
ಕಲಬುರಗಿ ಜಿಲ್ಲೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕಿಯ ಮೇಲೆ ನಡೆದ ಕ್ರೂರ ಹತ್ಯೆ ಪ್ರಕರಣ ಎಲ್ಲರಲ್ಲೂ ಆತಂಕ ಮೂಡಿಸಿದೆ.
ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಸಮೀಪ ನಡುರಸ್ತೆಯಲ್ಲೇ ಶಿಕ್ಷಕಿಯನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದ ದುಷ್ಕರ್ಮಿಗಳು, ಬಳಿಕ ಶವವನ್ನು ರಸ್ತೆಬದಿಯಲ್ಲಿ ಸುಟ್ಟುಹಾಕಿದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ.
ಹತ್ಯೆಗೀಡಾದ ಶಿಕ್ಷಕಿಯನ್ನು 57 ವರ್ಷದ ಜ್ಯೋತಿ ಕಪಾಳೆ ಎಂದು ಗುರುತಿಸಲಾಗಿದೆ. ಅವರು ಕಲಬುರಗಿ ನಗರದ ಆನಂದ್ ಕಾಲೋನಿ ನಿವಾಸಿಯಾಗಿದ್ದು, ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂಜರಖೇಡ ಗ್ರಾಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಕೆಲಸದ ನಿಮಿತ್ತ ಬೀದರ್ನಲ್ಲಿ ವಾಸವಾಗಿದ್ದ ಅವರು, ವಾರಕ್ಕೊಮ್ಮೆ ಕಲಬುರಗಿಯಲ್ಲಿರುವ ಮನೆಗೆ ಆಗಮಿಸುತ್ತಿದ್ದರು.
ಘಟನೆಯ ದಿನ ಕಲಬುರಗಿಯಿಂದ ಬೀದರ್ ಕಡೆ ಪ್ರಯಾಣಿಸುತ್ತಿದ್ದ ವೇಳೆ, ಕಮಲಾಪುರದ ಕಲ್ಮೂಡ ಗ್ರಾಮದ ಬಳಿ ದುಷ್ಕರ್ಮಿಗಳ ಕೈಗೆ ಸಿಕ್ಕಿದ್ದಾರೆ ಎನ್ನಲಾಗುತ್ತಿದೆ. ಹಲ್ಲೆ ನಡೆಸಿ ಕೊಲೆ ಮಾಡಿದ ಬಳಿಕ, ಗುರುತು ಸಿಗದಂತೆ ಮಾಡಲು ಶವಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸದ್ಯ ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಯ ಹಿಂದಿನ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ. ಪೊಲೀಸರು ತನಿಖೆ ಚುರುಕುಗೊಳಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.