
ಪಕ್ಷಕ್ಕಾಗಿ ಅನೇಕ ಕಾರ್ಯಕರ್ತರು ಅನೇಕ ವರ್ಷಗಳಿಂದ ಸಾಕಷ್ಟು ಶ್ರಮಿಸಿದ್ದಾರೆ. ಪಕ್ಷಕ್ಕಾಗಿ ದುಡಿಯುವ ನಿಸ್ವಾರ್ಥವಾದ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಕೆಲಸ ಮಾಡಬೇಕು. ರಾಜ್ಯದಲ್ಲಿ 71 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ಇಂದು ದೊಡ್ಡಬಳ್ಳಾಪುರ ಕ್ಷೇತ್ರಕ್ಕೆ ಆಗಮಿಸಿದ್ದೇನೆ. ಇಂದಿನಿಂದ ಜೆಡಿಎಸ್ ನಲ್ಲಿ ಹೊಸ ಅಧ್ಯಾಯ ಶುರುವಾಗಬೇಕು ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.
ನಗರದ ಭಗತ್ ಸಿಂಗ್ ಮೈದಾನದಲ್ಲಿ ಶುಕ್ರವಾರ ನಡೆದ
ಜನರೊಂದಿಗೆ ಜನತಾದಳ ಹಾಗೂ ಪಕ್ಷದ ರಜತ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಚಿನ್ನದಂತಹ ಕಾರ್ಯಕರ್ತರನ್ನು ಉಳಿಸಿಕೊಳ್ಳುವ ಕೆಲಸವಾಗಲಿ, ಮುಖಂಡರಲ್ಲಿನ ಗೊಂದಲಗಳಿಂದ ಕ್ಷೇತ್ರದಲ್ಲಿ ಹಿನ್ನೆಡೆಯಾಗಿದೆ ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು, ಒಂದಾಗಿ ಜೊತೆಯಾಗಿ ಹೋಗೋಣ. ಜೆಡಿಎಸ್ ಪಕ್ಷದಲ್ಲಿ ಜಿಲ್ಲೆ , ತಾಲೂಕು ಪದಾಧಿಕಾರಿಗಳ ಆಯ್ಕೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಾಗಿದೆ. ಜಿಲ್ಲಾಧ್ಯಕ್ಷರಾಗಿ ಕೆವಿ ಮಂಜುನಾಥ, ತಾಲ್ಲೂಕು ಅಧ್ಯಕ್ಷರಾಗಿ ಹರೀಶ್ ಗೌಡರನ್ನು ಆಯ್ಕೆ ಮಾಡಲಾಗಿದೆ. ಬಿ.ಮುನೇಗೌಡ ಅವರು ಕೂಡ ತಾಲ್ಲೂಕಿನಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ನಮ್ಮ ಮುಖಂಡರಲ್ಲಿನ ಅಹಂಗಳನ್ನು ಬಿಟ್ಟು ಕೆಲಸ ಮಾಡಬೇಕು ಎಂದರು.
ಸ್ಥಳೀಯ ಚುನಾವಣೆಗಳಲ್ಲಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಪ್ರಯತ್ನಿಸಬೇಕು. ಪಕ್ಷದ ಮುಖಂಡರು, ಕಾರ್ಯಕರ್ತರು ಸಂಘಟನೆಗಳು ಹಿಂದುಳಿದ ಕಡೆಗಳಲ್ಲಿ ಸಂಘಟನೆ ನಿಟ್ಟಿನಲ್ಲಿ ಒತ್ತು ನೀಡಬೇಕು. ಎಲ್ಲರೂ ಒಂದಾದರೆ ನೂರಕ್ಕೆ ನೂರರಷ್ಟು ನಮ್ಮ ಪಕ್ಷದಿಂದ ಶಾಸಕರನ್ನು ಕಾಣಬಹುದಾಗಿದೆ. ಎಲ್ಲಾ ಸ್ಥಳೀಯ ಚುನಾವಣೆಯಲ್ಲಿ ಕಾರ್ಯಕರ್ತರಿಗೆ ಅಧಿಕಾರ ಕೊಡಿಸುವ ಮೂಲಕ ಪಕ್ಷದ ಬಗ್ಗೆ ಮಾತನಾಡುವವರಿಗೆ ತಕ್ಕ ಉತ್ತರವನ್ನು ನೀಡಬೇಕು ಎಂದರು.
