
ಸಮಾಜದ ಭವಿಷ್ಯವನ್ನು ರೂಪಿಸುವಲ್ಲಿ ಮಕ್ಕಳ ರಕ್ಷಣೆ ಮತ್ತು ಶಿಕ್ಷಣದ ಪಾತ್ರ ಅತೀವ ಮಹತ್ವದ್ದಾಗಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಈ ದಾರಿಯಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿರುವ ಸ್ಪರ್ಶ ಸಂಸ್ಥೆ, ಮಕ್ಕಳ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯಿದೆ 2015ರ ಅಡಿಯಲ್ಲಿ ನೋಂದಾಯಿಸಿಕೊಂಡು, ರಕ್ಷಣೆ ಮತ್ತು ಪೋಷಣೆ ಅಗತ್ಯವಿರುವ ಮಕ್ಕಳಿಗೆ ಆಶ್ರಯ, ಶಿಕ್ಷಣ ಮತ್ತು ಜೀವನದ ದಿಕ್ಕು ನೀಡುತ್ತಿರುವ ಪ್ರಮುಖ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ದೇವನಹಳ್ಳಿಯ ಮಕ್ಕಳ ಧಾಮದಲ್ಲಿ ಹೆಣ್ಣುಮಕ್ಕಳಿಗೆ ಹಾಗೂ ಹೆಸರುಘಟ್ಟದ ಸಮೀಪದ ನಿಸರ್ಗ ಗ್ರಾಮದಲ್ಲಿ ಗಂಡುಮಕ್ಕಳಿಗೆ ನೀಡುತ್ತಿರುವ ಸಂರಕ್ಷಣಾ ವ್ಯವಸ್ಥೆ, “ಎಲ್ಲಾ ಮಕ್ಕಳಿಗೂ ಗುಣಮಟ್ಟದ ಮತ್ತು ಸಮಾನ ಶಿಕ್ಷಣ” ಎಂಬ ಗುರಿಯನ್ನು ಅರ್ಥಪೂರ್ಣವಾಗಿ ಸಾಕಾರಗೊಳಿಸುತ್ತಿದೆ. ಈ ಪಾಲನಾ ಗೃಹಗಳಲ್ಲಿ ಬೆಳೆದ ಅನೇಕ ಮಕ್ಕಳು ಇಂದು ಉನ್ನತ ಶಿಕ್ಷಣ ಪಡೆದು ಪದವೀಧರರಾಗಿ ಸಮಾಜದಲ್ಲಿ ತಮ್ಮದೇ ಆದ ಸ್ಥಾನವನ್ನು ನಿರ್ಮಿಸಿಕೊಂಡಿರುವುದು ಸಂಸ್ಥೆಯ ಕಾರ್ಯಪಟುತ್ವಕ್ಕೆ ಸಾಕ್ಷಿಯಾಗಿದೆ.

ಈ ದೀರ್ಘ ಅನುಭವದ ಹಿನ್ನೆಲೆಯಲ್ಲಿಯೇ, ಹೆಣ್ಣುಮಕ್ಕಳ ಸಬಲೀಕರಣ ಮತ್ತು ಲಿಂಗ ಸಮಾನತೆಯ ಅಗತ್ಯವನ್ನು ಮನಗಂಡ ಸ್ಪರ್ಶ ಸಂಸ್ಥೆ, “ಯುವಿಕ ಯೋಜನೆ” ಎಂಬ ಮತ್ತೊಂದು ಮಹತ್ವದ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಯುವಕ ಯೋಜನೆಯು ಕೇವಲ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಬೆಳೆದ ಹೆಣ್ಣು ಮಕ್ಕಳಿಗೆ ಮಾತ್ರವಲ್ಲದೆ, ಯಾವುದೇ ಸಮುದಾಯದ ಅನಾಥ ಹಾಗೂ ಏಕಪೋಷಕ ಕುಟುಂಬದ ಹೆಣ್ಣು ಮಕ್ಕಳಿಗೂ ಅನ್ವಯಿಸುತ್ತದೆ.ಉನ್ನತ ವ್ಯಾಸಂಗ ಮುಗಿಸಿದ 21 ವರ್ಷಕ್ಕಿಂತ ಮೇಲ್ಪಟ್ಟ ಹೆಣ್ಣುಮಕ್ಕಳಿಗೆ ಈ ಯೋಜನೆ ರೂಪಿಸಲಾಗಿದೆ. ಜೀವನದ ಹೊಸ ಹಂತಕ್ಕೆ ಕಾಲಿಡುವ ಈ ಯುವತಿಯರಿಗೆ ಸರಿಯಾದ ಮಾರ್ಗದರ್ಶನ ಮತ್ತು ಅವಕಾಶಗಳ ಕೊರತೆ ಎದುರಾಗುವ ಸಂದರ್ಭಗಳಲ್ಲಿ, ಯುವಿಕ ಯೋಜನೆ ಅವರುಗಳ ಕನಸುಗಳಿಗೆ ದಿಕ್ಕು ತೋರಿಸುವ ದೀಪಸ್ತಂಭದಂತಾಗಿದೆ.

