ಕೆಲವು ಪಾಪರಾಜಿಗಳು ಮತ್ತು ನೆಟ್ಟಿಗರ ವಿಕೃತಿ……

ಇತ್ತೀಚೆಗೆ ಸಿನಿಮಾ ನಟಿಯರು ಪಾಪರಾಜಿಗಳು ಎಂದು ಕರೆಯಲ್ಪಡುವ ಕೆಲವು ಛಾಯಾಚಿತ್ರಗಾರರು ಮತ್ತು ಸಾಮಾಜಿಕ ಜಾಲತಾಣಗಳ ವಿಕೃತ ಮನಸ್ಸಿನ ಅತಿರೇಕಿಗಳ ಹುಚ್ಚಾಟಗಳಿಗೆ ಬಲಿಯಾಗಿ, ಅವರ ವಿರುದ್ಧ ಮಾತನಾಡುತ್ತಿದ್ದಾರೆ. ಅಂದರೆ ಕೆಲವು ಸಾರ್ವಜನಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ ನಟಿಯರ ಕೆಲವು ದೃಶ್ಯಗಳನ್ನು ಸೆರೆಹಿಡಿದು, ಬೇಕಂತಲೇ ಅವರ ದೇಹದ ಉಬ್ಬು ತಗ್ಗುಗಳ ಮೇಲೆ ಕ್ಯಾಮೆರಾ ಕೇಂದ್ರೀಕರಿಸಿ ಅಥವಾ ಜೂಮ್ ಮಾಡಿ ಅವರನ್ನು ಕೆಟ್ಟದಾಗಿ ತೋರಿಸುವ ಒಂದು ರೀತಿಯ ದೃಶ್ಯಾತ್ಮಕ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅದಕ್ಕೆ ಕೆಲವು ಸಿನಿಮಾ ನಟರು ಸಹ ಬೆಂಬಲಿಸಿದ್ದಾರೆ.

ಯಾವುದೇ ರೀತಿಯ ಅಶ್ಲೀಲ, ದೌರ್ಜನ್ಯ, ಶೋಷಣೆ, ಹಿಂಸೆಯನ್ನು ಎಲ್ಲರೂ ಖಂಡಿಸಲೇಬೇಕು. ಅದಕ್ಕೆ ಪ್ರಬುದ್ಧ ಮನಸ್ಸುಗಳಾದ ಎಲ್ಲರದೂ ಬೆಂಬಲವಿದೆ. ಜೊತೆಗೆ,

ಈ ಕೃತಕ ಬುದ್ಧಿಮತ್ತೆಯ ಅತ್ಯಂತ ಆಧುನಿಕ ಕಾಲಘಟ್ಟದಲ್ಲಿ ಈ ವಿಷಯವನ್ನು ಸೂಕ್ಷ್ಮವಾಗಿ, ವಿಶಾಲವಾಗಿ, ಮುಕ್ತವಾಗಿ, ಯಾವುದೇ ಭಾವನಾತ್ಮಕ ಅಂಶಗಳಿಗೆ ಒಳಗಾಗದೆ ನಿಂತು ನೋಡಿದಾಗ……

ಕೇವಲ ಪಾಪರಾಜಿಗಳು ಮಾತ್ರವಲ್ಲ, ಕೆಲವೊಬ್ಬ ಸಾಮಾನ್ಯ ವ್ಯಕ್ತಿಗಳು ಸಹ ಮಹಿಳೆಯರ ದೃಶ್ಯಗಳನ್ನು ಜೂಮ್ ಮಾಡಿ ತಮಗೆ ಆಸಕ್ತಿ ಇರುವ ಭಾಗಗಳನ್ನು ತೀರ ಹತ್ತಿರದಿಂದ ನೋಡುವ ತಂತ್ರಜ್ಞಾನ ಉಪಯೋಗಿಸಿಕೊಂಡು ಅದನ್ನು ದುರುಪಯೋಗ ಪಡಿಸಿಕೊಳ್ಳುವ ವಾತಾವರಣ ಬೆಳೆದಿದೆ. ಇನ್ನೂ ಕೆಲವರು ಮತ್ತಷ್ಟು ಮುಂದುವರಿದು ಆಧುನಿಕ ತಂತ್ರಜ್ಞಾನದ ಬಳಕೆ ತಿಳಿದಿದ್ದರೆ ಆ ಮಹಿಳೆಯರ ಮೈ ಮೇಲಿನ ಹೊದಿಕೆಯನ್ನು ಸಹ ತೆಗೆದಂತೆ ಮಾಡಿ ನಗ್ನ ದೃಶ್ಯಗಳನ್ನು ವೀಕ್ಷಿಸುವ ಸಾಧ್ಯತೆಯೂ ಇದೆ ಮತ್ತು ಅದನ್ನೇ ಚಟವಾಗಿ ಬೆಳೆಸಿಕೊಂಡಿದ್ದಾರೆ ಎಂದು ಕೇಳಲ್ಪಟ್ಟಿದ್ದೇನೆ.

