
ಬಳ್ಳಾರಿ ನಗರದ “ಗುರುಕುಲ ವಸತಿ ಶಾಲೆ”ಯಲ್ಲಿ ಶನಿವಾರ ರಾತ್ರಿ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಕಬ್ಬಿಣದ ಸರಳು, ಸ್ಕ್ರೂಡ್ರೈವರ್, ಚಾಕುವಿನಿಂದ ದಾಳಿ ಮಾಡಿದ್ದು, ಘಟನೆಯಲ್ಲಿ ಒಬ್ಬ ವಿದ್ಯಾರ್ಥಿ ಮೃತಪಟ್ಟಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನೂ ಆರು ಮಂದಿ ಗಾಯಗೊಂಡಿದ್ದಾರೆ.
ಮೃತ ಬಾಲಕನನ್ನು ಆಂಧ್ರ ಪ್ರದೇಶದ ಅದವಾನಿಯ ಹೇಮಂತ್ ಎಂದು ಗುರುತಿಸಲಾಗಿದೆ.
ಮೃತದೇಹವನ್ನು ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರಕ್ಕೆ (ವಿಮ್ಸ್) ಮರಣೋತ್ತರ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ.
ಇವರೆಲ್ಲರೂ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎನ್ನಲಾಗಿದೆ.
ರಾತ್ರಿ ಊಟದ ಬಳಿಕ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ಮಲಗಿದ್ದರು. ಈ ವೇಳೆ ಆರೋಪಿತ ವಿದ್ಯಾರ್ಥಿ ಮಂಚದ ರಾಡ್, ಸ್ಕ್ರೂ ಡ್ರೈವರ್ ಹಾಗೂ ರೇಡಿಯಮ್ ಕಟರ್, ಚಾಕುವಿನಿಂದ ಸಹಪಾಠಿಗಳ ಮೇಲೆ ದಾಳಿ ನಡೆಸಿದ್ದಾನೆ ಎನ್ನಲಾಗಿದೆ.
ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮೃತಪಟ್ಟಿದ್ದಾನೆ.
ಆರೋಪಿತ ವಿದ್ಯಾರ್ಥಿ ಪರಾರಿಯಾಗಿದ್ದು, ಮೃತ ಬಾಲಕನ ಪೋಷಕರು ಶಾಲಾ ಆಡಳಿತ ಮಂಡಳಿಯ ನಿರ್ಲಕ್ಷ್ಯ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ. ಅಲ್ಲದೆ ದಾಳಿ ನಡೆಸಿದ ವಿದ್ಯಾರ್ಥಿ ಮಾದಕ ವ್ಯಸನಕ್ಕೆ ದಾಸನಾಗಿದ್ದನಾ ಎಂಬ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.