
ಬಸವ ಜಯಂತಿಯೋ,
ಅಕ್ಷಯ ತೃತೀಯವೋ……
ಅದೃಷ್ಟವಂತರಲ್ಲವೇ ನಾವು,…..
ನಮ್ಮ ಹಿಂದಿನ ತಲೆಮಾರಿನವರಿಗೆ ಹೋಲಿಸಿಕೊಂಡರೆ ಎಷ್ಟೊಂದು ಅದೃಷ್ಟವಂತರು ನಾವು. ಎಲ್ಲ ವಿಷಯದಲ್ಲೂ ಎಷ್ಟೊಂದು ಆಯ್ಕೆಗಳಿವೆ ನಮಗೆ.
ಹಿಂದೆ ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ಈಗ ಒಂದು ಸಣ್ಣ ಹೋಟೆಲಿನಲ್ಲಿ ಸಹ ಹಲವಾರು ರೀತಿಯ ಭಕ್ಷ್ಯ ಭೋಜನಗಳ ಪಟ್ಟಿಯೇ ಇರುತ್ತದೆ. ಆಹಾರದ ವೈವಿಧ್ಯತೆ ಅಪಾರ. ಅನ್ನ, ಸಾರು, ಮುದ್ದೆ, ರೊಟ್ಟಿ, ಉಪ್ಪು ಸಾರಿನಿಂದ ಇಂದು ನೂರಾರು ವಿಶೇಷ ಖಾದ್ಯಗಳ ಆಹಾರ ಪದ್ಧತಿ ಸಾಮಾನ್ಯ ಜನರ ಕೈಗೆ ನಿಲುಕುವಂತೆ ಆಗಿದೆ. ನಾವು ಅದೃಷ್ಟವಂತರಲ್ಲವೇ.
ಕೇವಲ ಪಟಾಪಟಿ ಚಡ್ಡಿ, ಪಂಚೆ, ಪೈಜಾಮ, ಕುರ್ತಾ, ಸೀರೆ, ರವಿಕೆ ಇಷ್ಟರಲ್ಲೇ ಇಡೀ ಜೀವನ ಕಳೆಯುತ್ತಿದ್ದ ನಮ್ಮ ಹಿಂದಿನವರಿಗೂ, ಒಂದು ದೊಡ್ಡ ಉದ್ಯಮವಾಗಿ ಬೆಳೆದು ಉಡುಪೇ ಒಂದು ಅಂತಸ್ತು, ಗೌರವದ ಮಾನದಂಡದ ಸ್ವರೂಪ ಪಡೆದಿರುವ ಇಂದಿನ ಕಾಲದ ನಾವೇ ಅದೃಷ್ಟವಂತರಲ್ಲವೇ.
ಬಹುತೇಕ ಮುಖಕ್ಷೌರ ಮತ್ತು ಮಿಲಿಟರಿ ಕಟಿಂಗ್ ಅಷ್ಟಕ್ಕೇ ಸೀಮಿತವಾಗಿದ್ದ, ಹೆಣ್ಣು ಮಕ್ಕಳಿಗೆ ಎರಡು ಜಡೆ ಅಥವಾ ಒಂದು ಜಡೆಯ ಉದ್ದ ಕೂದಲಿಗೆ ಮಾತ್ರ ಸೀಮಿತವಾಗಿದ್ದ ಹೇರ್ ಸ್ಟೈಲ್ ಈಗ ಬಹುದೊಡ್ಡ ಫ್ಯಾಶನ್ ಡಿಸೈನಿಂಗ್ ಉದ್ಯಮವಾಗಿ ಅದೇ ಒಂದು ವಿಶೇಷ ಸಂಸ್ಕೃತಿಯಾಗಿ ಬೆಳೆದು ಬಂದಿರುವುದು ಈಗಿನ ಜನರ ಅದೃಷ್ಟವಲ್ಲವೇ.
ಪತ್ರ ವ್ಯವಹಾರದ ಮುಖಾಂತರ ಅಥವಾ ಹಳೆಯ ಡಕೋಟಾ ಬಸ್ ಗಳ ಮುಖಾಂತರ ಗೆಳೆಯರು, ಬಂಧುಗಳ ಕೆಲಸ ಕಾರ್ಯಗಳಿಗೆ ಉಪಯೋಗಿಸಲ್ಪಡುತ್ತಿದ್ದ ಸಂಪರ್ಕ ಸಾಧನಗಳಿಗೆ ಪರ್ಯಾಯವಾಗಿ ಇಂದು ಮೊಬೈಲ್ ಇಮೇಲ್ ಗಳ ಸೌಕರ್ಯ ಒದಗಿ ಬಂದಿರುವುದು ನಾವು ಅದೃಷ್ಟವಂತರು ಎನ್ನಲಡ್ಡಿಯಿಲ್ಲವಲ್ಲವೇ.