ಮೂಲತಃ ಪ್ರಕೃತಿಯೇ ಬೆತ್ತಲು ಮತ್ತು ಅದೇ ಸಹಜ ಸೌಂದರ್ಯ. ಎಲ್ಲಾ ಜೀವಿಗಳು ಸಹ ಬೆತ್ತಲೆ ಮತ್ತು ಹುಟ್ಟಿನಿಂದ ಮನುಷ್ಯ ಪ್ರಾಣಿ ಸಹ. ಆದರೆ ಎಲ್ಲೋ ನಾಗರಿಕತೆ ಎಂಬ ಭ್ರಮೆ ಬೆಳೆದಂತೆ ಅಥವಾ ಸ್ವಚ್ಚತೆಯ ಕಾರಣಕ್ಕಾಗಿ ಅಥವಾ ರಕ್ಷಣೆಯ ವಿಧಾನವಾಗಿ ಅತ್ಯಂತ ತೆಳುವಾದ ತುಂಡು ಬಟ್ಟೆಗಳು ಮೈ ಮುಚ್ಚತೊಡಗಿರಬೇಕು. ಕೊನೆಗೆ ಅದು ಗಾಳಿ, ನೀರು, ಆಹಾರದ ನಂತರದ ಬದುಕಿನ ಅತ್ಯಂತ ಅನಿವಾರ್ಯ ಅವಶ್ಯಕತೆಯಾಗಿ ಬೆಳವಣಿಗೆ ಹೊಂದಿದೆ. ಈಗ ಟೆಕ್ಸ್ ಟೈಲ್ ಟೆಕ್ನಾಲಜಿ ಮತ್ತು ಫ್ಯಾಷನ್ ಡಿಸೈನಿಂಗ್ ಒಂದು ಬೃಹತ್ ಉದ್ಯಮವಾಗಿ ಬೆಳವಣಿಗೆ ಹೊಂದಿದೆ…..

ಸಾಮಾನ್ಯ ಅರಿವಿನ ಎಲ್ಲರಿಗೂ ತಿಳಿದಿದೆ, ಬಟ್ಟೆಗಳ ಹಿಂದಿನ ಅಂಗಾಗಗಳ ಬಗ್ಗೆ. ಅದನ್ನು ಯಾರೋ ಹುಚ್ಚರು ಅಥವಾ ವಿಕೃತರು ಅಥವಾ ಕ್ರಿಮಿನಲ್ ಗಳು ‌ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟರೆ ನಾವು ಮಾಡುವುದಾದರೂ ಏನು.

ನಮ್ಮ ಹೆಣ್ಣು ಮಕ್ಕಳು ನಮ್ಮದೇ ದೇಹದ ಮುಂದುವರಿದ ಇನ್ನೊಂದು ಭಾಗ ಮಾತ್ರ. ಬದುಕಲು ಗಾಳಿ, ನೀರು, ಆಹಾರ ಸೇವಿಸಲು ಇರುವ ರಂಧ್ರಗಳಂತೆ ಸಂತತಿಯ ಮುಂದುವರಿಕೆಗೆ ಕೆಲವು ಅಂಗಗಳಿವೆ ಅಷ್ಟೇ. ಹುಚ್ಚ ಅಥವಾ ಹುಚ್ಚಿ ಅದನ್ನು ಚಿತ್ರೀಕರಿಸಿದರೆ ಅದು ಹುಚ್ಚರ ಸಮಸ್ಯೆ. ನಾವ್ಯಾಕೇ ತಲೆಕೆಡಿಸಿಕೊಳ್ಳಬೇಕು…..

