ಯುಗಾದಿ, ರಂಜಾನ್ ಹಬ್ಬ ವಿಶೇಷ: ಜೂಜಾಟ ಸೇರಿದಂತೆ ಅಕ್ರಮ ಚಟುವಟಿಕೆ ತಡೆಗೆ ಪೊಲೀಸ್ ಇಲಾಖೆ ಕಸರತ್ತು: ಬೆಳ್ಳಂಬೆಳಗ್ಗೆ ರೌಡಿ ಪರೇಡ್: 70ಕ್ಕೂ ಹೆಚ್ಚು ರೌಡಿಗಳಿಗೆ ಬೆವರಿಳಿಸಿದ ಡಿವೈಎಸ್ ಪಿ ಪಾಂಡುರಂಗ

ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಸಪ್ಲೆ, ಕಾಲೇಜುಗಳ ಬಳಿ ಸುಖಾ ಸುಮ್ಮನೆ ಓಡಾಟ, ಏರಿಯಾಗಳಲ್ಲಿ ಹವಾ ಮೇಂಟೈನ್ ಮಾಡೋದು, ಹಫ್ತಾ ವಸೂಲಿ ಸೇರಿದಂತೆ ಇತರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗವಹಿಸಿದರೆ ಬಾಲ ಕಟ್ ಮಾಡಿ ಗಡಿಪಾರು ಮಾಡಲಾಗುವುದು ಎಂದು ದೊಡ್ಡಬಳ್ಳಾಪುರ ಉಪವಿಭಾಗ ಡಿವೈಎಸ್ ಪಿ ಪಾಂಡುರಂಗ ಎಚ್ಚರಿಕೆ ನೀಡಿದರು.

ರೌಡಿಶೀಟರ್ ಗಳು ಹೆಚ್ಚಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿರುವ ಹಿನ್ನೆಲೆ ಇಂದು ದೊಡ್ಡಬಳ್ಳಾಪುರ ಡಿವೈಎಸ್ ಪಿ ಉಪವಿಭಾಗದಲ್ಲಿ ರೌಡಿ ಪರೇಡ್ ನಡೆಸಲಾಯಿತು.

ಇಂದು ಬೆಳ್ಳಂಬೆಳಗ್ಗೆ ನಡೆದ ರೌಡಿ ಪರೇಡ್‌ನಲ್ಲಿ ಉಪವಿಭಾಗದ ವ್ಯಾಪ್ತಿಯ ಒಟ್ಟು 7 ಪೊಲೀಸ್ ಠಾಣೆಗಳ 70ಕ್ಕೂ ರೌಡಿ ಶೀಟರ್‌ಗಳು ಭಾಗವಹಿಸಿದ್ದರು.

ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಮಾಜದಲ್ಲಿ ಸನ್ನಡತೆಯಿಂದ ಬದುಕುವಂತೆ ಸಲಹೆ ನೀಡಿದರು.

ಉದ್ದೇಶ ಪೂರ್ವಕವಾಗಿ ಕಾನೂನಿನ ಭಯವಿಲ್ಲದೇ ಜನಸಾಮಾನ್ಯರಿಗೆ ತೊಂದರೆ ನೀಡುವವರನ್ನು ರೌಡಿಪಟ್ಟಿಗೆ ಸೇರಿಸಲಾಗಿದೆ. ಕೆಲವರಿಗೆ ತಾನು ಮಾಡಿರುವ ತಪ್ಪುಅರಿವಿಗೆ ಬಂದಿದ್ದು, ಮತ್ತೆ ಕೆಲವರಿಗೆ ಇನ್ನೂ ತಿಳುವಳಿಕೆ ಬಾರದೇ ಪುನರಾರ್ವತಿತವಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಸಮಾಜದ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಅಂತವರಿಗೆ ಮತ್ತಷ್ಟು ಕಾನೂನಿನ ಕಠಿಣ ಶಿಕ್ಷೆ ವಿಧಿಸಲಾಗುವುದು. ಗಡಿಪಾರು ಸಹ ಮಾಡಲಾಗುವುದು ಎಂದು ಅವರು ತಿಳಿಸಿದರು.

ರೌಡಿ ಶೀಟರ್‌ಗಳು ಯಾವುದೇ ಕಾರಣಕ್ಕೂ ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಬಾರದು. ಅಂತಹ ಕೃತ್ಯಗಳಿಗೂ ಸಹ ಕುಮ್ಮಕ್ಕು ನೀಡಬಾರದು.

ಎಲ್ಲರಿಗೂ ತಂದೆ, ತಾಯಿ, ಮಡದಿ, ಮಕ್ಕಳು ಇರುತ್ತಾರೆ ಅವರಿಗೋಸ್ಕರ ರೌಡಿಶೀಟರ್ ಗಳು ಬದಲಾಗಬೇಕು. ಕೆಲವರು ಆಕಸ್ಮಿಕವಾಗಿ, ಪರೋಕ್ಷವಾಗಿ ತಪ್ಪು ಮಾಡಿರಬಹುದು, ಇನ್ನು ಕೆಲವರು ಬೇಕಂತಲೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಅಂತವರ ಮೇಲೆ ನಮ್ಮ ಇಲಾಖೆ ಹೆಚ್ಚಿನ ನಿಗಾವಹಿಸಿ ಮತ್ತಷ್ಟು ಕಾನೂನಿನ ಕ್ರಮ ಕೈಗೊಳ್ಳುತ್ತೇವೆ. ಯಾರೇ ಶಿಫಾರಸ್ಸು ಮಾಡಿದರೂ ರೌಡಿ ಹಾಳೆಯಿಂದ ಹೆಸರು ತೆಗೆಯುವುದಿಲ್ಲ. ರೌಡಿ‌ ಶೀಟರ್ ಓಪನ್ ಮಾಡೋದಕ್ಕೆ ಕೇವಲ ಒಂದು ಗಂಟೆ ಸಾಕು, ಆದರೆ, ರೌಡಿ ಪಟ್ಟಿಯಿಂದ ಹೆಸರು ತೆಗೆಯುವುದಕ್ಕೆ ಹಲವು ವರ್ಷಗಳೇ ಬೇಕಾಗುತ್ತದೆ. ಆದ್ದರಿಂದ ಯಾರೂ ಸಹ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಬಾರದು ಎಂದರು.

ರೌಡಿಶೀಟರ್ ಗಳು ಹಳೆಯ ಚಾಳಿ ಮುಂದುವರಿಸಬಾರದು. ಸಮಾಜದಲ್ಲಿ ಗೌರವಯುತವಾದ ಜೀವನ ರೂಪಿಸಿಕೊಳ್ಳಬೇಕು. ಅನಗತ್ಯ ತಂಟೆಗಳಲ್ಲಿ ಮೂಗ ತೂರಿಸಿದರೆ ಹುಷಾರ್‌ ಶಿಕ್ಷೆ ಕಟ್ಟಿಟ್ಟಬುತ್ತಿ ಎಂದರು.

ಈ ವೇಳೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಸಾದಿಕ್ ಪಾಷಾ, ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಅಮರೇಶ್ ಗೌಡ, ಹೊಸಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್, ದೊಡ್ಡಬೆಳವಂಗಲ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕಲ್ಲಪ್ಪ ಶ‌ಂಕರಪ್ಪ ಖರಾತ್ ಸೇರಿದಂತೆ ವಿಜಯಪುರ, ವಿಶ್ವನಾಥಪುರ, ಚೆನ್ನರಾಯಪಟ್ಟಣ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಗಳು‌ ಹಾಗೂ‌ ಸಿಬ್ಬಂದಿ ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!