ಇದು ನೆನಪಾಗಲು ಕಾರಣ ಕರ್ನಾಟಕದ ಸಾಂಸ್ಕೃತಿಕ ನಾಯಕ, ಮಾನವತವಾದದ ಪ್ರತಿನಿಧಿ, ಸಕಲ ಜೀವರಾಶಿಗಳಿಗೂ ಲೇಸನೇ ಬಯಸಿದ ಮಹಾನ್ ತತ್ವಜ್ಞಾನಿ, ಸಮಾಜ ಸುಧಾರಕ ಬಸವಣ್ಣನವರ ಜಯಂತಿಗಿಂತ ಅಕ್ಷಯ ತೃತೀಯ ಎಂಬ ಜನರನ್ನು ಶ್ರೀಮಂತಿಕೆಯ ಅಕ್ಷಯ ಪಾತ್ರೆಯ ಭ್ರಮೆಯೊಳಗೆ ಬಂಧಿಸುವ ಕೊಳ್ಳುಬಾಕ ಸಂಸ್ಕೃತಿ, ವಸ್ತುಬಾಕ ಸಂಸ್ಕೃತಿ, ವ್ಯಾಪಾರಿ ಸಂಸ್ಕೃತಿ, ಗ್ರಾಹಕ ಸಂಸ್ಕೃತಿ, ಹಣ ಕೇಂದ್ರಿತ ಸಂಸ್ಕೃತಿ ಕೃತಕ ಹಬ್ಬವಾಗಿಸಿದ ಈ ಅಕ್ಷಯ ತೃತೀಯವೇ ಇಡೀ ಸಮಾಜದಲ್ಲಿ ಬಹುದೊಡ್ಡ ಆಕರ್ಷಣೆಯಾಗಿ ಆಚರಣೆಗೊಳ್ಳುತ್ತಿರುವಾಗ ಈ ಎಲ್ಲವೂ ಮತ್ತೆ ಮತ್ತೆ ನೆನಪಾಗುತ್ತಿದೆ.
ನಾಗರಿಕ ಪ್ರಜ್ಞೆ, ಮಾನವೀಯ ಮೌಲ್ಯಗಳು ಶಿಥಿಲವಾಗಿರುವುದು ಮಾತ್ರವಲ್ಲ ವಿರುದ್ಧ ಮೌಲ್ಯಗಳು ಮಾನ್ಯತೆ ಪಡೆಯುತ್ತಿರುವ ಈ ಸಂದರ್ಭದಲ್ಲಿ ಗಾಳಿ, ನೀರು, ಆಹಾರಗಳು ಮಲಿನವಾಗಿ, ಆಸ್ಪತ್ರೆಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ, ಪೊಲೀಸ್ ಸ್ಟೇಷನ್ ಗಳು, ಸಿಸಿಟಿವಿಗಳು ಇಡೀ ದೇಶವನ್ನು ವ್ಯಾಪಿಸುತ್ತಿರುವಾಗ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಪಾಯದಲ್ಲಿರುವಾಗ ಅದೆಲ್ಲಕ್ಕಿಂತ ಮನುಷ್ಯ ವಸ್ತು ಸಂಸ್ಕೃತಿಗೆ ದಾಸನಾಗಿ ಖುಷಿ ಪಡುತ್ತಿರುವುದು ನಿಜಕ್ಕೂ ಆತ ಬಹುದೊಡ್ಡ ಅದೃಷ್ಟಶಾಲಿ ಎಂದೆನಿಸುವುದಿಲ್ಲವೇ.
ಕೋವಿಡ್ ಸಮಯದ ಆ ದುರ್ದಿನಗಳು ಆತನಿಗೆ ನೆನಪಾಗುವುದಿಲ್ಲ, ಮೂರನೇ ಮಹಾ ಯುದ್ಧದ ಕಾರ್ಮೋಡವೂ ಆತನನ್ನು ವಿಚಲಿತಗೊಳಿಸುವುದಿಲ್ಲ, ದೊಡ್ಡ ದೊಡ್ಡ ಪ್ರವಾಹ, ಭೂಕಂಪ, ಬೆಂಕಿ ಅವಘಡ, ಬರಗಾಲ ಆತನಿಗೆ ಏನೂ ಅನಿಸುವುದಿಲ್ಲ. ಅಪಘಾತ, ಅನಾರೋಗ್ಯ, ಆತ್ಮಹತ್ಯೆ, ಅಪರಾಧಗಳು ಆತನನ್ನು ಚಿಂತೆಗೆ ಹಚ್ಚುವುದಿಲ್ಲ. ಇದೆಲ್ಲ ನೆನಪಾದಾಗ ಈ ಕಾಲದ ಮನುಷ್ಯ ಜೀವಿ ಎಷ್ಟೊಂದು ಅದೃಷ್ಟವಂತ ಎಂದೆನಿಸುತ್ತದೆಯಲ್ಲವೇ.
