” ಮೊಬೈಲ್ ಬಿಡಿ – ಪುಸ್ತಕ ಹಿಡಿ “……..

” ಮೊಬೈಲ್ ಬಿಡಿ – ಪುಸ್ತಕ ಹಿಡಿ “……..

ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆ ಹೀಗೊಂದು ಅಭಿಯಾನ ಶುರು ಮಾಡಿದೆ. ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಪುಸ್ತಕ ಓದುವ ಸಂಸ್ಕೃತಿಯನ್ನು ಹೆಚ್ಚು ಮಾಡುವುದು ಇದರ ಮೂಲ ಉದ್ದೇಶ.

ಈಗಾಗಲೇ ಅನೇಕ ಶಿಕ್ಷಕರು, ಸಾಮಾಜಿಕ ಹೋರಾಟಗಾರರು, ಮನೋವೈದ್ಯರು, ಕೆಲವು ಪೋಷಕರು ಈ ಅಭಿಯಾನವನ್ನು ತಮ್ಮ ತಮ್ಮ ಮಟ್ಟದಲ್ಲಿ, ಸಾಧ್ಯವಾದ ಕಡೆಯಲ್ಲೆಲ್ಲಾ ಜಾಗೃತಿ ಮೂಡಿಸುತ್ತಾ ಬಂದಿದ್ದಾರೆ. ಅದರ ಮುಂದುವರಿದ ಭಾಗವಾಗಿ ಸರ್ಕಾರವೇ ದೊಡ್ಡ ಮಟ್ಟದಲ್ಲಿ ಈ ಅಭಿಯಾನಕ್ಕೆ ಕೈ ಹಾಕಿದೆ.

ಸಾಮಾನ್ಯವಾಗಿ ಈ ಬಗ್ಗೆ ಯಾರಿಗೂ ಯಾವುದೇ ಆಕ್ಷೇಪಣೆ ಇರಲು ಸಾಧ್ಯವಿಲ್ಲ. ಬಹುತೇಕ ಪೋಷಕರ ಬಹುದೊಡ್ಡ ಸಮಸ್ಯೆಯೇ ಅವರ ಮಕ್ಕಳು ಮೊಬೈಲ್ಗಳಿಗೆ ದಾಸರಾಗಿರುವುದು. ಅದರಿಂದಾಗಿ ಅವರ ಬಾಲ್ಯ, ಯೌವ್ವನ, ವಿದ್ಯಾರ್ಥಿ ಜೀವನದ ಅಪೂರ್ವ ಸಮಯವೇ ಹಾಳಾಗುತ್ತಿರುವುದು.

ಇಲ್ಲಿ ಬಹು ಮುಖ್ಯವಾಗಿ ನಾವು ಯೋಚಿಸಬೇಕಾಗಿರುವುದು ಮತ್ತು ಕಾರ್ಯೋನ್ಮುಖರಾಗಬೇಕಾಗಿರುವುದು ಈ ” ಮೊಬೈಲ್ ಬಿಡಿ ಪುಸ್ತಕ ಇಡಿ ” ಎಂಬ ಅಭಿಯಾನವನ್ನು ಪ್ರಾಯೋಗಿಕವಾಗಿ ಯಾವ ರೀತಿ ಅನುಷ್ಠಾನ ಮಾಡಬೇಕು ಎಂಬುದು. ಇದೇ ಒಂದು ಬಹುದೊಡ್ಡ ಸವಾಲು.

