ಮೀನಿನ ಬಲೆಯಲ್ಲಿ ಸಿಲುಕಿ ಒದ್ದಾಡಿದ ಬೃಹತ್ ಹೆಬ್ಬಾವು; ಗ್ರಾಮಸ್ಥರಿಂದ ರಕ್ಷಣೆ

ದೊಡ್ಡಬಳ್ಳಾಪುರ: ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರ ಗ್ರಾಮದ ಸಮೀಪ ಬೃಹತ್ ಗಾತ್ರದ ಹೆಬ್ಬಾವು ಮೀನಿನ ಹಳೆಯ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ಸ್ಥಳೀಯರು ಗಮನಿಸಿದ ವೇಳೆ ಹೆಬ್ಬಾವು ಬಲೆಯಲ್ಲಿ ಸಿಕ್ಕಿಹಾಕಿಕೊಂಡು ಹೊರಬರಲು ಹರಸಾಹಸ ಪಡುತ್ತಿತ್ತು. ಬಲೆಯಿಂದ ತಪ್ಪಿಸಿಕೊಳ್ಳಲು ನಡೆಸಿದ ಪ್ರಯತ್ನದ ಪರಿಣಾಮ ಅದರ ಬಾಯಿ ಭಾಗದಲ್ಲಿ ಗಾಯಗಳಾಗಿ ರಕ್ತಸ್ರಾವವಾಗಿರುವುದು ಕಂಡುಬಂದಿದೆ.

ಹೆಬ್ಬಾವನ್ನು ಕಂಡ ಗ್ರಾಮಸ್ಥರು ಆರಂಭದಲ್ಲಿ ಆತಂಕಗೊಂಡರೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ, ಬಲೆಯನ್ನು ಕತ್ತರಿಸಿ ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಘಟನೆ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹೆಬ್ಬಾವಿನ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿ, ಅಗತ್ಯ ಚಿಕಿತ್ಸೆ ಹಾಗೂ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.

ಅರಣ್ಯ ಪ್ರದೇಶಗಳ ಸಮೀಪ ಹಳೆಯ ಮೀನಿನ ಬಲೆಗಳು, ಪ್ಲಾಸ್ಟಿಕ್ ಹಾಗೂ ಇತರೆ ತ್ಯಾಜ್ಯ ವಸ್ತುಗಳನ್ನು ಎಸೆಯುವುದರಿಂದ ವನ್ಯಜೀವಿಗಳಿಗೆ ಗಂಭೀರ ಅಪಾಯ ಉಂಟಾಗುತ್ತಿದೆ. ಮೀನಿನ ಬಲೆಯಲ್ಲಿ ಸಿಲುಕಿ ಹೆಬ್ಬಾವು ಸಂಕಷ್ಟಕ್ಕೆ ಸಿಲುಕಿರುವ ಈ ಘಟನೆ ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆಯ ಕುರಿತು ಹೆಚ್ಚಿನ ಜಾಗೃತಿಯ ಅಗತ್ಯವನ್ನು ಮತ್ತೊಮ್ಮೆ ನೆನಪಿಸಿದೆ.

ಸ್ಥಳೀಯರು ವನ್ಯಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕು ಹಾಗೂ ಇಂತಹ ತ್ಯಾಜ್ಯ ವಸ್ತುಗಳನ್ನು ಅರಣ್ಯ ಪ್ರದೇಶಗಳಲ್ಲಿ ಎಸೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!