
ತಾಲ್ಲೂಕಿನ ಕಾಡತಿಪ್ಪೂರು ಗ್ರಾಮದಲ್ಲಿನ ಇತಿಹಾಸ ಪ್ರಸಿದ್ಧ ಅರಸೇಶ್ವರಿ ದೇಗುಲದ ಇನಾಮ್ತಿ ಜಮೀನನ್ನು ಕಂದಾಯ ಇಲಾಖೆ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಜೊತೆ ಶಾಮಿಲಾಗಿ ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದರಿಂದ ಗ್ರಾಮ ದೇವತೆ ಅರಸೇಶ್ವರಿ ದೇವಿಯ ಜಾತ್ರಾ ಮಹೋತ್ಸವ ಮಾಡಲಾಗುತ್ತಿಲ್ಲ. ಖಾಸಗಿ ವ್ಯಕ್ತಿ ಅರಸೇಶ್ವರಿ ಜಾತ್ರೆ ಮಾಡಲು ಅಡ್ಡಿಪಡಿಸುತ್ತಿದ್ದಾರೆ ಎಂದು ಕಾಡತಿಪ್ಪೂರು, ತಣ್ಣೀರನಹಳ್ಳಿ, ಮೂಡ್ಲುಕಾಳೇನಹಳ್ಳಿ ಗ್ರಾಮಸ್ಥರು ಆರೋಪಿಸಿ ತಾಲ್ಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಈ ವೇಳೆ ಮುಖಂಡ ಕೃಷ್ಣಮೂರ್ತಿ ಮಾತನಾಡಿ, ಅರಸೇಶ್ವರಿ ನಮ್ಮ ಭಾಗದ ಗ್ರಾಮದೇವತೆಯಾಗಿದೆ. ಸುಮಾರು 50-60 ವರ್ಷಗಳಿಂದಲೂ ಇಲ್ಲಿ ಪ್ರತಿವರ್ಷ ಅದ್ದೂರಿಯಾಗಿ 7 ದಿನಗಳ ಕಾಲ ಜಾತ್ರಾಮಹೋತ್ಸವ ಮಾಡಿಕೊಂಡು ಬರಲಾಗುತ್ತಿದೆ. ಸುತ್ತಮುತ್ತಲಿನ 20 ಸಾವಿರಕ್ಕೂ ಅಧಿಕ ಭಕ್ತಾಧಿಗಳು ಭಾಗಿಯಾಗುತ್ತಾರೆ. ಇಂತಹ ದೇಗುಲದ ಇನಾಮ್ತಿ ಜಮೀನನ್ನು ಭ್ರಷ್ಟ ಕಂದಾಯ ಇಲಾಖೆ ಅಧಿಕಾರಿಗಳು ದೇಗುಲದ ಸರ್ವೇ ನಂ.69ರ 4 ಎಕರೆ ಜಮೀನನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದಾರೆ. ಇದರಿಂದಾಗಿ ನಾವು ಜಾತ್ರೆಯನ್ನ ಮಾಡಲಾಗುತ್ತಿಲ್ಲ. ಖಾಸಗಿ ವ್ಯಕ್ತಿ ದೇವಸ್ಥಾನ ಯಾವುದೇ ಕಾರ್ಯಗಳನ್ನ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳು ಲೋಪಗಳನ್ನ ಸರಿಪಡಿಸಿ ಅರಸೇಶ್ವರಿಯ ಹೆಸರಿಗೆ ಖಾತೆ ಮಾಡಿ ಜಾತ್ರೆಯನ್ನು ಮಾಡಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಸರ್ವೇ ನಂಬರ್ 50 ರಲ್ಲಿ 4 ಎಕರೆ ಸರ್ಕಾರಿ ಗುಂಡುತೋಪನ್ನು ಅಕ್ರಮವಾಗಿ ಖಾತೆ ಮಾಡಿದ್ದು, ಇದನ್ನು ವಜಾಮಾಡಬೇಕು. ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಿರುವ ನಕಾಶೆ ರಸ್ತೆಯನ್ನು ತೆರವು ಮಾಡಿಕೊಡಬೇಕು. ಎಸ್.ಟಿ ಸಮುದಾಯ ವಾಸವಾಗಿರುವ ಕುಟುಂಬಗಳಿಗೆ ಖಾತೆ ಮಾಡಿಕೊಟ್ಟು ವಾಸಿಸಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ನಂತರ ಕೃಷ್ಣಮೂರ್ತಿ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕಾಡತಿಪ್ಪೂರು. ತಣ್ಣೀರನಹಳ್ಳಿ ಮತ್ತು ಮೂಡ್ಲಕಾಳೇನಹಳ್ಳಿ ಗ್ರಾಮಸ್ಥರು 3ಕ್ಕೂ ಹೆಚ್ಚು ಸಮಸ್ಯೆಗಳನ್ನು ಮುಂದಿಟ್ಟುಕೊಂಡು ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ತಾಲ್ಲೂಕು ವೃತ್ತದಿಂದ ತಮಟೆ ವಾದ್ಯದ ಮೂಲಕ ಘೋಷಣೆ ಕೂಗುತ್ತಾ ತಾಲ್ಲೂಕು ಕಚೇರಿ ಮುಂದೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಸಮಸ್ಯೆ ಬಗೆಹರಿಸುವಂತೆ ಕೋರಿ ಸುಮಾರು 4 ವರ್ಷಗಳಿಂದ ಹೋರಾಡುತ್ತಿದ್ದೇವೆ. ಅಧಿಕಾರಿಗಳಿಗೆ ಸಾಕಷ್ಟು ಮನವಿ ಮಾಡಿದ್ದೇವೆ. ಇದುವರೆಗೂ ಒಂದೇ ಒಂದು ಸಮಸ್ಯೆಯನ್ನೂ ಬಗೆಹರಿಸಿಲ್ಲ. ನಾವು ಬಡವರು, ದಲಿತರು, ಅಮಾಯಕರು ಎಂದು ತಿಳಿದ ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ. ಕಿವುಡರಾಗಿದ್ದಾರೆ ಅವರಿಗೆ ನಮ್ಮ ಧ್ವನಿ ಕೇಳಿಸುತ್ತಿಲ್ಲ. ನಮ್ಮ ನೋವು ಅವರಿಗೆ ಅರ್ಥವಾಗುತ್ತಿಲ್ಲ. ಹೀಗೆ ಮುಂದುವರಿದರೆ ನಾವು ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಉಪವಿಭಾಗಾಧಿಕಾರಿ ಕಚೇರಿಯ ತಹಶೀಲ್ದಾರ್ ಮಹೇಶ್ ಮನವಿ ಪತ್ರವನ್ನ ಸ್ವೀಕರಿಸಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಗಮನಕ್ಕೆ ತಂದು ಕ್ರಮ ಜರುಗಿಸುವ ಭರವಸೆ ನೀಡಿದರು. ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಈ ವೇಳೆ ಮುಖಂಡರಾದ ಶಿವರಾಜು, ಗಂಗರಾಜು, ಗೋವಿಂದಪ್ಪ, ರಾಜಣ್ಣ, ಗಂಗಹನುಮಯ್ಯ, ದೇವರಾಜಮ್ಮ ಮತ್ತಿತ್ತರರು ಇದ್ದರು.