ಸರ್ಕಾರ ಘೋಷಣೆ ಮಾಡಿದ ಮಾತ್ರಕ್ಕೆ, ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಳು ಮೊಬೈಲನ್ನು ಶಾಲೆಗಳಲ್ಲಿ ನಿಷೇಧ ಮಾಡಿದ ಮಾತ್ರಕ್ಕೆ, ಪೋಷಕರು ಮನೆಯಲ್ಲಿ ಮಕ್ಕಳಿಂದ ಮೊಬೈಲ್ ಕಸಿದುಕೊಂಡ ಮಾತ್ರಕ್ಕೆ ಈ ಸಮಸ್ಯೆ ಅಷ್ಟು ಸುಲಭವಾಗಿ ಬಗೆಹರಿಯುವುದಿಲ್ಲ. ಏಕೆಂದರೆ ಬಹುತೇಕ ಮಕ್ಕಳು ಈಗಾಗಲೇ ಮೊಬೈಲ್ ಘೀಳಿಗೆ ಬಲಿಯಾಗಿದ್ದಾರೆ. ಕೆಲವರಂತೂ ತುಂಬಾ ತುಂಬಾ ಮಾನಸಿಕವಾಗಿ ಅದಕ್ಕೆ ಅಡಿಯಾಳುಗಳಾಗಿದ್ದಾರೆ. ಈಗ ಏಕಾಏಕಿ ಮೊಬೈಲ್ ಗಳನ್ನು ಅವರಿಂದ ಕಿತ್ತುಕೊಂಡರೆ ಅವರು ಖಿನ್ನತೆಗೆ ಒಳಗಾಗುವ ಸಾಧ್ಯತೆ ಇದೆ. ಅದು ಇನ್ನೊಂದು ಸಮಸ್ಯೆಗೆ ದಾರಿಯಾಗಬಾರದು. ಕೆಲವು ಮಕ್ಕಳು ಮನೆ ಬಿಟ್ಟು ಹೋಗುವುದು, ಆತ್ಮಹತ್ಯೆಗೆ ಪ್ರಯತ್ನಿಸುವ ಸಾಧ್ಯತೆಯೂ ಇದೆ.

ಆದ್ದರಿಂದ ಇದನ್ನು ಅತ್ಯಂತ ಜವಾಬ್ದಾರಿಯಿಂದ, ಪ್ರೀತಿಯಿಂದ, ಆಸಕ್ತಿಯಿಂದ ನಿರ್ವಹಿಸಬೇಕಾಗಿದೆ. ತುಂಬಾ ಘೀಳಿಗೆ ಒಳಗಾದವರನ್ನು ಇದರಿಂದ ಕನಿಷ್ಠ 50% ಶೇಕಡಾ ಆದರೂ ಮುಕ್ತ ಮಾಡಲು ಒಂದು ವರ್ಷದಷ್ಟು ದೀರ್ಘಕಾಲಾವಧಿಯ ಯೋಜನೆ ರೂಪಿಸಿಕೊಳ್ಳಬೇಕು. ಏಕೆಂದರೆ ಯಾವುದೇ ಚಟವನ್ನು ಅಷ್ಟು ಸುಲಭವಾಗ ಬಿಡಿಸಲು ಆಗುವುದಿಲ್ಲ ಮತ್ತು ಇತರ ಅನೇಕ ಪೋಷಕರು ವಿಭಿನ್ನ ಮನಸ್ಥಿತಿಯವರಾಗಿರುತ್ತಾರೆ.

ಕೆಲವರಿಗೆ ಸ್ವಂತ ಮಕ್ಕಳ ಬಗ್ಗೆ ಕಠಿಣವಾಗಿ ವರ್ತಿಸುವ ಮನಸ್ಸು ಇರುವುದಿಲ್ಲ. ಇನ್ನೂ ಕೆಲವು ಪೋಷಕರು ಮಕ್ಕಳಿಂದ ದೂರ ಇರುತ್ತಾರೆ. ಆ ಮಕ್ಕಳಿಗೆ ದಂಡಿಸುವವರು ಇರುವುದಿಲ್ಲ. ಕೆಲವು ಕಡೆ ಸಿಂಗಲ್ ಪೇರೆಂಟಿಗ್ ಆಗಿಯೂ ಇರಬಹುದು. ಅವರು ಸುಲಭವಾಗಿ ಮೊಬೈಲ್ ಬಿಡುವುದಿಲ್ಲ. ಆಗ ಇತರ ಮಕ್ಕಳು ಇವರನ್ನು ನೋಡಿ ತಮ್ಮ ಪೋಷಕರ ಮೇಲೆ ಕೋಪಗೊಳ್ಳಬಹುದು. ಈ ಎಲ್ಲಾ ಸಾಧ್ಯತೆಗಳು ಇದೆ.