ಕ್ರಿಸ್ತ ಪೂರ್ವದ ಬುದ್ಧ, ಮಹಾವೀರರ ಚಿಂತನೆಗಳಾಗಲಿ, 12ನೇ ಶತಮಾನದ ಬಸವಣ್ಣನವರ ವಿಚಾರಗಳಾಗಲಿ, 19/20ನೇ ಶತಮಾನದ ಶತಮಾನದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧಿ, ಬಾಬಾ ಸಾಹೇಬ್ ಅಂಬೇಡ್ಕರ್, ರಾಮ್ ಮನೋಹರ್ ಲೋಹಿಯಾ ವಿಚಾರಗಳಾಗಲಿ ಈಗಿನ ಜನರಿಗೆ ಆ ಮಟ್ಟಿನ ಸುಖ ನೆಮ್ಮದಿ ನೀಡಿರಲಾರವು.
ಎಲ್ಲವನ್ನು ಎಲ್ಲರನ್ನೂ ಒಳಗೊಳ್ಳುವ ಆ ಸಮ ಸಮಾಜ ಆಶಯದ ಮನಸ್ಥಿತಿ, ಸತ್ಯ ಅಹಿಂಸೆ ಸರಳತೆ ಆಧ್ಯಾತ್ಮಿಕತೆ ದೇಶಭಕ್ತಿ ಸನ್ಯಾಸ ತ್ಯಾಗ ಕರುಣೆ ಕ್ಷಮಾ ಗುಣಗಳನ್ನು ನಿರ್ಲಕ್ಷಿಸಿಯೂ ಸುಖವಾಗಿರಬಹುದೆಂಬುದನ್ನು ಈ ಜನ ತೋರಿಸಿಕೊಟ್ಟಿದ್ದಾರೆ. ಇವರು ಎಷ್ಟು ಅದೃಷ್ಟವಂತರಲ್ಲವೇ
ಬಹುತೇಕ ಈಗಿನ ಸಮಾಜ ದ್ವೇಷ ಅಸೂಯೆ ವೇಗ ಸ್ಪರ್ಧೆ ಸುಳ್ಳು ವಂಚನೆಗಳಿಂದ ತುಂಬಿ ತುಳುಕುತ್ತಿದ್ದರೂ ತಾನು ಮಾತ್ರ ಒಳ್ಳೆ ಊಟ, ಒಳ್ಳೆ ಮನೆ, ಒಳ್ಳೆಯ ವಾಹನ, ಒಳ್ಳೆ ಪ್ರವಾಹ, ಒಳ್ಳೆಯ ಬಟ್ಟೆ, ಒಳ್ಳೆಯ ಕೇಶವಿನ್ಯಾಸ ಹೀಗೆ ವಸ್ತು ಸಂಸ್ಕೃತಿಯಿಂದ ತನ್ನ ಬದುಕನ್ನು ಸುಖಮಯವಾಗಿ ಬೆಳಿಸಿಕೊಂಡು ಜೀವನವನ್ನು ಎಂಜಾಯ್ ಮಾಡುತ್ತಿರುವುದನ್ನು ನೋಡಿದರೆ ಈಗಿನ ಜನ ತುಂಬಾ ಅದೃಷ್ಟ ಶಾಲೆಗಳು ಎನಿಸುತ್ತದೆಯಲ್ಲವೇ.
ನಿಲ್ಲಿ,
ಅದೃಷ್ಟಶಾಲಿಗಳೇನು ಹೌದು, ಆದರೆ ಈ ಜನ ಡೇಂಜರ್ ಜೋನ್ ಎಂದು ಕರೆಯುವ ಅಪಾಯಕಾರಿ ಹಂತದಲ್ಲಿದ್ದಾರೆ ಎನ್ನುವುದನ್ನು ಅವರಿಗೆ ನೆನಪಿಸಬೇಕಿದೆ.
ತಿನ್ನುವ ಅನ್ನ, ಕುಡಿಯುವ ನೀರು, ಸೇವಿಸುವ ಗಾಳಿ ಅಪಾಯಕಾರಿಯಾಗಿದೆ. ಮಾನವೀಯ ಮೌಲ್ಯಗಳು ನಶಿಸಿಹೋಗಿವೆ. ಸಾಂವಿಧಾನಿಕ ಸಂಸ್ಥೆಗಳು ಭ್ರಷ್ಟಗೊಂಡಿವೆ. ಶಿಕ್ಷಣ ಆರೋಗ್ಯ ರಾಜಕೀಯ ಧಾರ್ಮಿಕ ರಕ್ಷಣಾ ವ್ಯವಸ್ಥೆಗಳು ವಾಣಿಜ್ಯಕರಣಗೊಂಡಿವೆ. ಸದ್ಯಕ್ಕೆ ತೀರಾ ಅಪಾಯಕಾರಿ ಅಲ್ಲದಿರಬಹುದು. ಆದರೆ ಆತಂಕಕಾರಿ ಎಂದು ಹೇಳಬಹುದು.
