
ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಫೈನಲ್ಸ್ ಪಂದ್ಯದಲ್ಲಿ ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಅದ್ಭುತವಾದ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಎದುರಾಳಿ ತಂಡಕ್ಕೆ 256 ರನ್ ಗಳ ಅತ್ಯಧಿಕ ರನ್ ಟಾರ್ಗೆಟ್ ನೀಡಿತ್ತು. ಭಾರತದ ಪರ ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಪರಿಣಾಮ ಭಾರತ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು.
ಬೃಹತ್ ರನ್ ಚೇಸಿಂಗ್ ಗೆ ಇಳಿದ ನ್ಯೂಜಿಲ್ಯಾಂಡ್ ತಂಡ 100 ರನ್ ಗಳನ್ನು ಗಳಿಸುವ ಮುನ್ನವೇ ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿತು.
ಅಂತಿಮವಾಗಿ ಭಾರತದ ಎದುರು ನ್ಯೂಜಿಲ್ಯಾಂಡ್ ಇನ್ನೂ ಒಂದು ಓವರ್ ಬಾಕಿ ಇರುವಾಗಲೇ 159 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತು.
ನ್ಯೂಜಿಲೆಂಡ್ ತಂಡವನ್ನು ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದ ಭಾರತ ತಂಡ ಸುಮಾರು 20.4 ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತವನ್ನು ಬಹುಮಾನವಾಗಿ ಪಡೆದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಈ ಬಾರಿಯ ಟಿ20 ವಿಶ್ವಕಪ್ಗಾಗಿ ದಾಖಲೆ ಮಟ್ಟದ ಒಟ್ಟು ಬಹುಮಾನದ ಮೊತ್ತವನ್ನು ಘೋಷಿಸಿದೆ.
ಈ ಬಾರಿಯ ಟೂರ್ನಿಗಾಗಿ ಐಸಿಸಿ ಒಟ್ಟು 11.25 ಮಿಲಿಯನ್ ಅಮೆರಿಕನ್ ಡಾಲರ್ (ಅಂದಾಜು 93.5 ಕೋಟಿ ರೂಪಾಯಿ) ಮೊತ್ತವನ್ನು ಬಹುಮಾನಕ್ಕಾಗಿ ಮೀಸಲಿಟ್ಟಿತ್ತು. ಕ್ರಿಕೆಟ್ ಇತಿಹಾಸದಲ್ಲೇ ಟಿ20 ವಿಶ್ವಕಪ್ಗೆ ನೀಡಲಾದ ಅತಿ ದೊಡ್ಡ ಬಹುಮಾನದ ಮೊತ್ತ ಇದಾಗಿದೆ. ಪ್ರತಿಯೊಂದು ಪಂದ್ಯದ ಗೆಲುವಿಗೂ ಸುಮಾರು 25 ಲಕ್ಷ ರೂಪಾಯಿಗಳ ಬೋನಸ್ ನೀಡಲಾಗಿದ್ದು, ಇದು ಈ ಟೂರ್ನಿಯಲ್ಲಿ ಅಚ್ಚರಿಯ ಫಲಿತಾಂಶ ನೀಡಿದ ಸಣ್ಣ ತಂಡಗಳಿಗೂ ಆರ್ಥಿಕವಾಗಿ ಸಹಾಯವಾಗಿದೆ.