ಮೊಬೈಲ್ ಬಿಡಿ ಎಂದರೆ ನಿಷೇಧ ಅಥವಾ ಸಂಪೂರ್ಣ ತ್ಯಜಿಸುವಿಕೆಯಲ್ಲ. ಮೊಬೈಲ್ ಎಂಬುದು ಒಂದು ಅನಿವಾರ್ಯ, ಆಧುನಿಕ ತಂತ್ರಜ್ಞಾನ. ಸಂಪರ್ಕಕ್ಕೆ, ಮಾಹಿತಿಗೆ, ಮನರಂಜನೆಗೆ ಅದು ಅತ್ಯಂತ ಉಪಯುಕ್ತ ಸಾಧನ. ಆದರೆ ಅದನ್ನು ಮೀರಿ ವಿಡಿಯೋ ಗೇಮ್ ಗಳನ್ನು ಆಡಲು, ಅತಿಯಾದ ಮನರಂಜನೆಗೆ ಅಥವಾ ಇತರೆ ವಿಕೃತಿಗೆ ಅದನ್ನು ಬಳಸಿದಾಗ ಮತ್ತು ದೀರ್ಘಕಾಲ ಅದರಲ್ಲಿಯೇ ಮುಳುಗಿದಾಗ, ಸಮಯ ಕೊಲ್ಲಲು ಅದಕ್ಕೆ ಶರಣಾದಾಗ ಮೊಬೈಲ್ ಎಂಬುದು ಅಪಾಯಕಾರಿ, ಆಗ ಅದು ಅವಸಾನದ ಸಾಧನವಾಗುತ್ತದೆ.

ಇದನ್ನು ತುಂಬಾ ಎಚ್ಚರಿಕೆಯಿಂದ ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು. ಹೇಗೆ ಸಿಗರೇಟು, ಮಧ್ಯಪಾನ, ಮಾದಕವಸ್ತುಗಳಿಂದ ಆಗುವ ಅಪಾಯಗಳನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡುತ್ತೇವೆಯೋ ಅದೇ ರೀತಿ ಮೊಬೈಲಿನ ದುರುಪಯೋಗವನ್ನು, ಅದು ನಮ್ಮ ಮೇಲೆ ಬೀರುವ ಪರಿಣಾಮವನ್ನು ಹೇಳಿಕೊಡಬೇಕು.

ಜೊತೆಗೆ ಈ ಸಮಸ್ಯೆಯನ್ನು ವೈಯಕ್ತಿಕವಾಗಿ ನೋಡದೆ ಇಡೀ ವಿಶ್ವದ ತಾಂತ್ರಿಕ ಪ್ರಗತಿಯಲ್ಲಿ ಮಾನವ ಜೀವಿ ಎದುರಿಸಬೇಕಾದ ಸಮಸ್ಯೆಯ ಹಿನ್ನೆಲೆಯಲ್ಲಿ ವಿಶಾಲವಾಗಿ ನೋಡಬೇಕು. ಅಂದರೆ ಮೊಬೈಲ್ ಕಿತ್ತುಕೊಂಡ ಮಾತ್ರಕ್ಕೆ ಎಲ್ಲವೂ ಸರಿಯಾಗುತ್ತದೆ ಎಂದಲ್ಲ, ಅದಕ್ಕೆ ಪರ್ಯಾಯವಾಗಿ ಮತ್ತು ಅದಕ್ಕಿಂತ ಆಕರ್ಷಕವಾಗಿ ಅತ್ಯುತ್ತಮ ಗುಣಮಟ್ಟದ ಪುಸ್ತಕಗಳು ಅಥವಾ ಡಿಜಿಟಲ್ ಲೈಬ್ರರಿ ಅಥವಾ ಕ್ರೀಡೆ ಅಥವಾ ಲಲಿತ ಕಲೆಗಳು ಹೀಗೆ ಬೇರೆ ಬೇರೆ ಕ್ಷೇತ್ರದಲ್ಲಿ ಮಕ್ಕಳು ಹೆಚ್ಚು ತೊಡಗಿಸಿಕೊಳ್ಳಲು ನಾವು ಅವರನ್ನು ಪ್ರೇರೇಪಿಸಬೇಕು. ಇದಕ್ಕಾಗಿ ಒಂದಷ್ಟು ಹಣ, ಸಮಯ, ತಾಳ್ಮೆ ಬೇಕಾಗುತ್ತದೆ. ಇದಕ್ಕೆ ಪೋಷಕರು ಸಿದ್ದರಾಗಬೇಕು.

