ಕಣ್ಮನ ಸೆಳೆದ ವೀರತಿಪ್ಪಯ್ಯಸ್ವಾಮಿ ಜಾತ್ರೆಯ ನೀರುಬಂಡಿಗಳ ಮೆರವಣಿಗೆ

ತೂಬಗೆರೆ (ಕೆಳಗಿನ ಜೂಗನಹಳ್ಳಿ): ತೂಬಗೆರೆ ಹೋಬಳಿಯ ಕೆಳಗಿನ ಜೂಗನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಗೌರಿಬಿದನೂರು ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಯುಗಾದಿ ಹಬ್ಬದ ಮಾರನೇ ದಿನ ಸಂಪ್ರದಾಯಬದ್ಧವಾಗಿ ನಡೆಯುವ ಶ್ರೀ ವೀರತಿಪ್ಪಯ್ಯಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ಅಲಂಕಾರಿಕ ನೀರು ಬಂಡಿಗಳ ಮೆರವಣಿಗೆಯೊಂದಿಗೆ ಭಾಗವಹಿಸಿದ್ದರು.

ಜಾತ್ರೆಯ ಪ್ರಮುಖ ಆಕರ್ಷಣೆಯಾಗಿ ಸಿಂಗರಿಸಲ್ಪಟ್ಟ ನೀರುಬಂಡಿಗಳ ಮೆರವಣಿಗೆ ಎಲ್ಲರ ಕಣ್ಮನ ಸೆಳೆಯಿತು. ಘಾಟಿ ಸುಬ್ರಹ್ಮಣ್ಯ ಸುತ್ತಮುತ್ತಲಿನ ಗ್ರಾಮಗಳ ರೈತರು ತಮ್ಮ ದನಗಳನ್ನು ಅಲಂಕರಿಸಿ, ನೀರುಬಂಡಿಗಳನ್ನು ಕಟ್ಟಿಕೊಂಡು ಭಕ್ತಿಭಾವದಿಂದ ಮೆರವಣಿಗೆ ನಡೆಸಿದ ದೃಶ್ಯ ಗಮನಾರ್ಹವಾಗಿತ್ತು.

ಬಣ್ಣಬಣ್ಣದ ಅಲಂಕಾರಗಳಿಂದ ಸಜ್ಜುಗೊಂಡ ಎತ್ತುಗಳು, ಕಳಶಗಳು ಮತ್ತು ಸಂಪ್ರದಾಯಬದ್ಧ ನೀರುಬಂಡಿಗಳು ಜಾತ್ರೆಯ ಸೊಬಗನ್ನು ಹೆಚ್ಚಿಸಿತು. ಗ್ರಾಮೀಣ ಸಂಸ್ಕೃತಿ, ಪರಂಪರೆ ಮತ್ತು ರೈತರ ಜೀವನಶೈಲಿಯನ್ನು ಪ್ರತಿಬಿಂಬಿಸಿದ ಈ ಮೆರವಣಿಗೆಗೆ ಸಾವಿರಾರು ಜನ ಸಾಕ್ಷಿಯಾದರು.

ಪರಿಷೆಗೆ ಬಂದಿದ್ದ ಭಕ್ತರಿಗೆ ಮಜ್ಜಿಗೆ ಮತ್ತು ಪಾನಕ ವಿತರಣೆ ಮಾಡಲಾಯಿತು. ಭಕ್ತರ ಸಂಭ್ರಮ ಹಾಗೂ ಅಪಾರ ಭಕ್ತ ಸಮೂಹ ಸೇರಿ ಜಾತ್ರೆಗೆ ವಿಶೇಷ ಮೆರುಗು ತಂದವು. ಇಂತಹ ಸಾಂಪ್ರದಾಯಿಕ ಉತ್ಸವಗಳು ಸಮಾಜದಲ್ಲಿ ಒಗ್ಗಟ್ಟು ಮತ್ತು ಸಂಸ್ಕೃತಿ ಮೌಲ್ಯಗಳನ್ನು ಬಲಪಡಿಸುತ್ತವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಧಾ ಮಂಜುನಾಥ್, ಮುಖಂಡರಾದ ಕುಮಾರ್, ಯುವ ಮುಖಂಡ ಉದಯ ಆರಾಧ್ಯ ಹಾಗೂ ಸುತ್ತಮುತ್ತಲಿನ ರೈತರು ಜಾತ್ರೆಯಲ್ಲಿ ಭಾಗವಹಿಸಿ ಭಕ್ತರೊಂದಿಗೆ ಬೆರೆತು ಹಬ್ಬದ ಉತ್ಸಾಹ ಹಂಚಿಕೊಂಡರು.

Leave a Reply

Your email address will not be published. Required fields are marked *

error: Content is protected !!