ಆದ್ದರಿಂದ ಈ ವಿಕೃತ ಹುಚ್ಚರ ಸಂತೆಯಲ್ಲಿ ಅದನ್ನು ತಡೆಯುವುದು ಸಾಧ್ಯವೇ ಇಲ್ಲ. ಆದರೆ ಸಾರ್ವಜನಿಕವಾಗಿ ಅದನ್ನು ಪ್ರದರ್ಶಿಸುವವರ ವಿರುದ್ಧ ನಿಷೇಧ ಹೇರುವ ಅಥವಾ ಕಾನೂನು ಕ್ರಮ ತೆಗೆದುಕೊಳ್ಳುವ ಸಾಧ್ಯತೆ ಮಾತ್ರ ಇದೆ.

ನಮ್ಮ ಸುತ್ತಮುತ್ತಲು ನಡೆದರೆ ಅಥವಾ ಪರಿಚಿತರ ನಡುವೆ ನಡೆದರೆ ಹೇಗೋ ತಡೆಯಬಹುದು. ಆದರೆ ವಿಶ್ವದ ಯಾವುದೋ ಮೂಲೆಯಲ್ಲಿ, ಯಾರೋ ವ್ಯಕ್ತಿ, ಯಾರಿಗೂ ಕಂಡುಹಿಡಿಯಲು ಸಾಧ್ಯವಿಲ್ಲದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದರೆ ಅದನ್ನು ತಡೆಯುವುದು ತುಂಬಾ ಕಷ್ಟ. ಜೊತೆಗೆ ಎಷ್ಟು ಜನರ ಮೇಲೆ ಅಂತ ಈ ರೀತಿಯ ಕ್ರಮ ಕೈಗೊಳ್ಳುವುದು…..

ಇದನ್ನು ಮೀರಿ ನಾವು ಮತ್ತೊಂದು ಮಾನಸಿಕ ಹಂತವನ್ನು ತಲುಪಬೇಕಾದ ಪರಿಸ್ಥಿತಿಯಲ್ಲಿದ್ದೇವೆ. ಅಂದರೆ ಶೀಲಾ ಅಶ್ಲೀಲಗಳು ದೇಹದ ಯಾವುದೇ ಭಾಗದಲ್ಲಿ ಅಡಗಿಲ್ಲ, ಮಾನಸಿಕವಾಗಿಯೂ ಶೀಲಾ ಅಶ್ಲೀಲಗಳ ಅಸ್ತಿತ್ವವೇ ಇಲ್ಲ, ಮನುಷ್ಯ ಎಂಬ ಪ್ರಾಣಿ, ಗಂಡು ಹೆಣ್ಣಿನ ರೂಪದಲ್ಲಿ, ಮೈಮೇಲೆ ಅತ್ಯಂತ ತೆಳುವಾದ ಬಟ್ಟೆಗಳನ್ನು ಹಾಕಿಕೊಂಡು ಈ ಜನಾಂಗವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾನೆ/ಳೆ.

ಹೆಣ್ಣಾಗಲಿ ಗಂಡಾಗಲಿ, ಅವರ ಯಾವುದೇ ಗುಪ್ತಾಂಗಗಳಾಗಲಿ, ಶೀಲವೂ ಅಲ್ಲ, ಅಶ್ಲೀಲವು ಅಲ್ಲ. ಕಣ್ಣು, ಕಿವಿ, ಕೈ, ಕಾಲು, ಶಿಶ್ನ, ಯೋನಿ, ತಲೆಯಂತೆ ಎಲ್ಲವೂ ಪ್ರಕೃತಿಯ ಸಹಜ ಕೊಡುಗೆ. ಗುಪ್ತಾಂಗವೂ ಇಲ್ಲ, ಮುಕ್ತಾಂಗವೂ ಇಲ್ಲ, ಬಾಯಿಯೂ ಒಂದೇ, ಗುದದ್ವಾರವೂ ಒಂದೇ. ಅದರ ಕೆಲಸ ಅದು ನಿರ್ವಹಿಸುತ್ತದೆ. ಅದಿಲ್ಲದೆ ಮನುಷ್ಯನಿಗೆ ಅಸ್ತಿತ್ವವೇ ಇಲ್ಲ. ಅದನ್ನು ವಿಶೇಷವಾಗಿ ಗುರುತಿಸುವ ಅವಶ್ಯಕತೆಯೂ ಇಲ್ಲ. ಊಟ, ನಿದ್ದೆ, ವಿಸರ್ಜನೆ, ಪ್ರಣಯ, ಮಿಲನ ಎಲ್ಲವೂ ಅತ್ಯಂತ ಸಹಜವಾದದ್ದು.