ಜೊತೆಗೆ ಒಬ್ಬೊಬ್ಬ ಮಕ್ಕಳ ಮಾನಸಿಕ ಸ್ಥಿತಿಯು ಬೇರೆ ಬೇರೆ ಇರುತ್ತದೆ. ಕೌಟುಂಬಿಕ ಪರಿಸ್ಥಿತಿಯು ವಿಭಿನ್ನವಾಗಿರುತ್ತದೆ. ಆರ್ಥಿಕ ಸಾಮಾಜಿಕ, ಪರಿಸ್ಥಿತಿಯು ಬದಲಾಗುತ್ತಿರುತ್ತದೆ. ಅದನ್ನು ಸಮಗ್ರವಾಗಿ ಚಿಂತಿಸಿ ಅನುಷ್ಠಾನ ಯೋಗ್ಯ ಯೋಜನೆ ರೂಪಿಸಬೇಕು. ಉಡಾಫೆಯಿಂದ ಮೊಬೈಲ್ ಕಿತ್ತುಕೊಳ್ಳುವುದು ಅಪಾಯಕಾರಿ. ತುಂಬಾ ತುಂಬಾ ಪ್ರಬುದ್ಧವಾಗಿ ಈ ಕೆಲಸ ನಿರ್ವಹಿಸಬೇಕು. ಶಿಕ್ಷಕರು ಮತ್ತು ಪೋಷಕರು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚನೆ ಮಾಡಿ ಒಬ್ಬರಿಗೊಬ್ಬರು ಚರ್ಚಿಸಿ ಒಂದಷ್ಟು ಉತ್ತಮ ಮಾರ್ಗಗಳನ್ನು ಕಂಡುಹಿಡಿಯಬೇಕು.

ಇಡೀ ವಿದ್ಯಾರ್ಥಿ ಸಮೂಹವನ್ನೇ ಇದರಿಂದ ಹೊರ ತರಲು ಸಾಧ್ಯವಿಲ್ಲವಾದರೂ ನಿಧಾನವಾಗಿ ಬಹುಸಂಖ್ಯೆಯ ಯುವಕರನ್ನು ಇದರಿಂದ ಸ್ವಲ್ಪಮಟ್ಟಿಗೆ ಹೊರತರಲು ಸಾಧ್ಯವಿದೆ.

ಸರ್ಕಾರದ ಜೊತೆ ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳು, ಧಾರ್ಮಿಕ, ಸಾಮಾಜಿಕ ಚಿಂತಕರು, ಹೋರಾಟಗಾರರು, ಸರ್ಕಾರಿ ಅಧಿಕಾರಿಗಳು ಹೀಗೆ ಪ್ರತಿಯೊಬ್ಬರೂ ಈ ನಿಟ್ಟಿನಲ್ಲಿ ಕಾರ್ಯೊನ್ಮುಖವಾದಾಗ ಮಾತ್ರ ಈ ಸಮಾಜದಲ್ಲಿ ಮೊಬೈಲ್ ಬಿಡಿ ಪುಸ್ತಕ ಹಿಡಿ ಅಭಿಯಾನ ಒಂದಷ್ಟು ಯಶಸ್ವಿಯಾಗಬಹುದು. ಕೇವಲ ಪೋಷಕರಿಂದಲೋ, ಶಿಕ್ಷಕರಿಂದಲೋ ಇದು ಸಾಧ್ಯವಿಲ್ಲ.