ಹೌದು, ವಿನಾಶದ ಹಾದಿ ಇದೇ ವೇಗದಲ್ಲಿ ಸಾಗಿದರೆ ಕೆಲವೇ ವರ್ಷಗಳಲ್ಲಿ ಈ ಸಮಾಜಕ್ಕೆ ಬುದ್ಧ ಬಸವ ವಿವೇಕಾನಂದ ಗಾಂಧಿ ಅಂಬೇಡ್ಕರ್ ಗಳು ಮತ್ತೆ ನೆನಪಾಗಬಹುದು. ಅಲ್ಲಿಯವರೆಗೂ ಅಕ್ಷಯ ತೃತೀಯ ಚಿನ್ನದ ಸಂಭ್ರಮದಲ್ಲಿ ಜನ ಕುಣಿದಾಡುತ್ತಿರಲಿ, ನಲಿದಾಡುತ್ತಿರಲಿ. ಆದರೂ ನಮ್ಮಂತ ಹಳೆಯ ಕಾಲದ ಪಳೆಯುಳಿಕೆಗಳಿಂದ ಎಲ್ಲರಿಗೂ ಬಸವ ಎಂಬ ಮಾನವತವಾದದ ಸಂಕೇತವಾದ ವಿಶ್ವ ಮಾನವನಿಗೆ ಜನುಮದಿನದ ಶುಭಾಶಯಗಳು.
ಕರ್ನಾಟಕ ಸರ್ಕಾರ ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿ ಎರಡು ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲವಾಯಿತು. ಆ ಘೋಷಣೆಯಿಂದ ಏನಾದರೂ ಬದಲಾವಣೆ ಕರ್ನಾಟಕದ ಜನಮಾನಸದಲ್ಲಿ ಉಂಟಾಗಿದೆಯೇ ಎಂಬುದನ್ನು ವಿಮರ್ಶಿಸಿಕೊಳ್ಳಬೇಕಾದ ಸಮಯ……
ಈ ಬಸವ ಜಯಂತಿ ಬಸವಣ್ಣನವರನ್ನು ವಿಜೃಂಭಿಸುವುದು, ಆರಾಧಿಸುವುದು, ಭಕ್ತಿ ಪೂರ್ವಕವಾಗಿ ಪೂಜಿಸುವುದು, ಅತಿಮಾನುಷ ವ್ಯಕ್ತಿಯಂತೆ ಭಾವಿಸುವುದು, ಪವಾಡ ಪುರುಷರಂತೆ ಹರಕೆ ಹೊರುವುದು, ಸಂಘಟನಾತ್ಮಕವಾಗಿ ಒಗ್ಗೂಡಲು ಅವರ ಹೆಸರನ್ನು ಉಪಯೋಗಿಸಿಕೊಳ್ಳುವುದು, ರಾಜಕೀಯ ಕಾರಣಗಳಿಗಾಗಿ ಬಳಸಿಕೊಳ್ಳುವುದು, ಪ್ರತಿಮೆಗಳನ್ನು ಸ್ಥಾಪಿಸುವುದು, ಅಧ್ಯಯನ ಪೀಠಗಳನ್ನು ಸೃಷ್ಟಿ ಮಾಡುವುದು, ದೊಡ್ಡ ದೊಡ್ಡ ಸಂಶೋಧನಾತ್ಮಕ ಪ್ರಬಂಧಗಳನ್ನು ಮಂಡಿಸುವುದು, ರಸ್ತೆ, ವಿಶ್ವವಿದ್ಯಾಲಯ, ಸಾರಿಗೆ ನಿಲ್ದಾಣಗಳು ಮುಂತಾದುವುಗಳಿಗೆ ಹೆಸರಿಡುವುದು ಇವೆಲ್ಲವುಗಳನ್ನು ಹೊರತುಪಡಿಸಿ ಸಮ ಸಮಾಜದ, ಮಾನವೀಯ ಸಮಾಜದ, ನಾಗರೀಕ ಸಮಾಜದ ನಿರ್ಮಾಣದ ಹಾದಿಯಲ್ಲಿ ಏನಾದರೂ ಪ್ರಯತ್ನಗಳು ಸಾಗುತ್ತಿದೆಯೇ ಎಂಬುದನ್ನು ನೋಡಬೇಕಿದೆ……
ಬಸವಣ್ಣನವರು ಸಾಮಾನ್ಯ ಮನುಷ್ಯರೇ. ಆದರೆ ಅಸಾಮಾನ್ಯ ಮನಸ್ಸು ಅಥವಾ ಹೃದಯವುಳ್ಳವರು. ಅತ್ಯಂತ ಜೀವಪರ ನಿಲುವಿನ, ಸಕಲ ಜೀವಾತ್ಮಗಳಿಗೆ ಲೇಸನೆ ಬಯಸಿದ ಪ್ರಾಮಾಣಿಕ, ನಿಷ್ಕಳಂಕ, ಪ್ರಜಾಪ್ರಭುತ್ವೀಯ ಮೌಲ್ಯಗಳನ್ನು ಹೊಂದಿದ ಸಮಾನತೆಯ ಹರಿಕಾರರು…..
