
ಗ್ರಾಮೀಣ ಪ್ರದೇಶದ ಜನರ ಆಶೋತ್ತರಗಳಿಗೆ ಧ್ವನಿಯಾಗಿ ಪಂಚಾಯತ್ ರಾಜ್ ಇಲಾಖೆಯು ಕೆಲಸ ನಿರ್ವಹಿಸುತ್ತಿದೆ. ಪಾರದರ್ಶಕವಾಗಿ ಸ್ಥಳೀಯ ಆಡಳಿತ ವ್ಯವಸ್ಥೆ ನಡೆಯುತ್ತಾ, ಜನರ ಅಗತ್ಯ ಸೌಕರ್ಯ ಒದಗಿಸುವಲ್ಲಿ ಪಂಚಾಯತ್ ರಾಜ್ ಇಲಾಖೆ ಮಾದರಿ ಕೆಲಸ ಮಾಡುತ್ತಿವೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಡಾ. ವಾಸಂತಿ ಅಮರ್ ಅವರು ಹೇಳಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವತಿಯಿಂದ ಆಯೋಜಿಸಿದ್ದ “ರಾಷ್ಟ್ರೀಯ ಪಂಚಾಯತ್ ರಾಜ್ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.
ಪ್ರತಿಯೊಬ್ಬ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಗ್ರಾಮೀಣಾಭಿವೃದ್ಧಿ ಜವಬ್ದಾರಿವಿದೆ. ಅಧಿಕಾರಿಗಳು ಸಾಮಾಜಿಕ ಬದಲಾವಣೆಗಾಗಿ ನನ್ನ ಕೆಲಸ ಎಂದು ಮನೋಭಾವನೆ ಬೆಳೆಸಿಕೊಳ್ಳಬೇಕು. ರಾಜ್ಯ ಮಟ್ಟಕ್ಕೆ ಜಿಲ್ಲೆಯ ಹೆಸರು ಕೊಂಡೊಯ್ಯಲು ಶ್ರಮಿಸಬೇಕಿದೆ ಎಂದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಶಿವಕುಮಾರ್ ಅವರು ಮಾತನಾಡಿ, ಭಾರತದಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಗೆ ತನ್ನದೇ ಇತಿಹಾಸವಿದ್ದು, ರಾಜ ಮನೆತನ ಕಾಲದಿಂದಲೂ ಸುಧೀರ್ಘವಾಗಿ ಗ್ರಾಮಗಳು ಹಾಗೂ ಪಂಚಾಯಿತಿಯ ವ್ಯವಸ್ಥೆ ವಿಕೇಂದ್ರೀಕರಣದೊಂದಿಗೆ ಸಾಗುತ್ತ ಬಂದಿದೆ. ಸ್ವಾತಂತ್ಯ್ರ ಭಾರತದ ನಂತರದಲ್ಲಿ ಬಲವಂತ ರಾಯ್ ಮೆಹ್ತಾ ಶಿಫಾರಸ್ಸು ಮತ್ತು ಎಲ್ ಎಂ ಸಿಂಘ್ವಿ ಶಿಫಾರಸ್ಸು ಅನ್ವಯ ಭಾರತ ಸಂವಿಧಾನದ 73ನೇ ತಿದ್ದುಪಡಿ ಮೂಲಕ 1993 ರಲ್ಲಿ ಎಪ್ರಿಲ್ 24 ರಂದು ಭಾರತದ ರಾಷ್ಟ್ರಪತಿ ಅವರ ಅಂಕಿತ ಹಾಕುವ ಮೂಲಕ ಜಾರಿಗೆ ಬಂದಿದ್ದು, ಈ ದಿನವನ್ನು ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಎಂದು ಆಚರಿಸಲಾಗುತ್ತಿದೆ ಎಂದು ಉಪಕಾರ್ಯದರ್ಶಿ ಶಿವಕುಮಾರ್ ಅವರು ಹೇಳಿದರು.
73ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಜಾರಿಗೆ ಬಂದ ದಿನ ಸ್ಮರಿಸುವುದಕ್ಕಾಗಿ ಹಾಗೂ ಪ್ರಜಾಪ್ರಭುತ್ವ ವಿಕೇಂದ್ರೀಕರಣ ಮತ್ತು ಸ್ಥಳೀಯ ಆಡಳಿತವನ್ನು ಬಲಗೊಳಿಸುವ ನಮ್ಮ ಬದ್ಧತೆಯನ್ನು ಪುನರುಜ್ಜೀವನಗೊಳಿಸುವ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳು ಸಾಧಿಸಿರುವ ಗಮನಾರ್ಹ ಪ್ರಗತಿ ಮತ್ತು ಸಾಮರ್ಥ್ಯವನ್ನು ಸಂಭ್ರಮಿಸಲು ಪಂಚಾಯತ್ ರಾಜ್ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಗ್ರಾಮ ಪಂಚಾಯ್ತಿ ಇನ್ನಷ್ಟು ಸದೃಢ ಆಗಬೇಕು ಹಾಗೂ ಗಾಂಧೀಜಿ ಕಂಡ ಕನಸ್ಸು ನನಸು ಆಗಬೇಕು ಎಂದರೆ ಹಳ್ಳಿಗಳ ಅಭಿವೃದ್ಧಿಗೆ ನಾವೆಲ್ಲ ಪಣ ತೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

*ತೆರಿಗೆ ವಸೂಲಾತಿ ಸಾಧನೆ:*
2025-26ನೇ ಸಾಲಿನ ಜಿಲ್ಲೆಯಲ್ಲಿ ಹೊಸಕೋಟೆ ತಾಲ್ಲೂಕಿನ ಪಂಚಾಯಿತಿಗಳಿಂದ ಅತಿ ಹೆಚ್ಚು ತೆರಿಗೆ ವಸೂಲಾತಿಯಾಗಿದ್ದು, ತಾಲ್ಲೂಕಿನ ದೊಡ್ಡಗಟ್ಟಿಗನಬ್ಬೆ ಗ್ರಾಮ ಪಂಚಾಯಿತಿ ಪ್ರಶಸ್ತಿ ಪಡೆದಿದೆ. ಇನ್ನೂ ತಾಲ್ಲೂಕುವಾರು ಅತಿ ಹೆಚ್ಚು ತೆರಿಗೆ ವಸೂಲಾತಿ ಮಾಡಿದ ದೇವನಹಳ್ಳಿ ತಾಲೂಕಿನ ಕೋರಮಂಗಲ ಗ್ರಾ.ಪಂ, ದೊಡ್ಡಬಳ್ಳಾಪುರ ತಾಲೂಕಿನ ಕಾಡನೂರು ಗ್ರಾ.ಪಂ, ಹೊಸಕೋಟೆ ತಾಲೂಕಿನ ಶಿವನಾಪುರ ಗ್ರಾ.ಪಂ, ನೆಲಮಂಗಲ ತಾಲೂಕಿನ ಕಳಲುಘಟ್ಟ ಗ್ರಾ.ಪಂ. ಗಳಿಗೆ ಬಹುಮಾನ ವಿತರಿಸಲಾಯಿತು.
*ಅತ್ಯುತ್ತಮ ಅರಿವು ಕೇಂದ್ರ ಪ್ರಶಸ್ತಿ:*
ಜಿಲ್ಲೆಯಲ್ಲಿ ಅರಿವು ಕೇಂದ್ರವನ್ನು ಮಾದರಿಯಾಗಿ ಅಭಿವೃದ್ಧಿ ಪಡಿಸಿರುವ ದೇವನಹಳ್ಳಿ ತಾಲ್ಲೂಕಿನ ಜಾಲಿಗೆ ಗ್ರಾಮ ಪಂಚಾಯಿತಿ.
*ಮಹಿಳಾ ಸ್ನೇಹಿ ಗ್ರಾಮ ಪಂಚಾಯತಿ ಪ್ರಶಸ್ತಿ:*
ಜಿಲ್ಲೆಯಲ್ಲಿ ಅತ್ಯುತ್ತಮ ಮಹಿಳಾ ಸ್ನೇಹಿ ಉಪಕ್ರಮಗಳನ್ನು ಅನುಷ್ಠಾನಗೊಳಿಸಿರುವ ದೊಡ್ಡಬಳ್ಳಾಪುರ ತಾಲ್ಲೂಕಿನ ಹುಲಿಕುಂಟೆ ಗ್ರಾಮ ಪಂಚಾಯಿತಿ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾ ಅಧಿಕಾರಿ ರಾಮಕೃಷ್ಣಯ್ಯ, ಯೋಜನಾ ನಿರ್ದೇಶಕರಾದ
ವಿಠ್ಠಲ ಕಾವ್ಳೆ, ಮುಖ್ಯ ಲೆಕ್ಕಾಧಿಕಾರಿಗಳಾದ
ಮಂಜುನಾಥ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳು, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.