ಎಲ್ಲಾ ಪ್ರಾಣಿ ಪಕ್ಷಿಗಳು ಮುಖ್ಯವಾಗಿ ನಾಯಿ, ಹಸು, ಕೋಳಿ, ಕೋತಿ, ಆನೆ ಮುಂತಾದವು ಒಂದು ಚೂರೂ ಬಟ್ಟೆ ಹಾಕಿಕೊಳ್ಳದೆ, ನಮ್ಮಂತೆ ಆಸಕ್ತಿ, ಅವಕಾಶಕ್ಕೆ ಅನುಗುಣವಾಗಿ ಸಾರ್ವಜನಿಕವಾಗಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತವೆ ಮತ್ತು ತಮ್ಮ ವಾಂಚೆಗಳನ್ನು ಪೂರೈಸಿಕೊಂಡು ತಮ್ಮ ಪೀಳಿಗೆಯನ್ನು ಮುಂದುವರಿಸುತ್ತವೆ. ಅಂದಮೇಲೆ ನಮ್ಮದೇನು ವಿಶೇಷವಿಲ್ಲ. ಅದಕ್ಕಿಂತ ಹೆಚ್ಚಾಗಿ ಅವುಗಳಿಗೆ ಯಾವುದೇ ನೀತಿ, ನಿಯಮ, ರಕ್ಷಣೆ, ಏನೂ ಇಲ್ಲ. ನಮಗಾದರೇ ಕುಟುಂಬ ವ್ಯವಸ್ಥೆ, ಪೊಲೀಸು, ಕಾನೂನು, ರಕ್ಷಣೆ ಎಲ್ಲವೂ ಇದೆ. ನಮ್ಮ ದೊಡ್ಡ ಅನುಭಾವಿಕ ಇತಿಹಾಸವು ಇದೆ. ಒಳ್ಳೆಯದು ಮತ್ತು ಕೆಟ್ಟದ್ದರ ಅರಿವಿದೆ. ಅಂದಮೇಲೆ ನಮಗೆ ಯಾವ ಶೀಲ ಅಶ್ಲೀಲ.

ಸಹಜವಾಗಿ ಬದುಕುವ ಯೋಗ್ಯತೆ ಇಲ್ಲದೇ, ಯಾರೋ ಹುಚ್ಚರು, ಇನ್ಯಾರೋ ಹೆಣ್ಣಿನ ಉಬ್ಬುತಗ್ಗುಗಳನ್ನು ತೋರಿಸಿದರೆ ಅದು ಆ ಹೆಣ್ಣಿನ ತಪ್ಪಲ್ಲ. ಅದನ್ನು ಅನಾವಶ್ಯಕವಾಗಿ ತೋರಿಸಿದವನ ವಿಕೃತಿಯಷ್ಟೇ. ಅದಕ್ಕೆ ಅವನನ್ನು ಹೊಣೆ ಮಾಡಬೇಕೇ ಹೊರೆತು ಹೆಣ್ಣನ್ನಲ್ಲ. ಜೊತೆಗೆ ಆ ರೀತಿ ಮಾಡಿದ ವ್ಯಕ್ತಿ ಸ್ವತಃ ತಾಯಿಯ ಯೋನಿಯಿಂದ ಜನಿಸಿ, ಆಕೆಯ ಎದೆ ಹಾಲು ಕುಡಿದು ಬೆಳೆದವನು. ನಾವೆಲ್ಲರೂ ಸಹ ಅದೇ ರೀತಿಯೇ ಹುಟ್ಟಿರುವುದು. ಅಷ್ಟೂ ತಿಳುವಳಿಕೆ ಇಲ್ಲದ ವ್ಯಕ್ತಿ ಈ ಸಮಾಜದ ನಾಗರಿಕನಾಗಲು ಅನರ್ಹ. ಅವನೊಬ್ಬ ಮಾನಸಿಕ ಅಸ್ವಸ್ಥ ಅಷ್ಟೇ. ಹುಚ್ಚಾಸ್ಪತ್ರೆಯ ರೋಗಿ ಎಂದೇ ಪರಿಗಣಿಸಬೇಕು.