ಪ್ರಾಕೃತಿಕ ಮತ್ತು ಸ್ವಾಭಾವಿಕ ಭಿನ್ನತೆಗಳನ್ನು ಹೊರತುಪಡಿಸಿ ಇಡೀ ಮಾನವ ಕುಲ ಒಂದೇ, ಇವನಾರವ ಇವನಾರವ ಎಂದೆಣಿಸದಿರಯ್ಯ, ಇವ ನಮ್ಮವ ಇವ ನಮ್ಮವ ಎಂದೆಣಿಸಯ್ಯ ಎನ್ನುವ ಅತ್ಯಮೂಲ್ಯ ಚಿಂತನೆಗಳನ್ನು ನಾಡಿಗೆ ನೀಡಿದ ನೈಜ ಸಾಂಸ್ಕೃತಿಕ ನಾಯಕ ಬಸವಣ್ಣ, ನಡೆನುಡಿ ಸಂಸ್ಕೃತಿಯ ಪ್ರತಿಪಾದಕ ಬಸವಣ್ಣ, ಅಸಮಾನತೆಯ ವಿರುದ್ಧ ಬಂಡಾಯವೆಂದು ಸಮಾನತೆಗಾಗಿ ಹೋರಾಡಿದ ನೈಜ ಹೋರಾಟಗಾರ ಬಸವಣ್ಣ,……..
ಎಂದಿನಂತೆ ಬಸವಣ್ಣನವರನ್ನು ವಿಭೂತಿ, ಲಿಂಗಗಳ ಮೂಲಕವಾಗಲಿ, ವಚನಗಳ ಕಂಠಪಾಠದಿಂದಾಗಲಿ, ವಚನ ಸಾಹಿತ್ಯದ ಅಧ್ಯಯನದಿಂದಾಗಲಿ, ವಚನ ಸಂಸ್ಕೃತಿಯ ಉಪನ್ಯಾಸ, ಪ್ರವಚನ, ಭಾಷಣ, ಲೇಖನ, ಬರಹಗಳಿಂದಾಗಲಿ ನೈಜ ಬಸವಣ್ಣನವರನ್ನು ಅರಿಯುವುದು ಕೇವಲ ಒಂದು ಜ್ಞಾನಾರ್ಜನೆಯ ವಿಧಾನವಷ್ಟೇ…..
ನಮ್ಮೊಳಗಿನ ಮಾನವ ಪ್ರಜ್ಞೆ, ಹೃದಯ ವೈಶಾಲ್ಯತೆ, ಶುದ್ಧ ಮನಸ್ಥಿತಿ ಮಾತ್ರ ಬಸವಣ್ಣನವರು ನಮಗೆ ಅರ್ಥವಾಗಲು ಇರಬೇಕಾದ ಮೂಲಭೂತ ಅಂಶಗಳು. ಬಸವಣ್ಣನವರಂತಹ ವ್ಯಕ್ತಿ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಘೋಷಣೆಯಾದ ನಂತರವೂ ಇಲ್ಲಿನ ಜನಜೀವನದಲ್ಲಿ ಯಾವುದೇ ಗಂಭೀರ ಬದಲಾವಣೆಯಾಗದೆ ಎಂದಿನಂತೆ ಭ್ರಷ್ಟಾಚಾರ, ಜಾತೀಯತೆ, ಅಸ್ಪೃಶ್ಯತೆ, ಗುಂಪುಗಾರಿಕೆ ನಿರಂತರವಾಗಿ ನಡೆಯುತ್ತಲೇ ಇದೆ ಎಂದಾದರೆ ಬಸವ ಅನುಯಾಯಿಗಳು ಅಥವಾ ಸಮಸಮಾಜ ಆಶಯದ ಜನರು ಬಸವಣ್ಣನವರನ್ನು ಸಮಾಜಕ್ಕೆ ತಲುಪಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದೇ ಅರ್ಥೈಸಬೇಕಾಗುತ್ತದೆ……
