
ಬಲಗೈ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಒತ್ತಾಯಿಸಿ ಮಾ.25ರಂದು ಬುಧವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ಸಮಾವೇಶಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ವಯಂ ಪ್ರೇರಿತರಾಗಿ ಸಾವಿರಾರು ಬಲಗೈ ಸಮುದಾಯದ ಬಂಧುಗಳು ಭಾಗವಹಿಸಬೇಕು ಎಂದು ಛಲವಾದಿ ಮಹಾಸಭಾದ ತಾಲೂಕು ಅಧ್ಯಕ್ಷ ಸೊಣ್ಣಪ್ಪನಹಳ್ಳಿ ರಮೇಶ್ ಮನವಿ ಮಾಡಿದರು.
ತಾಲೂಕಿನ ಕೊನಘಟ್ಟ ಗ್ರಾಮದಲ್ಲಿ ಬಲಗೈ ಜಾತಿ ಸಮುದಾಯವರಿಂದ ವತಿಯಿಂದ ಮಾ.25 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಸಂಬಂಧಿಸಿದಂತೆ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನ್ಯಾಯಮೂರ್ತಿ ಎಚ್.ಎನ್.ನಾಗಮೋಹನ್ ದಾಸ್ ಆಯೋಗದ ಅವೈಜ್ಞಾನಿಕ ವರದಿಯನ್ನು ಕೂಡಲೇ ತಿರಸ್ಕರಿಸಬೇಕು, ಇಷ್ಟು ದಿವಸ ಹೊಲಯ ಹಾಗೂ ಮಾದಿಗರು ಸಹೋದರರೆಂದು ಭಾವಿಸಿದ್ದೆವು ಆದರೆ ಅವರ ಮನಸ್ಸುಗಳ ಮಧ್ಯೆ ಬೆಂಕಿ ಹಿಡುವ ಕೆಲಸವನ್ನು ಮಾಡಿದ್ದಾರೆ. ಒಳಮೀಸಲಾತಿ ಆಯೋಗದ ವರದಿಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಬಾರದು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಪಿಎಂಸಿ ಆನಂದ್ ಮಾತನಾಡಿ, ರಾಜ್ಯದಲ್ಲಿ ಸುಮಾರು 30 ಲಕ್ಷ ಇದ್ದ ಬಲಗೈ ಸಮಾಜದ ಜನಸಂಖ್ಯೆಯನ್ನು 24 ಲಕ್ಷಕ್ಕೆ ತಂದಿದ್ದಾರೆ. ಒಳಮೀಸಲಾತಿ ಹಂಚಿಕೆ ಮುನ್ನೆಲೆಗೆ ಬಂದ ಮೇಲೆ ಅದು ಸುಳ್ಳೆಂಬುದು ಸಾಬೀತಾಗಿದೆ. ಸಮೀಕ್ಷೆಯಲ್ಲಿ ಹೊಲೆಯ ಜನಾಂಗದವರು ಸರಿಯಾಗಿ ಪಾಲ್ಗೊಳ್ಳದೇ ವ್ಯತ್ಯಾಸವಾಗಿದೆ. ಪ್ರಾದೇಶಿಕವಾರು ಭಿನ್ನಭಿನ್ನವಾಗಿ ಜಾತಿಯನ್ನು ನಮೂದಿಸಿ ತೊಂದರೆಗೆ ಸಿಲಿಕಿದ್ದಾರೆ ಇದು ಮಕ್ಕಳ ಭವಿಷ್ಯಕ್ಕೆ ಕಂಟಕವಾಗಿದೆ ಮುಂಬರುವ ಮಾರ್ಚ್ 27 ರ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿಯನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಎಂಪಿಸಿಎಸ್ ನಿರ್ದೇಶಕ ಹಾಗೂ ಮುಖಂಡ ಎಂ ರಾಮಾಂಜಿನಪ್ಪ ಮಾತನಾಡಿ, ನ್ಯಾಯಮೂರ್ತಿ ನಾಗಮೋಹನ್ದಾಸ್ ರವರು ಸಮೀಕ್ಷೆಯನ್ನು ಪೂರ್ಣ ಪ್ರಮಾಣದಲ್ಲಿ ನಡೆಸದೇ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಅಗತ್ಯ ಅಂಕಿಅಂಶಗಳನ್ನು ಕ್ರೂಢೀಕರಿಸದೇ ಒಂದು ಜಾತಿಯನ್ನು ಒಲೈಸಲು ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ಜನಸಂಖ್ಯೆಯನ್ನು 04 ಭಾಗಗಳಾಗಿ ವಿಂಗಡಿಸಿ 1.38ಲಕ್ಷ ಬಲಗೈ ಸಮುದಾಯದ ಜನಸಂಖ್ಯೆಯನ್ನು ಅಲೆಮಾರಿ ಗುಂಪಿಗೆ, 2,58,915 ಜನಸಂಖ್ಯೆಯನ್ನು ಮಾದಿಗರ ಗುಂಪಿಗೆ ಸರ್ಕಾರದ ನಿಬಂಧನೆಗಳಿಗೆ ವಿರುದ್ಧವಾಗಿ 4,74,954 ಜನರನ್ನು ಆದಿಕರ್ನಾಟಕ, ಆದಿ-ದ್ರಾವಿಡ ಹಾಗೂ ಆದಿ-ಆಂಧ್ರಗಳೆಂದು ವಿಂಗಡಿಸಿ ಶೇಕಡ 1ರಷ್ಟು ಮೀಸಲಾತಿ ನಿಗದಿಪಡಿಸಲು ಶಿಫಾರಸ್ಸು ಮಾಡಿರುವುದಲ್ಲದೇ ಜನರಲ್ ಮೆರಿಟ್ ನಲ್ಲಿ ನೇಮಕವಾಗಿರುವ ಪರಿಶಿಷ್ಟ ಜಾತಿಯ ಬಲಗೈ ಸಮುದಾಯದ ನೌಕರರನ್ನು ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿರುವುದಲ್ಲದೇ ಸಾಮಾನ್ಯ ಸ್ಥಾನಗಳಲ್ಲಿ ಗೆದ್ದಿರುವ ಜನಪ್ರತಿನಿಧಿಗಳನ್ನು ಬಲಗೈ ಜನ ಪ್ರತಿನಿಧಿಗಳ ಒಟ್ಟಾರೆ ಸಂಖ್ಯೆಯಲ್ಲಿ ಪರಿಗಣಿಸಿ ದುರುದ್ದೇಶ ಪೂರಿತವಾದ ಪಕ್ಷಪಾತದಿಂದ ಕೂಡಿದ ವರದಿಯನ್ನು ಸಿದ್ದಪಡಿಸಿ ಚೆನ್ನಾಗಿ ಉಂಡವರು, ತ್ಯಾಗ ಮಾಡಬೇಕು ಎಂದು ಉದ್ದೇಶ ಪೂರ್ವಕವಾಗಿಯೇ ಬಲಗೈ ಸಮುದಾಯಕ್ಕೆ ಯಾವುದೇ ಮೀಸಲಾತಿ ಸೌಲಭ್ಯ ದೊರೆಯದಂತೆ ವರದಿ ನೀಡಿರುತ್ತಾರೆ. ಸದರಿ ವರದಿಯನ್ವಯ ರಾಜ್ಯ ಸರ್ಕಾವು ಪರಿಶಿಷ್ಟ ಜಾತಿಯ ಬಲಗೈ ಸಮುದಾಯವನ್ನು ಗ್ರೂಫ್-“ಬಿ”ಗೆ ಸೇರಿಸುವುದರ ಮೂಲಕ ಯಾವುದೇ ಉನ್ನತ ಹುದ್ದೆಗಳು ಹೊಲಯ/ಛಲವಾದಿ ಬಲಗೈ ಸಮುದಾಯಕ್ಕೆ ಸಿಗದಂತೆ ರೋಸ್ಟರ್ ಬಿಂದುಗಳನ್ನು ನಿಗದಿಪಡಿಸಿರುತ್ತದೆ ಎಂದರು.
ಈ ಸಂದರ್ಭದಲ್ಲಿ ರಮೇಶ್, ಸಂಜೀವಪ್ಪ, ಕೃಷ್ಣಪ್ಪ, ಆಂಜಿನಪ್ಪ, ರಾಜಣ್ಣ ಸೇರಿದಂತೆ ಬಲಗೈ ಸಮುದಾಯದ ಹಲವಾರು ಮುಖಂಡರು ಭಾಗವಹಿಸಿದ್ದರು.