ಒಂದು ಸಣ್ಣ ಕುಗ್ರಾಮದಿಂದ, ಅಲ್ಲಿನ ಕುಟುಂಬದಿಂದ, ವಿಧಾನಸೌಧದ ಮೂರನೇ ಮಹಡಿಯವರೆಗೆ ಎಲ್ಲಾ ವ್ಯವಸ್ಥೆಗಳು ಈ ನಿಟ್ಟಿನಲ್ಲಿ ಗಂಭೀರವಾಗಿ ಯೋಚಿಸಿದಾಗ ಪರಿಣಾಮ ಮತ್ತು ಫಲಿತಾಂಶ ಖಂಡಿತಾ ಸಾಧ್ಯವಿದೆ. ಅದರಲ್ಲೂ ಮಾಧ್ಯಮಗಳು ಇದಕ್ಕೆ ಹೆಚ್ಚು ಪ್ರಚಾರ ಕೊಡಬೇಕು. ಇದು ತಮಗೆ ಸಂಬಂಧವಿಲ್ಲದಂತೆ ಮತ್ತದೇ ಕೆಟ್ಟ ಬ್ರೇಕಿಂಗ್ ನ್ಯೂಸ್ ಗಳಲ್ಲಿ ಮುಳುಗಿ ಹೋದರೆ ಈ ಅಭಿಯಾನವು ವಿಫಲವಾಗಬಹುದು.

ಈ ಸಮಸ್ಯೆ ಯಾರದೋ ಒಬ್ಬರದಲ್ಲ. ಬಹುತೇಕ ಕುಟುಂಬಗಳ ಸಮಸ್ಯೆ. ನೋಡೋಣ ಈ ಅಭಿಯಾನವನ್ನಾದರೂ ಎಷ್ಟರಮಟ್ಟಿಗೆ ನಾವೆಲ್ಲರೂ ಯಶಸ್ವಿ ಮಾಡುತ್ತೇವೆ ಎಂದು. ಏಕೆಂದರೆ ಇಡೀ ಯುವ ಸಮೂಹ ಮೊಬೈಲ್ ಘೀಳಿಗೆ ಬಲಿಯಾಗಿರುವಾಗ, ನಾವು ಈಗ ಎಚ್ಚೆತ್ತುಕೊಂಡು ಭವಿಷ್ಯದ ಸಮಾಜವನ್ನು ನಿರ್ಮಿಸಬೇಕಿದೆ. ನಮ್ಮ ಮಕ್ಕಳು ಹಾಳಾಗುತ್ತಿರುವುದನ್ನು ನೋಡಿಯೂ ತಲೆ ಕೆಡಿಸಿಕೊಳ್ಳದೆ ನಮ್ಮ ನಮ್ಮ ಕೆಲಸದಲ್ಲಿ ಮುಳುಗಿ ಹೋದರೆ ನಮ್ಮನ್ನು ಮುಂದಿನ ಜನಾಂಗ ಕ್ಷಮಿಸುವುದಿಲ್ಲ ಮತ್ತು ಹಾಳಾಗುವುದು ಬೇರೆ ಯಾರು ಅಲ್ಲ ನಮ್ಮ ಮಕ್ಕಳೇ.

ಆದ್ದರಿಂದ ನಮ್ಮ ಮಕ್ಕಳು ಉತ್ತಮವಾಗಿರಬೇಕಾದರೆ ಕೇವಲ ನಮ್ಮ ಮಕ್ಕಳು ಮಾತ್ರವಲ್ಲ ಇಡೀ ಸಾಮಾಜಿಕ ವ್ಯವಸ್ಥೆಯ ಯುವ ಪೀಳಿಗೆ ಉತ್ತಮವಾದರೆ ಮಾತ್ರ ಅವರಲ್ಲಿ ನಮ್ಮ ಮಕ್ಕಳು ಒಬ್ಬರಾಗುತ್ತಾರೆ. ಇಲ್ಲದಿದ್ದರೆ ಅವರೂ ಕೆಡುತ್ತಾರೆ. ನಾವು ಸ್ವಾರ್ಥಿಗಳಾಗದೆ ಎಲ್ಲರನ್ನೂ ಬದಲಾಯಿಸಲು ಪ್ರಯತ್ನಿಸಿದರೆ ಖಂಡಿತವಾಗಲೂ ಯಶಸ್ಸು ಸಿಗುತ್ತದೆ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ-ವಿವೇಕಾನಂದ. ಎಚ್. ಕೆ

Leave a Reply

Your email address will not be published. Required fields are marked *

error: Content is protected !!