ಏಕೆಂದರೆ ಹನ್ನೆರಡನೆಯ ಶತಮಾನದ ಕ್ರಾಂತಿಕಾರಿ ವ್ಯಕ್ತಿತ್ವದ ಚಿಂತನೆಗಳು ನಮ್ಮ ಸಮಾಜವನ್ನು ಸರಿದಾರಿಯಲ್ಲಿ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲವಾದರೆ ಎರಡು ರೀತಿಯಲ್ಲಿ ಭಾವಿಸಬೇಕಾಗುತ್ತದೆ. ಅವರ ಚಿಂತನೆಗಳು ಕೇವಲ ಆದರ್ಶಗಳಾಗಿ ವಾಸ್ತವದಿಂದ ದೂರವಿರುವುದರಿಂದ ಆ ಚಿಂತನೆಗಳ ಗಟ್ಟಿತನವನ್ನೇ ಪ್ರಶ್ನಿಸಬೇಕಾಗುತ್ತದೆ ಅಥವಾ ಗಟ್ಟಿತನದ ಚಿಂತನೆಗಳು ಸಾಮಾನ್ಯ ಜನರಿಗೆ ತಲುಪುವಲ್ಲಿಯೇ ವಿಫಲವಾಗಿ ಜನರ ಮಾನಸಿಕ ಗುಣಮಟ್ಟವೇ ಆ ಚಿಂತನೆಯ ಮಟ್ಟದಲ್ಲಿಲ್ಲ ಎಂದು ಜನರನ್ನೇ ಗುರಿ ಮಾಡಿ ಟೀಕಿಸಬೇಕಾಗುತ್ತದೆ……
ವಚನ ಸಂಸ್ಕೃತಿ ಅಥವಾ ಬಸವ ತತ್ವವೆಂಬುದು ಒಂದು ಜೀವನ ವಿಧಾನ, ಒಂದು ಸಾಮಾಜಿಕ ವ್ಯವಸ್ಥೆ. ಅದು ವಾಸ್ತವವಾಗಿ ಅನುಷ್ಠಾನವಾಗಿದ್ದೇ ಆದರೆ ಜನರ ಜೀವನ ಮಟ್ಟ ಅತ್ಯುತ್ತಮವಾಗಿರುತ್ತದೆ. ಯಾವುದೇ ಮೇಲುಕೀಳಿನ ವ್ಯತ್ಯಾಸಗಳಿಲ್ಲದೆ, ಅಸಹಜ ನಡುವಳಿಕೆಗಳಿಲ್ಲದೆ, ಮೋಸ ವಂಚನೆಗಳಿಲ್ಲದೆ, ಒಂದು ಸಮ ಸಂಸ್ಕೃತಿಯ, ಸಮ ಸಮಾಜ ಅಸ್ತಿತ್ವದಲ್ಲಿರುತ್ತದೆ…..
ಆದರೆ ಇಂದಿನ ಸಾಮಾಜಿಕ ವ್ಯವಸ್ಥೆ ಬಹುತೇಕ ಬಸವ ತತ್ವಕ್ಕೆ ವಿರುದ್ಧವಾಗಿಯೇ ಮುಂದುವರಿಯುತ್ತಿದೆ. ಸಾಮಾನ್ಯರನ್ನು ಬಿಡಿ, ಬಸವ ಅನುಯಾಯಿಗಳೇ ಬಸವ ಚಿಂತನೆಯಿಂದ ಬಹು ದೂರ ಸಾಗಿ ಬಂದಿದ್ದಾರೆ. ಬಸವಣ್ಣ ಒಂದು ಭಕ್ತಿಯ ಸಂಕೇತವಾಗಿ ಮಾತ್ರ ಅಸ್ತಿತ್ವದಲ್ಲಿದ್ದಾರೆ. ಒಂದು ಜಾತಿಯಾಗಿ, ಒಂದು ಓಟಿನ ರಾಜಕಾರಣದ ಆಕರ್ಷಣೆಯಾಗಿ ಮಾತ್ರ ಮಹತ್ವದ ಪಾತ್ರ ವಹಿಸುತ್ತಿದ್ದಾರೆ…….
ಇನ್ನೊಂದು ಕಡೆ ಬಸವಣ್ಣನವರನ್ನು
ಸಾಮಾನ್ಯಗೊಳಿಸುವ, ಅಪ್ರಸ್ತುತಗೊಳಿಸುವ ಅಥವಾ ಅವರ ಚಿಂತನೆಗಳನ್ನು ಸರಳೀಕರಣಗೊಳಿಸಿ ನಿರ್ಲಕ್ಷಿಸುವ ಪ್ರಯತ್ನಗಳು ಸಹ ಒಂದಷ್ಟು ಜನರಿಂದ ನಡೆಯುತ್ತಿದೆ. ಏಕೆಂದರೆ ಅವರಿಗೆ ಸಮಸಮಾಜಕ್ಕಿಂತ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆಯೇ ಬೇಕಾಗಿದೆ….