ನಮ್ಮ ತಾಯಿ, ತಂಗಿ, ಅಕ್ಕ, ಅತ್ತಿಗೆ, ಅಜ್ಜಿ, ಸೊಸೆ, ಮಗಳು, ಹೆಂಡತಿ ಎಲ್ಲರೂ ಹೆಣ್ಣುಗಳೇ. ಅಂದಮೇಲೆ ಮತ್ತೊಂದು ಹೆಣ್ಣಿನ ಅವಹೇಳನ ಮಾಡುವುದು ವಿಕೃತಿಯೇ ಹೊರತು ಬೇರೇನೂ ಅಲ್ಲ. ವಿಕೃತರಿಗೆ ಹೆಚ್ಚಿನ ಮಹತ್ವ ಕೊಡುವ ಅವಶ್ಯಕತೆಯೂ ಇಲ್ಲ ಮತ್ತು ಹಾಗೆ ತೋರಿಸಿದರೆ ಅದನ್ನು ನಿರ್ಲಕ್ಷಿಸಿ ಮುಂದೆ ಹೋಗುವ ಮನಸ್ಥಿತಿಯನ್ನು ಗಂಡು ಹೆಣ್ಣು ಇಬ್ಬರೂ ಬೆಳೆಸಿಕೊಳ್ಳಬೇಕು.

ಹಾಗೆಯೇ ಇದರ ಇನ್ನೊಂದು ಮುಖವೂ ಇದೆ. ಇಂದು ಯಾರು ಪಾಪರಾಜಿಗಳನ್ನು, ಸಾಮಾಜಿಕ ಜಾಲತಾಣಗಳ ವಿಕೃತರನ್ನು ದೂರುತ್ತಿದ್ದಾರೆಯೋ, ಅದೇ ಸಿನಿಮಾ ನಟ ನಟಿಯರು ಚಿತ್ರರಂಗದಲ್ಲಿ ಇದೇ ಪಾಪರಾಜಿಗಳಂತೆ ದೃಶ್ಯವಿಕೃತಿಯನ್ನು ತಮ್ಮ ಚಿತ್ರಗಳಲ್ಲಿ ಯಾವ ರೀತಿ ತೋರಿಸುತ್ತಿದ್ದಾರೆ ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ. ಪಾಪರಾಜಿಗಳಿಗೆ ನಿಜವಾದ ಪ್ರೇರಣೆ ನೀಡಿದ್ದೇ ಈ ಸಿನಿಮಾ ಮತ್ತು ಮಾಡೆಲಿಂಗ್ ಲೋಕದ ನಟ ನಟಿಯರು, ನಿರ್ಮಾಪಕರು ಮತ್ತು ನಿರ್ದೇಶಕರು.

ತಮ್ಮ ಸಿನಿಮಾಗಳಲ್ಲಿ ಇಂದು ಪಾಪರಾಜಿಗಳು ಮಾಡುವಂತೆ ಹೆಣ್ಣಿನ ಉಬ್ಬುತಗ್ಗುಗಳನ್ನು ಅತ್ಯಂತ ಕೆಟ್ಟದಾಗಿ, ಉದ್ದೇಶಪೂರ್ವಕವಾಗಿ, ನಿರ್ಧಿಷ್ಟವಾಗಿ ತೋರಿಸಿ ಅವರನ್ನು ಪ್ರಚೋದಿಸಿದ್ದು ಇದೇ ನಟ ನಟಿಯರು. ಹೆಣ್ಣನ್ನು ಭೋಗದ ವಸ್ತುವೆಂದು ಪರಿಗಣಿಸುವ ಧಾರ್ಮಿಕ ಮತಾಂಧತೆಯ ನಂತರ ಅತಿ ಹೆಚ್ಚು ಹೆಣ್ಣನ್ನು ದುರುಪಯೋಗಪಡಿಸಿಕೊಂಡಿರುವುದು ಈ ಮನರಂಜನಾ ಉದ್ಯಮೇ ಆಗಿದೆ. ಇದೇ ನಟ ನಟಿಯರೇ ಅಲ್ಲಿ ಕೆಟ್ಟದಾಗಿ ನರ್ತಿಸಿ ಈಗ ಪಾಪರಾಜಿಗಳನ್ನು ನಿಂದಿಸುತ್ತಿರುವುದು.

ಇದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಅಭಿನಯ, ಕಥೆ, ಸಿನಿಮಾ ಎಲ್ಲವೂ ಸಹನೀಯ. ಆದರೆ ಉದ್ದೇಶಪೂರ್ವಕವಾಗಿ ಹೆಣ್ಣಿನ ಅಂಗಾಂಗಗಳ ಪ್ರದರ್ಶನಗಳ ಮೂಲಕವೇ ಬೆಳೆದು ಬಂದಿರುವುದು ಈ ಸಿನಿಮಾ ಎಂಬ ಪ್ರದರ್ಶನ ಉದ್ಯಮ.

ಆದ್ದರಿಂದ ಅಲ್ಲಿಯೂ ಕೂಡ ನಿಯಂತ್ರಣವನ್ನು ಸಾಧಿಸಬೇಕು. ಸಮಾಜದ ಮೌಲ್ಯಗಳನ್ನ ಎತ್ತಿ ಹಿಡಿಯಬೇಕು. ವ್ಯವಹಾರ, ಪ್ರಖ್ಯಾತಿ, ಹಣವೇ ಪ್ರಧಾನವಾಗಿ, ಮೌಲ್ಯಗಳ ಅಧ:ಪತನಕ್ಕೆ ಕಾರಣವಾಗಿ, ಈಗ ಅವರುಗಳು ಈ ಬಗ್ಗೆ ಮಾತನಾಡುವುದು ಆತ್ಮ ವಂಚನೆಯಾಗುತ್ತದೆ.

ಯಾವುದೇ ಸಭೆ ಸಮಾರಂಭ ಪಾರ್ಟಿಗಳಲ್ಲಿ ಅತ್ಯಂತ ಕೃತಕ ಮತ್ತು ಅಸಹಜವಾಗಿ ತಮ್ಮನ್ನು ಬಿಂಬಿಸಿಕೊಳ್ಳುವ ಇದೇ ನಟ ನಟಿಯರು, ಈ ಪಾಪರಾಜಿಗಳ ಅತಿರೇಕಕ್ಕೆ ಮೂಲ ಕಾರಣವೂ ಹೌದಲ್ಲವೇ. ಆದ್ದರಿಂದ ಇಡೀ ಸಮಾಜದಲ್ಲಿ ಒಳ್ಳೆಯದನ್ನು, ಒಳ್ಳೆಯತನವನ್ನು, ಒಳ್ಳೆಯ ತಿಳುವಳಿಕೆಯನ್ನು, ಒಳ್ಳೆಯ ನಡವಳಿಕೆಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಆಗ ಕೆಟ್ಟದ್ದನ್ನು ಪ್ರಶ್ನಿಸುವ ನೈತಿಕತೆ ನಮ್ಮದಾಗುತ್ತದೆ. ಇಲ್ಲದಿದ್ದರೆ ಮುಂದೊಂದು ದಿನ ನೈತಿಕ ಮೌಲ್ಯಗಳು ಕುಸಿದಾಗ ನಾವು ಅದನ್ನು ಪ್ರಶ್ನಿಸಲು ಕಷ್ಟವಾಗುತ್ತದೆ.

ಹೆಣ್ಣಿನ ಸಮಾನತೆ, ಸ್ವಾತಂತ್ರ್ಯ, ಮುಕ್ತತೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತ,

” ಮೊಲೆ ಮುಡಿ ಬಂದರೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದರೆ ಗಂಡೆಂಬರು,
ನಡುವೆ ಸುಳಿವ ಆತ್ಮನು ಗಂಡು ಅಲ್ಲ ಹೆಣ್ಣು ಅಲ್ಲ ಕಾಣ ರಾಮನಾಥ…..”

ಜೇಡರ ದಾಸಿಮಯ್ಯ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!