ರೈತನಾಯಕ ಕುಮಾರಸ್ವಾಮಿ:
ರೈತರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿರುವುದು ಜೆಡಿಎಸ್ ಮಾತ್ರ. ರೈತರ ಆತ್ಮಹತ್ಯೆ ಪ್ರಕರಣಗಳು 3 ವರ್ಷಗಳಿಂದ ಹೆಚ್ಚಾಗಿದೆ. ರಾಜ್ಯದಲ್ಲಿಯೇ ಹೆಚ್ಚಿನ ರೈತರು ಆತ್ಮಹತ್ಯೆ ಮಾಡಿಕೊಂಡಿರುವ ವರದಿ ಆಗಿದೆ. ರೈತರ ಪರ ನಿಲ್ಲಲು ಕುಮಾರಸ್ವಾಮಿ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂಬುದು ಜನರ ಮಾತಾಗಿದೆ. ಈ ಹಿಂದೆ 25 ಸಾವಿರ ಕೋಟಿ ಸಾಲ ಮನ್ನಾ ಮಾಡಿ ರೈತರ ಪರ ನಿಂತವರು ಕುಮಾರಸ್ವಾಮಿ ಎಂದರು.
ಭೂಸ್ವಾಧೀನ ಕೈಬಿಡುಸುವಂತೆ ಮನವಿ:
ದೊಡ್ಡಬೆಳವಂಗಲ ಹೋಬಳಿಯ 5 ಹಳ್ಳಿಗಳ 2100 ಕೃಷಿಭೂಮಿಯನ್ನು ವಶಪಡಿಸಿಕೊಳ್ಳಲು ಕೆಐಎಡಿಬಿ ಮುಂದಾಗಿದೆ. ಇದನ್ನು ಕೈಬಿಡುವಂತೆ ಹೋರಾಟ ಮಾಡಲಾಗುತ್ತಿದೆ. ಇದಕ್ಕೆ ಜೆಡಿಎಸ್ ಪಕ್ಷದ ಬೆಂಬಲ ನೀಡಬೇಕು. ಕುಮಾರಸ್ವಾಮಿ ಅವರನ್ನು ಕರೆತಂದು ಈ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ದೊಡ್ಡ ಬೆಳವಂಗಲ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ನಿಖಿಲ್ ಕುಮಾರಸ್ವಾಮಿಗೆ ಮನವಿ ಮಾಡಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕುಮಾರಸ್ವಾಮಿ ಅವರು, ಕುಮಾರಸ್ವಾಮಿ ಅವರಿಗೆ ಈ ಹೋರಾಟದ ಬಗ್ಗೆ ಗಮನಕ್ಕೆ ತರಲಾಗುತ್ತದೆ. ಅವರ ಮಾರ್ಗದರ್ಶನದಂತೆ ಬೆಂಬಲ ನೀಡಲಾಗುತ್ತದೆ ಎಂದರು.
ಮುನೇಗೌಡರಿಗೆ ಧೈರ್ಯ ತುಂಬಿದ ನಿಖಿಲ್:
2023ರ ವಿಧಾನಸಭೆ ಚುನಾವಣೆಯಲ್ಲಿ ಕೆಲ ಗೊಂದಲದ ಹಿನ್ನೆಯಲ್ಲಿ ಸೋಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಒಂದಾಗಿ ಕೆಲಸ ಮಾಡಿ ಎಂದು ಮುನೇಗೌಡರಿಗೆ ಪಕ್ಷದ ವರಿಷ್ಠರು ಸೂಚನೆ ನೀಡಿದ್ದರು. ಅದರ ಫಲವಾಗಿ ಇಲ್ಲಿನ ಬಿಜೆಪಿ ಅಭ್ಯರ್ಥಿ 25 ಸಾವಿರಗಳ ಮತದಿಂದ ಗೆದ್ದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಸಾಮರ್ಥ್ಯವನ್ನು ಕಾರ್ಯಕರ್ತರು ಹೊಂದಿದ್ದಾರೆ. ಪಕ್ಷವನ್ನು ಕಟ್ಟುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು ಎಂದರು.
ಈ ವೇಳೆ ಕೋರ್ ಕಮಿಟಿ ಅಧ್ಯಕ್ಷ ಕೃಷ್ಞಾರೆಡ್ಡಿ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆವಿ ಮಂಜುನಾಥ, ಮಾಜಿ ಅಧ್ಯಕ್ಷ ಮುನೇಗೌಡ, ತಾಲ್ಲೂಕು ಅಧ್ಯಕ್ಷ ಹರೀಶ್ ಗೌಡ, ಹಿರಿಯ ಮುಖಂಡ ಟಿ.ಹುಸ್ಕೂರು ಆನಂದ್ ಮತ್ತಿತ್ತರರು ಇದ್ದರು.