ಆದ್ದರಿಂದ ಇಂತಹ ಸಂದರ್ಭದಲ್ಲಿ ಕೇವಲ ಬಸವ ಅನುಯಾಯಿಗಳು ಮಾತ್ರವಲ್ಲ, ವೀರಶೈವ ಅಥವಾ ಲಿಂಗಾಯಿತ ಸಮುದಾಯದವರು ಮಾತ್ರವಲ್ಲ, ಇಡೀ ಸಮಾಜ ಬಸವಣ್ಣನವರ ವಚನ ಸಂಸ್ಕೃತಿಯ ಆಶಯವನ್ನು ಸ್ವತಃ ಅಳವಡಿಸಿಕೊಳ್ಳುವ ಮೂಲಕ, ನಡೆನುಡಿ ಸಂಸ್ಕೃತಿಯನ್ನು, ಶ್ರಮ ಸಂಸ್ಕೃತಿಯನ್ನು ಕಿಂಚಿತ್ತಾದರೂ ಕಾರ್ಯರೂಪಕ್ಕೆ ತರುವ ಮೂಲಕ ಬಸವ ಜಯಂತಿಯ ಈ ಸಂದರ್ಭದಲ್ಲಿ ಒಂದಷ್ಟು ಮನಃಪರಿವರ್ತನೆ ಮಾಡಿಕೊಳ್ಳಬೇಕಾಗಿದೆ…..
ಅದು ಸಾಧ್ಯವಾಗದೇ ಕೇವಲ ಉತ್ಸವಗಳಿಗೆ ಮಾತ್ರ ಸೀಮಿತವಾದರೆ, ಬಸವಣ್ಣ ಸಂಸ್ಕೃತ ನಾಯಕ ಎಂಬ ಘೋಷಣೆ ಕಾಗದದ ಮೇಲಷ್ಟೇ ಉಳಿಯುತ್ತದೆ. ನೋಡಿ ಸ್ವಲ್ಪ ಮನಸ್ಸು ಮಾಡಿ. ಬಸವ ತತ್ವವನ್ನು ವೈಯಕ್ತಿಕವಾಗಿ, ಕೌಟುಂಬಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಅನುಷ್ಠಾನಗೊಳಿಸುವ ಪ್ರಯತ್ನವನ್ನು ನಾವೆಲ್ಲರೂ ಮಾಡೋಣ….
ಕ್ಷಮಿಸೋ ಬಸವಣ್ಣ ನಿನ್ನನ್ನು ದೇವರು ಮಾಡಿದ್ದಕ್ಕೆ,
ಕ್ಷಮಿಸೋ ತಂದೆ ನಿನ್ನದೇ ಧರ್ಮ ಮಾಡಿದ್ದಕ್ಕೆ,
ಕ್ಷಮಿಸೋ ಅಪ್ಪ ನಿನ್ನದೇ ಜಾತಿ ಮಾಡಿದ್ದಕ್ಕೆ,
ಕ್ಷಮಿಸೋ ಅಣ್ಣ ನಿನ್ನ ವಚನಗಳನ್ನು ಕೇವಲ ಗೋಡೆ ಬರಹಗಳಾಗಿಸಿದ್ದಕ್ಕೆ…….
ನೀ ಹುಟ್ಟಿದಾ ಸ್ಥಳ ತೀರ್ಥಕ್ಷೇತ್ರವಾಯಿತು,
ನೀ ಬರೆದ ವಚನಗಳು ಧರ್ಮಗ್ರಂಥಗಳಾದವು,
ನೀ ನುಡಿದ ಮಾತುಗಳು ದ್ಯೆವವಾಣಿಯಾದವು,
ನಿನ್ನ ಮೂರ್ತಿಯೇ ಗರ್ಭಗುಡಿಯ ದೇವರಾಯಿತು,
ನಿನ್ನ ಹೆಸರಲ್ಲೇ ಸಂಘ ಸಂಸ್ಥೆಗಳಾದವು,
ನಿನ್ನ ಹೆಸರಲ್ಲೇ ಮಠಗಳಾದವು,
ನಿನ್ನ ಹೆಸರಲ್ಲೇ ಉದ್ದಿಮೆಗಳಾದವು,
ನಿನ್ನ ಹೆಸರಲ್ಲೇ ವ್ಯಾಪಾರಿ ಶಿಕ್ಷಣ ಸಂಸ್ಥೆಗಳಾದವು,
ವಿದೇಶಕ್ಕೂ ಹಾರಿತು ನಿನ್ನ ಖ್ಯಾತಿ,
ನಿನ್ನ ಮೇಲಿನ ಸಂಶೋದನೆಗಳು ಅಸಂಖ್ಯಾತ,
ನಿನ್ನ ಹೆಸರಿಲ್ಲದೆ ರಾಜಕೀಯ ಮಾಡದಂತಾಯಿತು,
