ಮೇ.8ರಂದು ಜೆಡಿಎಸ್ ರಜತ ಮಹೋತ್ಸವ: ನಿಖಿಲ್ ಕುಮಾರಸ್ವಾಮಿ ಭಾಗಿ- ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡ

ದೊಡ್ಡಬಳ್ಳಾಪುರ: ನಾಡಿನ ಜನರ ನಾಡಿ ಮಿಡಿತವನ್ನು ಅರಿತು ಪ್ರಾದೇಶಿಕವಾಗಿ ಅಭಿವೃದ್ಧಿ ಹೊಂದಲು ಜೆಡಿಎಸ್ ಪಕ್ಷ ಸ್ಥಾಪನೆಯಾಗಿದೆ. ಮೇ.8ಕ್ಕೆ 25 ವರ್ಷಗಳನ್ನು ಪೂರೈಸಲಿದೆ. ಈ ನಿಟ್ಟಿನಲ್ಲಿ ರಾಜ್ಯ ವರಿಷ್ಠರ ಆದೇಶದ ಮೇರೆಗೆ ಜಿಲ್ಲಾ ಹಾಗೂ ತಾಲ್ಲೂಕು ಪ್ರಮುಖರ ಸಹಕಾರದೊಂದಿಗೆ ಮೇ.8ರಂದು ತಾಲೂಕಿನ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ರಜತ ಮಹೋತ್ಸವ(ಜೆಡಿಎಸ್ ಪಕ್ಷದ ಬೆಳ್ಳಿಹಬ್ಬ )ವನ್ನು ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ರಾಜ್ಯ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ರಾಜ್ಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಹರೀಶ್ ಗೌಡ ತಿಳಿಸಿದರು.

ನಗರದ ಕನ್ನಡ ಜಾಗೃತಿ ಭವನದಲ್ಲಿ ನಡೆದ ಸುದ್ದಿಗೊಷ್ಟಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜೆಡಿಎಸ್ ಪಕ್ಷ ಕಳೆದ 25 ವರ್ಷಗಳಿಂದ ನಿರಂತರ ಜನಸಂಪರ್ಕದಲ್ಲಿದೆ. ತನ್ನದೇ ಆದ ಶಕ್ತಿ ಹೊಂದಿದೆ, ಕಾರ್ಯಕರ್ತರ ಬೆಂಬಲದಿಂದ ಸಾಲು ಸಾಲು ಚುನಾವಣೆ ಎದುರಿಸಿದೆ. ಸೋಲು- ಗೆಲುವು ಎರಡನ್ನು ಕಂಡಿದ್ದೇವೆ. ಜೆಡಿಎಸ್ ಪಕ್ಷವನ್ನು ರಾಷ್ಟ್ರಿಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಸದಾ ವಿರೋಧಿಸಿಕೊಂಡು ಬಂದಿವೆ. ಪಕ್ಷದ ಸೋಲು ಕಾರ್ಯಕರ್ತರಲ್ಲಿ ಎಂದಿಗೂ ಉತ್ಸಹ ಕಡಿಮೆ ಮಾಡಿಲ್ಲ. ಜಿಲ್ಲೆ ಹಾಗೂ ತಾಲ್ಲೂಕಿನ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಮೇ.8ರಂದು ರಜತ ಮಹೋತ್ಸವ(ಬೆಳ್ಳಿ ಹಬ್ಬ) ಕಾರ್ಯಕ್ರಮವನ್ನು  ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಲಿರುವ ರಾಜ್ಯ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿಯನ್ನು ಬೃಹತ್ ಬೈಕ್ ರ್ಯಾಲಿ ಮೂಲಕ ಸ್ವಾಗತಿಸಲಿದ್ದೇವೆ. ಕಾರ್ಯಕ್ರಮವು ವಿಶೇಷವಾಗಿದ್ದು, ರಾಜ್ಯ ಪ್ರಮುಖರು ನೇರವಾಗಿ ಕಾರ್ಯಕರ್ತರ ಜೊತೆ ಸಂವಾದ ನಡೆಸಲಿದ್ದಾರೆ ಎಂದರು.

ನಗರಸಭಾ ಸದಸ್ಯ ತಾ ನಾ ಪ್ರಭುದೇವ್ ಮಾತನಾಡಿ, ಮೇ.8ರಂದು ತಾಲ್ಲೂಕಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಬೃಹತ್ ಕಾರ್ಯಕ್ರಮಕ್ಕೆ ಇಂದು ಪೂಜೆ ಮಾಡುವ ಮೂಲಕ ವೇದಿಕೆಗೆ ಚಾಲನೆ ನೀಡಿದ್ದೇವೆ. ಪಂಚ ರಾಜ್ಯಗಳ ಫಲಿತಾಂಶ ನಮಗೆ ಸ್ಫೂರ್ತಿಯಾಗಿದ್ದು, ಮುಂದೆ ಕರ್ನಾಟಕದಲ್ಲೂ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಧಿಕಾರಕ್ಕೆ ಬರುವ ನಿರೀಕ್ಷೆ ಇದೆ. ನಮ್ಮದು ಕಾರ್ಯಕರ್ತರ ಪಕ್ಷವಾಗಿದ್ದು, ಈ ಬಾರಿ ನಿಖಿಲ್ ಕುಮಾರಸ್ವಾಮಿಯವರಿಗೆ ಶಕ್ತಿ ತುಂಬುವ ಕೆಲಸ ರಾಜ್ಯದ ಜೆಡಿಎಸ್ ಸೇನಾನಿಗಳು ಮಾಡಲಿದ್ದಾರೆ. ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ನವ ಚೈತನ್ಯ ಮೂಡಿಸಲು ನಿಖಿಲ್ ಕುಮಾರಸ್ವಾಮಿ ದೊಡ್ಡಬಳ್ಳಾಪುರ ತಾಲ್ಲೂಕಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ವಕೀಲರಾದ ಡಾ. ವಿಜಯ್ ಕುಮಾರ್, ಅಂಜನ್ ಗೌಡ, ನಗರಸಭಾ ಸದಸ್ಯ ತಾ ನಾ ಪ್ರಭುದೇವ್, ತಾಳಗವಾರ ನಾಗರಾಜ್, ಕೋನಘಟ್ಟ ಆನಂದ್, ಸತ್ಯಣ್ಣ, ಅಶ್ವಥ್, ಕೆಂಪರಾಜು, ನಾಗರಾಜ್ ಸೇರಿದಂತೆ ಹಲವು ಪ್ರಮುಖರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!