ಈ ಯೋಜನೆಯು ಕೇವಲ ತರಬೇತಿ ಕಾರ್ಯಕ್ರಮವಲ್ಲ, ಅದು ಒಂದು ಸಮಗ್ರ ರೂಪಾಂತರ ಪ್ರಕ್ರಿಯೆಯಾಗಿದೆ. ಐಎಎಸ್, ಕೆಎಎಸ್ ಮತ್ತು ಸಿಎ ಮುಂತಾದ ಆಡಳಿತಾತ್ಮಕ ಹಾಗೂ ವೃತ್ತಿಪರ ಸೇವೆಗಳಲ್ಲಿ ಉನ್ನತ ಹುದ್ದೆಗಳನ್ನು ಗಳಿಸಲು ಅಗತ್ಯವಾದ ಗುಣಮಟ್ಟದ ತರಬೇತಿ, ನುರಿತ ಉಪನ್ಯಾಸಕರಿಂದ ಮಾರ್ಗದರ್ಶನ, ಉಚಿತ ವಸತಿ ಸೌಲಭ್ಯ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಗತ್ಯವಿರುವ ಎಲ್ಲಾ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ, ಯುವತಿಯರಿಗೆ ಸಮಾನ ಅವಕಾಶಗಳನ್ನು ಕಲ್ಪಿಸುತ್ತದೆ. ಈಗಾಗಲೇ ಐಎಎಸ್ ಮತ್ತು ಕೆಎಎಸ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಸರ್ಕಾರಿ ಸೇವೆಯಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ನಿವೃತ್ತ ಅಧಿಕಾರಿಗಳನ್ನೊಳಗೊಂಡ ಸಲಹಾ ಸಮಿತಿ ಈ ಯೋಜನೆಗೆ ದಿಕ್ಕು ತೋರಿಸುತ್ತಿರುವುದು ಇದರ ಮತ್ತೊಂದು ಬಲವಾಗಿದೆ.

ಯುವಿಕಾ ಯೋಜನೆಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಸಮಾನತೆ ಮತ್ತು ನ್ಯಾಯವನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಉದ್ಯೋಗಾವಕಾಶಗಳು ಮತ್ತು ಅಸಮಾನತೆ ಕಡಿತಗೊಳಿಸುವ ಗುರಿಗಳನ್ನು
ಒಬ್ಬ ಹೆಣ್ಣುಮಕ್ಕಳಿಗೆ ನೀಡುವ ಶಿಕ್ಷಣವು ಒಂದು ಕುಟುಂಬವನ್ನು ಮಾತ್ರವಲ್ಲ, ಒಂದು ಸಮಾಜವನ್ನೇ ರೂಪಿಸುವ ಶಕ್ತಿ ಹೊಂದಿದೆ ಎಂಬುದು ಎಲ್ಲರೂ ಒಪ್ಪುವ ಸತ್ಯ. ಈ ನಂಬಿಕೆಯನ್ನು ಕಾರ್ಯರೂಪಕ್ಕೆ ತಂದಿರುವ ಸ್ಪರ್ಶ ಸಂಸ್ಥೆಯ ಯುವಿಕ ಯೋಜನೆ, ದುರ್ಬಲ ವರ್ಗದ ಹೆಣ್ಣುಮಕ್ಕಳಿಗೆ ಹೊಸ ಭವಿಷ್ಯದ ಬಾಗಿಲು ತೆರೆಯುತ್ತಿದೆ.