ಒಟ್ಟಿನಲ್ಲಿ ನಮ್ಮೆಲ್ಲರ ಸರ್ವಶಕ್ತ, ದ್ಯೆವಾಂಶಸಂಭೂತ ಆರಾಧ್ಯ ದ್ಯೆವವಾದೆ………
ಆದರೆ ………
ನೀನು ಕಂಡ ಆದರ್ಶ ಸಮಾಜದ ಕನಸು ಮಾತ್ರ ನನಸಾಗಲಿಲ್ಲ,
ನಿನ್ನ ಕನಸಿನ ಸಮಾನತೆ ಸಾಧ್ಯವಾಗಲಿಲ್ಲ,
ಜಾತಿ ವ್ಯವಸ್ಥೆ ಈಗ ಹೆಬ್ಬಂಡೆಯಾಗಿ ಮತ್ತಷ್ಟು ಗಟ್ಟಿಯಾಗಿದೆ,
ಮೌಢ್ಯವಂತೂ ವಿಜ್ಞಾನವನ್ನು ನುಂಗಿ ಅಜ್ಞಾನವಾಗಿ ಮನೆಮನೆಯ ಆಚರಣೆಯಾಗಿದೆ,
ಪ್ರಜಾಪ್ರಭುತ್ವ ಸರ್ವಾಧಿಕಾರಿ ದುಷ್ಟ ಭ್ರಷ್ಟರ ಮುಖವಾಡವಾಗಿದೆ,
ಅನುಭವ ಮಂಟಪ ಬುದ್ದಿಹೀನರ ಜಟ್ಟಿಕಾಳಗವಾಗಿದೆ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ ಎಂದೇನೋ ಹೇಳಿದೆ,
ಆದರೆ ಜಂಗಮ ಅಳಿದು ಸ್ಥಾವರ ಶಾಶ್ವತವಾಗಿದೆ,
ಹೊಲಸು ತಿನ್ನುವವನೇ ಹೊಲೆಯ ಎಂದೇನೋ ಹೇಳಿದೆ,
ಆದರೆ ಹೊಲಸು ತಿಂದೂ ಹೊಲಸಾಡುವವನು ಶ್ರೇಷ್ಠನಾದ,
ಅಯ್ಯಾ ವಿಶ್ವ ಗುರುವೇ, ಸಮಾನತೆಯ ಹರಿಕಾರನೆ,
ನೀನೇ ಜಾತಿಯಾದೇ, ನೀನೇ ಧರ್ಮವಾದೆ, ನೀನೇ ದೇವರಾದೆ,
ಇದಕ್ಕಾಗಿ ನಿನ್ನನ್ನು ನಾನು ಮಾತ್ರ ಕ್ಷಮಿಸುವುದಿಲ್ಲ,
ಇದನ್ನು ಹೇಳಿದರೆ ನಿನ್ನ ಜನ ಕಲ್ಲಿನಲ್ಲಿ ಹೊಡೆಯುತ್ತಾರೆ,
ಆತ್ಮಸಾಕ್ಷಿಗೆ ಓಗೊಟ್ಟು ಕರುಳು ಕಿವುಚುವ ವಾಸ್ತವ ತೆರೆದಿಟ್ಟರೆ ಕೊಲ್ಲುತ್ತಾರೆ,
ಅದಕ್ಕೆ ನಾನವರನ್ನು ಟೀಕಿಸುವುದಿಲ್ಲ,
ನಿನ್ನನ್ನೇ ಬ್ಯೆದು, ಕಣ್ಣೀರು ಹಿಂಗುವಂತೆ ಅತ್ತು ನಾನೇ ಸಮಾಧಾನ ಮಾಡಿಕೊಳ್ಳುತ್ತೇನೆ…
ಆದರೂ….
ಅಯ್ಯಾ ಬಸವಣ್ಣ,
ಸಮಾನತೆಗಾಗಿ ಅದರಿಂದ ಸಮಾಜದ ನೆಮ್ಮದಿಗಾಗಿ ಒಂದೇ ಒಂದು ಸಾರಿ ಮತ್ತೊಮ್ಮೆ ಹುಟ್ಟಿ ಬಾ,
ಅಲ್ಲಿಯವರೆಗೂ ನಿನಗಾಗಿ ಕಾಯುತ್ತಲೇ ಇರುತ್ತೇನೆ………
ಸಮಾನತೆ ಬಯಸುವ ಎಲ್ಲರಿಗೂ
ಬಸವ ಜಯಂತಿಯ ಶುಭಾಶಯಗಳು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ
ಲೇಖಕ-ವಿವೇಕಾನಂದ. ಎಚ್. ಕೆ