
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿತ್ತು.
ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಬಾಲಾಜಿ ನಾಯ್ಕ್ ಮಾತನಾಡಿ, ಬೆಳೆಗಳಿಗೆ ಅಸಮರ್ಪಕ ರಸಗೊಬ್ಬರಗಳ ಬಳಕೆಯಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೇ ರಸಗೊಬ್ಬರಗಳ ಬಳಕೆಗೆ ತಗಲುವ ವೆಚ್ಚವೂ ಅಧಿಕವಾಗುತ್ತದೆ. ಕೇವಲ ಯೂರಿಯಾದಂತಹ ಸಾರಜನಕ ಯುಕ್ತ ಗೊಬ್ಬರಗಳ ಮೇಲೆ ಅವಲಂಬಿತವಾಗದೆ, ಮಣ್ಣು ಪರೀಕ್ಷೆ ಆಧಾರದ ಮೇಲೆ ಸಾರಜನಕ, ರಂಜಕ ಮತ್ತು ಪೊಟ್ಯಾಷ್ ಒಳಗೊಂಡಂತೆ ಲಘು ಪೋಷಕಾಂಶಗಳನ್ನು ಸರಿಯಾದ ಪ್ರಮಾಣದಲ್ಲಿ ನೀಡಬೇಕೆಂದು ತಿಳಿಸಿದರು.
ಸಮತೋಲಿತ ರಸಗೊಬ್ಬರ ಬಳಕೆಯಿಂದ ಮಣ್ಣಿನ ಫಲವತ್ತತೆ ದೀರ್ಘಕಾಲದವರೆಗೆ ಉಳಿಯುತ್ತದೆ. ಬೆಳೆಗಳಿಗೆ ರೋಗ ಮತ್ತು ಕೀಟ ಬಾಧೆ ಕಡಿಮೆಯಾಗುತ್ತದೆ, ಗೊಬ್ಬರದ ಮೇಲಿನ ಅನಗತ್ಯ ಖರ್ಚು ಉಳಿತಾಯವಾಗುತ್ತದೆ ಹಾಗೂ ಪರಿಸರ ಮಾಲಿನ್ಯವನ್ನು ತಡೆಗಟ್ಟಬಹುದೆಂದು ತಿಳಿಸಿಕೊಟ್ಟರು.
ಅಡಿಕೆ ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆಯ ವಿಧಾನಗಳನ್ನು ತಿಳಿಸಿಕೊಡುವುದರ ಜೊತೆಗೆ, ಪ್ರತಿ ಅಡಿಕೆ ಗಿಡಕ್ಕೆ ವರ್ಷಕ್ಕೊಂದು ಬಾರಿ 6 ಕೆ.ಜಿ. ಕೊಟ್ಟಿಗೆ ಗೊಬ್ಬರ ಹಾಗೂ ಪ್ರತಿ ಎಕರೆಗೆ 5 ಕೆ.ಜಿ. ಬೊರಾಕ್ಸ್, 12 ಕೆ.ಜಿ. ಹಸಿರೆಲೆ ಗೊಬ್ಬರದ ಬೀಜಗಳನ್ನು ಬಳಸುವುದರಿಂದ ಕಾಯಿಯ ಸೀಳುವಿಕೆ ಕಡಿಮೆಯಾಗುವುದರ ಜೊತೆಗೆ ಮಣ್ಣಿನಲ್ಲಿ ಸಾವಯವ ಇಂಗಾಲದ ಅಂಶ ಹೆಚ್ಚಾಗುತ್ತದೆ ಎಂದರು.
ಈ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ಗೀತಾ, ಕೃಷಿ ಇಲಾಖೆಯಲ್ಲಿ ದೊರೆಯುವ ಪ್ರಮಾಣಿತ ರಸಗೊಬ್ಬರಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಜೇನುಕೃಷಿ ವಿಭಾಗದ ವಿಜ್ಞಾನಿಗಳಾದ ಡಾ. ಜಿ. ಈಶ್ವರಪ್ಪ, ಅಡಿಕೆ ಬೆಳೆಗೆ ತಗಲುವ ಕೀಟ ಮತ್ತು ರೋಗಗಳು ಹಾಗೂ ಅವುಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡಿದರು.
ಈ ಅಭಿಯಾನದಲ್ಲಿ ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಜಗದೀಶ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಂದಿನಿ, ಪ್ರಗತಿ ಪರ ರೈತರಾದ ನಾರಾಯಣಪ್ಪ ಹಾಗೂ ಆಂಜಿನಪ್ಪ ಹಾಗೂ ಇತರೆ ರೈತರು ಭಾಗವಹಿಸಿದ್ದರು.