಟೆಗೆ ಸಚಿವ ಕೆ.ಹೆಚ್ ಮುನಿಯಪ್ಪ ಉದ್ಘಾಟನೆ ನೇರವೇರಿಸಲಿದ್ದಾರೆ, ಶಾಸಕ ಶರತ್ ಕುಮಾರ್ ಬಚ್ಚೇಗೌಡ ಸಸ್ಯ ಸಂತೆ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದರು, ಶಾಸಕರು, ವಿಧಾನ ಸಭೆ, ಶಾಸಕರು ವಿಧಾನ ಪರಿಷತ್ ಹಾಗೂ ಸ್ಥಳೀಯ ಸಂಸ್ಥೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳು, ಇತರೆ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರೈತ ಬಾಂಧವರು ಭಾಗವಹಿಸಲಿದ್ದಾರೆ.

ಮೇಳದಲ್ಲಿ ಸಸ್ಯ ಸಂತೆ ಎಂಬ ಕಾರ್ಯಕ್ರಮವನ್ನು ಏರ್ಪಡಿಸಿದ್ದು, ಜಿಲ್ಲೆಯ ಎಲ್ಲಾ ತೋಟಗಾರಿಕೆ ಕ್ಷೇತ್ರ ಮತ್ತು ನರ್ಸರಿಗಳಿಂದ ವಿವಿಧ ಜಾತಿಯ ಹಣ್ಣಿನ ಕಸಿ/ಸಸಿ ಗಿಡಗಳನ್ನು ಅಲಂಕಾರಿಕ ಗಿಡಗಳನ್ನು ಪ್ರದರ್ಶನಕ್ಕೆ ಹಾಗೂ ಇಲಾಖೆ ನಿಗದಿಪಡಿಸಿದ ದರದಲ್ಲಿ ಮಾರಾಟ ಮಾಡುವ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗುವುದು. ಸದರಿ ಸಸ್ಯ ಸಂತೆ ಯಲ್ಲಿ ಮಾವು, ಸೀಬೆ, ತೆಂಗು, ನೆರಳೆ, ಕರಿಬೇವು, ನಿಂಬೆ, ಸಪೋಟ, ಮಲ್ಲಿಗೆ ಹಾಗೂ ಇತ್ಯಾದಿ ಕಸಿ/ಸಸಿಗಳು ಹಾಗೂ ಅಲಂಕಾರಿಕ ಗಿಡಗಳನ್ನು ಮಾರಾಟ ಮಾಡಲು ಉದ್ದೇಶಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು ಬೆಳೆಯನ್ನು 5081.14 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗುತ್ತಿದ್ದು, ಪ್ರಮುಖವಾಗಿ ಬಾದಾಮಿ, ರಸಪುರಿ, ತೋತಾಪುರಿ, ಮಲ್ಲಿಕಾ, ಸೇಂದೂರಾ ಮುಂತಾದ ತಳಿಗಳನ್ನು ಬೆಳೆಯಲಾಗುತ್ತಿದ್ದು ವಾರ್ಷಿಕ ಉತ್ಪಾದನೆ 40653.64 ಮೆಟ್ರಿಕ್ ಟನ್ ಗಳೆಂದು ಅಂದಾಜಿಸಲಾಗಿರುತ್ತದೆ. ಹಲಸು ಬೆಳೆಯನ್ನು 60.00 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯುತ್ತಿದ್ದು ವಾರ್ಷಿಕ ಉತ್ಪಾದನೆ 2762 ಮೆಟ್ರಿಕ್ ಟನ್ ನಷ್ಟು ಅಂದಾಜಿಸಲಾಗಿದೆ.

ತೋಟಗಾರಿಕೆ ಇಲಾಖಾ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮಾವು, ಹಲಸು ಹಾಗೂ ಇತರೆ ಹಣ್ಣುಗಳ ಪ್ರದೇಶ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಡಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಒಟ್ಟಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹಣ್ಣಿನ ಬೆಳೆಗಳ ಸರ್ವತೋಮುಖ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆಯು ಜಿಲ್ಲೆಯ ರೈತರಿಗೆ ಹತ್ತು ಹಲವಾರು ಯೋಜನೆಗಳನ್ನು ತಲುಪಿಸಲು ಕಾರ್ಯೋನ್ಮುಖವಾಗಿದೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!